FIFA World Cup: 4 ಬಾರಿಯ ಚಾಂಪಿಯನ್ ಜರ್ಮನಿ ಮತ್ತೆ ನಾಕೌಟ್‌ಗೆ ಲಗ್ಗೆ; ಟ್ರೋಫಿ ಮೇಲೆ ಕಣ್ಣು

Kannadaprabha News   | Kannada Prabha
Published : Jun 22, 2026, 08:26 AM IST
FIFA World Cup 2026 Germany

ಸಾರಾಂಶ

ಬದಲಿ ಆಟಗಾರ ಡೆನಿಸ್‌ ಉಂಡಾವ್‌ ಅವರ 2 ಗೋಲುಗಳ ನೆರವಿನಿಂದ ಜರ್ಮನಿ, ಐವರಿ ಕೋಸ್ಟ್‌ ವಿರುದ್ಧ 2-1 ಅಂತರದ ಗೆಲುವು ಸಾಧಿಸಿ 12 ವರ್ಷಗಳ ಬಳಿಕ ನಾಕೌಟ್‌ ಹಂತ ಪ್ರವೇಶಿಸಿತು. ಮತ್ತೊಂದೆಡೆ, ಜಪಾನ್ ಟ್ಯುನೀಶಿಯಾ ವಿರುದ್ಧ 4-0 ಅಂತರದ ಭರ್ಜರಿ ಜಯ ಸಾಧಿಸಿದರೆ, ಗೋಲ್‌ಕೀಪರ್‌ ಎಲೊಯ್‌ ರೂಮ್‌ ಅವರ ಸಾಹಸದಿಂದ ಕುರಾಕಾವೊ ಮೊದಲ ಅಂಕ ಗಳಿಸಿತು.

ಟೊರೊಂಟೊ: ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಡೆನಿಸ್‌ ಉಂಡಾವ್‌, 2 ಗೋಲು ಬಾರಿಸಿ ಜರ್ಮನಿಯನ್ನು ಫಿಫಾ ವಿಶ್ವಕಪ್‌ 2026ರ ನಾಕೌಟ್‌ ಹಂತಕ್ಕೆ ಕೊಂಡೊಯ್ದರು. ಐವರಿ ಕೋಸ್ಟ್‌ ವಿರುದ್ಧದ ಪಂದ್ಯದಲ್ಲಿ ಜರ್ಮನಿ 2-1 ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ 12 ವರ್ಷಗಳ ಬಳಿಕ ತಂಡ ನಾಕೌಟ್‌ ಪ್ರವೇಶಿಸಿತು.

2014ರಲ್ಲಿ ಕೊನೆ ಬಾರಿಗೆ ನಾಕೌಟ್‌ ಹಂತಕ್ಕೇರಿದ್ದ ಜರ್ಮನಿ, ಆ ವರ್ಷ ಚಾಂಪಿಯನ್‌ ಆಗಿತ್ತು. 2018, 2022ರಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ 4 ಬಾರಿ ಚಾಂಪಿಯನ್‌ ತಂಡ, ಈ ಸಲ ಮತ್ತೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

30ನೇ ನಿಮಿಷದಲ್ಲಿ ಫ್ರಾಂಕ್‌ ಕೆಸ್ಸಿ ಬಾರಿಸಿದ ಗೋಲು ಐವರಿ ಕೋಸ್ಟ್‌ಗೆ ಮುನ್ನಡೆ ಒದಗಿಸಿತು. ಮೊದಲಾರ್ಧದ ಅಂತ್ಯಕ್ಕೆ ಒಂದು ಗೋಲಿಂದ ಹಿಂದಿದ್ದ ಜರ್ಮನಿ ಒತ್ತಡಕ್ಕೆ ಸಿಲುಕಿತ್ತು. ಆದರೆ 60ನೇ ನಿಮಿಷದಲ್ಲಿ ಮೈದಾನಕ್ಕಿಳಿದ ಉಂಡಾವ್‌, 68ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದರು. 90+4ನೇ ನಿಮಿಷದಲ್ಲಿ 2ನೇ ಗೋಲು ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು.

ನಾಕೌಟ್ ಸನಿಹಕ್ಕೆ ಜಪಾನ್

ಮೊಟೆರ್ರಿ(ಮೆಕ್ಸಿಕೋ): ಟ್ಯುನೀಶಿಯಾ ವಿರುದ್ಧ 4-0 ಗೋಲುಗಳ ಗೆಲುವು ಸಾಧಿಸಿದ ಜಪಾನ್‌, ‘ಎಫ್‌’ ಗುಂಪಿನಿಂದ ನಾಕೌಟ್‌ ಹಂತಕ್ಕೆ ಪ್ರವೇಶಿಸುವ ಹೊಸ್ತಿಲು ತಲುಪಿದೆ. ವಿಶ್ವಕಪ್‌ ಪಂದ್ಯವೊಂದರಲ್ಲಿ ಜಪಾನ್‌ 4 ಗೋಲು ಬಾರಿಸಿದ್ದು ಇದೇ ಮೊದಲು. ಜಪಾನ್‌ ಪರ ಅಯಸೆ ಉಯೇಡಾ 2 ಗೋಲು ಗಳಿಸಿದರು. 4ನೇ ನಿಮಿಷದಲ್ಲೇ ದೈಚಿ ಕಮಡಾ ಗೋಲಿನ ಖಾತೆ ತೆರೆದರು. ಬಳಿಕ ಉಯೇಡಾ 31ನೇ ನಿಮಿಷದಲ್ಲಿ ಗೋಲು ಬಾರಿಸಿದರು. 69ನೇ ನಿಮಿಷದಲ್ಲಿ ಜ್ಯುಯ ಇಟೊ 3-0 ಮುನ್ನಡೆ ಒದಗಿಸಿದರೆ, 83ನೇ ನಿಮಿಷದಲ್ಲಿ ಉಯೇಡಾ ಮತ್ತೊಂದು ಗೋಲು ಗಳಿಸಿ, ದೊಡ್ಡ ಅಂತರದ ಜಯಕ್ಕೆ ಕಾರಣರಾದರು.

15 ಗೋಲು ಯತ್ನ ತಡೆದು ಕುರಾಕಾವೊ ಗೋಲಿ ಸಾಹಸ!

ಕನ್ಸಾಸ್‌ ಸಿಟಿ: ಕುರಾಕಾವೊ ಗೋಲ್‌ಕೀಪರ್‌ ಎಲೊಯ್‌ ರೂಮ್‌, ಈಕ್ವೆಡಾರ್‌ನ ಬರೋಬ್ಬರಿ 15 ಗೋಲು ಯತ್ನಗಳನ್ನು ತಡೆದು, ತಮ್ಮ ತಂಡ ಗೋಲು ರಹಿತ ಡ್ರಾ ಸಾಧಿಸಲು ನೆರವಾದರು. ಇದು ವಿಶ್ವಕಪ್‌ ಪಂದ್ಯದಲ್ಲಿ 2ನೇ ಅತಿಹೆಚ್ಚು ಗೋಲು ರಕ್ಷಿಸಿದ ಪ್ರಯತ್ನ ಎನಿಸಿತು.

ಈ ಡ್ರಾದೊಂದಿಗೆ ಕುರಾಕಾವೊ, ಫಿಫಾ ವಿಶ್ವಕಪ್‌ನಲ್ಲಿ ಮೊದಲ ಅಂಕ ಗಳಿಸಿತು. 37 ವರ್ಷದ ರೂಮ್‌, ಕಳೆದ ವರ್ಷ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಹ ನೆರವಾಗಿದ್ದರು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಂದ್ಯ ದಿನ ಎಂಟ್ರಿ ಅವತ್ತೆ ಅಮೆರಿಕದಿಂದ ಮರಳಬೇಕು, ಇರಾನ್ ಫುಟ್ಬಾಲ್ ಟೀಂ ನಿರ್ಬಂಧ ವಿರುದ್ಧ ಫಿಫಾಗೆ ದೂರು
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್‌ಗೆ ಮೊದಲ ಜಯ; ಆತಿಥೇಯ ಅಮೆರಿಕ ನಾಕೌಟ್‌ಗೆ ಲಗ್ಗೆ