FIFA ವಿಶ್ವಕಪ್ ಸರದಾರರು: ಪಾಲ್ಗೊಂಡಿರುವುದು 79 ಟೀಂ, ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಜಸ್ಟ್ 8 ಟೀಂ..!

By Kannadaprabha News  |  First Published Nov 16, 2022, 11:51 AM IST

2022ರ ಫುಟ್ಬಾಲ್ ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ
1930ರಿಂದ ಆರಂಭವಾದ ಫುಟ್ಬಾಲ್ ವಿಶ್ವಕಪ್ ಟೂರ್ನಿ
ಈವರೆಗೆ 21 ಫುಟ್ಬಾಲ್ ವಿಶ್ವಕಪ್‌ ನಡೆದಿದ್ದು, 8 ತಂಡಗಳು ಮಾತ್ರ ಚಾಂಪಿಯನ್ ಪಟ್ಟ ಅಲಂಕರಿಸಿವೆ


ಬೆಂಗಳೂರು(ನ.16): ಫಿಫಾ ಫುಟ್ಬಾಲ್‌ ವಿಶ್ವಕಪ್‌ ಇದುವರೆಗೂ 21 ಆವೃತ್ತಿಗಳಿಗೆ ಸಾಕ್ಷಿಯಾಗಿದೆ. 79 ತಂಡಗಳು ಟೂರ್ನಿಯಲ್ಲಿ ಸೆಣಸಿದರೂ ಚಾಂಪಿಯನ್‌ ಪಟ್ಟಕ್ಕೇರಲು ಸಾಧ್ಯವಾಗಿರುವುದು 8 ತಂಡಗಳಿಗೆ ಮಾತ್ರ. 1930ರಿಂದ 2018ರ ವರೆಗೂ ನಡೆದ ಟೂರ್ನಿಗಳು ಎಲ್ಲಿ ನಡೆದಿದ್ದವು, ಯಾವ ರಾಷ್ಟ್ರ ಆತಿಥ್ಯ ವಹಿಸಿತ್ತು, ಯಾವ ತಂಡಗಳು ಫೈನಲ್‌ನಲ್ಲಿ ಸೆಣಸಿದ್ದವು, ಯಾರು ಚಾಂಪಿಯನ್‌ ಆಗಿದ್ದರು ಎನ್ನುವ ವಿವರಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸೋದರ ಸಂಸ್ಥೆ ‘ಕನ್ನಡಪ್ರಭ’ ಇವತ್ತಿನ ಸಂಚಿಕೆಯಲ್ಲಿ ನಿಮ್ಮ ಮುಂದಿಡುತ್ತಿದೆ.

ವರ್ಷ: 1930, ಚಾಂಪಿಯನ್‌: ಉರುಗ್ವೆ

Tap to resize

Latest Videos

undefined

ಚೊಚ್ಚಲ ಫಿಫಾ ವಿಶ್ವಕಪ್‌ ನಡೆದಿದ್ದು 1930ರಲ್ಲಿ. ದಕ್ಷಿಣ ಅಮೆರಿಕದ ಉರುಗ್ವೆ ಆತಿಥ್ಯ ವಹಿಸಿತ್ತು. 13 ರಾಷ್ಟ್ರಗಳು ಸ್ಪರ್ಧಿಸಿದ್ದವು. ಒಟ್ಟು 18 ಪಂದ್ಯಗಳು ನಡೆದಿತ್ತು. ಫೈನಲಲ್ಲಿ ಆತಿಥೇಯ ಉರುಗ್ವೆ 4-2 ಗೋಲುಗಳಿಂದ ಅರ್ಜೆಂಟೀನಾವನ್ನು ಸೋಲಿಸಿ ಚಾಂಪಿಯನ್‌ ಆಗಿತ್ತು.

ವರ್ಷ: 1934, ಚಾಂಪಿಯನ್‌: ಇಟಲಿ

2ನೇ ಆವೃತ್ತಿಗೆ ಇಟಲಿ ಆತಿಥ್ಯ ವಹಿಸಿತ್ತು. ಮೊದಲ ಬಾರಿಗೆ ಅರ್ಹತಾ ಟೂರ್ನಿ ನಡೆದಿತ್ತು. 32 ತಂಡಗಳಲ್ಲಿ 16 ತಂಡಗಳು ಪ್ರಧಾನ ಸುತ್ತಿಗೇರಿದ್ದವು. ಒಟ್ಟು 17 ಪಂದ್ಯಗಳು ನಡೆದಿತ್ತು. ಫೈನಲಲ್ಲಿ ಚೆಕೊಸ್ಲೋವಾಕಿಯಾ ವಿರುದ್ಧ 2-1 ಗೋಲುಗಳಲ್ಲಿ ಗೆದ್ದ ಇಟಲಿ ಪ್ರಶಸ್ತಿ ಜಯಿಸಿತ್ತು.

ವರ್ಷ: 1938, ಚಾಂಪಿಯನ್‌: ಇಟಲಿ

1938ರಲ್ಲಿ ಫ್ರಾನ್ಸ್‌ ಆತಿಥ್ಯ ವಹಿಸಿದ್ದ ವಿಶ್ವಕಪ್‌ನಲ್ಲಿ ಇಟಲಿ ಪ್ರಶಸ್ತಿ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. 15 ತಂಡಗಳು ಸ್ಪರ್ಧಿಸಿದ್ದ ಟೂರ್ನಿಯಲ್ಲಿ ಒಟ್ಟು 18 ಪಂದ್ಯಗಳು ನಡೆದಿದ್ದವು. ಫೈನಲಲ್ಲಿ ಇಟಲಿ, ಹಂಗೇರಿ ವಿರುದ್ಧ 4-2 ಗೋಲುಗಳಲ್ಲಿ ಗೆದ್ದು ಟ್ರೋಫಿ ಎತ್ತಿಹಿಡಿಯಿತು.

ವರ್ಷ: 1950, ಚಾಂಪಿಯನ್‌: ಉರುಗ್ವೆ

2ನೇ ಮಹಾಯುದ್ಧದ ಕಾರಣ 1942, 46ರಲ್ಲಿ ವಿಶ್ವಕಪ್‌ ನಡೆದಿರಲಿಲ್ಲ. 1950ರಲ್ಲಿ ಬ್ರೆಜಿಲ್‌ ಆತಿಥ್ಯ ವಹಿಸಿತ್ತು. 13 ತಂಡಗಳ ಮೊದಲ ಸುತ್ತಿನ ಬಳಿಕ ಅಂತಿಮ ಸುತ್ತಿಗೆ 4 ತಂಡಗಳು ಪ್ರವೇಶಿಸಿದ್ದವು. ರೌಂಡ್‌ ರಾಬಿನ್‌ ಮಾದರಿಯಲ್ಲಿ ಅಜೇಯವಾಗಿ ಉಳಿದು ಉರುಗ್ವೆ 2ನೇ ಬಾರಿ ಚಾಂಪಿಯನ್‌ ಆಗಿತ್ತು.

ವರ್ಷ: 1954, ಚಾಂಪಿಯನ್‌: ಪಶ್ಚಿಮ ಜರ್ಮನಿ

16 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯಲ್ಲಿ 26 ಪಂದ್ಯಗಳು ನಡೆದಿದ್ದವು. ಟೂರ್ನಿಯಲ್ಲಿ ಒಟ್ಟು 140 ಗೋಲುಗಳು ದಾಖಲಾಗಿದ್ದು ವಿಶೇಷ. ಫೈನಲಲ್ಲಿ ಪಶ್ಚಿಮ ಜರ್ಮನಿ 3-2 ಗೋಲುಗಳಲ್ಲಿ ಹಂಗೇರಿ ವಿರುದ್ಧ ಜಯಿಸಿ ಪ್ರಶಸ್ತಿ ಎತ್ತಿಹಿಡಿದಿತ್ತು.

ವರ್ಷ: 1958, ಚಾಂಪಿಯನ್‌: ಬ್ರೆಜಿಲ್‌

ಫುಟ್ಬಾಲ್‌ ದಂತಕಥೆ ಪೀಲೆಯ ಆಗಮನಕ್ಕೆ ಸಾಕ್ಷಿಯಾದ ಟೂರ್ನಿ ಇದು. 17 ವರ್ಷದ ಪೀಲೆ ಟೂರ್ನಿಯಲ್ಲಿ 6 ಗೋಲು ಬಾರಿಸಿ ಬ್ರೆಜಿಲನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು. 16 ತಂಡಗಳು ಸೆಣಸಿದ್ದ ಟೂರ್ನಿಯಲ್ಲಿ 35 ಪಂದ್ಯ ನಡೆದಿತ್ತು. ಫೈನಲಲ್ಲಿ ಬ್ರೆಜಿಲ್‌ 5-2ರಲ್ಲಿ ಸ್ವೀಡನ್‌ ವಿರುದ್ಧ ಗೆದ್ದಿತ್ತು.

ವರ್ಷ: 1962, ಚಾಂಪಿಯನ್‌: ಬ್ರೆಜಿಲ್‌

ದಕ್ಷಿಣ ಅಮೆರಿಕದ ಚಿಲಿಯಲ್ಲಿ ನಡೆದ ವಿಶ್ವಕಪ್‌ ಭಾರೀ ಗಲಾಟೆ, ಗದ್ದಲಗಳಿಂದ ಕೂಡಿತ್ತು. 16 ತಂಡಗಳು ಸ್ಪರ್ಧಿಸಿದ್ದವು. ಬ್ರೆಜಿಲ್‌ ಸತತ 2ನೇ ಬಾರಿಗೆ ಪ್ರಶಸ್ತಿ ಜಯಿಸಿತು. ಫೈನಲಲ್ಲಿ ಚೆಕೊಸ್ಲೋವಾಕಿಯಾ ವಿರುದ್ಧ 3-1 ಗೋಲುಗಳಲ್ಲಿ ಗೆದ್ದಿತ್ತು. ಟೂರ್ನಿಯಲ್ಲಿ ಪೀಲೆ ಕೇವಲ 1 ಗೋಲು ಬಾರಿಸಿದ್ದರು.

ವರ್ಷ: 1966, ಚಾಂಪಿಯನ್‌: ಇಂಗ್ಲೆಂಡ್‌

ಇಂಗ್ಲೆಂಡ್‌ ಆತಿಥ್ಯ ವಹಿಸಿ ಚಾಂಪಿಯನ್‌ ಆಗಿತ್ತು. ಫೈನಲಲ್ಲಿ ಪಶ್ಚಿಮ ಜರ್ಮನಿಯನ್ನು 4-2ರಲ್ಲಿ ಸೋಲಿಸಿತ್ತು. ಒಟ್ಟು 16 ತಂಡಗಳು ಸ್ಪರ್ಧಿಸಿದ್ದವು. ಸ್ಯಾಟಿಲೈಟ್‌ ಮೂಲಕ ಮೊದಲ ಬಾರಿಗೆ ಜಗತ್ತಿನ ಹಲವು ದೇಶಗಳಲ್ಲಿ ವಿಶ್ವಕಪ್‌ ಪಂದ್ಯಗಳು ಪ್ರಸಾರವಾಗಿದ್ದವು.

ವರ್ಷ: 1970, ಚಾಂಪಿಯನ್‌: ಬ್ರೆಜಿಲ್‌

ಮೆಕ್ಸಿಕೋ ಆತಿಥ್ಯ ವಹಿಸಿದ್ದ ಈ ಆವೃತ್ತಿಯ ವಿಶ್ವಕಪ್‌ ಮೊದಲ ಬಾರಿಗೆ ಜಗತ್ತಿನಾದ್ಯಂತ ಕಲರ್‌ ಟೀವಿಗಳಲ್ಲಿ ಪ್ರಸಾರ ಕಂಡಿತ್ತು. 16 ತಂಡಗಳು ಸ್ಪರ್ಧಿಸಿದ್ದ ಟೂರ್ನಿಯಲ್ಲಿ ಬ್ರೆಜಿಲ್‌ ಅಜೇಯವಾಗಿ ಉಳಿಯಿತು. ಫೈನಲಲ್ಲಿ ಇಟಲಿಯನ್ನು 4-1ರಲ್ಲಿ ಸೋಲಿಸಿ 3ನೇ ಬಾರಿಗೆ ಟ್ರೋಫಿ ಜಯಿಸಿತು.

ವರ್ಷ: 1974, ಚಾಂಪಿಯನ್‌: ಪಶ್ಚಿಮ ಜರ್ಮನಿ

10ನೇ ಆವೃತ್ತಿಯು ಪಶ್ಚಿಮ ಜರ್ಮನಿಯಲ್ಲಿ ನಡೆದಿತ್ತು. 16 ತಂಡಗಳು ಸ್ಪರ್ಧಿಸಿದ್ದವು. ಮೊದಲ ಬಾರಿಗೆ ಸೂಪರ್‌-8 ಹಂತ ಪರಿಚಯಿಸಲಾಗಿತ್ತು. ಫೈನಲ್‌ನಲ್ಲಿ ನೆದರ್‌ಲೆಂಡ್‌್ಸ ವಿರುದ್ಧ ಸೆಣಸಿದ ಪಶ್ಚಿಮ ಜರ್ಮನಿ 2-1ರಲ್ಲಿ ಜಯಿಸಿ 2ನೇ ಬಾರಿಗೆ ಟ್ರೋಫಿ ಗೆದ್ದಿತ್ತು.

ವರ್ಷ: 1978, ಚಾಂಪಿಯನ್‌: ಅರ್ಜೆಂಟೀನಾ

ಅರ್ಜೆಂಟೀನಾದಲ್ಲಿ ನಡೆದಿದ್ದ ಟೂರ್ನಿಯು ಭಾರೀ ವಿವಾದಗಳಿಂದ ಕೂಡಿತ್ತು. ಸ್ಥಳೀಯ ಸರ್ಕಾರವೇ ಮ್ಯಾಚ್‌ ಫಿಕ್ಸಿಂಗ್‌ಗೆ ಯತ್ನಿಸಿ ಟೀಕೆಗೆ ಗುರಿಯಾಗಿತ್ತು. 16 ತಂಡಗಳು ಸ್ಪರ್ಧಿಸಿದ್ದ ಈ ಟೂರ್ನಿಯ ಫೈನಲಲ್ಲಿ ಅರ್ಜೆಂಟೀನಾ 3-1ರಲ್ಲಿ ನೆದರ್‌ಲೆಂಡ್‌್ಸ ವಿರುದ್ಧ ಜಯಿಸಿತ್ತು.

ವರ್ಷ: 1982, ಚಾಂಪಿಯನ್‌: ಇಟಲಿ

ಸ್ಪೇನ್‌ ಆತಿಥ್ಯ ನೀಡಿದ್ದ ಟೂರ್ನಿಯಲ್ಲಿ ಮೊದಲ ಬಾರಿಗೆ ಪೆನಾಲ್ಟಿಶೂಟೌಟ್‌ ನಿಯಮ ಅಳವಡಿಸಲಾಗಿತ್ತು. ಈ ಆವೃತ್ತಿಯಲ್ಲಿ ತಂಡಗಳ ಸಂಖ್ಯೆಯನ್ನು 24ಕ್ಕೆ ಏರಿಕೆ ಮಾಡಲಾಗಿತ್ತು. ಫೈನಲಲ್ಲಿ ಇಟಲಿ 3-1ರಿಂದ ಪಶ್ಚಿಮ ಜರ್ಮನಿಯನ್ನು ಸೋಲಿಸಿ 3ನೇ ಬಾರಿಗೆ ಟ್ರೋಫಿ ಜಯಿಸಿತ್ತು.

ವರ್ಷ: 1986, ಚಾಂಪಿಯನ್‌: ಅರ್ಜೆಂಟೀನಾ

ಮೆಕ್ಸಿಕೋ ಆತಿಥ್ಯ ವಹಿಸಿದ್ದ ಟೂರ್ನಿಯು ಫುಟ್ಬಾಲ್‌ ಜಗತ್ತು ಎಂದೂ ಮರೆಯದ ಡಿಗೋ ಮರಡೋನಾ ಅವರ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿಗೆ ಸಾಕ್ಷಿಯಾಯಿತು. ಫೈನಲಲ್ಲಿ ಅರ್ಜೆಂಟೀನಾ 3-2ರಲ್ಲಿ ಪಶ್ಚಿಮ ಜರ್ಮನಿಯನ್ನು ಸೋಲಿಸಿ 2ನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದಿತ್ತು.

ವರ್ಷ: 1990, ಚಾಂಪಿಯನ್‌: ಪಶ್ಚಿಮ ಜರ್ಮನಿ

ಇಟಲಿಯಲ್ಲಿ ನಡೆದಿದ್ದ ಟೂರ್ನಿಯ ಫೈನಲಲ್ಲಿ ಪಶ್ಚಿಮ ಜರ್ಮನಿ ಹಾಗೂ ಅರ್ಜೆಂಟೀನಾ ಸೆಣಸಿದ್ದವು. 1-0ಯಲ್ಲಿ ಗೆದ್ದು ಪಶ್ಚಿಮ ಜರ್ಮನಿ ಹಿಂದಿನ ಆವೃತ್ತಿಯ ಸೋಲಿಗೆ ಸೇಡು ತೀರಿಸಿಕೊಂಡಿತ್ತು. ಟೂರ್ನಿಯು ಬರೋಬ್ಬರಿ 16 ರೆಡ್‌ ಕಾರ್ಡ್‌ಗಳಿಗೆ ಸಾಕ್ಷಿಯಾಗಿತ್ತು.

ವರ್ಷ: 1994, ಚಾಂಪಿಯನ್‌: ಬ್ರೆಜಿಲ್‌

ಮೊದಲ ಬಾರಿಗೆ ಟೂರ್ನಿ ಅಮೆರಿಕದಲ್ಲಿ ನಡೆದಿತ್ತು. ಫೈನಲ್‌ ಪಂದ್ಯವೊಂದು ಪೆನಾಲ್ಟಿಶೂಟೌಟ್‌ನಲ್ಲಿ ನಿರ್ಧಾರವಾಗಿದ್ದು ಇದೇ ಮೊದಲು. ಬ್ರೆಜಿಲ್‌ ಶೂಟೌಟಲ್ಲಿ 3-2ರ ಅಂತರದಲ್ಲಿ ಇಟಲಿಯನ್ನು ಸೋಲಿಸಿ 4ನೇ ಬಾರಿಗೆ ಟ್ರೋಫಿ ಜಯಿಸಿತ್ತು. ಟೂರ್ನಿಯಲ್ಲಿ ಒಟ್ಟು 141 ಗೋಲುಗಳು ದಾಖಲಾಗಿದ್ದವು.

ವರ್ಷ: 1998, ಚಾಂಪಿಯನ್‌: ಫ್ರಾನ್ಸ್‌

ಮೊದಲ ಬಾರಿಗೆ 24ರ ಬದಲು 32 ತಂಡಗಳು ಪ್ರಧಾನ ಟೂರ್ನಿಯಲ್ಲಿ ಸ್ಪರ್ಧಿಸಿದ್ದವು. 32 ದಿನಗಳ ನಡೆದ ಟೂರ್ನಿಗೆ ಫ್ರಾನ್ಸ್‌ ಆತಿಥ್ಯ ವಹಿಸಿತ್ತು. ಫೈನಲಲ್ಲಿ ಬ್ರೆಜಿಲ್‌ ವಿರುದ್ಧ 3-0ಯಲ್ಲಿ ಜಯಿಸಿತು. ವಿಶ್ವಕಪ್‌ ಗೆದ್ದ 7ನೇ ರಾಷ್ಟ್ರ ಎನಿಸಿತು. ಜೊತೆಗೆ ತವರಲ್ಲಿ ವಿಶ್ವಕಪ್‌ ಗೆದ್ದ 6ನೇ ರಾಷ್ಟ್ರ ಎನ್ನುವ ಹಿರಿಮೆಗೂ ಪಾತ್ರವಾಯಿತು.

ವರ್ಷ: 2002, ಚಾಂಪಿಯನ್‌: ಬ್ರೆಜಿಲ್‌

ಮೊದಲ ಬಾರಿಗೆ ವಿಶ್ವಕಪ್‌ ಏಷ್ಯಾದಲ್ಲಿ ನಡೆಯಿತು. ಮೊದಲ ಬಾರಿಗೆ ಎರಡು ದೇಶಗಳು(ಜಪಾನ್‌, ದ.ಕೊರಿಯಾ) ಆತಿಥ್ಯ ವಹಿಸಿದವು. ಫ್ರಾನ್ಸ್‌, ಅರ್ಜೆಂಟೀನಾದಂತಹ ದೈತ್ಯ ತಂಡಗಳು ಆರಂಭಿಕ ಸುತ್ತಿನಲ್ಲೇ ಹೊರಬಿದ್ದಿದ್ದವು. ಫೈನಲಲ್ಲಿ ಬ್ರೆಜಿಲ್‌ 2-0ಯಿಂದ ಜರ್ಮನಿಯನ್ನು ಸೋಲಿಸಿ 5ನೇ ಟ್ರೋಫಿ ಜಯಿಸಿತು.

ವರ್ಷ: 2006, ಚಾಂಪಿಯನ್‌: ಇಟಲಿ

ಜರ್ಮನಿ ಆತಿಥ್ಯ ವಹಿಸಿದ್ದ ಟೂರ್ನಿಯು ಜಗತ್ತಿನಾದ್ಯಂತ ಅತಿಹೆಚ್ಚು ವೀಕ್ಷಣೆಗೆ ಒಳಗಾದ ಟೂರ್ನಿ ಎನ್ನುವ ದಾಖಲೆ ಬರೆದಿತ್ತು. ಅರ್ಹತಾ ಸುತ್ತಿನಲ್ಲಿ 198 ರಾಷ್ಟ್ರಗಳು ಸ್ಪರ್ಧಿಸಿದ್ದವು. ಪ್ರಧಾನ ಸುತ್ತಿನಲ್ಲಿ 32 ತಂಡಗಳು ಆಡಿದ್ದವು. ಫೈನಲಲ್ಲಿ ಇಟಲಿ ಪೆನಾಲ್ಟಿಶೂಟೌಟಲ್ಲಿ ಫ್ರಾನ್ಸ್‌ ವಿರುದ್ಧ 5-3ರಲ್ಲಿ ಜಯಿಸಿತ್ತು.

ವರ್ಷ: 2010, ಚಾಂಪಿಯನ್‌: ಸ್ಪೇನ್‌

ಮೊದಲ ಬಾರಿಗೆ ಆಫ್ರಿಕಾದಲ್ಲಿ ಟೂರ್ನಿ ನಡೆದಿತ್ತು. ದ.ಆಫ್ರಿಕಾ ಆತಿಥ್ಯ ವಹಿಸಿದ್ದ ಈ ಟೂರ್ನಿಯನ್ನು ಸ್ಪೇನ್‌ ಗೆದ್ದಿತ್ತು. ಫೈನಲಲ್ಲಿ ನೆದರ್‌ಲೆಂಡ್‌್ಸ ಅನ್ನು 1-0 ಅಂತರದಲ್ಲಿ ಮಣಿಸಿತ್ತು. ಡಚ್‌ ತಂಡ 3ನೇ ಬಾರಿಗೆ ರನ್ನರ್‌-ಅಪ್‌ ಆಗಿತ್ತು. ವಿಶ್ವಕಪ್‌ ಗೆದ್ದ 8ನೇ ರಾಷ್ಟ್ರ ಎನ್ನುವ ಹಿರಿಮೆಗೆ ಸ್ಪೇನ್‌ ಪಾತ್ರವಾಗಿತ್ತು.

ವರ್ಷ: 2014, ಚಾಂಪಿಯನ್‌: ಜರ್ಮನಿ

ಬ್ರೆಜಿಲ್‌ ಆತಿಥ್ಯ ವಹಿಸಿದ್ದ ಟೂರ್ನಿಯಲ್ಲಿ ವಿಶ್ವಕಪ್‌ ಗೆದ್ದಿದ್ದ ಎಲ್ಲಾ 8 ತಂಡಗಳು ಅರ್ಹತೆ ಪಡೆದಿದ್ದವು. ಸ್ಪೇನ್‌, ಇಟಲಿ, ಇಂಗ್ಲೆಂಡ್‌ ಗುಂಪು ಹಂತದಲ್ಲೇ ಹೊರಬಿದ್ದಿದ್ದವು. ಬ್ರೆಜಿಲ್‌, ಸೆಮೀಸಲ್ಲಿ ಜರ್ಮನಿಗೆ 1-7ರಲ್ಲಿ ಶರಣಾಗಿತ್ತು. ಫೈನಲಲ್ಲಿ ಜರ್ಮನಿ 1-0ಯಲ್ಲಿ ಅರ್ಜೆಂಟೀನಾವನ್ನು ಸೋಲಿಸಿತ್ತು.

ವರ್ಷ: 2018, ಚಾಂಪಿಯನ್‌: ಫ್ರಾನ್ಸ್‌

ರಷ್ಯಾದಲ್ಲಿ ನಡೆದಿದ್ದ ವಿಶ್ವಕಪ್‌ಗೆ 14.2 ಬಿಲಿಯನ್‌ ಡಾಲರ್‌ ಖರ್ಚು ಮಾಡಲಾಗಿತ್ತು. ಇದು ಈ ವರೆಗಿನ ಅತಿ ದುಬಾರಿ ವಿಶ್ವಕಪ್‌. 1938ರ ಬಳಿಕ ಮೊದಲ ಬಾರಿಗೆ ಜರ್ಮನಿ ಗುಂಪು ಹಂತದಲ್ಲೇ ಹೊರಬಿದ್ದಿತ್ತು. ಫೈನಲಲ್ಲಿ ಫ್ರಾನ್ಸ್‌ 4-2 ಗೋಲುಗಳಿಂದ ಕ್ರೊವೇಷಿಯಾವನ್ನು ಸೋಲಿಸಿ 2ನೇ ಬಾರಿಗೆ ಟ್ರೋಫಿ ಗೆದ್ದಿತ್ತು.

click me!