
ಪ್ರತಿ ವರ್ಷದಂತೆ ಈ ವರ್ಷ ಕೂಡ ಗಣೇಶ ಹಬ್ಬ (Ganesha festival )ಕ್ಕೆ ಇಡೀ ಭಾರತ ಸಜ್ಜಾಗ್ತಿದೆ. ಚೌತಿ ಹಬ್ಬಕ್ಕೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಬಪ್ಪನನ್ನು ಮನೆಗೆ ತಂದು, ಕಡುಬು, ಕಜ್ಜಾಯ ಮಾಡಿ ಗಣೇಶನಿಗೆ ಅರ್ಪಿಸಿ, ವಿಜ್ರಂಭಣೆಯಿಂದ ಪೂಜೆ ಮಾಡೋದಲ್ದೆ ಗಣೇಶನ ವಿಸರ್ಜನೆ ಕೂಡ ಅದ್ಧೂರಿಯಾಗಿ ಮಾಡಲಾಗುತ್ತೆ. ಈ ಬಾರಿ ಆಗಸ್ಟ್ 27 ರಂದು ಗೌರಿ ಹಿಂದೆ ಗಣೇಶ ಮನೆಗೆ ಬರಲಿದ್ದಾನೆ. ಮನೆಗೆ ಬಂದ ಗಣಪತಿಯನ್ನು ವಿಸರ್ಜನೆ ಮಾಡ್ಲೇಬೇಕು. ಕೆಲವರು ಹಬ್ಬದ ದಿನವೇ ವಿಸರ್ಜನೆ ಮಾಡಿದ್ರೆ ಮತ್ತೆ ಕೆಲವರು, ನಾಲ್ಕು, ಆರು, ಎಂಟು, ಹತ್ತು ದಿನ ಮನೆಯಲ್ಲಿ ಗಣೇಶನ ಪೂಜೆ ಮಾಡಿ ನಂತ್ರ ವಿಸರ್ಜನೆ ಮಾಡ್ತಾರೆ. ಹತ್ತನೇ ದಿನ ಗಣೇಶ ವಿಸರ್ಜನೆ ಹೆಚ್ಚು ಶುಭಕರ ಅಂತ ನಂಬಲಾಗಿದೆ. ಹತ್ತು ದಿನಗಳ ಕಾಲ ಮನೆಯಲ್ಲಿರುವ ಗಣೇಶ, ಭಕ್ತರ ಎಲ್ಲ ಕಷ್ಟವನ್ನು ಬಗೆಹರಿಸಿ, ಮನೆ ಮನೆಗೆ ಸಂತೋಷ ನೀಡಿ ತನ್ನ ಲೋಕಕ್ಕೆ ಮರಳ್ತಾನೆ ಎನ್ನುವ ನಂಬಿಕೆ ಇದೆ.
ಗಣೇಶ ಉತ್ಸವ, ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತೆ. ಶಾಸ್ತ್ರಗಳ ಪ್ರಕಾರ, ಗಣಪತಿ ಮೂರ್ತಿ ಸ್ಥಾಪನೆ ಮಾತ್ರವಲ್ಲ ವಿಸರ್ಜನೆ ಕೂಡ ಮಹತ್ವ ಹೊಂದಿದೆ. ಪ್ರತಿ ವರ್ಷ ನಾವು ಗಣೇಶ ಮೂರ್ತಿ ವಿಸರ್ಜನೆ ಮಾಡ್ತೇವೆ. ಆದ್ರೆ ಯಾಕೆ ಎನ್ನುವ ಪ್ರಶ್ನೆಗೆ ಅನೇಕರ ಬಳಿ ಉತ್ತರ ಇಲ್ಲ. ಗಣೇಶ ಮೂರ್ತಿ ವಿಸರ್ಜನೆ ಮಹಾಭಾರತದ ಜೊತೆ ನಂಟು ಹೊಂದಿದೆ.
ಗಣಪತಿ ವಿಸರ್ಜನೆ ಅರ್ಥ ಏನು? : ಗಣಪತಿ ವಿಸರ್ಜನೆಯಲ್ಲಿ ತ್ಯಾಗದ ಭಾವ ಇದೆ. ಗಣೇಶ ವಿಸರ್ಜನೆ ಎಂದರೆ ಕೇವಲ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವುದು ಎಂದಲ್ಲ. ಈ ವಿಗ್ರಹ ವಿಸರ್ಜನೆಯ ಪ್ರಕ್ರಿಯೆಯು ಈ ಭೌತಿಕ ಜಗತ್ತಿನಲ್ಲಿ ನಾವು ಸೃಷ್ಟಿಸಿರುವ ಯಾವುದೇ ವಿಷಯ ತಾತ್ಕಾಲಿಕ ಮತ್ತು ಕೊನೆಯಲ್ಲಿ ಕರಗುತ್ತದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಪ್ರಪಂಚದ ಭ್ರಮೆಯಲ್ಲಿ ಸಿಲುಕಿಕೊಳ್ಳುವ ಬದಲು, ನಾವು ನಮ್ಮ ಆಂತರಿಕ ಬುದ್ಧಿಶಕ್ತಿಯನ್ನು ಜಾಗೃತಗೊಳಿಸಬೇಕು ಎಂಬುದನ್ನು ಇದು ಹೇಳುತ್ತದೆ.
ಗಣಪತಿ ವಿಸರ್ಜನೆ ವೇಳೆ ಇದು ನೆನಪಿರಲಿ : ಮನೆಯಲ್ಲಿ ವಿಗ್ರಹವನ್ನು ಮುಳುಗಿಸುವುದು ಒಳ್ಳೆಯದು. ಬ್ರಹ್ಮಪುರಾಣ ಮತ್ತು ಮಹಾಭಾರತದ ಪ್ರಕಾರ, ನದಿ ನೀರನ್ನು ಕಲುಷಿತಗೊಳಿಸುವುದು ಪಾಪ. ಹಾಗಾಗಿ ನದಿ ಬದಲು ನೀವು ಮಡಕೆ ಅಥವಾ ನೀರಿನಿಂದ ತುಂಬಿದ ಹೊಸ ದೊಡ್ಡ ಪಾತ್ರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿ.