ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಸ್ಥಾನ, ಬಳೇಪೇಟೆಯ ಶ್ರೀ ಕಾಶಿವಿಶ್ವನಾಥ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ, ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನ, ಬೆಂಗಳೂರು ವಿವಿ ಆವರಣದ ಮುನೇಶ್ವರಸ್ವಾಮಿ ದೇವಾಲಯ, ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವ ದೇಗುಲ, ಜೆ.ಪಿ.ನಗರದ ಶ್ರೀ ಶಿವಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಶಿವನ ದೇವಾಲಯಗಳಲ್ಲಿ ವಿಶೇಷ ಸಿದ್ಧತೆಯಾಗಿದೆ.
ಬೆಂಗಳೂರು(ಮಾ.08): ಮಹಾಶಿವರಾತ್ರಿ ವಿಶೇಷ ಪೂಜೆಗೆ ನಗರದ ಗವಿಗಂಗಾಧರೇಶ್ವರ ಸ್ವಾಮಿ ದೇಗುಲ ಸೇರಿದಂತೆ ವಿವಿಧ ಶಿವ ದೇವಾಲಯಗಳು ಸಜ್ಜಾಗಿವೆ. ಜಾಗರಣೆ ಪ್ರಯುಕ್ತ ಶುಕ್ರವಾರ ರಾತ್ರಿಯಿಡಿ ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿವೆ.
ದೇವಾಲಯಗಳಲ್ಲಿ ನಸುಕಿನಿಂದ ದಿನವಿಡೀ ವಿಶೇಷ ಪೂಜೆ, ನಿರಂತರ ಅಭಿಷೇಕ ನಡೆಯಲಿವೆ. ಶಿವಲಿಂಗಕ್ಕೆ ಜಲಾಭಿಷೇಕ, ರುದ್ರಾಭಿಷೇಕ, ಬಿಲ್ವಪತ್ರೆ ಅರ್ಪಣೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಲಿವೆ. ಗಣಹೋಮ, ರುದ್ರಹೋಮ, ನವಗ್ರಹ ಹೋಮ, ಶಾಂತಿ ಹೋಮ ಹಾಗೂ ಪಂಚಾಮೃತ ಅಭಿಷೇಕ ನಡೆಯಲಿವೆ.
ಕೊಪ್ಪಳ: ಮಕ್ಕಳನ್ನು ರಥದ ಮೇಲಿನಿಂದ ಕೆಳಕ್ಕೆಸೆಯುವ ಘಡವಡಿಕಿ ಜಾತ್ರೆ..!
ನಗರದ ಗವಿಪುರದ ಶ್ರೀ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಮಲ್ಲೇಶ್ವರದ ಕಾಡುಮಲ್ಲಿಕಾರ್ಜುನ ದೇವಸ್ಥಾನ, ಬಳೇಪೇಟೆಯ ಶ್ರೀ ಕಾಶಿವಿಶ್ವನಾಥ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ, ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನ, ಬೆಂಗಳೂರು ವಿವಿ ಆವರಣದ ಮುನೇಶ್ವರಸ್ವಾಮಿ ದೇವಾಲಯ, ಹಳೆ ವಿಮಾನ ನಿಲ್ದಾಣ ರಸ್ತೆಯ ಶಿವೋಹಂ ಶಿವ ದೇಗುಲ, ಜೆ.ಪಿ.ನಗರದ ಶ್ರೀ ಶಿವಲಿಂಗೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ಶಿವನ ದೇವಾಲಯಗಳಲ್ಲಿ ವಿಶೇಷ ಸಿದ್ಧತೆಯಾಗಿದೆ.
ಜೆ.ಪಿ.ಪಾರ್ಕ್‌ನಲ್ಲಿ ಅದ್ಧೂರಿ ಶಿವರಾತ್ರಿ ಆಯೋಜನೆ ಆಗಿದ್ದು, ಅಯೋಧ್ಯೆಯ ಶ್ರೀ ರಾಮಲಲ್ಲಾ ಮೂರ್ತಿ ಮಾದರಿ ಪ್ರತಿಷ್ಠಾಪಿಸಲಾಗುತ್ತಿದೆ. ಭಕ್ತರ ಆಗಮನ ಹಿನ್ನೆಲೆಯಲ್ಲಿ ಸರತಿ ಸಾಲಿಗೆ ವ್ಯವಸ್ಥೆ ಮಾಡಿಕೊಳ್ಳುತ್ತಿವೆ. ಬಿರು ಬಿಸಿಲಿನ ಕಾರಣಕ್ಕೆ ಪೆಂಡಾಲ್, ಕುಡಿಯುವ ನೀರು ಸೇರಿ ಇತರೆ ಸೌಲಭ್ಯ ಕಲ್ಪಿಸಲಾಗಿದೆ.
ಜಾಗರಣೆ ಪ್ರಯುಕ್ತ ಶಿವ ಸಹಸ್ರನಾಮ ಪಠಣ, ಸಂಕೀರ್ತನೆ, ಪುರಾಣ ಪ್ರವಚನ, ವೇದಾಂತ ಉಪನ್ಯಾಸ, ಸಂಗೀತೋತ್ಸವ ಮತ್ತು ಅಹೋರಾತ್ರಿ ಶಿವನಾಮ ಜಪ ನಡೆಯಲಿವೆ. ನಾನಾ ಸಂಘ ಸಂಸ್ಥೆಗಳು ಕೀರ್ತನೆ, ಭಜನೆ, ಪೌರಾಣಿಕ ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ.
ಗಂಗಾಜಲ ವಿತರಣೆ
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಶಿವ ದೇವಾಲಯಗಳಲ್ಲಿ ಭಕ್ತರಿಗೆ ಗಂಗಾಜಲ ವಿತರಣೆ ಆಗುತ್ತಿದೆ. ಹರಿದ್ವಾರದಿಂದ 40 ಸಾವಿರ ಲೀಟರ್ ಪವಿತ್ರ ಗಂಗಾ ಜಲ ತರಿಸಲಾಗಿದ್ದು, ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ರಾಜ್ಯದ 3,700 ಪುರಾತನ ಶಿವನ ದೇವಾಲಯಗಳಿಗೆ ಪವಿತ್ರ ಗಂಗಾ ಜಲ ವಿತರಣೆ ಮಾಡುವ ಕಾರ್ಯಕ್ಕೆ ಚಿಕ್ಕಪೇಟೆಯ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ಚಾಲನೆ ದೊರೆತಿದೆ.
ಮಹಾಶಿವರಾತ್ರಿಯ ದಿನದಿಂದ ಈ ರಾಶಿಗೆ ಧನಯೋಗ ಮತ್ತು ರಾಜಭೋಗ
ವಿಶೇಷ ಪೂಜೆ ಅಲಂಕಾರ
ಬಸವನಗುಡಿಯ ಗವಿಗಂಗಾಧರೇಶ್ವರ ದೇಗುಲದಲ್ಲಿ ಶುಕ್ರವಾರ ಬೆಳಗ್ಗೆ 6ರಿಂದ ಮರುದಿನ ಮುಂಜಾನೆಯವರೆಗೆ ಶಿವಲಿಂಗಕ್ಕೆ ಅಭಿಷೇಕ, ವಿಶೇಷ ಅಲಂಕಾರ ನಡೆಯಲಿದೆ. ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕೋಟೆ ಶ್ರೀ ಜಲಕಂಠೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 6.30ರಿಂದ 11.30ರವರೆಗೆ ಸ್ವಾಮಿಗೆ ಸುಪ್ರಭಾತ ಸೇವೆ, ಪ್ರಾತಃಕಾಲ ಪೂಜೆ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ ನಡೆಯಲಿದೆ. ಸಂಜೆ 4ಕ್ಕೆ ನಂದೀಶ್ವರ ಸ್ವಾಮಿಗೆ ಅಭಿಷೇಕ, ಆರಂಭಗೊಳ್ಳುತ್ತದೆ. ನಾಲ್ಕು ಜಾವಗಳಲ್ಲಿ ಪೂಜೆ ನಡೆಯಲಿದೆ. ಶನಿವಾರ ಬೆಳಗ್ಗೆ ಪುಷ್ಪಾಲಂಕಾರದ ಜೊತೆಗೆ ಸ್ವಾಮಿಯ ಬಂಡಿ ಉತ್ಸವ ಜರುಗಲಿದೆ.