ಗಂಡ-ಹೆಂಡತಿ ಸದಾ ಜಗಳವಾಡುತ್ತಿದ್ದರೆ ದಾರಿದ್ರ್ಯ ಗ್ಯಾರಂಟಿ..

By Suvarna News  |  First Published Jul 3, 2020, 10:27 AM IST

ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳಬೇಕು, ಸಂಧ್ಯಾಸಮಯದಲ್ಲಿ ಕಸಗುಡಿಸಬಾರದು ಹೀಗೆಯೇ ಸುಖ-ಸಂಪತ್ತನ್ನು ಪಡೆಯಲು ಕೆಲವು ಸರಳ ಉಪಾಯಗಳನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಿದ್ದಾರೆ. ನಿತ್ಯದ ಜೀವನದಲ್ಲಿ ಇವುಗಳನ್ನು ಅನುಸರಿಸಿದರೆ ಲಕ್ಷ್ಮೀ ಮನೆಯಲ್ಲಿ ತಾನಾಗಿಯೇ ಬಂದು ನೆಲೆಸುತ್ತಾಳೆ. ಕೆಲವು ಅಭ್ಯಾಸಗಳಿಂದ ದಾರಿದ್ಯ್ರವನ್ನು ನಾವೇ ಆಮಂತ್ರಿಸಿಕೊಳ್ಳುತ್ತೇವೆ, ಇಲ್ಲಿ ಅಂತಹ ಕೆಲವು ಅಭ್ಯಾಸಗಳ ಬಗ್ಗೆ ತಿಳಿಸಲಾಗಿದ್ದು, ಅವುಗಳನ್ನು ತಿಳಿದು ತಿದ್ದಿಕೊಳ್ಳೋಣ.


ದೈನಂದಿನ ಜೀವನವು ಹಲವಾರು ಅನುಭವಗಳ ಜೊತೆ ಜೊತೆಗೆ ಸಾಗುತ್ತದೆ. ಕೆಲವು ನಕಾರಾತ್ಮಕವಾಗಿದ್ದರೆ, ಇನ್ನು ಕೆಲವು ಸಕಾರಾತ್ಮಕವಾಗಿರುತ್ತದೆ. ಹಲವಾರು ಸಂಗತಿಗಳಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕಗಳನ್ನು ಗುರುತಿಸುವುದೇ ಕಷ್ಟಕರವಾಗಿರುತ್ತದೆ. ನಕಾರಾತ್ಮಕ ಶಕ್ತಿ ಹೆಚ್ಚಿದಾಗ ಸಮಸ್ಯೆಗಳು ಹೆಚ್ಚುತ್ತದೆ. ನಮ್ಮ ಕೆಲವು ಅಭ್ಯಾಸಗಳೇ ಇದಕ್ಕೆ ಕಾರಣವಾಗಿರುತ್ತದೆ.

ಪ್ರತಿನಿತ್ಯ ನಾವು ಮಾಡುವ ಹಲವು ಕೆಲಸಗಳಲ್ಲಿ ಕೆಲವು ನಕಾರಾತ್ಮಕತೆಗೆ ಆಮಂತ್ರಣ ನೀಡುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ. ಈ ಕೆಲವು ಅಭ್ಯಾಸಗಳು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಇದರಿಂದ ಮನೆಯಲ್ಲಿ ನೆಮ್ಮದಿ ಕೆಡುತ್ತದೆ, ಅಸ್ವಸ್ಥತೆ ಕಾಡುತ್ತದೆ. ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಅಂಥಹ ಕೆಲವು ಅಭ್ಯಾಸಗಳ ಬಗ್ಗೆ ತಿಳಿದು, ತಿದ್ದಿಕೊಂಡರೆ ಹಲವಾರು ಕಷ್ಟಗಳನ್ನು ಎದುರಿಸುವುದು ಅಗತ್ಯ ಬರುವುದಿಲ್ಲ.

ಇದನ್ನು ಓದಿ: ಚಾತುರ್ಮಾಸದಲ್ಲಿ ವಿಶೇಷ ಪುಣ್ಯಫಲ ಪಡೆಯಲು ಹೀಗೆ ಮಾಡಿ!

ಭೋಜನವನ್ನು ಅರ್ಧಕ್ಕೆ ಬಿಡುವುದು
ಹಸಿವೆಯಿಂದ ಮುಕ್ತಿ ಕೊಡುವ ಅನ್ನವನ್ನು ದೇವರೆಂದು ಪೂಜಿಸುತ್ತೇವೆ. ಹಸಿದವರಿಗಷ್ಟೇ ತಿಳಿದಿರುತ್ತದೆ ಆಹಾರದ ಬೆಲೆ. ಭೋಜನದ ಸಂದರ್ಭದಲ್ಲಿ ಅರ್ಧ ಊಟ ಮಾಡಿ, ಉಳಿದರ್ಧವನ್ನು ಚೆಲ್ಲುವುದು ಅನ್ನಕ್ಕೆ ಮಾಡುವ ಅವಮಾನ. ಆಹಾರವನ್ನು ಚೆಲ್ಲುವುದು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಆಹಾರವನ್ನು ವ್ಯರ್ಥವಾಗಿ ಚೆಲ್ಲಿದರೆ ಆ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ ಮತ್ತು ಅಂಥವರು ಬಡತನವನ್ನು ಅನುಭವಿಸಬೇಕಾಗಿ ಬರುತ್ತದೆ. 

ಎಲ್ಲೆಂದರಲ್ಲಿ ಉಗುಳುವುದರಿಂದ ಜಾತಕದೋಷ
ರಸ್ತೆಯಲ್ಲಿ, ಕಂಡ ಕಂಡಲ್ಲಿ ಉಗುಳಬಾರದು. ಎಲ್ಲೆಂದರಲ್ಲಿ ಉಗುಳಿದರೆ ಜಾತಕದಲ್ಲಿ ಚಂದ್ರಗ್ರಹವು ನೀಚ ಸ್ಥಿತಿಗೆ ಹೋಗುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಇದರಿಂದ ಜೀವನದಲ್ಲಿ ಸೌಭಾಗ್ಯ ದೂರವಾಗುತ್ತದೆ. ದೌರ್ಭಾಗ್ಯಕ್ಕೆ ಆಮಂತ್ರಣ ಕೊಟ್ಟು ಕರೆದಂತಾಗುತ್ತದೆ. ಶುಚಿತ್ವವನ್ನು ಕಾಪಾಡಿಕೊಂಡರೆ, ಲಕ್ಷ್ಮೀ ಕಟಾಕ್ಷವಾಗುತ್ತದೆ.



ಅತಿಥಿ ಸತ್ಕಾರ
ಮನೆಗೆ ಬಂದ ಅತಿಥಿಗಳಿಗೆ ಅವಮಾನ ಮಾಡಬಾರದು. ಅತಿಥಿಗಳು ದೇವರ ಸಮಾನ ಎಂದು ಶಾಸ್ತ್ರ ಹೇಳುತ್ತದೆ. ಅಂಥ ಅತಿಥಿಗಳನ್ನು ಆದರಿಸಿ, ಗೌರವದಿಂದ ಸತ್ಕರಿಸಿದರೆ ಲಕ್ಷ್ಮೀ ದೇವಿಯು ಪ್ರಸನ್ನಗೊಂಡು ಆಶೀರ್ವದಿಸುತ್ತಾಳೆ.

ಇದನ್ನು ಓದಿ: ಜಾತಕದಲ್ಲಿ ಗ್ರಹಗಳು ನೀಚ ಸ್ಥಾನದಲ್ಲಿದ್ದರೆ ಎದುರಾಗುವ ತೊಂದರೆ, ಪಾರಾಗುವ ಬಗೆ ತಿಳಿಯಿರಿ!

ಸೂರ್ಯ ಮುಳುಗಿದ ನಂತರ ಕಸ ಗುಡಿಸಬಾರದು
ಸಂಧ್ಯಾಕಾಲದಲ್ಲಿ, ಸೂರ್ಯ ಮುಳುಗಿದ ನಂತರ ಮನೆಯ ಕಸವನ್ನು ಗುಡಿಸುವುದು ಅಮಂಗಳಕರ. ಶಾಸ್ತ್ರದ ಪ್ರಕಾರ ಈ ರೀತಿ ಮಾಡಿದರೆ ಮನೆಯ ಸಂಪತ್ತು ಮತ್ತು ಸಂತೋಷವನ್ನು ಹೊರಗೆ ಹಾಕಿದಂತಾಗುತ್ತದೆ. ಹಾಗಾಗಿ ಶಾಸ್ತ್ರಗಳಲ್ಲಿ ಹೇಳಿದ್ದಕ್ಕೂ, ನಮ್ಮ ಪೂರ್ವಜರು ಅನುಸರಿಸುತ್ತಿದ್ದ ನಿಯಮಗಳಿಗೂ ಸಕಾರಾತ್ಮಕ ಕಾರಣಗಳಿವೆ, ಅವುಗಳನ್ನು ಪಾಲಿಸುವುದರಿಂದ ಒಳಿತೇ ಆಗುತ್ತದೆ.

ರಾತ್ರಿ ಹೊತ್ತು ಎಂಜಲು ಪಾತ್ರೆಗಳನ್ನು ಹಾಗೇ ಇಟ್ಟು ಮಲಗಬಾರದು
ರಾತ್ರಿ ಊಟ ಮುಗಿದ ನಂತರ ಎಂಜಲು ಪಾತ್ರೆಗಳನ್ನು ತೊಳೆಯದೆ ಹಾಗೇ ಇಟ್ಟು ಮಲಗುವ ಅಭ್ಯಾಸ ಹಲವರಿಗಿರುತ್ತದೆ. ಇದು ಅಶುಭದ ಸಂಕೇತ, ಇದರಿಂದ ದೌರ್ಭಾಗ್ಯವನ್ನು ಮನೆಗೆ ಕರೆದಂತಾಗುತ್ತದೆ. ತಟ್ಟೆಯಲ್ಲಿ ಆಹಾರವನ್ನು ಬಿಡುವುದರಿಂದ ಜಾತಕದಲ್ಲಿ ಶನಿ ಮತ್ತು ಚಂದ್ರ ಗ್ರಹದಿಂದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ರಾತ್ರಿ ಎಂಜಲು ಪಾತ್ರೆಗಳನ್ನು ತೊಳೆದಿಟ್ಟು ಮಲಗಿದರೆ, ಲಕ್ಷ್ಮೀಯನ್ನು ಪ್ರಸನ್ನಗೊಳಿಸಿದಂತಾಗುತ್ತದೆ. ಇದರಿಂದ ಸಂಪತ್ತು, ನೆಮ್ಮದಿ ದೊರೆಯುತ್ತದೆ. ಯಾವ ಮನೆ ಶುಚಿತ್ವಕ್ಕೆ ಆಸ್ಪದ ನೀಡುವುದಿಲ್ಲವೋ ಅಂಥ ಮನೆಯಲ್ಲಿ ಲಕ್ಷ್ಮೀ ನೆಲೆಸುವುದಿಲ್ಲ.

ಇದನ್ನು ಓದಿ: ಶಿವನ ದಯೆ ನಿಮಗಾಗಬೇಕೆಂದರೆ ಶಿವ ಪುರಾಣದ ಈ ಮಾತುಗಳ ಪಾಲಿಸಿ!

ಮನೆಯಲ್ಲಿ ಕಲಹ
ಮನೆಯ ಸದಸ್ಯರು ಸದಾ ಹೊಂದಾಣಿಕೆಯಿಂದ ಇರಬೇಕು. ಪರಸ್ಪರ ಜಗಳವಾಡುತ್ತಾ ಇರಬಾರದು, ಇದರಿಂದ ಸಂಪತ್ತು ನಾಶವಾಗುತ್ತದೆ. ಕಲಹವಿರುವ ಮನೆಯಲ್ಲಿ ದೇವತೆಗಳು ನೆಲೆಸಲು ಇಚ್ಛಿಸುವುದಿಲ್ಲ. ಹಾಗಾಗಿ ಮನೆಯ ವಾತಾವರಣ ಸದಾ ಶಾಂತವಾಗಿರಬೇಕು. ಮನೆಯಲ್ಲಿ ನೆಮ್ಮದಿ ನೆಲೆಸಬೇಕೆಂದರೆ ಸದಸ್ಯರು ಪರಸ್ಪರ ಅನ್ಯೋನ್ಯತೆಯಿಂದ, ಇರುವದರಲ್ಲಿಯೇ ಖುಷಿಪಡುವ ಮನಸ್ಥಿತಿಯನ್ನು ಬೆಳೆಸಿಕೊಂಡರೆ ಸುಖ-ಸಂಪತ್ತು ತಾನಾಗಿಯೇ ಮನೆಗೆ ಬಂದು ನೆಲೆಸುತ್ತದೆ.

Latest Videos

click me!