
ಬೆಂಗಳೂರು: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ(ಕೆಎಸ್‌ಎಫ್‌ಎ)ಗೆ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಹೊಸ ಫುಟ್ಬಾಲ್ ಕ್ರೀಡಾಂಗಣ ಬರಲಿದೆ ಎಂದು ಕೆಎಸ್‌ಎಫ್‌ಎ ಅಧ್ಯಕ್ಷ, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್ ಭರವಸೆ ನೀಡಿದ್ದಾರೆ.ನಗರದಲ್ಲಿ ಈಗಾಗಲೇ ಪಾಳುಬಿದ್ದಂತಿರುವ ಫುಟ್ಬಾಲ್ ಕ್ರೀಡಾಂಗಣದ ದುರವಸ್ಥೆ ಬಗ್ಗೆ ಸೋಮವಾರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎದುರಾದ ಪ್ರಶ್ನೆಗೆ ಹ್ಯಾರಿಸ್ ಉತ್ತರಿಸಿದರು. ‘ಫುಟ್ಬಾಲ್ ಕ್ರೀಡಾಂಗಣ ಆದಷ್ಟು ಬೇಗ ಆಗುತ್ತದೆ. ಟೆಂಡರ್ ಕೂಡಾ ಆಗಿದೆ. ಸರ್ಕಾರ, ನಾವು ಕೂಡಾ ಪ್ರಯತ್ನಿಸುತ್ತಿದ್ದೇವೆ’ ಎಂದರು.
ಕಂಠೀರವ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಟೂರ್ನಿಯ ಪಂದ್ಯ ಎತ್ತಂಗಡಿ ಆಗಿರುವ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಂಠೀರವ ಕ್ರೀಡಾಂಗಣವನ್ನು ಎಲ್ಲಾ ಕ್ರೀಡೆಗೂ ಬಳಸಲಾಗುತ್ತದೆ. ಅಲ್ಲಿ ಅಥ್ಲೆಟಿಕ್ಸ್ ನಡೆಯುತ್ತಿದೆ. ಇದರ ನಡುವೆ ಪಂದ್ಯದ ಆತಿಥ್ಯ ಸಿಕ್ಕಿತ್ತು. ಈಗ ಪಂದ್ಯ ಸ್ಥಳಾಂತರಗೊಂಡಿದ್ದಕ್ಕೆ ನೋವಿದೆ. ಆದರೆ ಅದು ನಮ್ಮ ನಿಯಂತ್ರಣದಲ್ಲಿಲ್ಲ. ಶೀಘ್ರದಲ್ಲೇ ಬೆಂಗಳೂರಿನಲ್ಲೇ ಕರ್ನಾಟಕ ಫುಟ್ಬಾಲ್ ಸಂಸ್ಥೆಗೆ ಹೊಸ ಕ್ರೀಡಾಂಗಣ ಬರಲಿದೆ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಭಾರತದ ನೂತನ ಕೋಚ್ ಖಾಲಿದ್ ಜಮೀಲ್, ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ, ಜೊತೆ ಕಾರ್ಯದರ್ಶಿ ಸತ್ಯನಾರಾಯಣ ಉಪಸ್ಥಿತರಿದ್ದರು.
ನೇಷನ್ಸ್ ಕಪ್ ಫುಟ್ಬಾಲ್: ಭಾರತ ತಂಡ ಘೋಷಣೆ
ಬೆಂಗಳೂರು: ಅ.29ರಿಂದ ಆರಂಭಗೊಳ್ಳಲಿರುವ ಸಿಎಎಫ್‌ಎ ನೇಷನ್ಸ್ ಕಪ್ ಫುಟ್ಬಾಲ್ ಟೂರ್ನಿಗೆ ಸೋಮವಾರ ಭಾರತ ತಂಡ ಪ್ರಕಟಿಸಲಾಗಿದೆ. ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾರತದ ನೂತನ ಕೋಚ್ ಖಾಲಿದ್ ಜಮೀಲ್ 23 ಆಟಗಾರರ ತಂಡ ಘೋಷಿಸಿದರು. ಭಾರತ ತಂಡ ಟೂರ್ನಿಯಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆ.29ಕ್ಕೆ ತಜಿಕಿಸ್ತಾನ, ಸೆ.1ಕ್ಕೆ ಇರಾನ್, ಸೆ.4ಕ್ಕೆ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.
ತಂಡ: ಗುರುಪ್ರೀತ್ ಸಿಂಗ್, ಅಮ್ರಿಂದರ್ ಸಿಂಗ್, ಹೃತಿಕ್, ರಾಹುಲ್ ಭೆಕೆ, ರೋಶನ್ ಸಿಂಗ್, ಅನ್ವರ್ ಅಲಿ, ಸಂದೇಶ್ ಜಿಂಗನ್, ಚಿಂಗ್ಲೆನ್‌ಸಾನ ಸಿಂಗ್, ಮಿಂಗ್ಟನ್ಮಾವಿಯಾ ರಾಲ್ಟೆ, ಮುಹಮ್ಮದ್ ಉವೈಸ್, ನಿಖಿಲ್ ಪ್ರಭು, ಸುರೇಶ್ ಸಿಂಗ್, ಫಾರೂಖ್ ಭಟ್, ಜೇಕ್ಸನ್ ಸಿಂಗ್, ಬೋರಿಸ್ ಸಿಂಗ್, ಆಶಿಖ್, ಉದಾಂತ ಸಿಂಗ್, ನರೋಮ್ ಮಹೇಶ್ ಸಿಂಗ್, ಇರ್ಫಾನ್, ಮನ್ವೀರ್ ಸಿಂಗ್, ಜಿತಿನ್, ಲಾಲಿಯನ್ಜುವಾಲಾ ಚಾಂಗ್ಟೆ, ವಿಕ್ರಮ್ ಪ್ರತಾಪ್ ಸಿಂಗ್.
ಭಾರತದಲ್ಲಿ ಚೆಟ್ರಿಗಿಂತ ಉತ್ತಮ ಆಟಗಾರರಿಲ್ಲ: ಕೋಚ್ ಖಾಲಿದ್
ನವದೆಹಲಿ: ‘41ನೇ ವಯಸ್ಸಿನಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಫುಟ್ಬಾಲ್ ದಿಗ್ಗಜ ಸುನಿಲ್ ಚೆಟ್ರಿಗಿಂತ ಉತ್ತಮ ಆಟಗಾರ ಭಾರತದಲ್ಲಿಲ್ಲ. ಅವರು ಫುಟ್ಬಾಲ್ ಆಡುವವರೆಗೂ ರಾಷ್ಟ್ರೀಯ ತಂಡದಲ್ಲಿರುತ್ತಾರೆ’ ಎಂದು ನೂತನ ಕೋಚ್ ಖಾಲಿದ್ ಜಮೀಲ್ ಹೇಳಿದ್ದಾರೆ.
ಆ.29ರಿಂದ ನಡೆಯಲಿರುವ ನೇಷನ್ಸ್ ಕಪ್‌ಗೂ ಮುನ್ನ ರಾಷ್ಟ್ರೀಯ ಶಿಬಿರಕ್ಕೆ ಖಾಲಿದ್ ಹೆಸರನ್ನು ಕೈಬಿಡಲಾಗಿತ್ತು. ಈ ಸಂಬಂಧ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ‘ಭಾರತದಲ್ಲಿ ಅವರಿಗಿಂತ ಉತ್ತಮ ಆಟಗಾರ ಮತ್ತೊಬ್ಬರಿಲ್ಲ. ಅವರು ತಂಡಕ್ಕೆ ಲಭ್ಯವಿರುತ್ತಾರೆ ಎಂದರೆ ಏಕೆ ಬೇಡ? ಹಲವು ವರ್ಷಗಳಿಂದ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಅವರ ಅನುಭವ ನಮಗೆ ಅಗತ್ಯ. ಅವರೊಂದು ದಂತಕತೆ’ ಎಂದಿದ್ದಾರೆ.
ಆ.31ರಂದು ರಾಜ್ಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಕೂಟ
ಬೆಂಗಳೂರು: ಕರ್ನಾಟಕ ಪ್ಯಾರಾ ಬ್ಯಾಡ್ಮಿಂಟನ್ ಸಂಸ್ಥೆ(ಕೆಪಿಬಿಎ)ಯು ರಾಜ್ಯ ಮಟ್ಟದ ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಆ.31ರಂದು ಆಯೋಜಿಸಲಿದೆ. ಮಲ್ಲೇಶ್ವರಂ ಕೆನರಾ ಯೂನಿಯನ್‌ನಲ್ಲಿ ಪಂದ್ಯಗಳು ನಡೆಯಲಿವೆ. ಇದು ಸೆ.8ರಿಂದ 10ರ ವರೆಗೆ ಲಖನೌದಲ್ಲಿ ನಡೆಯಲಿರುವ ಜೂನಿಯರ್ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಕೂಟಕ್ಕೆ ಆಯ್ಕೆ ಟ್ರಯಲ್ಸ್ ಆಗಿರಲಿದೆ. ಹೆಸರು ನೋಂದಾಯಿಸಲು ಆ.28 ಕೊನೆ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಆನಂದ್ ಕುಮಾರ್ (973115755) ಅವರನ್ನು ಸಂಪರ್ಕಿಸಬಹುದು ಕೆಪಿಬಿಎ ಕಾರ್ಯದರ್ಶಿ ವೆಂಕಟೇಶ್ ಕೆ.ವೈ. ತಿಳಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.