FIFA World Cup: ಇಂಗ್ಲೆಂಡ್‌, ನೆದರ್‌ಲೆಂಡ್ಸ್‌ಗೆ ಸತತ 2ನೇ ಜಯದ ಗುರಿ

By Kannadaprabha NewsFirst Published Nov 25, 2022, 8:21 AM IST
Highlights

ಫಿಫಾ ವಿಶ್ವಕಪ್ ಟೂರ್ನಿಯಲ್ಲಿಂದು ನೆದರ್‌ಲೆಂಡ್ಸ್‌ಗೆ ಈಕ್ವೆಡರ್ ಸವಾಲು
ಬಲಿಷ್ಠ ಇಂಗ್ಲೆಂಡ್‌ಗೆ ಯುವ ಅಮೆರಿಕ ತಂಡದ ಚಾಲೆಂಜ್
ಗೆಲುವಿನ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿರುವ ಇಂಗ್ಲೆಂಡ್, ನೆದರ್‌ಲೆಂಡ್ಸ್

ದೋಹಾ(ನ.25): ಭರ್ಜರಿ ಗೆಲುವುಗಳೊಂದಿಗೆ ಅಭಿಯಾನ ಆರಂಭಿಸಿದ ಇಂಗ್ಲೆಂಡ್‌ ಹಾಗೂ ನೆದರ್‌ಲೆಂಡ್‌್ಸ ತಂಡಗಳು ಸತತ 2ನೇ ಗೆಲುವಿನೊಂದಿಗೆ ನಾಕೌಟ್‌ ಸನಿಹಕ್ಕೆ ತಲುಪುವ ನಿರೀಕ್ಷೆಯಲ್ಲಿವೆ. ನೆದರ್‌ಲೆಂಡ್‌್ಸಗೆ ಈಕ್ವೆಡಾರ್‌ ಸವಾಲು ಎದುರಾಗಲಿದ್ದು, ಇಂಗ್ಲೆಂಡ್‌ ಯುವ ಅಮೆರಿಕ ತಂಡದ ವಿರುದ್ಧ ಆಡಲಿದೆ.

ನೆದರ್‌ಲೆಂಡ್‌್ಸ ತನ್ನ ಮೊದಲ ಪಂದ್ಯದಲ್ಲಿ 2-0 ಗೋಲುಗಳಿಂದ ಸೆನೆಗಲ್‌ ವಿರುದ್ಧ ಜಯಿಸಿತ್ತು. ಇಂಗ್ಲೆಂಡ್‌ 6-2 ಗೋಲುಗಳಿಂದ ಇರಾನ್‌ ತಂಡವನ್ನು ಬಗ್ಗುಬಡಿದಿತ್ತು. ಈಕ್ವೆಡಾರ್‌ ಸಹ ಮೊದಲ ಪಂದ್ಯದಲ್ಲಿ ಗೆಲುವು ಪಡೆದಿತ್ತು. ಈಕ್ವೆಡಾರ್‌ನ ನಾಯಕ ಹಾಗೂ ಸ್ಟೆ್ರೖಕರ್‌ ಎನ್ನಾರ್‌ ವ್ಯಾಲೆನ್ಸಿಯಾ ಹಾಗೂ ನೆದರ್‌ಲೆಂಡ್‌್ಸನ ಫಾರ್ವರ್ಡ್‌ ಮೆಮ್ಫಿಸ್‌ ಡೀಪೇ ನಡುವೆ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ.

ಇನ್ನು ಇರಾನ್‌ ವಿರುದ್ಧ ಇಂಗ್ಲೆಂಡ್‌ 6 ಗೋಲು ಗಳಿಸಿದರೂ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ನಾಯಕ ಹ್ಯಾರಿ ಕೇನ್‌ ಹೆಸರಿರಲಿಲ್ಲ. ಈ ಪಂದ್ಯದಲ್ಲಿ ಕೇನ್‌ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ. ಆದರೆ ಅಮೆರಿಕ ತಂಡ ಬಲಿಷ್ಠವಾಗಿದ್ದು ಯುವ ಆಟಗಾರರಿಂದ ಕೂಡಿದೆ. ತಂಡದ ಆಟಗಾರರ ಸರಾಸರಿ ವಯಸ್ಸು 23.5 ವರ್ಷವಾಗಿದ್ದು, ಇಂಗ್ಲೆಂಡ್‌ಗೆ ಪ್ರಬಲ ಪೈಪೋಟಿ ಎದುರಾಗಬಹುದು. ಅಮೆರಿಕ ತನ್ನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು.

ಶುಕ್ರವಾರ ವೇಲ್ಸ್‌ ಹಾಗೂ ಇರಾನ್‌, ಕತಾರ್‌ ಹಾಗೂ ಸೆನೆಗಲ್‌ ತಂಡಗಳು ಸಹ ಮುಖಾಮುಖಿಯಾಗಲಿವೆ. ಈ ನಾಲ್ಕೂ ತಂಡಗಳು ಮೊದಲ ಗೆಲುವಿಗೆ ಹಪಹಪಿಸುತ್ತಿವೆ. ವೇಲ್ಸ್‌ ನಾಯಕ ಗೆರಾತ್‌ ಬೇಲ್‌ ಮೇಲೆ ಭಾರೀ ನಿರೀಕ್ಷೆ ಇದೆ.

ಇಂದಿನ ಪಂದ್ಯಗಳು

ವೇಲ್ಸ್‌-ಇರಾನ್‌, ಮಧ್ಯಾಹ್ನ 3.30ಕ್ಕೆ

ಕತಾರ್‌-ಸೆನೆಗಲ್‌, ಮಧ್ಯಾಹ್ನ 6.30ಕ್ಕೆ

ನೆದರ್‌ಲೆಂಡ್‌್ಸ-ಈಕ್ವೆಡಾರ್‌, ಸಂಜೆ 9.30ಕ್ಕೆ

ಇಂಗ್ಲೆಂಡ್‌-ಅಮೆರಿಕ, ರಾತ್ರಿ 12.30ಕ್ಕೆ

ಕ್ಯಾಮರೂನ್‌ ವಿರುದ್ಧ ಸ್ವಿಜರ್‌ಲೆಂಡ್‌ಗೆ ಗೆಲುವು

ಅಲ್‌ ವಕ್ರಾ: ತಾನು ಹುಟ್ಟಿದ ದೇಶ ಕ್ಯಾಮರೂನ್‌ ವಿರುದ್ಧ ಗೋಲು ಬಾರಿಸಿದ ಬ್ರೀಲ್‌ ಎಂಬೊಲೊ, 2022ರ ವಿಶ್ವಕಪ್‌ನಲ್ಲಿ ಸ್ವಿಜರ್‌ಲೆಂಡ್‌ ಗೆಲುವಿನ ಆರಂಭ ಪಡೆಯುವಂತೆ ಮಾಡಿದ್ದಾರೆ. 48ನೇ ನಿಮಿಷದಲ್ಲಿ ಗೋಲು ಬಾರಿಸಿದ ಎಂಬೊಲೊ ತಂಡ 1-0 ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

FIFA World Cup: ಸ್ಪೇನ್‌ ಟಿಕಾ-ಟಾಕಕ್ಕೆ ಬೆಚ್ಚಿದ ಕೋಸ್ಟರಿಕಾ! ಏನಿದು ಟಿಕಿ-ಟಾಕ ಶೈಲಿ?

1997ರಲ್ಲಿ ಎಂಬೊಲೊ ಕ್ಯಾಮರೂನ್‌ನಲ್ಲಿ ಹುಟ್ಟಿದರೂ 2004ರಲ್ಲಿ ಅವರ ತಾಯಿ ಫ್ರಾನ್ಸ್‌ಗೆ ಸ್ಥಳಾಂತರಗೊಂಡು ಬಳಿಕ ಸ್ವಿಜರ್‌ಲೆಂಡ್‌ನ ವ್ಯಕ್ತಿಯನ್ನು ಮದುವೆಯಾಗಿದ್ದರು. ತಾಯಿ ಜೊತೆ ಸ್ವಿಜರ್‌ಲೆಂಡ್‌ನಲ್ಲೇ ಬೆಳೆದ ಎಂಬೊಲೊ 2014ರಲ್ಲಿ ಆ ದೇಶದ ಪೌರತ್ವ ಪಡೆದಿದ್ದರು. 2018ರ ವಿಶ್ವಕಪ್‌ನಲ್ಲೂ ಎಂಬೊಲೊ ಸ್ವಿಜರ್‌ಲೆಂಡ್‌ ಪರ ಆಡಿದ್ದರು.

ಕೆನಡಾ ಕಮ್‌ಬ್ಯಾಕ್‌ ಖುಷಿ ಹಾಳು ಮಾಡಿದ ಬೆಲ್ಜಿಯಂ!

ಅಲ್‌ ರಯ್ಯನ್‌: ವಿಶ್ವ ನಂ.2 ಬೆಲ್ಜಿಯಂ ನಿರೀಕ್ಷಿತ ಪ್ರದರ್ಶನ ತೋರದಿದ್ದರೂ, 36 ವರ್ಷಗಳ ಬಳಿಕ ವಿಶ್ವಕಪ್‌ಗೆ ಮರಳಿದ ಕೆನಡಾದ ಖುಷಿಗೆ ತಣ್ಣೀರೆರೆಚುವಲ್ಲಿ ಯಶಸ್ವಿಯಾಯಿತು. ಬುಧವಾರ ನಡೆದ ಪಂದ್ಯದಲ್ಲಿ 1-0 ಗೋಲಿನ ಗೆಲುವು ದಾಖಲಿಸಿ ಬೆಲ್ಜಿಯಂ ಸಮಾಧಾನಪಟ್ಟುಕೊಂಡಿತು. ತಂಡದ ತಾರಾ ಆಟಗಾರರಾದ ಏಡನ್‌ ಹಜಾರ್ಡ್‌, ಕೆವಿನ್‌ ಡಿ ಬ್ರುನೆ ಗೋಲು ಗಳಿಸದೆ ನಿರಾಸೆ ಮೂಡಿಸಿದರೂ, ಮಿಚಿ ಬತ್ಶುವಾಯಿ 44ನೇ ನಿಮಿಷದಲ್ಲಿ ತಂಡದ ಪರ ಏಕೈಕ ಗೋಲು ದಾಖಲಿಸಿದರು.

1986ರಲ್ಲಿ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿದ್ದ ಕೆನಡಾ 3 ಪಂದ್ಯಗಳನ್ನು ಆಡಿ ಒಂದೂ ಗೋಲು ಬಾರಿಸಿರಲಿಲ್ಲ. ಆ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್‌ಗೆ ಅರ್ಹತೆ ಪಡೆದಿದ್ದು ಈ ಸಲವಾದರೂ ಗೋಲಿನ ಖಾತೆ ತೆರೆಯಲು ಎದುರು ನೋಡುತ್ತಿದೆ.

ಗೋಲು ರಹಿತ ಡ್ರಾಗೆ ಕೊರಿಯಾ, ಉರುಗ್ವೆ ತೃಪ್ತಿ

ಅಲ್‌ ರಯ್ಯನ್‌: ಉರುಗ್ವೆ ಹಾಗೂ ದಕ್ಷಿಣ ಕೊರಿಯಾ 0-0 ನೀರಸ ಡ್ರಾಗೆ ತೃಪ್ತಿಪಟ್ಟವು. ‘ಎಚ್‌’ ಗುಂಪಿನ ಪಂದ್ಯದಲ್ಲಿ ಎರಡೂ ತಂಡಗಳು ಗೋಲಿಗಾಗಿ ಎಷ್ಟೇ ಪ್ರಯತ್ನ ನಡೆಸಿದರೂ ಒಂದು ತಂಡದ ರಕ್ಷಣಾ ಕೋಟೆಯನ್ನು ಭೇದಿಸಲು ಮತ್ತೊಂದು ತಂಡಕ್ಕೆ ಆಗಲಿಲ್ಲ. ಉರುಗ್ವೆಗೆ ಹೋಲಿಸಿದರೆ ಕೊರಿಯಾದ ಆಟ ಹೆಚ್ಚು ಆಕ್ರಮಣಕಾರಿಯಾಗಿ ಕಂಡುಬಂತು. 34ನೇ ನಿಮಿಷದಲ್ಲಿ ಕೊರಿಯಾಕ್ಕೆ ಗೋಲು ಗಳಿಸುವ ಅವಕಾಶ ಸಿಕ್ಕರೂ ಅದನ್ನು ಯು-ಜೊ ವ್ಯರ್ಥಗೊಳಿಸಿದರು. ಉರುಗ್ವೆ ಸಹ ಕೆಲ ಅವಕಾಶಗಳ ಲಾಭವೆತ್ತುವಲ್ಲಿ ವಿಫಲವಾಯಿತು. ತಂಡದ ತಾರಾ ಆಟಗಾರರಾದ ಗಾಡಿನ್‌, ಕವಾನಿ, ಸುವಾರೆಜ್‌ ನಿರಾಸೆ ಮೂಡಿಸಿದರು.

click me!