
ಬೆಂಗಳೂರು: ಭೀಕರ ಕಾಲ್ತುಳಿತದ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕ್ರಿಕೆಟ್ ಪಂದ್ಯಗಳು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿರುವುದರ ನಡುವೆಯೇ ನಗರಕ್ಕೆ ಈಗ 'ಫುಟ್ಬಾಲ್' ಕೂಡಾ ಶಾಕ್ ನೀಡಿದೆ. ಇಲ್ಲಿನ ಮತ್ತೊಂದು ಪ್ರತಿಷ್ಠಿತ ಕ್ರೀಡಾಂಗಣ ಕಂಠೀರವದ ಪಿಚ್ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಯೋಗ್ಯವಲ್ಲ ಎಂದು ಏಷ್ಯನ್ ಫುಟ್ಬಾಲ್ ಫೆಡರೇಶನ್ (ಎಎಫ್‌ಸಿ) ಹೇಳಿದ್ದು, ಹೀಗಾಗಿ ಭಾರತ ಆಡಬೇಕಿದ್ದ ಫುಟ್ಬಾಲ್ ಪಂದ್ಯವೇ ಬೆಂಗಳೂರಿನಿಂದ ಎತ್ತಂಗಡಿ ಯಾಗಿದೆ. 2027ರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ ಅಕ್ಟೋಬರ್ 14ರಂದು ಭಾರತ ತಂಡ ಸಿಂಗಾಪುರ ವಿರುದ್ದ ಸೆಣಸಬೇಕಿತ್ತು.
ಈ ಪಂದ್ಯಕ್ಕೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ (ಎಐಎಫ್‌ಎಫ್) ಕಂಠೀರವ ಕ್ರೀಡಾಂಗಣವನ್ನು ಅಂತಿಮಗೊಳಿಸಿತ್ತು. ಆದರೆ ಪಂದ್ಯದ ಪೂರ್ವಭಾವಿಯಾಗಿ ಎಎಫ್‌ಸಿ ಅಧಿಕಾರಿಗಳು ಇತ್ತೀಚೆಗೆ ಕಂಠೀರವ ಕ್ರೀಡಾಂಗಣದಲ್ಲಿ ತಪಾಸಣೆ ನಡೆಸಿದ್ದು, ಹಲವು ಲೋಪ ದೋಷಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಬದಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸುವಂತೆ ಎಐಎಫ್ ಎಫ್‌ಗೆ ಎಎಫ್‌ಸಿ ಸೂಚಿಸಿದೆ ಎಂದು ವರದಿಯಾಗಿದೆ. ಇದರಿಂದಾಗಿ ಪಂದ್ಯ ಗೋವಾ ಅಥವಾ ಶಿಲ್ಲಾಂಗ್‌ಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ.
'ಕಂಠೀರವದ ಪಿಚ್ ಸಮರ್ಪಕವಾಗಿಲ್ಲ. ಕ್ರೀಡಾಂಗಣದ ಇತರ ಕೆಲ ಅಂಶಗಳು ಕೂಡಾ ಅಂ.ರಾ. ಪಂದ್ಯ ಆಯೋಜನೆಗೆ ಸೂಕ್ತವಾಗಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ. ಸಾಮಾನ್ಯವಾಗಿ ಬೆಂಗಳೂರು ಎಫ್‌ಸಿ ಕ್ಲಬ್ ಕಂಠೀರವ ಕ್ರೀಡಾಂಗಣದ ಮೇಲುಸ್ತುವಾರಿ ನೋಡಿಕೊಳ್ಳುತ್ತದೆ. ಆದರೆ ಸದ್ಯ ಐಎಸ್‌ಎಲ್ ಸ್ಥಗಿತಗೊಂಡಿದ್ದರಿಂದ ಕ್ರೀಡಾಂಗಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಹೇಳಲಾಗುತ್ತಿದೆ.
ನಮ್ಮ ಕಂಠೀರವ ಕ್ರೀಡಾಂಗಣ ಮಲ್ಟಿ ಪರ್ಪಸ್ ಆಗಿ ಬಳಕೆಯಾಗುತ್ತಿದೆ. ಇದನ್ನು ರಾಜ್ಯ ಸರ್ಕಾರ ಹಾಗೂ ಬಿಎಫ್‌ಸಿ ನಿರ್ವಹಣೆ ಮಾಡುತ್ತಿದೆ. ಏಷ್ಯನ್ ಎಎಫ್‌ಸಿ ಮ್ಯಾಚ್ ಆಯೋಜನೆಯ ಬಗ್ಗೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ ದಿಢೀರ್ ಆಗಿ ತಿಳಿಸಿದೆ. ಆ ಸಮಯದಲ್ಲಿ ಬೇರೆ ವೇಳಾಪಟ್ಟಿ ನಿಗದಿಯಾಗಿರುವುದರಿಂದ ಇಲ್ಲಿ 2027ರ ಎಎಫ್‌ಸಿ ಏಷ್ಯನ್ ಕಪ್ ಅರ್ಹತಾ ಪಂದ್ಯ ಆಯೋಜನೆ ಸಾಧ್ಯವಾಗುತ್ತಿಲ್ಲ. ನಾವು ಈ ಹಿಂದೆ ಯಶಸ್ವಿಯಾಗಿ ಸ್ಯಾಫ್ ಕಪ್ ಟೂರ್ನಿ ಆಯೋಜಿಸಿದ್ದೇವೆ ಎಂದು ಕರ್ನಾಟಕ ಸ್ಟೇಟ್ ಫುಟ್ಬಾಲ್ ಫೆಡರೇಷನ್ ಗೌರವ ಡೆಪ್ಯೂಟಿ ಸೆಕ್ರೇಟರಿ ಹಾಗೂ ಮಾಜಿ ಅಂತಾರಾಷ್ಟ್ರೀಯ ಫುಟ್ಬಾಲಿಗ ಅಸ್ಲಾಂ ಖಾನ್ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಿಂದ ಮಹಿಳಾ ಏಕದಿನ ವಿಶ್ವಕಪ್ ಔಟ್:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಮಾತ್ರವಲ್ಲ ರಾಜ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ಆರ್‌ಸಿಬಿ ಟ್ರೋಫಿ ಗೆದ್ದ ಸಂಭ್ರಮಾಚರಣೆಯಲ್ಲಿ ದುರಂತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಈ ಘಟನೆ ಬಳಿಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಪ್ರಕರಣ ಎದುರಿಸುತ್ತಿದ್ದಾರೆ. ದುರಂತದ ಬಳಿಕ ಇದೀಗ ಐಸಿಸಿ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಂದು ಶಾಕ್ ನೀಡಿದೆ. ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯ ಪರಿಷ್ಕೃತ ವೇಳಾಪಟ್ಟ ಪ್ರಕಟಗೊಂಡಿದೆ. ಮೊದಲು ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಬೆಂಗಳೂರು ಹಲವು ಪಂದ್ಯಗಳಿಗೆ ಆತಿಥ್ಯವಹಿಸಿತ್ತು. ಆದರೆ ಇದೀಗ ಹೊಸ ಪಟ್ಟಿ ಬಿಡುಗಡೆ ಮಾಡಿದ್ದು, ಬೆಂಗಳೂರು ಪಂದ್ಯಗಳನ್ನು ಸ್ಥಳಾಂತರ ಮಾಡಲಾಗಿದೆ.
ಬೆಂಗಳೂರಿನಿಂದ ಪಂದ್ಯಗಳು ಮುಂಬೈಗೆ ಶಿಫ್ಟ್
ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯವಹಿಸಿದೆ. ಭಾರತದ ಪಂದ್ಯಗಳ ಪೈಕಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಪ್ರಮುಖ ತಾಣವಾಗಿತ್ತು. ಭಾರತ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೂ ಚಿನ್ನಸ್ವಾಮಿ ಕ್ರೀಡಾಂಗಣ ಪಂದ್ಯದಲ್ಲಿ ಆಯೋಜಿಸಲಾಗಿತ್ತು. ಆದರೆ ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಐಸಿಸಿ ವೇಳಾಪಟ್ಟಿ ಪರಿಷ್ಕರಿಸುವುದಾಗಿ ಹೇಳಿತ್ತು. ಇದೀಗ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ್ದು, ಬೆಂಗಳೂರು ಪಂದ್ಯಗಳನ್ನು ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.