ದೇವರ ಆರತಿಯನ್ನು ಯಾವಾಗಲೂ ಪ್ರದಕ್ಷಿಣಾಕಾರದಲ್ಲೇ ಏಕೆ ಮಾಡುತ್ತಾರೆ? ಇಲ್ಲಿದೆ ಧಾರ್ಮಿಕ ಸತ್ಯ!

Pavna Das   | ANI
Published : Nov 14, 2026, 03:04 PM IST
Aarti in Hinduism

ಸಾರಾಂಶ

ದೇವರಿಗೆ ಆರತಿ ಮಾಡುವಾಗ ದೀಪವನ್ನು ಯಾವಾಗಲೂ ಗೋಲಾಕಾರವಾಗಿ ಏಕೆ ತಿರುಗಿಸುತ್ತಾರೆ ಎಂದು ನಿಮಗೆ ಗೊತ್ತೇ? ಆರತಿಯ ಹಿಂದಿರುವ ಧಾರ್ಮಿಕ, ಆಧ್ಯಾತ್ಮಿಕ ಮಹತ್ವವೇನು? ಗಡಿಯಾರದ ದಿಕ್ಕಿನಲ್ಲೇ ಆರತಿ ಮಾಡುವುದರ ಕಾರಣ ಸೇರಿದಂತೆ ಈ ಸಂಪ್ರದಾಯದ ಹಿಂದಿರುವ 5 ವಿಶೇಷ ಅರ್ಥಗಳನ್ನು ಇಲ್ಲಿ ತಿಳಿದುಕೊಳ್ಳಿ.

ದೇವರಿಗೆ ಈ ರೀತಿಯಾಗಿಯೇ ಯಾಕೆ ಆರತಿ ಮಾಡುತ್ತಾರೆ?

ಹಿಂದೂ ಧರ್ಮದಲ್ಲಿ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ದೇವರಿಗೆ ಆರತಿ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಮನೆಯಾಗಿರಲಿ ಅಥವಾ ದೇವಸ್ಥಾನವಾಗಿರಲಿ, ಪೂಜೆಯ ಕೊನೆಯಲ್ಲಿ ದೀಪ ಬೆಳಗಿಸಿ ದೇವರಿಗೆ ಆರತಿ ಮಾಡುವುದು ಸಾಮಾನ್ಯ ಸಂಪ್ರದಾಯ. ಆರತಿ ಮಾಡುವಾಗ ದೀಪವನ್ನು ದೇವರ ಮುಂದೆ ಗೋಲಾಕಾರವಾಗಿ ತಿರುಗಿಸುವುದನ್ನು ನೀವೂ ಗಮನಿಸಿರಬಹುದು. ಆದರೆ ಎಂದಾದರೂ ಯೋಚಿಸಿದ್ದೀರಾ, ದೇವರಿಗೆ ಆರತಿ ಮಾಡುವಾಗ ದೀಪವನ್ನು ಯಾವಾಗಲೂ ಗೋಲಾಕಾರವಾಗಿಯೇ ಏಕೆ ತಿರುಗಿಸುತ್ತಾರೆ? ನೇರವಾಗಿ ಅಥವಾ ಬೇರೆ ದಿಕ್ಕಿನಲ್ಲಿ ಏಕೆ ತಿರುಗಿಸುವುದಿಲ್ಲ? ಧಾರ್ಮಿಕ ನಂಬಿಕೆಗಳ ಪ್ರಕಾರ, ಆರತಿ ಮಾಡುವ ಈ ಪದ್ಧತಿಯ ಹಿಂದೆ ಹಲವು ವಿಶೇಷ ಕಾರಣಗಳಿವೆ. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ದೇವರಿಗೆ ಮಾಡುವ ಸಾಂಕೇತಿಕ ಪ್ರದಕ್ಷಿಣೆಯೇ ಆರತಿ

ಹಿಂದೂ ಧರ್ಮದಲ್ಲಿ ದೇವರಿಗೆ ಪ್ರದಕ್ಷಿಣೆ ಹಾಕುವುದಕ್ಕೆ ವಿಶೇಷ ಮಹತ್ವವಿದೆ. ಭಕ್ತರು ದೇವಸ್ಥಾನದಲ್ಲಿ ದೇವರ ಸುತ್ತಲೂ ಸುತ್ತುವುದನ್ನು ಪ್ರದಕ್ಷಿಣೆ ಎಂದು ಕರೆಯುತ್ತಾರೆ. ಅದೇ ರೀತಿ ಆರತಿ ಮಾಡುವಾಗ ದೀಪವನ್ನು ಗೋಲಾಕಾರವಾಗಿ ತಿರುಗಿಸುವುದನ್ನು ಕೂಡ ದೇವರಿಗೆ ಮಾಡುವ ಸಾಂಕೇತಿಕ ಪ್ರದಕ್ಷಿಣೆ ಎಂದು ಪರಿಗಣಿಸಲಾಗುತ್ತದೆ.

ಧಾರ್ಮಿಕ ನಂಬಿಕೆಗಳ ಪ್ರಕಾರ, ಆರತಿಯ ಮೂಲಕ ಭಕ್ತರು ದೇವರನ್ನು ತಮ್ಮ ಜೀವನದ ಕೇಂದ್ರಬಿಂದುವಾಗಿ ಸ್ವೀಕರಿಸಿ, ಅವರ ಮೇಲಿನ ಭಕ್ತಿ ಮತ್ತು ಶ್ರದ್ಧೆಯನ್ನು ವ್ಯಕ್ತಪಡಿಸುತ್ತಾರೆ. ಇಡೀ ಸೃಷ್ಟಿಯು ದೇವರ ಶಕ್ತಿಯಿಂದಲೇ ನಡೆಯುವಂತೆ, ಆರತಿಯ ಗೋಲಾಕಾರದ ಚಲನೆಯೂ ದೇವರನ್ನು ಎಲ್ಲದರ ಕೇಂದ್ರವಾಗಿ ಇರಿಸಿಕೊಳ್ಳಬೇಕು ಎಂಬ ಸಂದೇಶವನ್ನು ನೀಡುತ್ತದೆ.

ಬ್ರಹ್ಮಾಂಡ ಮತ್ತು ಪ್ರಕೃತಿಯ ಚಕ್ರದ ಸಂಕೇತವೇ ಆರತಿ

ಧಾರ್ಮಿಕ ನಂಬಿಕೆಗಳ ಪ್ರಕಾರ, ಆರತಿಯನ್ನು ಗೋಲಾಕಾರವಾಗಿ ತಿರುಗಿಸುವುದನ್ನು ಬ್ರಹ್ಮಾಂಡದ ಚಲನೆ ಮತ್ತು ಪ್ರಕೃತಿಯ ಚಕ್ರಕ್ಕೂ ಹೋಲಿಸಲಾಗುತ್ತದೆ. ಸೂರ್ಯ, ಚಂದ್ರ ಮತ್ತು ಗ್ರಹಗಳ ಚಲನೆಯಿಂದ ಭೂಮಿಯಲ್ಲಿ ಹಗಲು, ರಾತ್ರಿ ಹಾಗೂ ಕಾಲಮಾನದಲ್ಲಿ ಬದಲಾವಣೆಗಳು ಸಂಭವಿಸುತ್ತಿರುತ್ತವೆ. ಆರತಿಯನ್ನು ದಕ್ಷಿಣಾವರ್ತವಾಗಿ ಅಂದರೆ ಗಡಿಯಾರದ ಮುಳ್ಳುಗಳು ಚಲಿಸುವ ದಿಕ್ಕಿನಲ್ಲಿ ತಿರುಗಿಸುವುದು ಶುಭವೆನ್ನಲಾಗುವುದು. ಇದು ಜೀವನದ ನಿರಂತರ ಚಲನೆ ಮತ್ತು ಪ್ರಕೃತಿಯ ನಿಯಮಗಳ ಸಂಕೇತವಾಗಿದೆ. ಈ ಸಂಪ್ರದಾಯದ ಮೂಲಕ ಜಗತ್ತಿನ ಪ್ರತಿಯೊಂದು ಚಟುವಟಿಕೆಯೂ ದೇವರ ಶಕ್ತಿಯೊಂದಿಗೆ ಬೆಸೆದುಕೊಂಡಿದೆ ಎಂಬ ಭಾವನೆಯನ್ನು ಭಕ್ತರು ವ್ಯಕ್ತಪಡಿಸುತ್ತಾರೆ.

ದೇವರ ಸಂಪೂರ್ಣ ರೂಪದ ದರ್ಶನ ಪಡೆಯಲು ಇರುವ ವಿಧಾನ

ಹಿಂದಿನ ಕಾಲದಲ್ಲಿ ದೇವಸ್ಥಾನಗಳಲ್ಲಿ ಇಂದಿನಂತೆ ವಿದ್ಯುತ್ ಮತ್ತು ಬೆಳಕಿನ ವ್ಯವಸ್ಥೆ ಇರಲಿಲ್ಲ. ಅನೇಕ ದೇವಸ್ಥಾನಗಳಲ್ಲಿ ಕತ್ತಲೆ ಆವರಿಸಿರುತ್ತಿತ್ತು. ಅಂತಹ ಸಮಯದಲ್ಲಿ ದೀಪದ ಬೆಳಕಿನ ಸಹಾಯದಿಂದ ದೇವರ ಮೂರ್ತಿಯನ್ನು ದರ್ಶಿಸಲಾಗುತ್ತಿತ್ತು. ಆರತಿ ಮಾಡುವಾಗ ದೀಪವನ್ನು ಗೋಲಾಕಾರವಾಗಿ ತಿರುಗಿಸುವುದರಿಂದ ಅದರ ಬೆಳಕು ದೇವರ ಪಾದಗಳಿಂದ ಹಿಡಿದು ಮುಖದವರೆಗೂ ಹರಡುತ್ತದೆ. ಇದರಿಂದ ಭಕ್ತರಿಗೆ ದೇವರ ಸಂಪೂರ್ಣ ರೂಪದ ದರ್ಶನ ಸಿಗುತ್ತಿತ್ತು.. ಹೀಗೆ ಆರತಿಯು ಕೇವಲ ಪೂಜೆಯ ಒಂದು ಭಾಗವಾಗಿರದೆ, ದೇವರ ಸುಂದರ ರೂಪವನ್ನು ಕಣ್ತುಂಬಿಕೊಳ್ಳುವ ಮಾಧ್ಯಮವಾಗಿಯೂ ರೂಪುಗೊಂಡಿದೆ.

ಅಹಂಕಾರವನ್ನು ಬಿಟ್ಟು ದೇವರಿಗೆ ಸಂಪೂರ್ಣವಾಗಿ ಶರಣಾಗುವ ಸಂದೇಶ

ಆರತಿಯ ಮತ್ತೊಂದು ಆಧ್ಯಾತ್ಮಿಕ ಅರ್ಥವೆಂದರೆ ಅಹಂಕಾರವನ್ನು ತ್ಯಜಿಸುವುದು. ಭಕ್ತರು ದೇವರ ಮುಂದೆ ದೀಪವನ್ನು ಹಿಡಿದು ಆರತಿ ಮಾಡುವಾಗ, ತಮ್ಮ ಜೀವನವು ದೇವರ ಕೃಪೆಯಿಂದಲೇ ನಡೆಯುತ್ತಿದೆ ಎಂಬ ಭಾವನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಆರತಿಯ ಮೂಲಕ ವ್ಯಕ್ತಿಯು ತನ್ನ ದೇಹ, ಮನಸ್ಸು ಮತ್ತು ಜೀವನವನ್ನು ದೇವರಿಗೆ ಸಮರ್ಪಿಸುತ್ತಾನೆ. ದೀಪದ ಜ್ಯೋತಿಯನ್ನು ಜ್ಞಾನ ಮತ್ತು ಭಕ್ತಿಯ ಸಂಕೇತವಾಗಿಯೂ ಪರಿಗಣಿಸಲಾಗುತ್ತದೆ. ಇದು ಅಜ್ಞಾನ ಮತ್ತು ಕೆಟ್ಟ ಆಲೋಚನೆಗಳಿಂದ ದೂರವಿದ್ದು, ಒಳ್ಳೆಯ ಮಾರ್ಗದಲ್ಲಿ ನಡೆಯಲು ನಮಗೆ ಪ್ರೇರಣೆ ನೀಡುತ್ತದೆ.

PREV
Read more Articles on
click me!

Recommended Stories

Astrology: ಸಿಂಹ ರಾಶಿಗೆ ಮಂಗಳ ಪ್ರವೇಶ: 4 ರಾಶಿ ಮೇಲೆ ಶನಿ- ಕೇತುವಿನ ನೇರ ಪ್ರಭಾವ
2026ರ ಶನಿ ಗೋಚರ; ಮುಂದಿನ 96 ದಿನಗಳವರೆಗೆ 4 ರಾಶಿಗೆ ಹಣ ಸಂಪಾದನೆಯ ಸೂಪರ್ ಚಾನ್ಸ್