
ಅರ್ಲಿಂಗ್ಟನ್(ಅಮೆರಿಕ): 1974, 1978, 2010ರ ರನ್ನರ್-ಅಪ್ ನೆದರ್‌ಲೆಂಡ್ಸ್ ತಂಡ ಈ ಬಾರಿ ಫಿಫಾ ವಿಶ್ವಕಪ್ ಅಭಿಯಾನವನ್ನು ಡ್ರಾದೊಂದಿಗೆ ಆರಂಭಿಸಿದೆ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಡಚ್ ಪಡೆ ವಿರುದ್ಧ ಏಷ್ಯಾದ ನಂ.1, ವಿಶ್ವ ನಂ.18 ತಂಡ ಜಪಾನ್ 2-2 ಗೋಲುಗಳಿಂದ ಡ್ರಾ ಸಾಧಿಸಿತು.
ಉಭಯ ತಂಡಗಳಿಂದಲೂ ಮೊದಲಾರ್ಧದಲ್ಲಿ ಯಾವುದೇ ಗೋಲು ದಾಖಲಾಗಲಿಲ್ಲ. ಹಲವು ಶಾಟ್‌ಗಳ ಹೊರತಾಗಿಯೂ ಚೆಂಡನ್ನು ಗೋಲು ಪೆಟ್ಟಿಗೆಯೊಳಗೆ ಬಿಡಲು ಗೋಲ್‌ಕೀಪರ್‌ಗಳು ಅವಕಾಶ ನೀಡಲಿಲ್ಲ. ಆದರೆ ದ್ವಿತೀಯಾರ್ಧದಲ್ಲಿ ಪಂದ್ಯದ ಚಿತ್ರಣ ಬದಲಾಯಿತು. ಕೇವಲ 14 ನಿಮಿಷಗಳ ಅಂತರದಲ್ಲಿ 3 ಗೋಲುಗಳು ದಾಖಲಾದವು.
51ನೇ ನಿಮಿಷದಲ್ಲಿ ನೆದರ್‌ಲೆಂಡ್ಸ್ ನಾಯಕ, ಡಿಫೆಂಡರ್ ಆಗಿರುವ ವರ್ಜಿಲ್ ವ್ಯಾನ್ ಡಿಜ್ಕ್ ಗೋಲು ಬಾರಿಸುವ ಮೂಲಕ ತಂಡಕ್ಕೆ ಮುನ್ನಡೆ ಒದಗಿಸಿಕೊಟ್ಟರು. ಆದರೆ ತಂಡದ ಸಂಭ್ರಮ ಹೆಚ್ಚು ಹೊತ್ತು ಇರಲಿಲ್ಲ. 57ನೇ ನಿಮಿಷದಲ್ಲಿ ಕೇಟೋ ನಕಮುರಾ ಬಾರಿಸಿದ ಗೋಲಿನಿಂದಾಗಿ ಜಪಾನ್ 1-1 ಸಮಬಲ ಸಾಧಿಸಿತು. ಇದಾಗಿ 7 ನಿಮಿಷದಗಳಲ್ಲೇ ಡಚ್ ಮತ್ತೊಂದು ಗೋಲು ಹೊಡೆಯಿತು. ಕ್ರಿಸೆನ್ಸಿಯೊ ಸಮರ್‌ವಿಲ್ 64ನೇ ನಿಮಿಷದಲ್ಲಿ ಹೊಡೆದ ಗೋಲು ಡಚ್ಚರಿಗೆ ಗೆಲುವನ್ನು ಬಹುತೇಕ ಖಚಿತಪಡಿಸಿತು. ಆ ಬಳಿಕ ಜಪಾನ್ ಮತ್ತಷ್ಟು ಆಕ್ರಮಣಕಾರಿ ಆಟವಾಡಿದರೂ ಅಷ್ಟು ಬೇಗ ಯಶಸ್ಸು ಸಿಗಲಿಲ್ಲ. ಇನ್ನೇನು ಪಂದ್ಯದಲ್ಲಿ ಜಪಾನ್ ಸೋತೇ ಬಿಟ್ಟಿತು ಎನ್ನುವಷ್ಟರಲ್ಲಿ 88ನೇ ನಿಮಿಷದಲ್ಲಿ ಕೊಕಿ ಒಗಾವ ಆಕರ್ಷಕ ಹೆಡರ್ ಮೂಲಕ ಗೋಲು ಪೆಟ್ಟಿಗೆಯತ್ತ ತಳ್ಳಿದ ಚೆಂಡು, ಡಯಾಚಿ ಕಮಡ ತಲೆಯನ್ನು ಸವರಿ ಗೋಲಾಗಿ ಪರಿವರ್ತನೆಗೊಂಡಿತು. ಇದರೊಂದಿಗೆ ಡಚ್ ಪಡೆಯ ಗೆಲುವಿನ ಆಸೆ ಭಗ್ನಗೊಂಡಿತು.
ಪಂದ್ಯದ ವೇಳೆ ಜಪಾನ್ ಕೋಚ್ ಹಜಿಮೆ ಮೊರಿಯಸು ಅವರ ನಡೆ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ತಂಡದ ಡಗೌಟ್ ಬಳಿ ಇದ್ದ ಅವರು ಪಂದ್ಯದುದ್ದಕ್ಕೂ ಬೋರ್ಡ್ ಬಳಸಿ ಆಟಗಾರರ ಜೊತೆ ಸಂವಹನ ನಡೆಸುತ್ತಿದ್ದರು. ವಿವಿಧ ಅಂಕೆಗಳನ್ನು ಬೋರ್ಡ್‌ನಲ್ಲಿ ಬರೆದು, ಆಟಗಾರರತ್ತ ಪ್ರದರ್ಶಿಸಿ ಮಾಹಿತಿ ರವಾನಿಸುತ್ತಿದ್ದರು. ಇದರ ಫೋಟೋ, ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಈ ಹಿಂದಿನ ವಿಶ್ವಕಪ್‌ನಂತೆ ಈ ಬಾರಿಯೂ ಜಪಾನ್ ಅಭಿಮಾನಿಗಳು ತಮ್ಮ ತಂಡದ ಪಂದ್ಯದ ಬಳಿಕ ಕ್ರೀಡಾಂಗಣದಲ್ಲಿ ಬಿದ್ದಿದ್ದ ಕಸಗಳನ್ನು ಹೆಕ್ಕಿದ್ದಾರೆ. ಪ್ರೇಕ್ಷಕರು ಬಿಟ್ಟುಹೋಗಿದ್ದ ಬಾಟಲಿ, ಹ್ಯಾಟ್, ಬ್ಯಾಡ್ಜ್ ಸೇರಿದಂತೆ ವಿವಿಧ ವಸ್ತುಗಳನ್ನು ಶೇಖರಿಸಿ ಕ್ರೀಡಾಂಗಣವನ್ನು ಶುಚಿಗೊಳಿಸಿ ಅಲ್ಲಿಂದ ನಿರ್ಗಮಿಸಿದ್ದಾರೆ. ಅವರ ಈ ನಡೆಗೆ ಭಾರೀ ಪ್ರಶಂಸ ವ್ಯಕ್ತವಾಗುತ್ತಿದೆ.
The reason Japan fans clean the stadium after each game. Respect. 🤝🇯🇵 pic.twitter.com/o9qJUOLefY
— FIFA (@FIFAcom) June 15, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.