
ಅಡುಗೆ ಮನೆಯಲ್ಲಿ ದಿನನಿತ್ಯ ಬಳಸುವ ಪದಾರ್ಥಗಳು ಖಾಲಿಯಾಗೋದು ಸಾಮಾನ್ಯ. ಉಪ್ಪು, ಸಕ್ಕರೆ, ಎಣ್ಣೆ, ಹುಣಸೆಹಣ್ಣು ಹೀಗೆ ಒಂದೊಂದೇ ಪದಾರ್ಥಗಳು ಖಾಲಿಯಾಗ್ತಿರುತ್ವೆ. ಆದರೆ ವಾಸ್ತು ಶಾಸ್ತ್ರ ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಅಡುಗೆ ಮನೆಯಲ್ಲಿರುವ ಎರಡು ಪ್ರಮುಖ ಪದಾರ್ಥಗಳ ಡಬ್ಬವನ್ನು ಎಂದಿಗೂ ಸಂಪೂರ್ಣ ಖಾಲಿ ಬಿಡಬಾರದು. ಆ ಎರಡು ಪದಾರ್ಥಗಳು ಯಾವುವು? ಅವುಗಳನ್ನು ಹೇಗೆ ಇಟ್ಟುಕೊಳ್ಳಬೇಕು? ಇಲ್ಲಿದೆ ಮಾಹಿತಿ.
ಅಡುಗೆ ಮನೆಯಲ್ಲಿ ಉಪ್ಪಿಗೆ ವಿಶೇಷ ಮಹತ್ವವಿದೆ. ವಾಸ್ತು ಮತ್ತು ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ಉಪ್ಪಿನ ಡಬ್ಬ ಸಂಪೂರ್ಣ ಖಾಲಿಯಾಗಬಾರದು. ಉಪ್ಪು ಖಾಲಿಯಾಗುವ ಮೊದಲೇ ಹೊಸ ಉಪ್ಪನ್ನು ತುಂಬಿಸಬೇಕು. ವಿಶೇಷವಾಗಿ ಮಂಗಳವಾರ ಮತ್ತು ಶುಕ್ರವಾರ ಉಪ್ಪಿನ ಡಬ್ಬವನ್ನು ಖಾಲಿ ಬಿಡದೆ ತುಂಬಿಸಿಡುವುದು ಶುಭ ಎಂಬ ನಂಬಿಕೆಯಿದೆ.
ಇನ್ನು ಉಪ್ಪನ್ನು ಪಿಂಗಾಣಿ ಡಬ್ಬದಲ್ಲಿ ಸಂಗ್ರಹಿಸಿಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಉಪ್ಪಿನ ಡಬ್ಬದಲ್ಲಿ ನಾಲ್ಕು ಲವಂಗಗಳನ್ನು ಹಾಕಿಡುವ ಪದ್ಧತಿಯೂ ಇದೆ. ಹೀಗೆ ಮಾಡುವುದರಿಂದ ಮನೆಯಲ್ಲಿನ ನಕಾರಾತ್ಮಕ ಶಕ್ತಿ ದೂರವಾಗಿ, ಸಕಾರಾತ್ಮಕ ವಾತಾವರಣ ನೆಲೆಸುತ್ತದೆ. ಮನೆಯಲ್ಲಿ ಹಣಕಾಸಿನ ಕೊರತೆ ಉಂಟಾಗುವುದಿಲ್ಲ. ಸದಾ ಸಂಪತ್ತು ತುಂಬಿರುತ್ತದೆ.
ಅಡುಗೆಯಲ್ಲಿ ಹುಣಸೆಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿರುವ ಹುಣಸೆಹಣ್ಣಿನ ಡಬ್ಬವನ್ನೂ ಸಂಪೂರ್ಣ ಖಾಲಿ ಮಾಡಬಾರದು. ಅನೇಕ ಬಾರಿ ಡಬ್ಬ ಖಾಲಿಯಾಗ್ತಿದ್ದಂತೆ ನಾಳೆ ತುಂಬಿಸಿದ್ರಾಯ್ತು ಅಂತ ಹಾಗೇ ಬಿಡ್ತೇವೆ. ಆದ್ರೆ ಆ ತಪ್ಪನ್ನು ಮಾಡಬೇಡಿ. ಡಬ್ಬ ಖಾಲಿಯಾಗುವ ಮೊದಲೇ ಹೊಸ ಹುಣಸೇ ಹಣ್ಣನ್ನು ಡಬ್ಬಕ್ಕೆ ಸೇರಿಸಿ. ಹುಣಸೆಹಣ್ಣನ್ನು ಗಾಜಿನ ಪಾತ್ರೆ ಅಥವಾ ಪಿಂಗಾಣಿ ಡಬ್ಬದಲ್ಲಿ ಸಂಗ್ರಹಿಸಿಡುವ ಅಭ್ಯಾಸ ಮಾಡಿಕೊಳ್ಳಬೇಕು. ಹುಣಸೆಹಣ್ಣಿನ ಡಬ್ಬ ಖಾಲಿಯಾಗದಂತೆ ನೋಡಿಕೊಳ್ಳುವುದು ಮನೆಯಲ್ಲಿ ಸಮೃದ್ಧಿ ಮತ್ತು ನೆಮ್ಮದಿ ನೆಲೆಸಲು ಶುಭ ಸಂಕೇತ ಎಂಬ ನಂಬಿಕೆಯಿದೆ.
ಈ ಸಣ್ಣ ಸಂಗತಿಗಳ ಬಗ್ಗೆ ಗಮನವಿರಲಿ
ಅಡುಗೆ ಮನೆ ಎನ್ನುವುದು ಮನೆಯ ಸಮೃದ್ಧಿ ಮತ್ತು ಆರೋಗ್ಯದ ಸಂಕೇತ. ಹಾಗಾಗಿ ಅಡುಗೆ ಮನೆಯಲ್ಲಿ ಅಗತ್ಯ ಪದಾರ್ಥಗಳನ್ನು ಯಾವಾಗಲೂ ಸಾಕಷ್ಟು ಪ್ರಮಾಣದಲ್ಲಿ ಇಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಳ್ಳಿ. ವಾಸ್ತು ನಂಬಿಕೆಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಸುಖ , ಶಾಂತಿ ನೆಲೆಸುತ್ತದೆ.