ಜ್ಯೋತಿರ್ಲಿಂಗಗಳ ಸರಣಿಯಲ್ಲಿ ಇಂದು ಮಧ್ಯಪ್ರದೇಶದ ಓಂಕಾರೇಶ್ವರನ ಪುರಾಣ ಪುಣ್ಯ ಕತೆ ತಿಳಿಯೋಣ.
ಶ್ರಾವಣ ಮಾಸವು ಶಿವನಿಗೆ ಅತ್ಯಂತ ಪ್ರಿಯವಾದುದು. ಶ್ರಾವಣ ಮಾಸದಲ್ಲಿ ಯಾರು ಶಿವನನ್ನು ಮನಃಪೂರ್ವಕವಾಗಿ ಪೂಜಿಸುತ್ತಾರೋ ಅವರ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ಶುಭ ಫಲಗಳು ಲಭಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ ನೀವೂ ಈ ಶ್ರಾವಣ ಮಾಸದಲ್ಲಿ ಭಗವಾನ್ ಶಿವನ ಆಶೀರ್ವಾದ ಪಡೆಯಲು ಬಯಸಿದರೆ, ಶೀಘ್ರದಲ್ಲೇ ನಿಮ್ಮ ಕುಟುಂಬದೊಂದಿಗೆ ಓಂಕಾರೇಶ್ವರ ಜ್ಯೋತಿರ್ಲಿಂಗ ದರ್ಶನ ಮಾಡಲು ಯೋಜನೆ ರೂಪಿಸಿ.
ದೇಶದ 12 ಜ್ಯೋತಿರ್ಲಿಂಗಗಳಲ್ಲೊಂದಾದ ಓಂಕಾರೇಶ್ವರ ಜ್ಯೋತಿರ್ಲಿಂಗವು ಮಧ್ಯಪ್ರದೇಶದ ಇಂದೋರ್ ನಗರದ ಪವಿತ್ರ ನರ್ಮದಾ ನದಿಯ ದಡದಲ್ಲಿದೆ. ಶ್ರಾವಣ ಮಾಸದಲ್ಲಿ ದೂರದೂರುಗಳಿಂದ ಭಕ್ತರು ಇಲ್ಲಿಗೆ ಆಗಮಿಸಿ ಶಿವನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಓಂಕಾರೇಶ್ವರ ಜ್ಯೋತಿರ್ಲಿಂಗವನ್ನು ಎರಡು ರೂಪಗಳಾಗಿ ವಿಂಗಡಿಸಲಾಗಿದೆ- ಓಂಕಾರೇಶ್ವರ ಮತ್ತು ಅಮಲೇಶ್ವರ. ಅವುಗಳನ್ನು ವಿಧಿವಿಧಾನಗಳೊಂದಿಗೆ ಪೂಜಿಸಲಾಗುತ್ತದೆ. ಓಂಕಾರೇಶ್ವರ ಜ್ಯೋತಿರ್ಲಿಂಗವನ್ನು ಶಿವಪುರಾಣದಲ್ಲಿ ಪರಮೇಶ್ವರ ಲಿಂಗ ಎಂದೂ ಕರೆಯಲಾಗಿದೆ.
ಪುರಾಣ ದಂತಕಥೆ(Mythology Legend)
ಒಮ್ಮೆ ಋಷಿ ನಾರದ ಮುನಿಯು ಸುತ್ತಾಡುತ್ತಾ ವಿಂಧ್ಯ ಪರ್ವತವನ್ನು ತಲುಪಿದರು. ಅಲ್ಲಿ ಅವರನ್ನು ಸಡಗರ ಸಂಭ್ರಮದಿಂದ ಸ್ವಾಗತಿಸಲಾಯಿತು. ಆಗ ಅಲ್ಲಿನ ಪರ್ವತ ರಾಜ ವಿಂಧ್ಯಾಚಲ ತನ್ನ ಬಗ್ಗೆ ತಾನೇ ಕೊಚ್ಚಿಕೊಳ್ಳತೊಡಗಿದನು. ತಾನು ಸಕಲ ಸದ್ಗುಣಗಳಿಂದ ಕೂಡಿದವನು, ಯಾವುದರಲ್ಲೂ ಕೊರತೆಯಿಲ್ಲದವನು ಎಂದು ಹೊಗಳಿಕೊಂಡನು. ನಾರದ ಮುನಿಯು ವಿಂಧ್ಯಾಚಲನ ಮಾತಿನಲ್ಲಿ ಅಹಂಕಾರವನ್ನು ಸ್ಪಷ್ಟವಾಗಿ ಕಂಡನು. ಮೊದಲೇ ನಾರದ ಮುನಿ ಎಂದರೆ ಅಹಂಕಾರ ನಾಶಕ. ಆತ ವಿಂಧ್ಯಾಚಲದ ಅಹಂಕಾರವನ್ನು ನಾಶ ಮಾಡಲೋಸುಗ- 'ನಿಮ್ಮ ಬಳಿ ಎಲ್ಲವೂ ಇದೆ, ಆದರೆ ಮೇರು ಪರ್ವತದ ಎತ್ತರವಿಲ್ಲ' ಎಂದು ಹೇಳಿದರು. 'ಮೇರು ಪರ್ವತವು ನಿಮಗಿಂತ ಬಹಳ ಎತ್ತರವಾಗಿದೆ, ಅದರ ಶಿಖರಗಳು ಎಷ್ಟು ಎತ್ತರವಾಗಿವೆ ಎಂದರೆ ಅವು ದೇವತೆಗಳ ಕ್ಷೇತ್ರವನ್ನು ತಲುಪಿವೆ, ನಿಮ್ಮ ಶಿಖರವು ಅಲ್ಲಿಗೆ ಎಂದಿಗೂ ತಲುಪುವುದಿಲ್ಲ' ಎಂದು ಹೇಳಿದರು.
ಜ್ಯೋತಿರ್ಲಿಂಗ ಸರಣಿ: ಸ್ಮಶಾನ ಭೂಮಿಯಲ್ಲಿ ಕೂತ ದಕ್ಷಿಣಮುಖಿ ಮಹಾಕಾಳೇಶ್ವರ, ಇಲ್ಲಿ ರಾತ್ರಿ ಕಳೆದೋರ ಅಧಿಕಾರ ಪತನ!
ಇಷ್ಟೆಲ್ಲ ಹೇಳಿ ನಾರದ ಮುನಿ ಹೊರಟು ಹೋದರು. ಅವರ ಮಾತುಗಳನ್ನು ಕೇಳಿ ವಿಂಧ್ಯಾಚಲನಿಗೆ ಬಹಳ ದುಃಖವಾಯಿತು. ಅವನು ತನ್ನನ್ನು ಅವಮಾನಿತನೆಂದು ಪರಿಗಣಿಸಿದನು. ವಿಂಧ್ಯಾಚಲ ಶಿವನನ್ನು ಆರಾಧಿಸಲು ನಿರ್ಧರಿಸಿದನು. ಮಣ್ಣಿನಿಂದ ಶಿವಲಿಂಗವನ್ನು ಮಾಡಿ ಶಿವನನ್ನು ನೆನೆದು ತಪಸ್ಸು ಮಾಡಲು ಪ್ರಾರಂಭಿಸಿದನು. ವಿಂಧ್ಯಾಚಲ ಹಲವಾರು ತಿಂಗಳ ಕಾಲ ನಿರಂತರವಾಗಿ ಶಿವನನ್ನು ಪೂಜಿಸಿದನು. ಅವನ ಕಠಿಣ ತಪಸ್ಸಿಗೆ ಶಿವನು ಸಂತುಷ್ಟನಾಗಿ ಎರಡು ರೂಪಗಳಲ್ಲಿ ಪ್ರಕ್ಯಕ್ಷನಾದನು- ಓಂಕಾರೇಶ್ವರ ಮತ್ತು ಅಮಲೇಶ್ವರ. ವಿಂಧ್ಯಾಚಲನು ಮಣ್ಣಿನಿಂದ ತಯಾರಿಸಿದ ಶಿವ ಓಂ ರೂಪದಲ್ಲಿದ್ದಿದ್ದರಿಂದ ಈ ಪರ್ವತದಲ್ಲಿ ನೆಲೆಗೊಂಡ ಜ್ಯೋತಿರ್ಲಿಂಗವನ್ನು ಓಂಕಾರೇಶ್ವರ ಎಂದು ಕರೆಯಲಾಯಿತು. ]
ಈ ಜ್ಯೋತಿರ್ಲಿಂಗದ ಮಹಿಮೆಯನ್ನು ಶಿವಪುರಾಣದಲ್ಲಿ ವಿವರವಾಗಿ ವಿವರಿಸಲಾಗಿದೆ. ಓಂಕಾರೇಶ್ವರನ ದರ್ಶನ ಮಾತ್ರದಿಂದ ಮಾನವನ ಎಲ್ಲ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ.
ಜ್ಯೋತಿರ್ಲಿಂಗ ಸರಣಿ: ಪರ್ವತದ ಕೋರಿಕೆ ಈಡೇರಿಸಲು ಉದ್ಭವವಾದ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ..
ತಲುಪುವುದು ಹೇಗೆ?
ಅಮಲೇಶ್ವರ (ಪ್ರಾಚೀನ ಹೆಸರು ಅಮರೇಶ್ವರ) ದೇವಾಲಯವು ನರ್ಮದೆಯ ದಕ್ಷಿಣ ದಂಡೆಯ ಮೇಲಿದೆ. ಈ ಜ್ಯೋತಿರ್ಲಿಂಗವು ಇಂದೋರ್-ಖಾಂಡ್ವಾ ಹೆದ್ದಾರಿಯಲ್ಲಿ ಖಾಂಡ್ವಾದಿಂದ 75 ಕಿಮೀ ದೂರದಲ್ಲಿದೆ. ಅದ್ವೈತದ ಸಂಸ್ಥಾಪಕ ಆದಿಗುರು ಶಂಕರಾಚಾರ್ಯರ ಗುರು ಗೋವಿಂದ್ ಜಿ ಅವರ ಗುಹೆಗಳು, ಸಿದ್ಧನಾಥನ ಭವ್ಯವಾದ ದೇವಾಲಯದ ಅವಶೇಷಗಳು, ಗೌರಿ ಸೋಮನಾಥ ದೇವಾಲಯ, ಋಣಮುಕ್ತೇಶ್ವರ ದೇವಾಲಯಗಳು ಇಲ್ಲಿವೆ. ಜೈನ ಧರ್ಮದ ತೀರ್ಥಕ್ಷೇತ್ರವಾದ ಸಿದ್ಧವರಕೂಟ್ ಕೂಡ ಇಲ್ಲಿಗೆ ಸಮೀಪದಲ್ಲಿದೆ. ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವೆಂದರೆ ಇಂದೋರ್‌ನಲ್ಲಿರುವ ದೇವಿ ಅಹಲ್ಯಾಬಾಯಿ ಹೋಳ್ಕರ್. ಅಲ್ಲಿಂದ ಈ ದೇವಾಲಯದ ದೂರ 84 ಕಿ.ಮೀ. ಓಂಕಾರೇಶ್ವರ ದೇವಸ್ಥಾನಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಇಂದೋರ್ ಮತ್ತು ಖಾಂಡ್ವಾ, ಇಲ್ಲಿಂದ ಭಕ್ತರು ಟ್ಯಾಕ್ಸಿ ಮೂಲಕ ಈ ಜ್ಯೋತಿರ್ಲಿಂಗವನ್ನು ತಲುಪಬಹುದು.