
ಫ್ಲೋರಿಡಾ(ಅಮೆರಿಕ): 23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ನ ಅರ್ಧ ಭಾಗ ಮುಕ್ತಾಯಗೊಂಡಿದೆ. ಜೂ.11ರಂದು ಟೂರ್ನಿ ಆರಂಭಗೊಂಡಿದ್ದು, ನಿಗದಿತ 104 ಪಂದ್ಯಗಳ ಪೈಕಿ ಒಟ್ಟು 54 ಪಂದ್ಯಗಳು ಪೂರ್ಣಗೊಂಡಿವೆ. ಜು.19ರ ವರೆಗೂ ನಡೆಯಲಿರುವ ಟೂರ್ನಿಯಲ್ಲಿ ಇನ್ನು 50 ಪಂದ್ಯಗಳಷ್ಟೇ ಬಾಕಿಯಿವೆ.
ಈ ಬಾರಿ ದಾಖಲೆಯ 48 ತಂಡಗಳು ಟೂರ್ನಿಯಲ್ಲಿ ಆಡುತ್ತಿವೆ. ಇದರಲ್ಲಿ 32 ತಂಡಗಳು ನಾಕೌಟ್ ಪ್ರವೇಶದಲಿವೆ. ಈಗಾಗಲೇ 13 ತಂಡಗಳು ನಾಕೌಟ್ ಸ್ಥಾನ ಖಚಿತಪಡಿಸಿಕೊಂಡಿದ್ದು, ಇನ್ನೂ 19 ತಂಡಗಳಿಗೆ ಮುಂದಿನ ಹಂತ ಪ್ರವೇಶಿಸುವ ಅವಕಾಶವಿದೆ. ಭಾನುವಾರ ಬೆಳಗ್ಗೆ ಗುಂಪು ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಸೋಮವಾರದಿಂದ ನಾಕೌಟ್ ಹಂತದ ಪಂದ್ಯಗಳು ಶುರುವಾಗಲಿದೆ.
ಬುಧವಾರದವರೆಗೂ ನಡೆದ ಪಂದ್ಯಗಳ ಆಧಾರದಲ್ಲಿ ಒಟ್ಟು 13 ತಂಡಗಳು ನಾಕೌಟ್ ಪ್ರವೇಶಿಸಿವೆ. ‘ಎ’ ಗುಂಪಿನ ಅಗ್ರಸ್ಥಾನಿ ಮೆಕ್ಸಿಕೊ, ‘ಬಿ’ ಗುಂಪಿನ ಅಗ್ರಸ್ಥಾನಿ ಸ್ವಿಜರ್‌ಲೆಂಡ್, ‘ಸಿ’ ಗುಂಪಿನ ಅಗ್ರಸ್ಥಾನಿ ಬ್ರೆಜಿಲ್, ‘ಡಿ’ ಗುಂಪಿನ ಅಗ್ರಸ್ಥಾನಿ ಅಮೆರಿಕ, ‘ಇ’ ಗುಂಪಿನ ಅಗ್ರಸ್ಥಾನಿ ಜರ್ಮನಿ, ‘ಜೆ’ ಗುಂಪಿನ ಅಗ್ರಸ್ಥಾನಿ ಅರ್ಜೆಂಟೀನಾ ಜೊತೆಗೆ ಫ್ರಾನ್ಸ್, ನಾರ್ವೆ, ಕೆನಡಾ, ಮೊರಾಕ್ಕೊ, ಕೊಲಂಬಿಯಾ, ಬೋಸ್ನಿಯಾ ಮತ್ತು ಹೆರ್ಜೆಗೋವಿನಾ, ದಕ್ಷಿಣ ಆಫ್ರಿಕಾ ತಂಡಗಳೂ ನಾಕೌಟ್ ಪ್ರವೇಶಿಸಿವೆ. ಗುಂಪಿನಲ್ಲಿ ಅಗ್ರ-2 ಸ್ಥಾನ ಪಡೆಯುವ ತಂಡಗಳು ಮತ್ತು 12 ಗುಂಪುಗಳಲ್ಲಿ 3ನೇ ಸ್ಥಾನಿಯಾಗುವ 12 ತಂಡಗಳ ಪೈಕಿ ಅಗ್ರ-8 ತಂಡಗಳೂ ನಾಕೌಟ್‌ಗೇರಲಿವೆ. ಕತಾರ್, ಚೆಕ್ ಗಣರಾಜ್ಯ, ಟರ್ಕಿ, ಟ್ಯುನೀಶಿಯಾ, ಜೋರ್ಡನ್, ಪನಾಮ ಹಾಗೂ ಹೈಟಿ ತಂಡಗಳು ಈಗಾಗಲೇ ನಾಕೌಟ್ ರೇಸ್‌ನಿಂದ ಹೊರಬಿದ್ದಿವೆ.
ದಕ್ಷಿಣ ಆಫ್ರಿಕಾ ತಂಡ ಇದೇ ಮೊದಲ ಬಾರಿ ಫಿಫಾ ವಿಶ್ವಕಪ್‌ನಲ್ಲಿ ನಾಕೌಟ್ ಪ್ರವೇಶಿಸಿದೆ. ಬುಧವಾರ ರಾತ್ರಿ ದಕ್ಷಿಣ ಕೊರಿಯಾ ವಿರುದ್ಧ ಪಂದ್ಯದಲ್ಲಿ ದ.ಆಫ್ರಿಕಾ 1-0 ಗೋಲಿನಿಂದ ಗೆಲುವು ಸಾಧಿಸಿತು. 63ನೇ ನಿಮಿಷದಲ್ಲಿ ಥಪೇಲೊ ಮಸೇಕೊ ಬಾರಿಸಿದ ಗೋಲು ದ.ಆಫ್ರಿಕಾಗೆ ಗೆಲುವು ತಂದುಕೊಟ್ಟಿತು. ಇದರೊಂದಿಗೆ ತಂಡ ‘ಎ’ ಗುಂಪಿನಲ್ಲಿ 4 ಅಂಕದೊಂದಿಗೆ 2ನೇ ಸ್ಥಾನಿಯಾಗಿ ಅಂತಿಮ 32ರ ಘಟ್ಟ ಪ್ರವೇಶಿಸಿತು. ಈ ಹಿಂದೆ 1998, 2002 ಹಾಗೂ 2010ರಲ್ಲಿ ವಿಶ್ವಕಪ್ ಆಡಿದ್ದ ದ.ಆಫ್ರಿಕಾ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.
ವ್ಯಾಂಕೋವರ್: ಆತಿಥೇಯ ಕೆನಡಾ ವಿರುದ್ಧ ಗುಂಪು ಹಂತದ ಕೊನೆ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಗೆದ್ದ ಸ್ವಿಜರ್‌ಲೆಂಡ್‌ನ, ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿತು. ತಂಡ ಆಡಿರುವ 3 ಪಂದ್ಯಗಳ ಪೈಕಿ 2ರಲ್ಲಿ ಗೆದ್ದಿದ್ದು, 1 ಡ್ರಾದೊಂದಿಗೆ ಒಟ್ಟು 7 ಅಂಕ ಕಲೆಹಾಕಿದೆ. ಮತ್ತೊಂದೆಡೆ ಕೆನಡಾ ಈ ಪಂದ್ಯದಲ್ಲಿ ಸೋತ ಹೊರತಾಗಿಯೂ 4 ಅಂಕದೊಂದಿಗೆ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ನಾಕೌಟ್ ಪ್ರವೇಶಿಸಿದೆ. ಕೆನಡಾ ಇದೇ ಮೊದಲ ಬಾರಿ ವಿಶ್ವಕಪ್‌ನಲ್ಲಿ ನಾಕೌಟ್‌ಗೇರಿದ ಸಾಧನೆ ಮಾಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.