ನಿಷೇಧ ಹಿಂಪಡೆಯುವಂತೆ ಫಿಫಾಗೆ ಎಐಎಫ್‌ಎಫ್‌ ಮನವಿ

By Kannadaprabha News  |  First Published Aug 24, 2022, 10:34 AM IST

* ತಾನೇ ನೇಮಿಸಿದ್ದ ಆಡಳಿತ ಸಮಿತಿ(ಸಿಒಎ)ಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌
* ಅಖಿಲ ಭಾರತೀಯ ಫುಟ್ಬಾಲ್‌ ಫೆಡರೇಷನ್‌ ಬ್ಯಾನ್ ಮಾಡಿರುವ ಫಿಫಾ
* ಮುಂದೂಡಿಕೆಯಾಗಿದ್ದ ಚುನಾವಣೆಯು ಸೆ.2ರಂದು ನಡೆಯಲಿದೆ


ನವದೆಹಲಿ(ಆ.24): ಸುಪ್ರೀಂ ಕೋರ್ಚ್‌ ತಾನು ನೇಮಿಸಿದ್ದ ಆಡಳಿತ ಸಮಿತಿ(ಸಿಒಎ)ಯನ್ನು ರದ್ದುಗೊಳಿಸಿ ಸೋಮವಾರ ಆದೇಶಿಸಿದೆ ಬೆನ್ನಲ್ಲೇ ಅಖಿಲ ಭಾರತೀಯ ಫುಟ್ಬಾಲ್‌ ಫೆಡರೇಷನ್‌(ಎಐಎಫ್‌ಎಫ್‌) ತನ್ನ ಮೇಲೆ ಹೇರಿರುವ ನಿಷೇಧವನ್ನು ಹಿಂಪಡೆಯುವಂತೆ ವಿಶ್ವ ಫುಟ್ಬಾಲ್‌ನ ಆಡಳಿತ ಮಂಡಳಿಯಾದ ಫಿಫಾಗೆ ಮನವಿ ಸಲ್ಲಿಸಿದೆ. ಎಐಎಫ್‌ಎಫ್‌ನ ದೈನಂದಿನ ಚಟುವಟಿಕೆಗಳ ಜವಾಬ್ದಾರಿ ಹೊತ್ತಿರುವ ಪ್ರಧಾನ ಕಾರ‍್ಯದರ್ಶಿ ಸುನಂದೊ ಧಾರ್‌ ಫಿಫಾಗೆ ಮನವಿ ಮಾಡಿದ್ದು, ವಿಶ್ವ ಮಂಡಳಿಯ ನಿಮಯಗಳನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮುಂದೂಡಿಕೆಯಾಗಿದ್ದ ಚುನಾವಣೆಯು ಸೆ.2ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಗುರುವಾರ(ಆ.24) ಕೊನೆ ದಿನವಾಗಿದೆ.

ಡುರಾಂಡ್‌ ಕಪ್‌ ಫುಟ್ಬಾಲ್‌: ಬಿಎಫ್‌ಸಿಗೆ 4-0 ಗೆಲುವು

Tap to resize

Latest Videos

undefined

ಕೋಲ್ಕತಾ: ಪ್ರತಿಷ್ಠಿತ ಡುರಾಂಡ್‌ ಕಪ್‌ನಲ್ಲಿ ಬೆಂಗಳೂರು ಎಫ್‌ಸಿ ಸತತ 2ನೇ ಗೆಲುವು ದಾಖಲಿಸಿದೆ. ಮಂಗಳವಾರ ಇಲ್ಲಿನ ಕಿಶೋರ್‌ ಭಾರತಿ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಭಾರತೀಯ ಏರ್‌ಫೋರ್ಸ್‌ ವಿರುದ್ಧ ಬಿಎಫ್‌ಸಿ 4-0 ಗೋಲುಗಳ ಗೆಲುವು ಸಾಧಿಸಿತು. ಪಂದ್ಯದುದ್ದಕ್ಕೂ ಎದುರಾಳಿಯ ಮೇಲೆ ಮೇಲುಗೈ ಸಾಧಿಸಿದ ಬಿಎಫ್‌ಸಿ ರಾಯ್‌ ಕೃಷ್ಣ ಮತ್ತು ಸುನಿಲ್‌ ಚೆಟ್ರಿ ಬಾರಿಸಿದ ಗೋಲುಗಳ ನೆರವಿನಿಂದ ಮೊದಲಾರ್ಧದ ಅಂತ್ಯಕ್ಕೆ 2-0 ಮುನ್ನಡೆ ಪಡೆಯಿತು. ದ್ವಿತೀಯಾರ್ಧದಲ್ಲಿ ಫೈಸಲ್‌ ಅಲಿ ಮತ್ತು ಶಿವಶಕ್ತಿ ನಾರಾಯಣನ್‌ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು. ಬಿಎಫ್‌ಸಿ ತನ್ನ ಮುಂದಿನ ಪಂದ್ಯವನ್ನು ಆ.30ರಂದು ಎಫ್‌ಸಿ ಗೋವಾ ವಿರುದ್ಧ ಆಡಲಿದೆ.

ಯುಎಸ್‌ ಓಪನ್‌ನಿಂದ ಹಿಂದೆ ಸರಿದ ಸಾನಿಯಾ

ನವದೆಹಲಿ: ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮುಂದಿನ ವಾರ(ಆ.29) ಆರಂಭಗೊಳ್ಳಲಿರುವ ಯುಎಸ್‌ ಓಪನ್‌ ಗ್ರ್ಯಾನ್‌ ಸ್ಲಾಂನಿಂದ ಹಿಂದೆ ಸರಿದಿದ್ದಾರೆ. ಕೆನಡಾದಲ್ಲಿ 2 ವಾರದ ಹಿಂದೆ ನಡೆದ ಟೂರ್ನಿಯಲ್ಲಿ ಸಾನಿಯಾ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಇದೇ ಕಾರಣದಿಂದ ಅವರು ಯುಎಸ್‌ ಓಪನ್‌ನಲ್ಲಿ ಆಡದಿರಲು ನಿರ್ಧರಿಸಿರುವುದಾಗಿ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ಇನ್ನು 2022ರ ಋುತುವಿನ ಅಂತ್ಯದಲ್ಲಿ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದ ಸಾನಿಯಾ, ಇದೀಗ ತಮ್ಮ ನಿವೃತ್ತಿಯನ್ನು ಮುಂದೂಡುವ ಬಗ್ಗೆ ಆಲೋಚನೆ ನಡೆಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.

ಬ್ಯಾಡ್ಮಿಂಟನ್‌ ವಿಶ್ವ ಕೂಟ: ಪ್ರಿ ಕ್ವಾರ್ಟರ್‌ಗೇರಿದ ಸೈನಾ ನೆಹ್ವಾಲ್‌

ಟೋಕಿಯೋ: ಭಾರತದ ತಾರಾ ಶಟ್ಲರ್‌ ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಬಿಡಬ್ಲ್ಯುಎಫ್‌ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ಸೈನಾ, ಹಾಂಕಾಂಗ್‌ನ ಚೆಗ್‌ ಗಾನ್‌ ಯಿ ವಿರುದ್ಧ 21-19, 21-9 ನೇರ ಗೇಮ್‌ಗಳಲ್ಲಿ ಜಯಗಳಿಸಿದರು. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಹಿಂದೆ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದಿದ್ದ ಸೈನಾಗೆ 2ನೇ ಸುತ್ತಿನಲ್ಲಿ ಬೈ ಸಿಕ್ಕಿದೆ.

AIFF ಆಡಳಿತ ಸಮಿತಿ ರದ್ದು, ಎಲೆಕ್ಷನ್‌ ಮುಂದೂಡಿದ ಸುಪ್ರೀಂ ಕೋರ್ಟ್‌..!

ಜಪಾನ್‌ನ ನಜೊಮಿ ಒಕುಹಾರ ಗಾಯಕೊಂಡಿರುವ ಕಾರಣ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಸೈನಾ ಪ್ರಿ ಕ್ವಾರ್ಟರ್‌ ಫೈನಲ್‌ಗೇರಿದ್ದಾರೆ. ಇನ್ನು ಮಹಿಳಾ ಡಬಲ್ಸ್‌ನಲ್ಲಿ ತ್ರಿಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್‌ ಶುಭಾರಂಭ ಮಾಡಿದ್ದಾರೆ. ಮೊದಲ ಸುತ್ತಿನಲ್ಲಿ ಮಲೇಷ್ಯಾದ ಯೀನ್‌ ಯುವಾನ್‌ ಮತ್ತು ವಾಲರೀ ಸಿಯೊ ವಿರುದ್ಧ 21-11, 21-13 ಗೇಮ್‌ಗಳಲ್ಲಿ ಗೆದ್ದರು.

click me!