FIFA World Cup ಸಂಭ್ರಮದಲ್ಲಿ ಮಿಂದೆದ್ದ ಚಾಂಪಿಯನ್‌ ಅರ್ಜೆಂಟೀನಾ!

By Kannadaprabha News  |  First Published Dec 20, 2022, 8:35 AM IST

ಮೈದಾನದಲ್ಲಿ ಮೆಸ್ಸಿಯ ಮೆರವಣಿಗೆ, ಡ್ರೆಸ್ಸಿಂಗ್‌ ಕೊಠಡಿಯಲ್ಲಿ ಅರ್ಜೆಂಟೀನಾ ಆಟಗಾರರ ಹಾಡು, ನೃತ್ಯ
ದೋಹಾದ ರಸ್ತೆಗಳಲ್ಲಿ ವಿಜಯ ಯಾತ್ರೆ
ಬ್ಯೂನಸ್‌ ಏರಿಸ್‌ನ ಬೀದಿ ಬೀದಿಗಳಲ್ಲಿ ಲಕ್ಷಾಂತರ ಅಭಿಮಾನಿಗಳಿಂದ ಸಂಭ್ರಮಾಚರಣೆ
ಮೆಸ್ಸಿ ಪಡೆಯ ಜಯವನ್ನು ಸಂಭ್ರಮಿಸಿದ ಭಾರತೀಯರು
 


ದೋಹಾ(ಡಿ.20): ಲಿಯೋನೆಲ್‌ ಮೆಸ್ಸಿಯ ತಪಸ್ಸಿನ ಜೊತೆಗೆ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯ ಫಲವಾಗಿ ಅರ್ಜೆಂಟೀನಾ ಫುಟ್ಬಾಲ್‌ ವಿಶ್ವಕಪ್‌ ಗೆದ್ದಿದೆ. ಈ ಗೆಲುವು ಎಷ್ಟು ವಿಶೇಷ ಎನ್ನುವುದನ್ನು ಅರ್ಜೆಂಟೀನಾ ತಂಡ ಹಾಗೂ ಅದರ ಅಭಿಮಾನಿಗಳ ಸಂಭ್ರಮಾಚರಣೆಯೇ ಹೇಳುತ್ತದೆ. ವಿಶ್ವಕಪ್‌ ಟ್ರೋಫಿಯನ್ನು ಕೈಗೆತ್ತಿಕೊಂಡ ಮೆಸ್ಸಿ ಅದನ್ನು ತಂದೆಯು ಮಗುವನ್ನು ಆಡಿಸುವಂತೆ ಆಡಿಸಿದ್ದು, ಟ್ರೋಫಿಗಾಗಿ ಅವರ ಮನ ಎಷ್ಟು ಹಾತೊರೆಯುತ್ತಿತ್ತು ಎನ್ನುವುದಕ್ಕೆ ಉದಾಹರಣೆ. ಫಿಫಾದ ಅಧಿಕೃತ ಪ್ರಶಸ್ತಿ ಸಮಾರಂಭ ಮುಗಿಯುತ್ತಿದ್ದಂತೆ ಅರ್ಜೆಂಟೀನಾ ತಂಡದ ಸಂಭ್ರಮಾಚರಣೆ ಶುರುವಾಯಿತು.

ಈ ಪೀಳಿಗೆಯ ಫುಟ್ಬಾಲ್‌ ಅಭಿಮಾನಿಗಳ ಪಾಲಿನ ದೇವರು ಎಂದೇ ಕರೆಸಿಕೊಳ್ಳುವ ಮೆಸ್ಸಿಯನ್ನು ಅವರ ಸಹ ಆಟಗಾರರು ಹೆಗಲ ಮೇಲೆ ಹೊತ್ತುಕೊಂಡು ಲುಸೈಲ್‌ ಕ್ರೀಡಾಂಗಣದಲ್ಲಿ ಮೆರವಣಿಗೆ ಮಾಡಿದರು. ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ತಮ್ಮ ಅಭಿಮಾನಿಗಳತ್ತ ಕೈಬೀಸುತ್ತಾ ಮೆಸ್ಸಿ ಭಾವುಕರಾದರು.

Latest Videos

undefined

ಕುಟುಂಬದೊಂದಿಗೆ ಖುಷಿ

ಮೆಸ್ಸಿಯ ಸಂಭ್ರಮಾಚರಣೆಯಲ್ಲಿ ಅವರ ಪತ್ನಿ, ಮಕ್ಕಳು ಸಹ ಭಾಗಿಯಾದರು. ಪುತ್ರರಾದ ಥಿಯಾಗೋ, ಮ್ಯಾಟಿಯೋರನ್ನು ತಬ್ಬಿ ಮುದ್ದಾಡಿದ ಮೆಸ್ಸಿ, ಪತ್ನಿ ಆ್ಯಂಟೊನೆಲಾ ರುಕ್ಕೊಜೊ ಅವರೊಂದಿಗೂ ಅವಿಸ್ಮರಣೀಯ ಕ್ಷಣಗಳನ್ನು ಕಳೆದರು. ಪತ್ನಿಯ ಕೈಗೆ ಟ್ರೋಫಿ ನೀಡಿ, ಆ ಕ್ಷಣವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಮೆಸ್ಸಿ ಖುಷಿ ಪಟ್ಟರು.

ಡ್ರೆಸ್ಸಿಂಗ್‌ ರೂಂನಲ್ಲಿ ಕುಣಿದಾಟ

ಮೈದಾನದಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ನಡೆದ ಸಂಭ್ರಮಾಚರಣೆ ಆ ನಂತರ ಡ್ರೆಸ್ಸಿಂಗ್‌ ಕೊಠಡಿಗೆ ಶಿಫ್‌್ಟಆಯಿತು. ಕುಣಿದು ಕುಪ್ಪಳಿಸಿದ ಅರ್ಜೆಂಟೀನಾ ಆಟಗಾರರು ಹಾಡುತ್ತಾ ಭರ್ಜರಿ ಡ್ಯಾನ್ಸ್‌ ಮಾಡಿದರು. ಮೆಸ್ಸಿಯೇ ಸಂಭ್ರಮಾಚರಣೆಯ ಕೇಂದ್ರ ಬಿಂದುವಾಗಿದ್ದು. ಟ್ರೋಫಿ ಕೈಯಲ್ಲಿ ಹಿಡಿದು, ಟೇಬಲ್‌ ಮೇಲೆ ಹತ್ತಿ ಅರ್ಜೆಂಟೀನಾ ನಾಯಕ ಕುಣಿದಾಡಿದರು.

ಭಾರತದಲ್ಲಿ ಹೇಗಿತ್ತು ಫಿಫಾ ವಿಶ್ವಕಪ್ ಜ್ವರ? ವೀಕ್ಷಕರ ಸಂಖ್ಯೆಯಲ್ಲಿ ಹಿಂದೆಂದೂ ಕಾಣದ ದಾಖಲೆ!

ವಿಶೇಷ ಬಸ್‌ ವ್ಯವಸ್ಥೆ

ಅರ್ಜೆಂಟೀನಾ ತಂಡ ಲುಸೈಲ್‌ ಕ್ರೀಡಾಂಗಣದಿಂದ ತಾನು ಉಳಿದುಕೊಂಡಿದ್ದ ಹೋಟೆಲ್‌ಗೆ ಆಗಮಿಸಲು ಆಯೋಜಕರು ವಿಶೇಷ ಬಸ್‌ ವ್ಯವಸ್ಥೆ ಮಾಡಿದ್ದರು. ತೆರೆದ ವಾಹನದಲ್ಲಿ ಟ್ರೋಫಿ ಹಿಡಿದು ದೋಹಾದ ರಸ್ತೆಗಳ ಇಕ್ಕೆಲಗಲಕ್ಕೂ ನೆರೆದಿದ್ದ ಅಭಿಮಾನಿಗಳತ್ತ ಕೈಬೀಸುತ್ತಾ ಆಟಗಾರರು ಹೋಟೆಲ್‌ ತಲುಪಿದರು.

ಅರ್ಜೆಂಟೀನಾದಲ್ಲಿ ಹಬ್ಬದ ವಾತಾವರಣ!

Absolute scenes in Buenos Aires after WC win by Argentina pic.twitter.com/aXIGxbQgnw

— Ayo Olu Ibidapo (@aysugaofficial)

ಬ್ಯೂನಸ್‌ ಏರಿಸ್‌: ಈ ಗೆಲುವಿಗಾಗಿ ಅರ್ಜೆಂಟೀನಾದ ಫುಟ್ಬಾಲ್‌ ಅಭಿಮಾನಿಗಳು 36 ವರ್ಷಗಳಿಂದ ಕಾಯ್ದಿದ್ದರು. ಈ ಪೀಳಿಗೆಯ ಫುಟ್ಬಾಲ್‌ ರಸಿಕರಿಗೆ ಇಂತಹ ಅನುಭವ ಇದೇ ಮೊದಲು. ಅರ್ಜೆಂಟೀನಾದ ರಾಜಧಾನಿ ಬ್ಯೂನಸ್‌ ಏರಿಸ್‌ ಅಕ್ಷರಶಃ ಜನಸಾಗರದಲ್ಲಿ ಮುಳುಗಿತು. ಲಕ್ಷಾಂತರ ಜನರು ರಸ್ತೆಗಿಳಿದು ಕುಣಿದು, ಕುಡಿದು ಸಂಭ್ರಮಿಸಿದರು. ಕಟ್ಟಡಗಳು, ಕಂಬಗಳ ಮೇಲೆ ಹತ್ತಿ ರಾಷ್ಟ್ರಧ್ವಜವನ್ನು ಹಾರಿಸುತ್ತಾ ‘ಮೆಸ್ಸಿ... ಮೆಸ್ಸಿ...’ ಎಂದು ಕೂಗುತ್ತಾ ಖುಷಿಯ ಅಲೆಯಲ್ಲಿ ತೇಲಿದರು. ಮೆಸ್ಸಿಯ ತವರೂರು ರೊಸಾರಿಯೋದಲ್ಲೂ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

Argentina isn’t ready to sleep yet pic.twitter.com/0kdsX5moAy

— PointsBet Sportsbook (@PointsBetUSA)

ಕೇರಳ, ಭಾರತಕ್ಕೆ ಅರ್ಜೆಂಟೀನಾ ಥ್ಯಾಂಕ್ಸ್‌!

ಅರ್ಜೆಂಟೀನಾ ಗೆದ್ದಿದ್ದಕ್ಕೆ ಭಾರತ, ಸ್ಪೇನ್‌, ಬಾಂಗ್ಲಾದೇಶ, ಪಾಕಿಸ್ತಾನ ಸೇರಿ ಇನ್ನೂ ಅನೇಕ ದೇಶಗಳಲ್ಲಿ ಸಂಭ್ರಮಾಚರಣೆ ನಡೆಯಿತು. ತಮ್ಮನ್ನು ಬೆಂಬಲಿಸಿದ್ದಕ್ಕೆ ಅರ್ಜೆಂಟೀನಾ ಫುಟ್ಬಾಲ್‌ ಸಂಸ್ಥೆ ಟ್ವೀಟರ್‌ನಲ್ಲಿ ಧನ್ಯವಾದ ಹೇಳಿದೆ. ಭಾರೀ ಸಂಖ್ಯೆಯಲ್ಲಿರುವ ಕೇರಳದ ಅಭಿಮಾನಿಗಳಿಗೂ ಧನ್ಯವಾದ ಹೇಳಲು ಅರ್ಜೆಂಟೀನಾ ಫುಟ್ಬಾಲ್‌ ಸಂಸ್ಥೆ ಮರೆಯದಿರುವುದು ಶ್ಲಾಘನೀಯ.

click me!