ಫಿಫಾ ವಿಶ್ವಕಪ್ 2026: ಕಾಲ್ಚೆಂಡು ಸಮರಕ್ಕೆ 16 ಸ್ಟೇಡಿಯಂ ಸಿದ್ದ!

Kannadaprabha News   | Kannada Prabha
Published : Jun 10, 2026, 08:36 AM IST
FIFA World Cup

ಸಾರಾಂಶ

23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ಜಂಟಿಯಾಗಿ ಆತಿಥ್ಯ ವಹಿಸುತ್ತಿವೆ. ಈ ಬಾರಿಯ ಟೂರ್ನಿಗಾಗಿ ಸಿದ್ಧವಾಗಿರುವ 16 ಕ್ರೀಡಾಂಗಣಗಳ ವಿಶೇಷತೆ, ಆಸನ ಸಾಮರ್ಥ್ಯ, ಮತ್ತು ಅಲ್ಲಿ ನಡೆಯಲಿರುವ ಪಂದ್ಯಗಳ ಸಂಖ್ಯೆಯ ಕುರಿತು ಈ ಲೇಖನವು ವಿವರವಾದ ಮಾಹಿತಿ ನೀಡುತ್ತದೆ.

ನಾಸಿರ್‌ ಸಜಿಪ, ಕನ್ನಡಪ್ರಭ ವಿಶೇಷ

23ನೇ ಆವೃತ್ತಿಯ ಫಿಫಾ ಫುಟ್ಬಾಲ್‌ ವಿಶ್ವಕಪ್‌ಗೆ ಜಗತ್ತು ಕಾತರದಿಂದ ಕಾಯುತ್ತಿದೆ. ಜಾಗತಿಕ ಮಟ್ಟದ ಅತಿ ದೊಡ್ಡ ಟೂರ್ನಿಗೆ ಆತಿಥ್ಯ ವಹಿಸಲು ಅಮೆರಿಕದ ಜೊತೆ ಮೆಕ್ಸಿಕೊ, ಕೆನಡಾ ಕೂಡಾ ಸಜ್ಜಾಗಿವೆ. 48 ತಂಡಗಳ ನಡುವಿನ ಹೈವೋಲ್ಟೇಜ್‌ ಸೆಣಸಾಟಕ್ಕೆ ಈ 3 ದೇಶಗಳ ಒಟ್ಟು 16 ಕ್ರೀಡಾಂಗಣಗಳು ಸಿದ್ಧವಾಗಿವೆ. ಈ ಬಾರಿ ಪಂದ್ಯ ನಡೆಯಲಿರುವ ಕ್ರೀಡಾಂಗಣಗಳ ವಿಶೇಷತೆ ಏನು, ಯಾವ ಕ್ರೀಡಾಂಗಣದಲ್ಲಿ ಎಷ್ಟು ಪಂದ್ಯಗಳು ನಡೆಯಲಿವೆ, ಎಷ್ಟು ಆಸನ ಸಾಮರ್ಥ್ಯವಿದೆ ಎಂಬುದರ ಮಾಹಿತಿ ಇಲ್ಲಿದೆ

1. ಡಲ್ಲಾಸ್‌ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 94,000 । ಪಂದ್ಯ: 9

1,225 ಹಾಗೂ 1,290 ಅಡಿ ಉದ್ದದ ಎರಡು ಬೃಹತ್ ಉಕ್ಕಿನ ಕಮಾನುಗಳನ್ನು ಬಳಸಿ ನಿರ್ಮಿಸಲಾದ ವಿಶಿಷ್ಠ ಕ್ರೀಡಾಂಗಣ. ಇದು ತೆರೆಯಬಹುದಾದ ಮೇಲ್ಛಾವಣಿ ಹೊಂದಿದೆ. ವಿಪರೀತ ಬಿಸಿಲು, ಮಳೆ ಸಂದರ್ಭದಲ್ಲಿ ಮೇಲ್ಛಾವಣಿ ಮುಚ್ಚಿ, ತೆರೆಯುವ ವ್ಯವಸ್ಥೆ ಹೊಂದಿದೆ. ಈ ಬಾರಿ ವಿಶ್ವಕಪ್‌ನ ಅತ್ಯಂತ ಹೆಚ್ಚು ಆಸನ ಸಾಮರ್ಥ್ಯವಿರುವ, ಗರಿಷ್ಠ ಪಂದ್ಯ ನಡೆಯುವ ಕ್ರೀಡಾಂಗಣ.

2. ಮೆಕ್ಸಿಕೊ ಸಿಟಿ ಕ್ರೀಡಾಂಗಣ, ಮೆಕ್ಸಿಕೊ

ಆಸನ ಸಾಮರ್ಥ್ಯ: 83,000 । ಪಂದ್ಯ: 5

3 ಬಾರಿ(1970, 1986, 2026) ಫಿಫಾ ವಿಶ್ವಕಪ್‌ ಆತಿಥ್ಯ ವಹಿಸುವ ವಿಶ್ವದ ಮೊದಲ ಕ್ರೀಡಾಂಗಣ. ಹಲವು ಐತಿಹಾಸಿಕ ಪಂದ್ಯಗಳಿಗೆ ಆತಿಥ್ಯ ವಹಿಸಿದ ಈ ಕ್ರೀಡಾಂಗಣಕ್ಕೆ ಫುಟ್ಬಾಲ್‌ ಚರಿತ್ರೆಯಲ್ಲಿರುವ ಖದರೇ ಬೇರೆ. ಇದು ಸಮುದ್ರ ಮಟ್ಟಕ್ಕಿಂತ ಬರೋಬ್ಬರಿ 2,240 ಮೀ. ಎತ್ತರದಲ್ಲಿದ್ದು, ಹೈಬ್ರಿಡ್‌ ಪಿಚ್‌ ಹೊಂದಿದೆ.

3. ಮೆಟ್‌ಲೈಫ್‌ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 82,500 । ಪಂದ್ಯ: ಫೈನಲ್ ಸೇರಿ 8

ಈ ಬಾರಿ ಫಿಫಾ ವಿಶ್ವಕಪ್‌ ಫೈನಲ್‌ ಸೇರಿ ಪ್ರಮುಖ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣ. ನ್ಯಾಷನಲ್‌ ಫುಟ್ಬಾಲ್‌ ಲೀಗ್(ಎನ್‌ಎಫ್‌ಎಲ್‌) ಪಂದ್ಯಗಳು ನಡೆಯುವ ಕ್ರೀಡಾಂಗಣವು, ಈ ಬಾರಿ ಜಾಗತಿ ಫುಟ್ಬಾಲ್‌ನ ಪ್ರಮುಖ ಪಂದ್ಯಗಳಿಗೆ ಸಾಕ್ಷಿಯಾಗಲಿದೆ. 2025ರ ಫಿಫಾ ಕ್ಲಬ್‌ ವಿಶ್ವಕಪ್ ಫೈನಲ್‌ ಪಂದ್ಯವೂ ಇಲ್ಲೇ ನಡೆದಿತ್ತು.

4. ಅಟ್ಲಾಂಟಾ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 75000 । ಪಂದ್ಯ: 8

ಕ್ಯಾಮರಾ ಅಪೆರ್ಚರ್‌ ರೀತಿ ಆಕರ್ಷಕವಾಗಿ ಮುಚ್ಚುವ ಹಾಗೂ ತೆರೆಯಬಲ್ಲ ಮೇಲ್ಚಾವಣಿ ಹೊಂದಿರುವ ವಿಶೇಷ ಕ್ರೀಡಾಂಗಣ. 360 ಡಿಗ್ರಿ ಹಾಲೋ ವಿಡಿಯೋ ಡಿಸ್‌ಪ್ಲೇ ವ್ಯವಸ್ಥೆ ಇದೆ. ಈ ಕ್ರೀಡಾಂಗಣವನ್ನು ಕ್ರೀಡಾ ವಾಸ್ತುಶಿಲ್ಪದ ರತ್ನ ಕಿರೀಟ ಎಂದು ಪರಿಗಣಿಸಲಾಗುತ್ತದೆ. ಈ ಕ್ರೀಡಾಂಗಣದಲ್ಲಿ ಸೆಮಿಫೈನಲ್‌ ಸೇರಿ 8 ಪಂದ್ಯ ನಡೆಯಲಿದೆ.

5. ಕಾನ್ಸಾಸ್‌ ಸಿಟಿ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 73000 । ಪಂದ್ಯ: 6

ಮೇಲ್ಛಾವಣಿ ಇಲ್ಲದೆ, ಬಟ್ಟಲಿನ ರೀತಿ ಕಾಣಿಸಿಕೊಳ್ಳುವ ಸುಂದರ ಕ್ರೀಡಾಂಗಣ. 2014ರಲ್ಲಿ ಎನ್‌ಎಫ್‌ಎಲ್‌ ಪಂದ್ಯದ ವೇಳೆ ಇಲ್ಲಿ ನೆರೆದಿದ್ದ ಅಭಿಮಾನಿಗಳಿಂದ 142.2 ಡೆಸಿಬಲ್‌ ಮಟ್ಟದ ಶಬ್ಧ ಕೇಳಿಬಂದಿದ್ದು, ಈ ಮೂಲಕ ಗಿನ್ನೆಸ್‌ ವಿಶ್ವ ದಾಖಲೆ ಪಟ್ಟಿ ಸೇರಿತ್ತು. ಈ ಬಾರಿ ಇಲ್ಲಿ 6 ಪಂದ್ಯಗಳು ನಡೆಯಲಿವೆ.

6. ಹಾಸ್ಟನ್‌ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 72000 । ಪಂದ್ಯ: 7

ಅಗತ್ಯಕ್ಕೆ ತಕ್ಕಂತೆ ಮುಚ್ಚುವ ಮತ್ತು ತೆರೆಯಬಹುದಾದ ಮೇಲ್ಛಾವಣಿ ಹೊಂದಿರುವ ಅಮೆರಿಕದ ಮತ್ತೊಂದು ಕ್ರೀಡಾಂಗಣ. ಈ ವ್ಯವಸ್ಥೆ ಹೊಂದಿದ ಮೊದಲ ಎನ್‌ಎಫ್‌ಎಲ್‌ ಕ್ರೀಡಾಂಗಣ ಎಂಬ ಖ್ಯಾತಿ ಹೊಂದಿದೆ. 2002ರಲ್ಲಿ 3364 ಕೋಟಿ ರು. ವೆಚ್ಚದಲ್ಲಿ ಈ ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

7. ಸ್ಯಾನ್‌ ಫ್ರಾನ್ಸಿಸ್ಕೊ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 71000 । ಪಂದ್ಯ: 6

ಕ್ರೀಡಾಲೋಕದ ಪ್ರಮುಖ ಹೈ ಟೆಕ್‌ ಕ್ರೀಡಾಂಗಣಗಳಲ್ಲಿ ಒಂದು. ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆ ಮೂಲಕ ‘ಸ್ಮಾರ್ಟ್‌ ಕ್ರೀಡಾಂಗಣ’ ಎಂದೇ ಹೆಸರುವಾಸಿಯಾಗಿದೆ. ಹೈ ಸ್ಪೀಡ್‌ ವೈಫೈ ವ್ಯವಸ್ಥೆ ಇದ್ದು, 70000ಕ್ಕೂ ಅಧಿಕ ಪ್ರೇಕ್ಷಕರಿಗೆ ಕನೆಕ್ಟ್‌ ಮಾಡಬಹುದು.

8. ಲಾಸ್‌ ಏಂಜಲೀಸ್‌ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 70000 । ಪಂದ್ಯ: 8

ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲೀಸ್‌ನಲ್ಲಿರುವ ಈ ಕ್ರೀಡಾಂಗಣ ಕ್ರೀಡಾ ಇತಿಹಾಸದಲ್ಲೇ ಈವರೆಗಿನ ಅತ್ಯಂತ ದುಬಾರಿ ಸ್ಟೇಡಿಯಂ. ಬರೋಬ್ಬರಿ 52.4 ಸಾವಿರ ಕೋಟಿ ರು. ವೆಚ್ಚದಲ್ಲಿ ಈ ಕ್ರೀಡಾಂಗಣ ನಿರ್ಮಾಣಗೊಂಡಿದೆ. ಅಲ್ಲದೆ, ವಿಸ್ತೀರ್ಣದಲ್ಲೂ ಎನ್‌ಎಫ್‌ಎಲ್‌ನ ಅತಿ ದೊಡ್ಡ ಕ್ರೀಡಾಂಗಣ ಎನಿಸಿಕೊಂಡಿದೆ.

9. ಫಿಲಡೆಲ್ಫಿಯಾ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 69000 । ಪಂದ್ಯ: 6

ಹದ್ದಿನಿಂದ ಪ್ರೇರಿತವಾದ ವಿನ್ಯಾಸದ ಈ ಕ್ರೀಡಾಂಗಣದಲ್ಲಿ ಈ ಬಾರಿ ವಿಶ್ವಕಪ್‌ನಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿವೆ. ಕ್ರೀಡಾಂಗಣದ ಪೂರ್ವ ಮತ್ತು ಪಶ್ಚಿಮ ಸ್ಟ್ಯಾಂಡ್‌ಗಳ ಮೇಲೆ ಹದ್ದಿನ ರೆಕ್ಕೆಯಂತೆ ವಿನ್ಯಾಸ ಮಾಡಲಾಗಿದೆ.

10. ಸೀಟಲ್‌ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 69000 । ಪಂದ್ಯ: 6

ಮುಚ್ಚುವ ಮತ್ತು ತೆರೆಯಬಹುದಾದ ಮೇಲ್ಛಾವಣಿ ಹೊಂದಿರುವ ಅಮೆರಿಕದ ಮತ್ತೊಂದು ಕ್ರೀಡಾಂಗಣ. ಅಭಿಮಾನಿಗಳ ಜೋರು ಶಬ್ಧದ ಮೂಲಕ 2 ಬಾರಿ ಗಿನ್ನೆಲೆ ವಿಶ್ವ ದಾಖಲೆ ಪಟ್ಟಿ ಸೇರಿತ್ತು. ಈ ಬಾರಿ ವಿಶ್ವಕಪ್‌ನಲ್ಲಿ ಅಮೆರಿಕದ ಕಡಿಮೆ ಆಸನ ಸಾಮರ್ಥ್ಯದ ಕ್ರೀಡಾಂಗಣಗಳಲ್ಲಿ ಒಂದು. ಇಲ್ಲಿ 6 ಪಂದ್ಯಗಳು ನಿಗದಿಯಾಗಿವೆ.

11. ಬಾಸ್ಟನ್‌ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 65000 । ಪಂದ್ಯ: 7

ಶೇಕಡಾ 100ರಷ್ಟು ಖಾಸಗಿಯಾಗಿ ನಿರ್ಮಿಸಿದ ಎನ್‌ಎಫ್‌ಎಲ್‌ನ ಏಕೈಕ ಕ್ರೀಡಾಂಗಣ. ಇದು 22 ಅಂತಸ್ತಿನ ಲೈಟ್‌ಹೌಸ್‌ ಹೊಂದಿದ್ದು, ಅಮೆರಿಕದ ಅತ್ಯಂತ ಉದ್ದದ ಲೈಟ್‌ಹೌಸ್‌(218 ಫೀಟ್‌) ಎಂಬ ಹೆಗ್ಗಳಿಕೆ ಇದೆ. ಈ ವಿಶ್ವಕಪ್‌ನಲ್ಲಿ ಒಂದು ಕ್ವಾರ್ಟರ್‌ ಫೈನಲ್‌ ಸೇರಿದಂತೆ ಒಟ್ಟು 7 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

12. ಮಿಯಾಮಿ ಕ್ರೀಡಾಂಗಣ, ಅಮೆರಿಕ

ಆಸನ ಸಾಮರ್ಥ್ಯ: 65000 । ಪಂದ್ಯ: 7

ಅಮೆರಿಕದಲ್ಲಿರುವ ಈ ಕ್ರೀಡಾಂಗಣ ಬಹು ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುತ್ತದೆ. ಫಾರ್ಮುಲಾ 1 ಮಿಯಾಮಿ ಗ್ರ್ಯಾನ್‌ಪ್ರಿ(ಟ್ರ್ಯಾಕ್‌ ಕ್ರೀಡಾಂಗಣದ ಹೊರಭಾಗದಲ್ಲಿದೆ), ಮಿಯಾಮಿ ಓಪನ್‌ ಟೆನಿಸ್‌, ಅಮೆರಿಕನ್‌ ಫುಟ್ಬಾಲ್‌, ಬಾಕ್ಸಿಂಗ್‌ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಆತಿಥ್ಯ ವಹಿಸುವ ಕ್ರೀಡಾಂಗಣ.

13. ಬಿ.ಸಿ. ಪ್ಲೇಸ್‌ ಕ್ರೀಡಾಂಗಣ, ಕೆನಡಾ

ಆಸನ ಸಾಮರ್ಥ್ಯ: 54000 । ಪಂದ್ಯ: 7

ಕೆನಡಾದ ಅತ್ಯಂತ ಪ್ರತಿಷ್ಠಿತ ಕ್ರೀಡಾಂಗಣ. ಕೇಬಲ್ ಆಧಾರಿತವಾಗಿ ತೆರೆಯುವ ಮತ್ತು ಮುಚ್ಚಬಹುದಾದ ಮೇಲ್ಛಾವಣಿ ಹೊಂದಿದೆ. 2010ರ ಚಳಿಗಾಲದ ಒಲಿಂಪಿಕ್ಸ್‌, ಚಳಿಗಾಲದ ಪ್ಯಾರಾಲಿಂಪಿಕ್ಸ್‌, 2015ರ ಫಿಫಾ ಮಹಿಳಾ ವಿಶ್ವಕಪ್‌ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳಿಗೆ ಆತಿಥ್ಯ ವಹಿಸಿದ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಇದೆ.

14. ಎಸ್ಟಾಡಿಯೊ ಮೋಂಟೆರಿ, ಮೆಕ್ಸಿಕೊ

ಆಸನ ಸಾಮರ್ಥ್ಯ: 53500 । ಪಂದ್ಯ: 6

ವಿಶ್ವ ಫುಟ್ಬಾಲ್‌ನ ಅತ್ಯಂತ ಸುಂದರ ಕ್ರೀಡಾಂಗಣಗಳಲ್ಲಿ ಒಂದು. ಸ್ಯಾಡಲ್ ಪರ್ವತದ ಅದ್ಭುತ ನೋಟವು ಕ್ರೀಡಾಂಗಣದ ವಿಶೇಷತೆಗಳಲ್ಲಿ ಒಂದು. ತೆರೆದ ಕ್ರೀಡಾಂಗಣದಲ್ಲಿ ಪರ್ವತ ಶ್ರೇಣಿಯ ಸುಂದರ ದೃಶ್ಯಗಳನ್ನು ನೋಡಬಹುದು. ಈ ಬಾರಿ ವಿಶ್ವಕಪ್‌ನಲ್ಲಿ 6 ಪಂದ್ಯಗಳನ್ನು ಆಯೋಜಿಸಲಿದೆ.

15. ಎಸ್ಟಾಡಿಯೊ ಗ್ವಾಡಲಜರ, ಮೆಕ್ಸಿಕೊ

ಆಸನ ಸಾಮರ್ಥ್ಯ: 48000 । ಪಂದ್ಯ: 4

ಈ ಕ್ರೀಡಾಂಗಣವನ್ನು ಕೃತಕ ಬೆಟ್ಟದ ಮೇಲೆ ನಿರ್ಮಿಸಲಾಗಿದ್ದು, ಭೂಮಿಯಿಂದ ಮೇಲೇರುತ್ತಿರುವ ಜ್ವಾಲಾಮುಖಿಯನ್ನು ಹೋಲುವಂತೆ ಹುಲ್ಲಿನಿಂದ ಆವೃತವಾದ ಹೊರಭಾಗವನ್ನು ಹೊಂದಿದೆ. ಬಿಳಿ ಛಾವಣಿಯು ಮೋಡ ಅಥವಾ ಹೊಗೆಯನ್ನು ಸಂಕೇತಿಸುತ್ತದೆ. ಈ ಬಾರಿ ಅತ್ಯಂತ ಕಡಿಮೆ(4) ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣವಿದು.

16. ಟೊರೊಂಟೊ ಕ್ರೀಡಾಂಗಣ, ಕೆನಡಾ

ಆಸನ ಸಾಮರ್ಥ್ಯ: 45000 । ಪಂದ್ಯ: 6

ಈ ಬಾರಿ ವಿಶ್ವಕಪ್‌ನಲ್ಲಿ ಅತ್ಯಂತ ಕಡಿಮೆ ಆಸನ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣ. 2007ರಲ್ಲಿ ನಿರ್ಮಿಸಲಾಗಿರುವ ಈ ಕ್ರೀಡಾಂಗಣ, ಕೆನಡಾದಲ್ಲಿ ಫುಟ್ಬಾಲ್‌ಗಾಗಿಯೇ ತಯಾರಿಸಲಾದ ಮೊದಲ ಸ್ಟೇಡಿಯಂ. ಇಲ್ಲಿ ಜೂ.12ಕ್ಕೆ ನಡೆಯಲಿರುವ ಕೆನಡಾ ತಂಡದ ಪಂದ್ಯವು, ಆ ದೇಶದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್‌ನ ಮೊದಲ ಪಂದ್ಯ ಎನಿಸಿಕೊಳ್ಳಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒಂದೇ ಒಂದು ತಪ್ಪಾದ್ರೂ ಪ್ರಾಣಕ್ಕೆ ಕುತ್ತು, ಫಿಫಾ ವಿಶ್ವಕಪ್‌ ಬಗ್ಗೆ ಪ್ಲೇಯರ್ಸ್‌ಗೆ ಎಚ್ಚರಿಸಿದ ಸ್ವಿಜರ್ಲೆಂಡ್‌ ಟೀಮ್‌!
ಫುಟ್ಬಾಲ್ ವಿಶ್ವಕಪ್‌ ಭಾರೀ ಬಹುಮಾನ ಘೋಷಿಸಿದ FIFA; ಚಾಂಪಿಯನ್ ತಂಡಕ್ಕೆ ಸಿಗುವ ನಗದು ಮೊತ್ತ ಕೇಳಿದ್ರೆ ದಂಗಾಗ್ತೀರಾ!