FIFA World Cup 2026: ಕ್ರಿಸ್ಟಿಯಾನೋ ರೊನಾಲ್ಡೋ ಮಿಂಚಿನ ಆಟ; ಪೋರ್ಚುಗಲ್‌ಗೆ 5-0 ಜಯ

Kannadaprabha News   | Kannada Prabha
Published : Jun 25, 2026, 07:49 AM IST
Cristiano Ronaldo

ಸಾರಾಂಶ

ಕ್ರಿಸ್ಟಿಯಾನೋ ರೊನಾಲ್ಡೋ ಅವರ 2 ಗೋಲುಗಳ ನೆರವಿನಿಂದ ಪೋರ್ಚುಗಲ್, ಉಜ್ಬೇಕಿಸ್ತಾನ ವಿರುದ್ಧ 5-0 ಅಂತರದ ಭರ್ಜರಿ ಜಯ ಸಾಧಿಸಿತು. ಈ ಮೂಲಕ ಸತತ 6 ವಿಶ್ವಕಪ್‌ಗಳಲ್ಲಿ ಗೋಲು ಗಳಿಸಿದ ಮೊದಲ ಆಟಗಾರ ಎಂಬ ವಿಶ್ವದಾಖಲೆಯನ್ನು ರೊನಾಲ್ಡೋ ನಿರ್ಮಿಸಿದರು.

ಹ್ಯೂಸ್ಟನ್‌: ಕ್ರಿಸ್ಟಿಯಾನೋ ರೊನಾಲ್ಡೋ ಭರ್ಜರಿ ಸ್ಟೈಲ್‌ನಲ್ಲಿ ಲಯಕ್ಕೆ ಮರಳಿದ ಪರಿಣಾಮವನ್ನು ಉಜ್ಬೇಕಿಸ್ತಾನ ಎದುರಿಸಬೇಕಾಯಿತು. ರೊನಾಲ್ಡೋ 2 ಗೋಲು ಬಾರಿಸಿ, ಪೋರ್ಚುಗಲ್‌ನ 5-0 ಅಂತರದ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮೊದಲ ಪಂದ್ಯದಲ್ಲಿ ಕಾಂಗೋ ವಿರುದ್ಧ 1-1ರ ಡ್ರಾಗೆ ತೃಪ್ತಿಪಟ್ಟಿದ್ದ ಪೋರ್ಚುಗಲ್‌, ಈ ಗೆಲುವಿನೊಂದಿಗೆ ನಾಕೌಟ್‌ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಈ ಪಂದ್ಯಕ್ಕೂ ಮುನ್ನ ಸಾಮಾಜಿಕ ತಾಣಗಳಲ್ಲಿ ಅನೇಕರು, ರೊನಾಲ್ಡೋ ತಂಡದಲ್ಲಿ ಇರಬೇಕೇ ಬೇಡವೆ ಎನ್ನುವ ಚರ್ಚೆ ನಡೆಸಿದ್ದರು. ಕೆಲವರು, ಟೀಕೆ ಸಹ ಮಾಡಿದ್ದರು. ಎಲ್ಲ ಪ್ರಶ್ನೆಗಳಿಗೂ ರೊನಾಲ್ಡೋ ತಮ್ಮ ಪ್ರದರ್ಶನದ ಮೂಲಕವೇ ಉತ್ತರಿಸಿದರು. 6ನೇ ನಿಮಿಷದಲ್ಲೇ ಖಾತೆ ತೆರೆದ ರೊನಾಲ್ಡೋ, ಆರಂಭಿಕ ಮುನ್ನಡೆ ಒದಗಿಸಿದರು. 17ನೇ ನಿಮಿಷದಲ್ಲಿ ನ್ಯುನೊ ಮೆಂಡೆಸ್‌ ಗೋಲು ಗಳಿಸಿದರೆ, 39ನೇ ನಿಮಿಷದಲ್ಲಿ ರೊನಾಲ್ಡೋ 2ನೇ ಗೋಲು ಬಾರಿಸಿ, ಮೊದಲಾರ್ಧದ ಮುಕ್ತಾಯಕ್ಕೆ ತಂಡ 3-0 ಮುನ್ನಡೆ ಕಾಯ್ದುಕೊಳ್ಳಲು ನೆರವಾದರು.

60ನೇ ನಿಮಿಷದಲ್ಲಿ ಉಜ್ಬೇಕಿಸ್ತಾನದ ಅಬ್ದುವೊಹಿದ್‌ ಸ್ವಂತ ಗೋಲು ಬಾರಿಸಿ, ಪೋರ್ಚುಗಲ್‌ಗೆ ಉಡುಗೊರೆ ನೀಡಿದರೆ, 87ನೇ ನಿಮಿಷದಲ್ಲಿ ರಫೇಲ್‌ ಲಿಯೊ ತಂಡದ ಪರ 5ನೇ ಗೋಲು ದಾಖಲಿಸಿದರು. ಪೋರ್ಚುಗಲ್‌ಗೆ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಭಾನುವಾರ ಕೊಲಂಬಿಯಾ ಎದುರಾಗಲಿದೆ.

ಸತತ 6 ವಿಶ್ವಕಪ್‌ ಟೂರ್ನಿಗಳಲ್ಲಿ ಗೋಲು: ರೊನಾಲ್ಡೋ ದಾಖಲೆ!

ಸತತ 6 ಫಿಫಾ ವಿಶ್ವಕಪ್‌ಗಳಲ್ಲಿ ಗೋಲು ಬಾರಿಸಿದ ಮೊದಲ ಆಟಗಾರ ಎನ್ನುವ ದಾಖಲೆಯನ್ನು ಕ್ರಿಸ್ಟಿಯಾನೋ ರೊನಾಲ್ಡೋ ಬರೆದಿದ್ದಾರೆ. 20 ವರ್ಷಗಳ ಹಿಂದೆ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಆಡಿದ್ದ ರೊನಾಲ್ಡೋ, 2006, 2010, 2014, 2018, 2022, 2026ರ ವಿಶ್ವಕಪ್‌ನಲ್ಲಿ ಕನಿಷ್ಠ 1 ಗೋಲು ಬಾರಿಸಿದ್ದಾರೆ.

ಕಾಂಗೋ ವಿರುದ್ಧ ಗೆದ್ದ ಕೊಲೊಂಬಿಯಾ

ಗ್ವಾಡಲಜರಾ (ಮೆಕ್ಸಿಕೋ): ಡೇನಿಯಲ್‌ ಮುನೊಜ್‌ ಬಾರಿಸಿದ ಏಕೈಕ ಗೋಲು, ಕಾಂಗೋ ವಿರುದ್ಧ ಕೊಲೊಂಬಿಯಾ 1-0 ಅಂತರದಲ್ಲಿ ಗೆದ್ದು ನಾಕೌಟ್‌ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ನೆರವಾಯಿತು. ಪಂದ್ಯದ 76ನೇ ನಿಮಿಷದಲ್ಲಿ ಮುನೊಜ್‌ ಗೋಲು ದಾಖಲಿಸಿದರು.

ಕಾಂಗೋಗೆ ‘ಜೀವಂತ ಪ್ರತಿಮೆ’ಯ ಬೆಂಬಲ!

ಕಾಂಗೋ-ಕೊಲೊಂಬಿಯಾ ಪಂದ್ಯದಲ್ಲಿ ಫುಟ್ಬಾಲಿಗರಿಗಿಂತ ಹೆಚ್ಚು ಗಮನ ಸೆಳೆದಿದ್ದು ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿದ್ದ ಮೈಕಲ್‌ ಎನ್‌ಕುಕಾ ಎನ್ನುವ ಅಭಿಮಾನಿ. ಇವರು ಕಾಂಗೋ ದೇಶದವರು. ಪಂದ್ಯ ಶುರುವಾದಾಗಿನಿಂದ ಮುಗಿಯುವ ವರೆಗೂ ಪ್ರತಿಮೆಯಂತೆ, ಚೂರೂ ಅಲುಗಾಡದೆ ನಿಂತಿದ್ದರು. ಮೈಕಲ್‌ ಜೀವಂತ ಪ್ರತಿಮೆ ಎಂದೇ ಖ್ಯಾತಿ ಪಡೆದಿರುವ ವ್ಯಕ್ತಿ. ಕಾಂಗೋ ದೇಶದ ಪ್ರಥಮ ಪ್ರಧಾನಿಯಾಗಿದ್ದ ಪ್ಯಾಟ್ರೈಸ್‌ ಲುಮುಂಬಾ ಅವರ ನೆನಪಿನಲ್ಲಿ, ಪ್ರತಿಮೆಯಂತೆ ನಿಲ್ಲುವುದಾಗಿ ಮೈಕಲ್‌ ಹೇಳಿಕೊಂಡಿದ್ದಾರೆ.

ನಾಕೌಟ್‌ ರೇಸ್‌ನಲ್ಲಿ ಉಳಿದ ಕ್ರೊವೇಷಿಯಾ

ಟೊರೊಂಟೊ: ಜೊಸಿಪ್‌ ಸ್ಟ್ಯಾನಿಸಿಚ್‌ 54ನೇ ನಿಮಿಷದಲ್ಲಿ ಬಾರಿಸಿದ ಗೋಲಿನ ನೆರವಿನಿಂದ ಪನಾಮ ವಿರುದ್ಧ 1-0 ಗೋಲಿನ ಜಯ ಸಾಧಿಸಿದ ಕ್ರೊವೇಷಿಯಾ, ನಾಕೌಟ್‌ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗ್ಗೆ ಬಿಲ್ಡಿಂಗ್ ಕೆಲಸ, ಮಧ್ಯಾಹ್ನ ಪೇಂಟಿಂಗ್, ರಾತ್ರಿ ಫುಟ್‌ಬಾಲ್; ಇಂಗ್ಲೆಂಡ್ ಬೆವರಿಳಿಸಿದ Jonas Adjetey ಯಶೋಗಾಥೆ!
FIFA World Cup 2026: ಮೆಸ್ಸಿ, ಎಂಬಾಪೆ, ಹಾಲ್ಯಾಂಡ್ ಗೋಲಿನಬ್ಬರ! ಹೊಸ ದಾಖಲೆ ಬರೆದ ಮೆಸ್ಸಿ