* ಕೊನೆಗೂ ಭಾರತೀಯ ಫುಟ್ಬಾಲ್ ಮೇಲಿನ ಬ್ಯಾನ್ ವಾಪಾಸ್ ಪಡೆದ ಫಿಫಾ
* ಎಐಎಫ್‌ಎಫ್ ಮೇಲಿನ ನಿಷೇಧ ತೆರವಿನಿಂದಾಗಿ ಅಂಡರ್-17 ಫಿಫಾ ಮಹಿಳಾ ವಿಶ್ವಕಪ್ ಆಯೋಜನೆ ಸುಗಮ
* ಸೆಪ್ಟೆಂಬರ್ 2ರ ಚುನಾವಣೆ ನಡೆಸಲು ಬೆಂಬಲ ನೀಡುವುದಾಗಿ ಫಿಫಾ ಘೋಷಣೆ
ನವದೆಹಲಿ(ಆ.27): ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಮೇಲಿನ ನಿಷೇಧವನ್ನು ಜಾಗತಿಕ ಫುಟ್ಬಾಲ್ ಆಡಳಿತ ಸಮಿತಿ(ಫಿಫಾ) ಶುಕ್ರವಾರ ಹಿಂತೆಗೆದುಕೊಂಡಿದೆ. ಇದರೊಂದಗೆ ಭಾರತದಲ್ಲಿ ಅಕ್ಟೋಬರ್‌ನಲ್ಲಿ ನಿಗದಿಯಾಗಿದ್ದ ಅಂಡರ್-17 ಫಿಫಾ ಮಹಿಳಾ ವಿಶ್ವಕಪ್ ನಿಗದಿಯಂತೆ ನಡೆಯಲಿದೆ.
ಇತ್ತೀಚೆಗೆ ಸಮಿತಿಯಲ್ಲಿ ಅನ್ಯರ ಹಸ್ತಕ್ಷೇಪದ ಕಾರಣ ನೀಡಿ ಫಿಫಾ, ಎಐಎಫ್‌ಎಫ್‌ಅನ್ನು ಅಮಾನತು ಮಾಡಿತ್ತು. ಇದರಿಂದಾಗಿ ಭಾರತ ಯಾವುದೇ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯ ಮತ್ತು ಎಎಫ್‌ಸಿ ಪಂದ್ಯಗಳಲ್ಲಿ ಆಡಲು ಅರ್ಹತೆ ಕಳೆದುಕೊಂಡಿತ್ತು. ಇದೀಗ ಸಮಸ್ಯೆ ಬಗೆಹರಿದಿದ್ದು, ಎಐಎಫ್‌ಎಫ್‌ನ ಬೆಳವಣಿಗೆಗಳ ಮೇಲೆ ಕಣ್ಣಿಡುವುದಾಗಿ ಫಿಫಾ ತಿಳಿಸಿದೆ. ಜೊತೆಗೆ ಸೆಪ್ಟೆಂಬರ್ 2ರ ಚುನಾವಣೆ ನಡೆಸಲು ಬೆಂಬಲ ನೀಡುವುದಾಗಿ ಘೋಷಿಸಿದೆ.
undefined
ಸುಪ್ರೀಂ ಕೋರ್ಚ್ ತಾನು ನೇಮಿಸಿದ್ದ ಆಡಳಿತ ಸಮಿತಿ(ಸಿಒಎ)ಯನ್ನು ರದ್ದುಗೊಳಿಸಿ ಸೋಮವಾರ ಆದೇಶಿಸಿದೆ ಬೆನ್ನಲ್ಲೇ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್(ಎಐಎಫ್‌ಎಫ್) ತನ್ನ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವಂತೆ ವಿಶ್ವ ಫುಟ್ಬಾಲ್‌ನ ಆಡಳಿತ ಮಂಡಳಿಯಾದ ಫಿಫಾಗೆ ಮನವಿ ಸಲ್ಲಿಸಿತ್ತು. ಎಐಎಫ್‌ಎಫ್‌ನ ದೈನಂದಿನ ಚಟುವಟಿಕೆಗಳ ಜವಾಬ್ದಾರಿ ಹೊತ್ತಿರುವ ಪ್ರಧಾನ ಕಾರ‍್ಯದರ್ಶಿ ಸುನಂದೊ ಧಾರ್ ಫಿಫಾಗೆ ಮನವಿ ಮಾಡಿದ್ದು, ವಿಶ್ವ ಮಂಡಳಿಯ ನಿಮಯಗಳನ್ನು ಪಾಲಿಸುವುದಾಗಿ ತಿಳಿಸಿದ್ದರು.
ಫಿಫಾ ಭಾರತೀಯ ಫುಟ್ಬಾಲ್ ಫೆಡರೇಷನ್ ಬ್ಯಾನ್ ಮಾಡಿದ್ದೇಕೆ?
2020ರ ಡಿಸೆಂಬರ್‌ನಲ್ಲಿ ಎಐಎಫ್‌ಎಫ್ ಚುನಾವಣೆ ನಡೆಯಬೇಕಿತ್ತು. ಆದರೆ ಚುನಾವಣೆ ನಡೆಸದೆ ಫೆಡರೇಷನ್‌ನ ಅಧ್ಯಕ್ಷರಾಗಿ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಮುಂದುವರಿದಿದ್ದರು. ಹೀಗಾಗಿ ಮೇ 18ರಂದು ಸುಪ್ರೀಂ ಕೋರ್ಚ್ ಪಟೇಲ್‌ರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿ, ಮೂರು ಮಂದಿ ಸದಸ್ಯರನ್ನು ಒಳಗೊಂಡ ಆಡಳಿತ ಸಮಿತಿ(ಸಿಒಎ)ಯನ್ನು ರಚನೆ ಮಾಡಿತ್ತು. ಈ ಸಮಿತಿಯು ರಾಷ್ಟ್ರೀಯ ಕ್ರೀಡಾ ನೀತಿ ಮತ್ತು ಮಾರ್ಗಸೂಚಿಯ ಅನ್ವಯ ಸಂವಿಧಾನ ರಚನೆ ಮಾಡಬೇಕಿತ್ತು. ಆದರೆ ಸಿಒಎ ಭಾರತೀಯ ಫುಟ್ಬಾಲ್‌ನ ದೈನಂದಿನ ಚಟುವಟಿಕೆಗಳ ಮೇಲ್ವಿಚಾರಣೆ ನಡೆಸುವುದನ್ನು ವಿರೋಧಿಸಿದ ಫಿಫಾ, ಆದಷ್ಟುಬೇಗ ಸಮಿತಿಯನ್ನು ರದ್ದುಗೊಳಿಸಿ ಸ್ವತಂತ್ರ ಚುನಾವಣಾ ಸಮಿತಿಯ ಕಣ್ಗಾವಲಿನಲ್ಲಿ ಚುನಾವಣೆ ನಡೆಸಿ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡುವಂತೆ ಸೂಚಿಸಿತ್ತು. ಫಿಫಾ ಸೂಚನೆಯನ್ನು ಪಾಲಿಸದ ಕಾರಣ ಎಐಎಫ್‌ಎಫ್ ಮೇಲೆ ನಿಷೇಧ ಹೇರಲಾಗಿತ್ತು
ನಿಷೇಧ ಹಿಂಪಡೆಯುವಂತೆ ಫಿಫಾಗೆ ಎಐಎಫ್‌ಎಫ್ ಮನವಿ
ತನ್ನ ಯಾವುದೇ ಸದಸ್ಯ ರಾಷ್ಟ್ರಗಳ ಫುಟ್ಬಾಲ್ ಸಂಸ್ಥೆ ಅಥವಾ ಫೆಡರೇಷನ್‌ಗಳಲ್ಲಿ ಸರ್ಕಾರ ಇಲ್ಲವೇ ನ್ಯಾಯಾಲಯ ನೇಮಿತ ಆಡಳಿತ ಸಮಿತಿ ಕಾರ‍್ಯನಿರ್ವಹಿಸುವುದಕ್ಕೆ ಫಿಫಾ ಅನುಮತಿ ನೀಡುವುದಿಲ್ಲ.