ಅಮೇರಿಕಾದಲ್ಲಿರುವ ಪುತ್ತಿಗೆ ಶ್ರೀಗಳು, ಭಕ್ತ ಜನರ ಅಪೇಕ್ಷೆಯ ಮೇರೆಗೆ ಆಸ್ಟಿನ್ ಮಹಾನಗರಕ್ಕೆ ಆಗಮಿಸಿದ್ದರು. ಪೂಜ್ಯ ಶ್ರೀಪಾದರು ಇಲ್ಲಿನ ಜನರಿಗೆ ಅನುಕೂಲವಾಗಲು ಮುದ್ರಾಧಾರಣೆ ನಡೆಸಿಕೊಟ್ಟರು.
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ (ಜು.4): ಅಮೇರಿಕಾದ ಆಸ್ಟಿನ್ ಮಹಾನಗರದಲ್ಲಿಂದು ಭಕ್ತ ಜನರಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಮುದ್ರಾಧಾರಣೆ ನಡೆಯಿತು. ದೂರದ ಅಮೇರಿಕಾದಲ್ಲಿರುವ ಕೃಷ್ಣ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂತೋಷಪಟ್ಟರು.
ಸದ್ಯ ಅಮೇರಿಕಾದಲ್ಲಿರುವ ಪುತ್ತಿಗೆ ಶ್ರೀಗಳು, ಭಕ್ತ ಜನರ ಅಪೇಕ್ಷೆಯ ಮೇರೆಗೆ ಆಸ್ಟಿನ್ ಮಹಾನಗರಕ್ಕೆ ಆಗಮಿಸಿದ್ದರು. ಪೂಜ್ಯ ಶ್ರೀಪಾದರು ಕಳೆದ ಹಲವು ವರ್ಷಗಳಿಂದ ಇಲ್ಲಿಯ ಆಸ್ತಿಕ ಜನರಲ್ಲಿರುವ ಉತ್ಸಾಹ, ಭಕ್ತಿ ಭಾವಗಳನ್ನು ಗಮನಿಸಿ ಅವರ ಅಪೇಕ್ಷೆಯಂತೆ, ಅವರ ಸಾಧನೆಗಳಿಗೆ ಅನುಕೂಲವಾಗಲು ಮುದ್ರಾಧಾರಣೆ ನಡೆಸಿಕೊಟ್ಟರು. ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗವಂತೆ ಭವ್ಯ ಶ್ರೀಕೃಷ್ಣ ಮಂದಿರವನ್ನು ನಿರ್ಮಾಣ ಮಾಡುವ ಸಂಕಲ್ಪವನ್ನು ಕೂಡಾ ಇದೇ ವೇಳೆ ಘೋಷಿಸಿದರು.
ಇಲ್ಲಿನ ಭಕ್ತರಿಗೆ ಅನುಕೂಲವಾಗಲೆಂದು ಅರ್ಚಕರನ್ನೊಳಗೊಂಡಂತೆ ಶ್ರೀವೆಂಕಟಕೃಷ್ಣ ವೃಂದಾವನವನ್ನು ಪ್ರಾರಂಭಿಸಲು ಜಾಗವೊಂದನ್ನು ಆಯ್ಕೆ ಮಾಡಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ. ಆಸ್ಟಿನ್ ನಗರದ ಆಸ್ತಿಕ ಜನರು, ಶ್ರೀಗಳವರ ಈ ಮಹಾಕಾರ್ಯಕ್ಕೆ ತನು ಮನ ಧನ ಸಹಕಾರ ನೀಡಿ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ.
ಪುತ್ತಿಗೆ ಸ್ವಾಮೀಜಿ ವಿಶ್ವದಾದ್ಯಂತ ಶ್ರೀಕೃಷ್ಣ ಭಕ್ತಿ ಪ್ರಸಾರದಲ್ಲಿ ನಿರತರಾಗಿದ್ದಾರೆ. ಈ ಅಭಿಯಾನದ ಭಾಗವಾಗಿ ಅಮೇರಿಕದಲ್ಲಿ ಹತ್ತನೆಯ ಶ್ರೀಕೃಷ್ಣ ಮಂದಿರವು ಆಸ್ಟಿನ್ ನಗರದಲ್ಲಿ ಮೂಡಿಬಂದಂತಾಯಿತು ಎಂದು ಶ್ರೀಗಳು ಹೇಳಿದ್ದಾರೆ.
2024 ರ ಜನವರಿ 18ರಂದು ಉಡುಪಿ ಶ್ರೀಕೃಷ್ಣ ಪೂಜಾ ಪರ್ಯಾಯ ದೀಕ್ಷಿತರಾಗುವ ಪೂಜ್ಯ ಶ್ರೀಗಳವರು ಆಸ್ಟಿನ್ ನಲ್ಲಿ ದಶಮ ಮಂದಿರದ ನಿರ್ಮಾಣದ ಮೂಲಕ ಪರಿಪೂರ್ಣರಾದರೆಂದು ನಗರದ ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಬಿಜೆಪಿ ಮತ ಬ್ಯಾಂಕ್ ಲೆಕ್ಕಾಚಾರ, ಕಾಪುವಿನಲ್ಲಿ ಕಡಲು ಕೊರೆತ ನಿರಂತರ!
ಏನಿದು ಮುದ್ರಾಧಾರಣೆ?
ತಪ್ತ ಮುದ್ರಾಧಾರಣೆ ವೈಷ್ಣವ ಸಂಪ್ರದಾಯದ ಒಂದು ವಿಶಿಷ್ಟ ಆಚರಣೆ. ವಾರ್ಷಿಕ ಸಂಸ್ಕಾರವಾಗಿ ದೇಹದ ಮೇಲೆ ಮುದ್ರೆ ಹಾಕಿಸಿಕೊಳ್ಳಲಾಗುತ್ತೆ. ಆಚಾರ್ಯ ಮಧ್ವರ ಕಾಲದಿಂದ ಅಂದರೆ ಎಂಟ್ನೂರು ವರ್ಷಗಳಿಂದ ಈ ಆಚರಣೆ ಚಾಲ್ತಿಯಲ್ಲಿದೆ. ಉಡುಪಿ ಶ್ರೀ ಕೃಷ್ಣಮಠದಲ್ಲೂ ಸಾವಿರಾರು ಮಂದಿ ಪರ್ಯಾಯ ಮಠಾಧೀಶರಿಂದ ಮುದ್ರಾಧಾರಣೆ ಮಾಡಿಸಿಕೊಳ್ಳುತ್ತಾರೆ. ಕೇವಲ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡುವ ಅಧಿಕಾರವಿದೆ. ನಾವು ದೇವರ ಪಕ್ಷದವರು ಎಂಬುದರ ಸಂಕೇತವಾಗಿ ವೈಷ್ಣವ ಚಿಹ್ನೆಗಳನ್ನು ಮೈಮೇಲೆ ಧರಿಸುವದು ಈ ಆಚರಣೆಯ ವಿಶೇಷ.
ಭಗವಂತನ ಕುರಿತಾದ ಶೃದ್ಧೆಯನ್ನು ಪ್ರಕಟಿಸುವುದು ಮುದ್ರಾಧಾರಣೆಯ ಮೂಲ ಉದ್ದೇಶ. ಸುದರ್ಶನ ಹೋಮವನ್ನು ನಡೆಸಿ, ಶಂಖ ಮತ್ತು ಚಕ್ರದ ಮುದ್ರೆಯನ್ನು ಅದರ ಶಾಖದಲ್ಲಿರಿಸಲಾಗುತ್ತೆ. ಬಳಿಕ ಆ ಚಿಹ್ನೆಗಳನ್ನು ಮಠಾಧೀಶರ ಮೂಲಕ ಮೈ ಮೇಲೆ ಹಾಕಿಸಿಕೊಳ್ಳಲಾಗುತ್ತೆ. ದೇವತೆಗಳು ಕೂಡಾ ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ, ಶ್ರೀ ಮಧ್ವಾಚಾರ್ಯರು ಸ್ವರ್ಗದಲ್ಲಿ ಅವರಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ನಂಬಿಕೆಯಿದೆ.
ಅಂದು ಶಾನುಭೋಗರು ಇಂದು ಲೆಕ್ಕಪರಿಶೋಧಕರು, Udupiಯಲ್ಲೊಂದು CA ಕುಟುಂಬ!
ಮುದ್ರಾಧಾರಣೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅನ್ನೋದು ಜನರ ವಿಶ್ವಾಸ, ಮಳೆಗಾಲದಲ್ಲಿ ಬಾಧಿಸುವ ಎಲ್ಲಾ ಬಗೆಯ ಚರ್ಮ ವ್ಯಾದಿಗಳಿಗೆ ಈ ಲೋಹಮುದ್ರೆಯಿಂದ ಪರಿಹಾರ ಕಾಣಬಹುದು ಅನ್ನೋದು ಭಕ್ತರ ಅಭಿಮತ.ಇದೀಗ ಅಮೆರಿಕದಲ್ಲೂ ಮುದ್ರಾ ಧಾರಣೆಯನ್ನು ನಡೆಸುವ ಮೂಲಕ, ವಿದೇಶಗಳಲ್ಲಿರುವ ಭಕ್ತರಿಗೂ, ಕೃಷ್ಣ ಭಕ್ತಿಯ ವಿಚಾರದಲ್ಲಿ ಅನಾಥ ಪ್ರಜ್ಞೆ ಕಾಡದಂತೆ ಪುತ್ತಿಗೆ ಶ್ರೀಗಳು ನೋಡಿಕೊಂಡಿದ್ದಾರೆ.