
ಲಿಸ್ಬನ್: ಹಲವು ವರ್ಷಗಳ ಪ್ರೀತಿಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ಪೋರ್ಚುಗಲ್ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ ಮತ್ತು ಅವರ ಗೆಳತಿ ಜಾರ್ಜಿನಾ ರೋಡ್ರಿಗಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್‌ನ ಕ್ಯಾಸ್ಕೈಸ್‌ನಲ್ಲಿ ನಡೆದ ಅತ್ಯಂತ ಖಾಸಗಿ ಸಮಾರಂಭದಲ್ಲಿ ಇವರಿಬ್ಬರೂ ಮದುವೆಯಾಗಿದ್ದಾರೆ.
41 ವರ್ಷದ ರೊನಾಲ್ಡೊ ಮತ್ತು 32 ವರ್ಷದ ಜಾರ್ಜಿನಾ, 10 ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದರು. ಈಗ ಅಧಿಕೃತವಾಗಿ ಗಂಡ-ಹೆಂಡತಿಯಾಗಿದ್ದಾರೆ. ತಮ್ಮ ಮದುವೆಯ ವಿಷಯವನ್ನು ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದು, ಮದುವೆ ಉಂಗುರ ಧರಿಸಿದ ಕೈಗಳನ್ನು ಹಿಡಿದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಫೋಟೋ ಪೋಸ್ಟ್ ಮಾಡಿದ ಕೇವಲ ಅರ್ಧ ಗಂಟೆಯಲ್ಲೇ 30 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ ಐದು ಮಕ್ಕಳ ಮುಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದು ವಿಶೇಷ. ರೊನಾಲ್ಡೊ-ಜಾರ್ಜಿಯಾ ಮದುವೆಗೆ ಮುಂಚೆಯೇ ಪೋಷಕರಾಗಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಮಕ್ಕಳಿದ್ದಾರೆ. ಕ್ರಿಸ್ಟಿಯಾನೊ ಜೂನಿಯರ್, ಅವಳಿ ಮಕ್ಕಳಾದ ಇವಾ ಮತ್ತು ಮಾಟಿಯೊ, ಅಲಾನಾ ಮಾರ್ಟಿನಾ ಹಾಗೂ ಬೆಲ್ಲಾ ಎಸ್ಲೆರಾಲ್ಡಾ ಎನ್ನುವ ಐದು ಮಕ್ಕಳಿದ್ದಾರೆ. ಈ ಐವರು ಮಕ್ಕಳು ಹಾಗೂ ಆಪ್ತರ ಸಮ್ಮುಖದಲ್ಲಿ ರೊನಾಲ್ಡೊ ಹಾಗೂ ಜಾರ್ಜಿಯಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
2025ರ ಆಗಸ್ಟ್ 11 ರಂದು ತಮ್ಮ ನಿಶ್ಚಿತಾರ್ಥದ ಸುದ್ದಿಯನ್ನು ಜಾರ್ಜಿನಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆಗ ತಮ್ಮ ನಿಶ್ಚಿತಾರ್ಥದ ಉಂಗುರದ ಫೋಟೋ ಜೊತೆ ಸ್ಪ್ಯಾನಿಷ್ ಭಾಷೆಯಲ್ಲಿ, "ಪೂರ್ಣ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದೇನೆ... ಈ ಜನ್ಮದಲ್ಲೂ, ಮುಂದಿನ ಎಲ್ಲಾ ಜನ್ಮಗಳಲ್ಲೂ" ಎಂದು ಬರೆದುಕೊಂಡಿದ್ದರು. ಈಗ, ನಿಶ್ಚಿತಾರ್ಥದ ಒಂದು ವರ್ಷದ ನಂತರ ಇವರಿಬ್ಬರ ಮದುವೆ ನಡೆದಿದೆ. ಈ ಸರಳ ಸಮಾರಂಭದಲ್ಲಿ ಅವರ ಮಕ್ಕಳು ಮತ್ತು ಆಪ್ತ ಸಂಬಂಧಿಕರು ಮಾತ್ರ ಭಾಗವಹಿಸಿದ್ದರು.
ರೊನಾಲ್ಡೊ ಮತ್ತು ಜಾರ್ಜಿನಾ ಮೊದಲ ಬಾರಿಗೆ ಭೇಟಿಯಾಗಿದ್ದು 2016ರಲ್ಲಿ, ಮ್ಯಾಡ್ರಿಡ್‌ನ ಗೂಚಿ ಸ್ಟೋರ್‌ನಲ್ಲಿ. ಆಗ ರೊನಾಲ್ಡೊ ರಿಯಲ್ ಮ್ಯಾಡ್ರಿಡ್ ತಂಡದ ಆಟಗಾರನಾಗಿದ್ದರು. ಆ ಪರಿಚಯವೇ ನಂತರ ಪ್ರೀತಿಗೆ ತಿರುಗಿತ್ತು. ರಿಯಲ್ ಮ್ಯಾಡ್ರಿಡ್, ಮ್ಯಾಂಚೆಸ್ಟರ್ ಯುನೈಟೆಡ್, ಯುವೆಂಟಸ್ ಮತ್ತು ಸದ್ಯ ಅಲ್ ನಾಸರ್ ಕ್ಲಬ್‌ಗಳ ಪರವಾಗಿ ಹಾಗೂ ಪೋರ್ಚುಗಲ್ ರಾಷ್ಟ್ರೀಯ ತಂಡಕ್ಕಾಗಿ ಸುಮಾರು ಸಾವಿರ ಗೋಲುಗಳನ್ನು ಗಳಿಸಿರುವ ರೊನಾಲ್ಡೊ, ಸೌದಿ ಪ್ರೊ ಲೀಗ್ ಸೀಸನ್ ಆರಂಭಕ್ಕೂ ಮುನ್ನವೇ ಮದುವೆ ಸಂಭ್ರಮ ಮುಗಿಸಿದ್ದಾರೆ. ವಿಶ್ವದಾದ್ಯಂತ ಲಕ್ಷಾಂತರ ಅಭಿಮಾನಿಗಳು ಮತ್ತು ಕ್ರೀಡಾಪಟುಗಳು ಈ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.