
ಶಿವಾಲ (ಆ.02) ದೇಶದಲ್ಲೆಡೆ ವಿಜಯದಶಮಿ ಹಬ್ಬದ ಸಂಭ್ರಮ. ಇಂದು ಲಂಕೆಯಲ್ಲಿ ರಾವಣನೊಂದಿಗೆ ಯುದ್ಧ ಜಯಿಸಿದ ಶ್ರೀರಾಮ, ಪತ್ನಿ ಸೀತಾ ದೇವಿಯೊಂದಿಗೆ ಆಯೋಧ್ಯೆಗೆ ಮರಳಿದ ದಿನ. ಈ ವಿಜಯೋತ್ಸವವನ್ನು ಭಾರತದೆಲ್ಲೆಡೆ ದಸರಾ ಹಬ್ಬವಾಗಿ ಆಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ರಾವಣನ ಪ್ರತಿಕೃತಿ ದಹಿಸಿ ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ. ಆದರೆ ಭಾರತದ ಈ ಗ್ರಾಮದಲ್ಲಿ ರಾವಣನಿಗೆ ದೇಗುಲವಿದೆ. ಇಲ್ಲಿ ರಾವಣನ ಪ್ರತಿಕೃತಿ ದಹನ ಆಚರಣೆ ಇಲ್ಲ. ಈ ದೇವಸ್ಥಾನದಲ್ಲಿ ರಾವಣನ ಪೂಜೆ ನಡೆಯುತ್ತಿದೆ. ಮತ್ತೊಂದು ವಿಶೇಷ ಅಂದರೆ ವರ್ಷದಲ್ಲಿ ಕೇವಲ ವಿಜಯದಶಮಿ ದಿನ ಮಾತ್ರ ಈ ದೇಗುಲ ತೆರೆಯಲಾಗುತ್ತದೆ. ಈ ದೇಗುಲವಿರುವುದು ಉತ್ತರ ಪ್ರದೇಶದ ಕಾನ್ಪುರದ ಶಿವಾಲದಲ್ಲಿ.
ಶಿವಾಲದಲ್ಲಿರುವ ರಾವಣ ಮಂದಿರ ವರ್ಷದಲ್ಲಿ ಒಂದು ದಿನ ಮಾತ್ರ ತೆರೆಯಲಿದೆ. ಇಡೀ ದೇಶವೇ ರಾವಣನ ಪ್ರತಿಕೃತಿ ದಹಿಸಿ ವಿಜಯದಶಮಿ ಹಬ್ಬ ಆಚರಿಸುತ್ತಿದ್ದರೆ, ಈ ದೇಗುಲದಲ್ಲಿ ರಾವಣನ ಪೂಜೆ ನಡೆಯಲಿದೆ. ವಿಜಯದಶಮಿ ದಿನ ಬೆಳಗ್ಗೆ 6.30 ರಿಂದ ರಾತ್ರಿ 8.30ರವರೆಗೆ ಈ ದೇಗುಲ ತೆರೆಯುತ್ತದೆ. ಈ ವೇಳೆ ರಾವಣನ ದರ್ಶನ ಸಿಗಲಿದೆ. 8.30ರ ಸುಮಾರಿಗೆ ದೇಶದೆಲ್ಲೆಡೆ ರಾವಣನ ಪ್ರತಿಕೃತಿ ದಹಿಸಿ ವಿಜಯದಶಮಿ ಹಬ್ಬ ಆಚರಿಸಲಾಗುತ್ತದೆ. ಇ ವೇಳೆ ಈ ರಾವಣನ ಮಂದಿರದ ಬಾಗಿಲು ಮುಚ್ಚಲಾಗುತ್ತದೆ.
ವಿಜಯದಶಮಿ ದಿನ ಮಹಿಳೆಯರು ರಾವಣ ದೇಗುಲಕ್ಕೆ ತೆರಳಿ ಸಾಸಿವೆ ಎಣ್ಣೆಯಲ್ಲಿ ದೀಪ ಹಚ್ಚುತ್ತಾರೆ. ಬಳಿಕ ಹೀರೆಕಾಯಿಯನ್ನು ಕಾಣಿಕೆಯಾಗಿ ಅರ್ಪಿಸುತ್ತಾರೆ. ಬೆಳಗ್ಗೆ ರಾವಣನ ಹುಟ್ಟುಹಬ್ಬವನ್ನು ಆಚರಿಸುತ್ತಾರೆ. ಸಂಜೆ ಇದೇ ಗ್ರಾಮದ ಅಕ್ಕ ಪಕ್ಕ ರಾವಣ ದಹನ ಮಾಡಿ ವಿಜಯದಶಮಿ ಆಚರಿಸುತ್ತಾರೆ. ವಿಜಯ ದಶಮಿ ದಿನ ಸಾವಿರಕ್ಕೂ ಹೆಚ್ಚು ಭಕ್ತರು ಈ ದೇಗುಲಕ್ಕೆ ಭೇಟಿ ನೀಡುತ್ತಾರೆ. ರಾವಣನನ್ನು ಗ್ರಾಮ ದೇವರಾಗಿ ಪೂಜಿಸುತ್ತಾರೆ ಎಂದು ಸ್ಥಳೀಯರು ಹೇಳುತ್ತಾರೆ.
ಈ ಗ್ರಾಮದ ಜನರಿಗೆ ರಾವಣನ ಶಕ್ತಿ ಹಾಗೂ ಸಾಮರ್ಥ್ಯದ ಬಗ್ಗೆ ಗೌರವವಿದೆ. ಆದರೆ ರಾವಣ ತನ್ನ ಶಕ್ತಿ ಸಾಮರ್ಥ್ಯವನ್ನು ದುರುಪಯೋಗ ಪಡಿಸಿಕೊಂಡ ಕಾರಣ ಶ್ರೀರಾಮನ ಜೊತೆಗಿನ ಯುದ್ಧದಲ್ಲಿ ಸೋಲು ಅನುಭವಿಸಬೇಕಾಯಿತು. ಸತ್ಯ,ನ್ಯಾಯದ ಮಾರ್ಗದಲ್ಲಿ ನಡೆದ ಶ್ರೀರಾಮ, ಸೀತಾ ದೇವಿಯನ್ನು ಮರಳಿ ಕರೆತಂದ ಸುದಿನ ಎಂದು ಗ್ರಾಮಸ್ಥರು ಪುರಾಣ ಕತೆಯನ್ನು ಬಿಚ್ಚಿಡುತ್ತಾರೆ.
ಭಾರತದಲ್ಲಿ ರಾವಣನಿಗೆ ಇದೊಂದೇ ದೇವಸ್ಥಾನವಲ್ಲ. ಹಲವೆಡೆ ರಾವಣನ ದೇವಸ್ಥಾನಗಳಿವೆ. ಆದರೆ ಶಿವಾಲದ ರಾವಣನ ದೇಗಲು ವರ್ಷದಲ್ಲಿ ಒಂದೇ ದಿನ ತೆರೆಯುವ ಕಾರಣ ವಿಶೇಷವಾಗಿದೆ.