ವಿಜಯಪುರ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಇಲ್ಲದೆ ರೈತರು, ಜನ-ಜಾನುವಾರು ಹೈರಾಣಾಗಿವೆ. ಈ ನಡುವೆ ಜನರು ಮಳೆಗಾಗಿ ಮೊರೆ ಇಡ್ತಿದ್ದಾರೆ.
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂ.30): ಈ ವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಮಳೆಯಾಗಿಲ್ಲ. ಅದ್ರಲ್ಲೂ ಬಸವನಾಡು ವಿಜಯಪುರ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಇಲ್ಲದೆ ರೈತರು, ಜನ-ಜಾನುವಾರು ಹೈರಾಣಾಗಿವೆ. ಈ ನಡುವೆ ಜನರು ಮಳೆಗಾಗಿ ಮೊರೆ ಇಡ್ತಿದ್ದಾರೆ. ತರಹೇವಾರಿ ತೀರಿಯಲ್ಲಿ ಆಚರಣೆಗಳನ್ನ ನಡೆಸಿ ಮಳೆಗಾಗಿ ದೇವರಲ್ಲಿ ಬೇಡಿಕೊಳ್ತಿದ್ದಾರೆ. ಈ ನಡುವೆ ಈ ಬಾರಿ ಮಳೆಯಾಗುತ್ವಾ? ಇಲ್ವಾ ಎನ್ನುವುದರ ಬಗ್ಗೆ ರೈತರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ವಿಜಯಪುರ ಜಿಲ್ಲೆಯ ಅದೊಂದು ಗ್ರಾಮದ ಜನರು ಮಳೆಗಾಗಿ ಭವಿಷ್ಯದ ಮೊರೆ ಹೋಗಿದ್ದಾರೆ. ಮಳೆಯಾಗುತ್ವಾ ಇಲ್ವಾ?, ಯಾವಾಗ ಮಳೆಯಾಗಬಹುದು ಎನ್ನುವ ಬಗ್ಗೆ ವಿಚಿತ್ರ ರೀತಿಯಲ್ಲಿ ಭವಿಷ್ಯ ಕೇಳಿದ್ದಾರೆ.
ಮಳೆಯ ಭವಿಷ್ಯ ತಿಳಿಯಲು ವಿಚಿತ್ರ ಪೂಜೆ!
ಸಾಮಾನ್ಯವಾಗಿ ಮಳೆಗಾಗಿ ಬೊಂಬೆ ಮದುವೆ. ಕತ್ತೆಗಳ ಮದುವೆ, ಕಪ್ಪೆಗಳ ಮದುವೆ ಮಾಡುವುದನ್ನಾ ಎಲ್ಲೆಡೆ ನೋಡಿದ್ದೇವೆ. ಜೊತೆಗೆ ಗುರ್ಜಿ ಪೂಜೆಯನ್ನೂ ಮಾಡುವುದು ವಾಡಿಕೆ. ಇವುಗಳ ಹೊರತಾಗಿ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಮುಂದಿನ ಮಳೆಯ ಬಗ್ಗೆ ತಿಳಿದುಕೊಳ್ಳಲು ಗ್ರಾಮಸ್ಥರು ವಿಶೇಷ ಪೂಜೆಯೊಂದನ್ನ ನಡೆಸಿದ್ದಾರೆ. ತಾಮ್ರದ ಕೊಡದ ಪೂಜೆ ಮಾಡುವ ಮೂಲಕ ಮಳೆಯ ಭವಿಷ್ಯ ಆಲಿಸಿದ್ದಾರೆ. ಹಲವಾರು ವರ್ಷಗಳಿಂದ ಉಕ್ಕಲಿ ಗ್ರಾಮದ ಗುರು ಹಿರಿಯರು ಹಾಗೂ ಸರ್ವ ಧರ್ಮೀಯರು ಸೇರಿಕೊಂಡು ಮಳೆಗಾಗಿ ತಾಮ್ರದ ಕೊಡದ ಪೂಜೆ ಮಾಡುತ್ತಾರೆ.
HSRP Scam: ಹಳಿ ತಪ್ಪಿದ ಅತೀ ಸುರಕ್ಷಾ ನೋಂದಣಿ ಫಲಕ ಯೋಜನೆ, ಏನಿದು
ತಾಮ್ರದ ಕೊಡಕ್ಕೆ ಪೂಜೆ, ಮಳೆಗಾಗಿ ಪ್ರಾರ್ಥನೆ
ಮೊದಲು ತಾಮ್ರದ ಕೊಡದೊಂದಿಗೆ ಗ್ರಾಮದ ಅವ್ವಪ್ಪ ಮುತ್ಯಾದ ದೇವಸ್ಥಾನದ ಬಳಿಯ ಬಾವಿಗೆ ಐವರು ತಾಮ್ರದ ಕೊಡಗಳನ್ನು ತೆಗೆದುಕೊಂಡು ಹೋಗುತ್ತಾರೆ. ಬಾವಿಯ ಬಳಿ ಮೈಮೇಲೆ ನೀರು ಹಾಕಿಕೊಂಡು ತಾಮ್ರದ ಕೊಡಗಳಲ್ಲಿ ನೀರು ತುಂಬಿಕೊಂಡು ಗ್ರಾಮದ ಅಲ್ಲಾಭಕ್ಷ ದರ್ಗಾದ ಆವರಣದಲ್ಲಿ ಜಮಾವಣೆಯಾಗುತ್ತಾರೆ. ಅಲ್ಲಾಭಕ್ಷ ದರ್ಗಾದ ಆವರಣದಲ್ಲಿ ಹಸುವಿನ ಸಗಣಿಯಿಂದ ನೆಲವನ್ನು ಸಾರಿಸಿ ಅದರ ಮೇಲೆ ಜೋಳದ ಕಾಳುಗಳನ್ನು ಹಾಕುತ್ತಾರೆ. ಜೋಳದ ಕಾಳುಗಳ ಮೇಲೆ ಒಂದು ನೀರು ತುಂಬಿದ್ದ ತಾಮ್ರದ ಕೊಡವನ್ನು ಇಟ್ಟು ಪೂಜೆ ಮಾಡುತ್ತಾರೆ. ಪೂಜೆಯ ಬಳಿಕ ಐವರು ಪೂಜೆ ಸಲ್ಲಿಸಿದ ತಾಮ್ರದ ಕೊಡವನ್ನು ಹಿಡಿಯುತ್ತಾ ಪ್ರಾರ್ಥನೆ ಮಾಡುತ್ತಾರೆ.
ಮಳೆಯ ಭವಿಷ್ಯ ಹೇಳುವ ತಾಮ್ರದ ಕೊಡ!
ತಾಮ್ರದ ಕೊಡ ಇಲ್ಲಿ ಭವಿಷ್ಯವನ್ನ ಹೇಳುತ್ತೆ. ತಾಮ್ರದ ಕೊಡಕ್ಕೆ ಪೂಜೆ-ಪುನಸ್ಕಾರ ನಡೆಸಲಾಗುತ್ತೆ. ಪೂಜೆಯ ಬಳಿಕ ವಿಶೇಷ ರೀತಿಯಲ್ಲಿ ತಾಮ್ರದ ಕೊಡದ ಬಳಿಕ ಭವಿಷ್ಯವನ್ನ ಕೇಳಲಾಗುತ್ತೆ. ಮಳೆಯಾಗುತ್ತದೆ ಎಂದು ಭವಿಷ್ಯ ಬಂದರೆ ತಾಮ್ರದ ಕೊಡವು ತನ್ನಿಂದ ತಾನೇ ತಿರುಗಳು ಆರಂಭವಾಗುತ್ತದೆ. ಆಗ ಗ್ರಾಮದ ಮುಖಂಡ ಪರಮಾನಂದ ಬಿರಾದಾರ್ ಒಂದೊಂದೆ ಮಳೆಯ ಹೆಸರನ್ನು ಹೇಳುತ್ತಾ ಹೋಗುತ್ತಾರೆ. ಪ್ರತಿಯೊಂದು ಮಳೆಯ ಹೆಸರು ಹೇಳಿದಾಗ ಗ್ರಾಮದ ಜನರೆಲ್ಲಾ ಪ್ರಾರ್ಥನೆ ಮಾಡುತ್ತಾರೆ. ಆಗ ಮತ್ತೇ ತಾಮ್ರದ ಕೊಡ ತಿರುತ್ತದೆ. ಯಾವ ಮಳೆಯ ಹೆಸರು ಹೇಳಿದಾಗ ತಾಮ್ರದ ಕೊಡ ತಿರುಗುವುದಿಲ್ಲವೋ ಆ ಮಳೆಯಾಗಲ್ಲಾ ಎಂಬ ನಂಬಿಕೆ ಇಲ್ಲಿದೆ.
60 ವರ್ಷಗಳಿಂದ ನಡೆದುಕೊಂಡು ಬಂದಿರುವ ಪದ್ಧತಿ!
ಮಳೆಯಾದ ವರ್ಷಗಳಲ್ಲಿ ತಾಮ್ರದ ಕೊಡದ ಪೂಜೆ ಮಾಡುವುದಿಲ್ಲಾ. ಮಳೆಯ ಕೊರತೆಯಾದ ವರ್ಷಗಳಲ್ಲಿ ತಾಮ್ರದ ಕೊಡ ಪೂಜೆ ಮಾಡುವ ಮೂಲಕ ಮಳೆಯ ಆಹ್ವಾನ ಹಾಗೂ ಮುಂದಿನ ಮಳೆಗಳ ಭವಿಷ್ಯವನ್ನು ಇಲ್ಲಿ ಕೇಳುತ್ತಾರೆ. ಇಂಥ ಪದ್ದತಿ ಕಳೆದ 60 ರಿಂದ 70 ವರ್ಷಗಳಿಂದಲೂ ಉಕ್ಕಲಿ ಗ್ರಾಮದಲ್ಲಿ ನಡೆದುಕೊಂಡು ಬಂದಿದೆ. ಬರದ ಛಾಯೆ ಆವರಿಸಿದಾಗ ಉಕ್ಕಲಿ ಗ್ರಾಮದ ಹಿರಿಯರು ತಾಮ್ರದ ಕೊಡದ ಮೂಲಕ ಪೂಜೆ ಮಾಡುತ್ತಾರೆ.
ನೇತ್ರಾವತಿ ಪೀಕ್ ಸ್ಪಾಟ್ ಚಾರಣ ಹೋಗಿದ್ದ ಮೈಸೂರು ಯುವಕ ಹೃದಯಘಾತದಿಂದ ಸಾವು
ವೇಗವಾಗಿ ತಿರುಗಿದಷ್ಟು ಮಳೆ ಜಾಸ್ತಿ!
ಪೂಜೆ ಬಳಿಕ ತಾಮ್ರದ ಕೊಡ ಎಷ್ಟು ವೇಗವಾಗಿ ತಿರುತ್ತದೆಯೋ ಅಷ್ಟು ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಈಗಾ ಆರಿದ್ರಾ ಮಳೆಯಿದ್ದು ಈ ಮಳೆಯೂ ಆಗುತ್ತದೆ ಎಂಬುದಕ್ಕೆ ತಾಮ್ರದ ಕೊಡ ತಿರುಗಿದ್ದೇ ಸಾಕ್ಷಿಯಾಗಿದೆ. ಆರಿದ್ರ ಮಳೆಯ ಬಳಿಕ ಇತರೆ ಎಲ್ಲಾ ಮಳೆಗಳು ಆಗುತ್ತವೆ ಎಂಬುದು ಪೂಜೆಯಲ್ಲಿ ಕಂಡು ಬಂದಿದೆ. ಮುಂಬರುವ ಮಳೆಯ ಹೆಸರು ಹೇಳಿ ಪ್ರಾರ್ಥನೆ ಮಾಡಿದಾಗ ತಾಮ್ರದ ಕೊಡ ತಿರುಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಗ್ರಾಮದ ಜನರು ನಂಬಿದ್ದಾರೆ.
ಜಾತಿ ಭೇದವಿಲ್ಲದೆ ನಡೆಯುತ್ತೆ ಆಚರಣೆ
ಇನ್ನು ಮಳೆಗಾಗಿ ಈ ರೀತಿ ತಾಮ್ರದ ಕೊಡಗಳ ಮೂಲಕ ಪೂಜೆಯನ್ನು ಉಕ್ಕಲಿ ಗ್ರಾಮದಲ್ಲಿ ಯಾವುದೇ ಜಾತಿಬೇಧ ಭಾವವಿಲ್ಲದೇ ಮಾಡಲಾಯಿತು. ಮಳೆಯ ಆಹ್ವಾನಕ್ಕೆ ಹಿಂದೂ ಮುಸ್ಲೀಂ ಸಮುದಾಯದ ಜನರು ಭಾಗಿಯಾಗಿದ್ದರು. ಗ್ರಾಮದ ಅವ್ವಪ್ಪ ಮುತ್ಯಾರ ದೇವಸ್ಥಾನದ ಬಳಿಯ ಬಾವಿಯ ನೀರು ತಂದು ಅದನ್ನು ಅಲ್ಲಾಭಕ್ಷ ದರ್ಗಾದ ಆವರಣದಲ್ಲಿ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದು ಭಾವೈಕ್ಯತೆಗೆ ಸಾಕ್ಷಿಯಾಗಿತ್ತು.