
ರಿಯಾದ್: ಪೋರ್ಚುಗಲ್ ದಿಗ್ಗಜ ಸ್ಟ್ರೈಕರ್ ಕ್ರಿಸ್ಟಿಯಾನೊ ರೊನಾಲ್ಡೋ ತಮ್ಮ ಸೌದಿ ಅರೇಬಿಯಾದ ಅಲ್ ನಸರ್ ಕ್ಲಬ್‌ಗೂ ವಿದಾಯ ನೀಡುವ ಸೂಚನೆ ನೀಡಿದ್ದಾರೆ. ಸೌದಿ ಪ್ರೊ ಲೀಗ್ ಮುಕ್ತಾಯವಾದ ಕೆಲವೇ ಗಂಟೆಗಳ ನಂತರ, “ಇದೇ ಅಧ್ಯಾಯ ಮುಕ್ತಾಯ” ಎಂಬ ಶೀರ್ಷಿಕೆಯೊಂದಿಗಿನ ಫೋಟೋವನ್ನು ರೊನಾಲ್ಡೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಫುಟ್ಬಾಲ್ ವಲಯದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ.
2022 ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ನಿಂದ ಅಲ್ ನಸರ್‌ಗೆ ಬಂದಿದ್ದ ಕ್ರಿಸ್ಟಿಯಾನೊ ರೊನಾಲ್ಡೋ ಅವರ ಒಪ್ಪಂದ ಈ ಬೇಸಿಗೆ ಮುಕ್ತಾಯಗೊಳ್ಳಲಿದೆ. ಈ ನಡುವೆ ಜೂನ್ 1ರಿಂದ 10ರವರೆಗೆ ಫಿಫಾ ಕ್ಲಬ್ ವಿಶ್ವಕಪ್‌ಗಾಗಿ 32 ಕ್ಲಬ್‌ಗಳಿಗೆ ವಿಶೇಷ ಟ್ರಾನ್ಸ್‌ಪರ್ ವಿಂಡೋ ತೆರೆಯಲಾಗುತ್ತದೆ.
“ಈ ಅಧ್ಯಾಯ ಮುಗಿದಿದೆ. ಕಥೆ? ಇನ್ನೂ ಬರೆಯಲಾಗುತ್ತಿದೆ. ಎಲ್ಲರಿಗೂ ಕೃತಜ್ಞತೆ,” ಎಂದು ಕ್ರಿಸ್ಟಿಯಾನೊ ರೊನಾಲ್ಡೋ ಭಾವಾನಾತ್ಮಕವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದಷ್ಟೇ ಅಲ್ಲದೇ ಹೊಸ ಕ್ಲಬ್ ಹುಡುಕುತ್ತಿರುವ ಸೂಚನೆ ನೀಡಿದ್ದಾರೆ.
ಅಲ್ ನಸರ್ ತಂಡ ಈ ಬಾರಿ ಸೌದಿ ಪ್ರೊ ಲೀಗ್‌ನಲ್ಲಿ ಮೂರನೇ ಸ್ಥಾನದಲ್ಲಿದೆ ಮತ್ತು ಏಷ್ಯನ್ ಚಾಂಪಿಯನ್ಸ್ ಲೀಗ್ ಎಲೈಟ್ ಹಂತಕ್ಕೇರಲು ಅರ್ಹತೆ ಕಳೆದುಕೊಂಡಿದೆ. ಏಪ್ರಿಲ್‌ನಲ್ಲಿ ಜಪಾನ್‌ನ ಕಾವಾಸಾಕಿ ಫ್ರಂಟೇಲ್ ವಿರುದ್ಧ ಸೆಮಿಫೈನಲ್‌ನಲ್ಲಿ ಅಲ್ ನಸರ್ ಫುಟ್ಬಾಲ್ ಕ್ಲಬ್ ಸೋಲನುಭವಿಸಿತ್ತು.
ಲೀಗ್‌ನ ಟಾಪ್ ಗೋಲ್ ಸ್ಕೋರರ್ ಆಗಿ ರೊನಾಲ್ಡೋ 24 ಗೋಲ್ ಗಳಿಸಿ ತಮ್ಮ ಕಾಲ್ಚಳಕದ ಪ್ರತಿಭೆಯನ್ನು ಅನಾವರಣ ಮಾಡಿದ್ದರು. ಕಳೆದ ವರ್ಷ “ನಾನು ಅಲ್ ನಸರ್‌ನಲ್ಲಿಯೇ ರಿಟೈರ್ ಆಗಬಹುದು” ಎಂದು ಹೇಳಿದ್ದ ಅವರು ಇದೀಗ ತಮ್ಮ ನಿರ್ಧಾರವನ್ನು ಬದಲಾಯಿಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕ್ಲಬ್ ವಿಶ್ವಕಪ್‌ನಲ್ಲಿ ಮೆಸ್ಸಿ-ರೊನಾಲ್ಡೋ ‘ರಿಯುನಿಯನ್’?
ಫಿಫಾ ಅಧ್ಯಕ್ಷ ಜಿಯಾನ್ನಿ ಇನ್‌ಫ್ಯಾಂಟಿನೋ ಅವರು ಕೆಲ ದಿನಗಳ ಹಿಂದೆ "ರೊನಾಲ್ಡೋ ಕೆಲವು ಕ್ಲಬ್‌ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅವರು ಕ್ಲಬ್ ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಬಹುದು," ಎಂದು ಹೇಳಿದ್ದರು. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದವು. ಇದೀಗ ಕ್ರಿಸ್ಟಿಯಾನೊ ರೊನಾಲ್ಡೋ ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್ ಫಿಫಾ ಅಧ್ಯಕ್ಷರ ಹೇಳಿಕೆಗೆ ಮತ್ತಷ್ಟು ಮಹತ್ವ ತಂದುಕೊಟ್ಟಿದೆ.
ಕ್ರಿಸ್ಟಿಯಾನೊ ರೊನಾಲ್ಡೋ ರಿಯಲ್ ಮ್ಯಾಡ್ರಿಡ್‌ಗಾಗಿ ಒಟ್ಟು 4 ಬಾರಿ ಚಾಂಪಿಯನ್ಸ್ ಲೀಗ್ ಗೆದ್ದಿದ್ದಾರೆ. ನಂತರ ಅವರು ಯುವೆಂಟಸ್‌ಗೆ ಸೇರಿದ್ದರು. ಇನ್ನು ಈ ಎರಡು ಕ್ಲಬ್‌ಗಳು ಕೂಡ ಈ ವರ್ಷದ ಕ್ಲಬ್ ವರ್ಲ್ಡ್ ಕಪ್‌ಗೆ ಅರ್ಹತೆ ಪಡೆದಿವೆ. ಹೀಗಾಗಿ ರೊನಾಲ್ಡೋ ಈ ಬಾರಿ ಯಾವ ಫುಟ್ಬಾಲ್ ತೆಕ್ಕೆಗೆ ಜಾರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
32 ತಂಡಗಳು ಭಾಗವಹಿಸುವ ಈ ಕ್ಲಬ್ ವಿಶ್ವಕಪ್ ಈ ಬಾರಿ ಬೇಸಿಗೆಯಲ್ಲಿ ನಡೆಯಲಿದೆ — ಇದು ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೋ ಇಬ್ಬರೂ ಜನರೇಷನಲ್ ಆಟಗಾರರ ಕಾದಾಟ ಅಭಿಮಾನಿಗಳಿಗೆ ಹೊಸ ಉತ್ಸಾಹ ನೀಡುವ ಸಂಗತಿ ಎನಿಸಿಕೊಳ್ಳಲಿದೆ.
ರೊನಾಲ್ಡೋ ಮುಂದಿನ ಗುರಿ, ಸೇರುವ ತಂಡ ಯಾವುದು?
ಇತ್ತೀಚೆಗಿನ ವರದಿಗಳ ಪ್ರಕಾರ, ರೊನಾಲ್ಡೋ ಕೆಲವು ಟಾಪ್ ಯೂರೋಪಿಯನ್ ಕ್ಲಬ್‌ಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಐಕಾನಿಕ್ ಆಟಗಾರನೊಬ್ಬನ್ನು ಕೆಲವು ವಾರಗಳಿಗಾಗಿಯೂ ನೇಮಕ ಮಾಡುವ ಸಾಧ್ಯತೆ ಕ್ಲಬ್‌ಗಳಿಗೆ ಲಭ್ಯವಿರುವ ಈ ವಿಶೇಷ ಟ್ರಾನ್ಸಪರ್ ವಿಂಡೋ ಬಳಸಿಕೊಳ್ಳುವ ಸಾಧ್ಯತೆಯಿದೆ. ಇನ್ನು ರೊನಾಲ್ಡೋ ಮುಂದೆ ಯಾವ ಕ್ಲಬ್ ಕಡೆಗೆ ಹೆಜ್ಜೆ ಇಡುತ್ತಾರೆ ಎಂಬ ಕುತೂಹಲ ಇನ್ನೂ ಕೆಲವು ದಿನಗಳನ್ನು ಕಾಯಬೇಕಾಗುತ್ತದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.