
ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾದ ಬಳಿಕ ಆ ದೇಶದಲ್ಲಿರುವ ಅಕ್ರಮ ವಲಸಿಗರನ್ನು ಗಡೀಪಾಡು ಮಾಡುವ ಕಾರ್ಯಾಚರಣೆ ನಡೆಯುತ್ತಿದೆ. ಇದರ ಮುಂದುವರಿದ ಭಾಗವಾಗಿ, ಜೂ.11ರಿಂದ ಆರಂಭಗೊಳ್ಳಲಿರುವ ಫಿಫಾ ವಿಶ್ವಕಪ್ ವೇಳೆಯೂ ವಲಸಿಗರನ್ನು ಗುರುತಿಸಿ ಅವರನ್ನು ಬಂಧಿಸಲು ಮತ್ತು ಗಡೀಪಾಡು ಮಾಡಲು ಅಮೆರಿಕ ಆಡಳಿತ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ(ಐಸಿಇ) ಹಂಗಾಮಿ ನಿರ್ದೇಶಕ ಟಾಡ್ ಲಿಯಾನ್ಸ್ ಕೂಡಾ ಇದರ ಸುಳಿವು ನೀಡಿದ್ದು, ಟೂರ್ನಿಯಲ್ಲಿ ಏಜೆನ್ಸಿಯು ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ. ಇನ್ನು, ಕ್ರೀಡಾಂಗಣದಲ್ಲಿ ರೇಡ್ ನಡೆಸುವ ಬಗ್ಗೆ ಪ್ರಶ್ನೆಗೆ ಉತ್ತರಿಸಿರುವ ಶ್ವೇತಭವನದ ವಿಶ್ವಕಪ್ ಕಾರ್ಯಪಡೆಯ ನಿರ್ದೇಶಕ ಆಂಡ್ರ್ಯೂ ಗಿಯುಲ್ಯಾನಿ, ‘ಅಮೆರಿಕದ ನಾಗರಿಕರನ್ನು ಸುರಕ್ಷಿತವಾಗಿಸುವ ಯಾವುದನ್ನೂ ಅಧ್ಯಕ್ಷರು ತಳ್ಳಿಹಾಕುವುದಿಲ್ಲ’ ಎಂದಿದ್ದಾರೆ. ಈ ಮೂಲಕ ಪಂದ್ಯದ ವೇಳೆ ಕ್ರೀಡಾಂಗಣ, ಅದರ ಸುತ್ತಮುತ್ತ ಪ್ರೇಕ್ಷಕರನ್ನು ಪರಿಶೀಲಿಸಿ, ಅಕ್ರಮ ವಲಸಿಗರೆಂದು ಕಂಡುಬಂದರೆ ಗಡೀಪಾರು ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ.
ನ್ಯೂಯಾರ್ಕ್: ಯುದ್ಧದ ನಡುವೆಯೇ ಈ ಬಾರಿ ಫಿಫಾ ವಿಶ್ವಕಪ್‌ನಲ್ಲಿ ಇರಾನ್ ತಂಡ ಅಮೆರಿಕದಲ್ಲಿ ಪಂದ್ಯಗಳನ್ನು ಆಡಲಿದೆ. ಆದರೆ ತಂಡ ಪಂದ್ಯಕ್ಕಾಗಿ ಮಾತ್ರ ಅಮೆರಿಕ ಪ್ರವೇಶಿಸಲು ಅವಕಾಶವಿದ್ದು, ಪಂದ್ಯ ಮುಗಿದ ಕೂಡಲೇ ದೇಶ ತೊರೆಯಬೇಕಾಗುತ್ತದೆ.
ಸದ್ಯ ಇರಾನ್ ತಂಡ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿದೆ. ‘ನಾವು ಪಂದ್ಯ ಆಡಲು ಬೆಳಗ್ಗೆ ಅಮೆರಿಕಕ್ಕೆ ತೆರಳುತ್ತೇವೆ. ಪಂದ್ಯ ಮುಗಿದ ಕೂಡಲೇ ಅಮೆರಿಕನ್ನು ತೊರೆಯಬೇಕು’ ಎಂದು ಮೆಕ್ಸಿಕೋದಲ್ಲಿರುವ ಇರಾನ್ ರಾಯಭಾರಿ ಅಬೊಲ್‌ಫಜಲ್ ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇರಾನ್ ತಂಡ ಜೂ.15ರಂದು ನ್ಯೂಜಿಲೆಂಡ್ ವಿರುದ್ಧ ಕ್ಯಾಲಿಫೋರ್ನಿಯಾದಲ್ಲಿ ಮೊದಲ ಪಂದ್ಯ ಆಡಲಿದೆ.
ವಾಷಿಂಗ್ಟನ್: ಜೂ.11ರಿಂದ ಆರಂಭಗೊಳ್ಳಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಇರಾನ್ ಆಟಗಾರರಿಗೆ ಅಮೆರಿಕಾದ ವೀಸಾ ಮಂಜೂರಾಗಿದೆ. ಇಸ್ರೇಲ್, ಅಮೆರಿಕ ಜೊತೆಗಿನ ಯುದ್ಧದ ಕಾರಣದಿಂದಾಗಿ ಇರಾನ್ ತಂಡ ಈ ಬಾರಿ ಅಮೆರಿಕ, ಮೆಕ್ಸಿಕೊ, ಕೆನಡಾ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ವಿಚಾರದಲ್ಲಿ ಗೊಂದಲವಿತ್ತು.
ಆದರೆ ಸದ್ಯ ಮೆಕ್ಸಿಕೋದಲ್ಲಿ ಅಭ್ಯಾಸ ನಡೆಸುತ್ತಿರುವ ಇರಾನ್ ತಂಡಕ್ಕೆ ಅಮೆರಿಕ ಪ್ರವೇಶಿಸಲು ವೀಸಾ ಮಂಜೂರು ಮಾಡಲಾಗಿದೆ. ಇದನ್ನು ಅಮೆರಿಕದ ಇಬ್ಬರು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದಾರೆ. ಇರಾನ್ ತಂಡ ಜೂ.15ರಂದು ಕ್ಯಾಲಿಫೋರ್ನಿಯಾದಲ್ಲಿ ನ್ಯೂಜಿಲೆಂಡ್ ವಿರುದ್ಧ ಮೊದಲ ಪಂದ್ಯವಾಡಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.