ಸೇವೆಯಲ್ಲಿರುವ ಸಮಾಧಾನ, ಸಂತೋಷ ಭೋಗದಲ್ಲಿಲ್ಲ; ಯುವಶಕ್ತಿಯನ್ನು ಭೋಗದ ಜತೆ ಜೋಡಿಸದೇ ಸೇವೆಯ ಜತೆ ಜೋಡಿಸುವ ಕಾರ್ಯ ಆಗಬೇಕು. - ರಾಘವೇಶ್ವರ ಭಾರತೀ ಮಹಾಸ್ವಾಮೀಜಿ
ಗೋಕರ್ಣ (ಆ.22) : ಸೇವೆಯಲ್ಲಿರುವ ಸಮಾಧಾನ, ಸಂತೋಷ ಭೋಗದಲ್ಲಿಲ್ಲ; ಯುವಶಕ್ತಿಯನ್ನು ಭೋಗದ ಜತೆ ಜೋಡಿಸದೇ ಸೇವೆಯ ಜತೆ ಜೋಡಿಸುವ ಕಾರ್ಯ ಆಗಬೇಕು ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಹೇಳಿದರು. ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಯುವ ಸೇವಾ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ಯುವಶಕ್ತಿ ಮತ್ತು ಸೇವೆ ಇಂದಿನ ಸಮಾಜದಲ್ಲಿ ಅಪಮೌಲ್ಯವಾಗಿದೆ. ಪ್ರಕೃತಿಯ, ದೇಶದ, ಸಮಾಜದ ಮತ್ತು ನಮ್ಮಿಂದ ಶ್ರೇಷ್ಠರ ಸೇವೆ ಮಾಡುವ ಮೂಲಕ ನಮ್ಮ ಜೀವನ ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಸಮಾಜಕ್ಕಾಗಿ ಮಾಡುವ ಸಮರ್ಪಣೆ ನಮ್ಮ ಕರ್ತವ್ಯ; ರಾಘವೇಶ್ವರ ಸ್ವಾಮೀಜಿ
ಸೇವೆ ಮಾಡದಿದ್ದರೆ ಬದುಕು ಪೂರ್ಣವಾಗುವುದಿಲ್ಲ. ದೇಶಕ್ಕೆ, ದೇವರಿಗೆ, ಸಮಾಜಕ್ಕೆ, ಗುರುಸ್ಥಾನಕ್ಕೆ ಸೇವೆ ಮಾಡುವ ಸಂಕಲ್ಪ ತೊಡಬೇಕು. ಸೇವೆ ಇಲ್ಲದಿದ್ದರೆ ಜೀವನ ವ್ಯರ್ಥ. ಯುವಕರೆಲ್ಲ ಸೇವಕರಾಗಬೇಕು. ಸೇವಕರೆಲ್ಲ ಯುವಕರಾಗಿಯೇ ಇರಬೇಕು. ಮುಪ್ಪಿಗೆ ಮದ್ದು ಸೇವೆ. ಸೇವೆಯಿಂದ ನಾವು ಶಾಶ್ವತರಾಗುತ್ತೇವೆ. ಮುಪ್ಪು-ಸಾವುಗಳಿಲ್ಲದ ಸ್ಥಿತಿಗೆ ಬರಲು ಸಾಧ್ಯ. ಸೇವೆಯ ಮೂಲಕ ನಾವು ಅಜರಾಮರ, ಅಮರರಾಗಬಹುದು ಎಂದು ಹೇಳಿದರು.
ರಾಷ್ಟ್ರಕ್ಕಾಗಿ ಜೀವ ಕೊಡುವ ಸೈನಿಕ ಎಷ್ಟುಶ್ರೇಷ್ಠವೋ, ದೇಶಕ್ಕಾಗಿ ಸೇವೆಯ ಮೂಲಕ ಜೀವನ ನೀಡುವ ವ್ಯಕ್ತಿ ಕೂಡ ಅಷ್ಟೇ ಶ್ರೇಷ್ಠ. ಸತ್ಯ ಹಾಗೂ ತತ್ವಕ್ಕೆ ಜೀವನವನ್ನು ಸಮರ್ಪಣೆ ಮಾಡಿಕೊಂಡವರು ನಿಜವಾದ ಯೋಗಿಗಳು. ಧರ್ಮಕ್ಕೆ, ರಾಷ್ಟ್ರಕ್ಕೆ, ಪರಂಪರೆಗೆ ಸಮರ್ಪಣೆ ಮಾಡಿಕೊಂಡ ಜೀವನ ಸರ್ವಶ್ರೇಷ್ಠ ಎಂದರು.
ಶ್ರೇಷ್ಠತೆಯೇ ಯುವಕನ ಲಕ್ಷಣ. ಸೇವೆ ಮತ್ತು ಸಾಧನೆಯಿಂದಷ್ಟೇ ಯುವ ಹುಮ್ಮಸ್ಸು ಬರಲು ಸಾಧ್ಯ. ನೈಸರ್ಗಿಕ ಬಲ ಉಳ್ಳವನು ಯುವಕ. ಬೀಜವು ಮಣ್ಣು, ಗಾಳಿ, ಬೆಳಕಿನ ಆಸರೆಯಿಂದ ವಿಕಾಸ ಹೊಂದಿ ವೃಕ್ಷವಾಗಿ ಫಲ ಬಿಡುತ್ತದೆ. ಮರ ಮತ್ತೆ ಆ ಫಲವನ್ನು ಮತ್ತೆ ಭೂಮಿಗೆ ನೀಡುತ್ತದೆ. ಹಾಗೆಯೇ ಯುವಕರ ಶಕ್ತಿ ಕೂಡ ದೇವರು, ಸಮಾಜ, ದೇಶದಿಂದ ಬರುವಂಥದ್ದು. ವೃಕ್ಷ ತನ್ನ ಫಲವನ್ನು ಮತ್ತೆ ಪ್ರಕೃತಿಗೆ ಅರ್ಪಿಸುವಂತೆ ಯುವ ಶಕ್ತಿ ಕೂಡ ತಾನು ಬೆಳೆಯಲು ಕಾರಣವಾದ ಸಮಾಜಕ್ಕೆ ಸಮರ್ಪಿಸಿಕೊಳ್ಳಬೇಕು ಎಂದು ಆಶಿಸಿದರು.
ಗುರುಕುಲ ಶಿಕ್ಷಣ, 64 ವಿದ್ಯೆಗಳನ್ನು ಕಲಿಸುತ್ತದೆ ಗೋಕರ್ಣ ವಿಷ್ಣುಗುಪ್ತ ವಿದ್ಯಾಲಯ
ನಮ್ಮ ಪ್ರತಿಯೊಬ್ಬರ ಬೆಳವಣಿಗೆಗೆ ಸಮಾಜ ಕಾರಣ. ನಾವು ಆ ಋುಣವನ್ನು ದೇವರಿಗೆ, ನಿಸರ್ಗಕ್ಕೆ, ಸಮಾಜಕ್ಕೆ ದೇಶಕ್ಕೆ ಅರ್ಪಣೆ ಮಾಡದಿದ್ದರೆ, ಆ ಋುಣ ನಮ್ಮಲ್ಲಿ ಉಳಿದುಕೊಳ್ಳುತ್ತದೆ. ಸೇವೆಯಿಂದ ಬದುಕಿನ ಧನ್ಯತೆ ಬರುತ್ತದೆ. ಯಾರಿಗಾಗಿ ನಾವು ಸೇವೆ ಮಾಡುತ್ತೇವೆಯೋ ಲಾಭ ಅವರಿಗಲ್ಲ; ನೈಜವಾಗಿ ಅದರ ಲಾಭವಾಗುವಂಥದ್ದು ನಮಗೆ ಎಂದು ವಿಶ್ಲೇಷಿಸಿದರು. ಶಕ್ತಿ ಇದ್ದಾಗ ಸೇವೆ ಮಾಡಬೇಕು; ಬದುಕನ್ನು ವ್ಯರ್ಥ ಮಾಡಿಕೊಳ್ಳಬೇಡಿ. ಯೌವನದಲ್ಲಿ ಭೋಗಕ್ಕೆ ಬಿದ್ದರೆ ವೃದ್ಧಾಪ್ಯವನ್ನು ನಾವು ಕರೆಸಿಕೊಂಡಂತಾಗುತ್ತದೆ. ಯುವಕರಿಗೆ ಸೇವೆಯ ಪ್ರೇರಣೆ ನೀಡುವುದೇ ಇಂದಿನ ಸಮಾವೇಶದ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಇಂದಿನ ಯುವ ದಂಪತಿಗಳು ಮಕ್ಕಳೇ ಬೇಡ ಎಂಬ ತೀರ್ಮಾನಕ್ಕೆ ಬರುತ್ತಿರುವುದು ವಿಷಾದನೀಯ. ಅಂಥ ನಿರ್ಧಾರವನ್ನು ನಿಮ್ಮ ತಂದೆ ತಾಯಿಯೂ ಕೈಗೊಂಡಿದ್ದರೆ ನೀವೇ ಇಲ್ಲಿ ಇರುತ್ತಿರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅಂಕಣಕಾರ ರೋಹಿತ್ ಚಕ್ರತೀರ್ಥ ಮಾತನಾಡಿ, ನಮ್ಮಿಂದ ಸೇವೆ ಪಡೆದವರು ಕೂಡ ಸಂತುಷ್ಟರಾಗುವಂತಿರಬೇಕು. ತೋರಿಕೆಯ ಸೇವೆ ಬೇಡ; ಇದರಿಂದ ಯಾವ ಉಪಯೋಗವೂ ಇಲ್ಲ. ಜಗತ್ತಿನ ಎಲ್ಲರಿಗೂ ಸಲ್ಲುವ ಸೇವೆ ನಿಜವಾದ ಸೇವೆ ಎಂದು ಹೇಳಿದರು.
ಆರೆಸ್ಸೆಸ್ ಮುಖಂಡ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹವ್ಯಕ ಮಹಾಮಂಡಲ ಅಧ್ಯಕ್ಷ ಆರ್.ಎಸ್. ಹೆಗಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹೇಶ್ ಕಜೆ, ಶ್ರೀಮಠದ ಲೋಕಸಂಪರ್ಕಾಧಿಕಾರಿ ಹರಿಪ್ರಸಾದ್ ಪೆರಿಯಾಪು ಉಪಸ್ಥಿತರಿದ್ದರು.