
ನ್ಯೂಜೆರ್ಸಿ: ಫಿಫಾ ಕ್ಲಬ್ ವಿಶ್ವಕಪ್‌ನಲ್ಲಿ ಚೆಲ್ಸಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ ಪ್ರಬಲ ತಂಡ ಪಿಎಸ್‌ಜಿಯನ್ನು 3-0 ಗೋಲುಗಳಿಂದ ಮಣಿಸಿ ಚೆಲ್ಸಿ ಗೆಲುವಿನ ನಗೆ ಬೀರಿದೆ. ಯುರೋಪಿಯನ್ ಫುಟ್‌ಬಾಲ್‌ನಲ್ಲಿ ಚೆಲ್ಸಿಯ ಮತ್ತೆ ಭರ್ಜರಿ ಫಾರ್ಮ್‌ಗೆ ಮರಳಿದೆ.
ಕ್ಲಬ್ ವಿಶ್ವಕಪ್‌ನಲ್ಲಿ ಚೆಲ್ಸಿಗೆ ಇದು ಎರಡನೇ ಪ್ರಶಸ್ತಿ. 2021 ರಲ್ಲಿ ಏಳು ಕ್ಲಬ್‌ಗಳೊಂದಿಗೆ ಆರಂಭವಾದ ಕ್ಲಬ್ ವಿಶ್ವಕಪ್‌ನ ಮೊದಲ ಆವೃತ್ತಿಯಲ್ಲೂ ಚೆಲ್ಸಿಯೇ ಚಾಂಪಿಯನ್ ಆಗಿತ್ತು. ಈ ಬಾರಿ 32 ತಂಡಗಳೊಂದಿಗೆ ಫಿಫಾ ಕ್ಲಬ್ ವಿಶ್ವಕಪ್ ವಿಸ್ತರಿಸಲ್ಪಟ್ಟಿತ್ತು. ಫ್ರೆಂಚ್ ಲೀಗ್ ಮತ್ತು ಚಾಂಪಿಯನ್ಸ್ ಲೀಗ್ ಗೆದ್ದು ಹ್ಯಾಟ್ರಿಕ್ ಸಾಧಿಸಲು ಬಂದಿದ್ದ ಪ್ಯಾರಿಸ್ ಸೈಂಟ್ ಜರ್ಮೈನ್ ತಂಡವು ಚೆಲ್ಸಿ ಎದುರು ಸೋಲೊಪ್ಪಿಕೊಂಡಿತು. 22ನೇ ನಿಮಿಷದಲ್ಲಿ ಕೋಲ್ ಪಾಮರ್ ಮೊದಲ ಗೋಲು ಗಳಿಸಿದರು. ಮಾಲೊ ಗುಸ್ಟೊ ಅವರ ಶಾಟ್ ಅನ್ನು ಪಿಎಸ್‌ಜಿ ರಕ್ಷಣಾ ಆಟಗಾರ ಲೂಕಾಸ್ ಬೆರಾಲ್ಡೊ ತಡೆದಾಗ ಬಂದ ಚೆಂಡನ್ನು ಪಾಮರ್ ಗೋಲಾಗಿ ಪರಿವರ್ತಿಸಿದರು. ಮೊದಲ ಗೋಲಿನ ಆಘಾತದಿಂದ ಪಿಎಸ್‌ಜಿ ಹೊರಬರುವ ಮುನ್ನವೇ 30ನೇ ನಿಮಿಷದಲ್ಲಿ ಪಾಮರ್ ಎರಡನೇ ಗೋಲು ಗಳಿಸಿದರು.
43ನೇ ನಿಮಿಷದಲ್ಲಿ ಬ್ರೆಜಿಲ್ ಆಟಗಾರ ಜಾವೊ ಪೆಡ್ರೊ ಮೂರನೇ ಗೋಲು ಗಳಿಸಿದರು. ಈ ಗೋಲಿಗೆ ಕೂಡ ಪಾಮರ್ ನೆರವು ನೀಡಿದರು. ಇನ್ನು ದ್ವಿತಿಯಾರ್ಧನಲ್ಲಿ ಪಿಎಸ್‌ಜಿಯ ಎಲ್ಲಾ ಪ್ರಯತ್ನಗಳು ವಿಫಲವಾದವು. ಲೂಯಿಸ್ ಎನ್ರಿಕ್ಯೂ ಅವರ ಲೆಕ್ಕಾಚಾರ ತಪ್ಪಾಗಿ ಮೆಟ್‌ಲೈಫ್‌ನಲ್ಲಿ ಚೆಲ್ಸಿ ಗೆಲುವಿನ ಸಂಭ್ರಮ ಆರಂಭವಾಯಿತು.
ಪ್ರಬಲ ರಿಯಲ್ ಮ್ಯಾಡ್ರಿಡ್ ಮತ್ತು ಬೇಯರ್ನ್ ಮ್ಯೂನಿಚ್ ತಂಡಗಳನ್ನು ಸೋಲಿಸಿ ಫೈನಲ್ ತಲುಪಿದ್ದ ಪಿಎಸ್‌ಜಿ ತಂಡವು ಚೆಲ್ಸಿ ಎದುರು ನೀರಸ ಪ್ರದರ್ಶನ ತೋರಿತು. 86ನೇ ನಿಮಿಷದಲ್ಲಿ ಜೋವೊ ನೆವೆಸ್ ಕೆಂಪು ಕಾರ್ಡ್ ಪಡೆದು ಹೊರಗೆ ಹೋದ ನಂತರ 10 ಆಟಗಾರರಿಗೆ ಸೀಮಿತವಾದ ಪಿಎಸ್‌ಜಿಯ ಆಟ ಇನ್ನಷ್ಟು ಕುಸಿಯಿತು.
ಚೆಲ್ಸಿ ಆಟಗಾರ ಮ್ಯಾಕ್ ಕುಕುರೆಲ್ಲಾ ಅವರ ಕೂದಲು ಹಿಡಿದು ಎಳೆದಿದ್ದಕ್ಕಾಗಿ VAR ಪರಿಶೀಲನೆ ನಂತರ ನೆವೆಸ್‌ಗೆ ರೆಫರಿ ಕೆಂಪು ಕಾರ್ಡ್ ನೀಡಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ 81,188 ಪ್ರೇಕ್ಷಕರು ಕ್ಲಬ್ ವಿಶ್ವಕಪ್ ಫೈನಲ್ ವೀಕ್ಷಿಸಲು ಮೆಟ್‌ಲೈಫ್ ಕ್ರೀಡಾಂಗಣಕ್ಕೆ ಆಗಮಿಸಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.