ಶಬರಿಮಲೆ ಯಾತ್ರಾ ಸಮಯ ಆರಂಭವಾಗಿದೆ. ಅಯ್ಯಪ್ಪನ ಭಕ್ತರು ಮುಡಿ ಕಟ್ಟಿಕೊಂಡು ಶಬರಿಮಲೆಯತ್ತ ಪಯಣ ಬೆಳೆಸುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಅಗಾಧ ಭಕ್ತವೃಂದವನ್ನು ಸಂಪಾದಿಸಿರುವ ಸ್ವಾಮಿ ಅಯ್ಯಪ್ಪನ ಹಿನ್ನೆಲೆ, ಕತೆ ಇದು...
ಕೇರಳದ ಶಬರಿಮಲೆಯಲ್ಲಿ ನಿಂತ ಸ್ವಾಮಿ ಅಯ್ಯಪ್ಪನ ದೇವಾಲಯ ವಿಶ್ವಪ್ರಸಿದ್ಧ. ಇದುವರೆಗೂ ಅಯ್ಯಪ್ಪನ ಮಹಿಮೆಗೆ ಹೆಸರಾಗಿದ್ದ ಶಬರಿಮಲೆ ಇತ್ತೀಚಿನ ವರ್ಷಗಳಲ್ಲಿ ವಾದ ವಿವಾದಗಳಿಂದಲೇ ಪ್ರತಿದಿನ ಸುದ್ದಿಯಾಗುತ್ತಿದೆ. ಮಹಿಳಾ ಭಕ್ತರನ್ನು ಒಳಬಿಟ್ಟುಕೊಳ್ಳದ ಅಯ್ಯಪ್ಪನ ಬಗೆಗೆ ಮಹಿಳಾ ವೃಂದದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದರೆ, ಹೀಗೆ ಶಬರಿಮಲೆಗೆ ಹೋಗಲೇಬೇಕು ಎಂದು ಹಟ ಹಿಡಿವ ಮಹಿಳೆಯರೆಡೆಗೆ ಪುರುಷ ಭಕ್ತರ, ದೇವಾಲಯದ ಆಡಳಿತ ಮಂಡಳಿಯ ಅಸಮಾಧಾನ ಹೊಗೆಯಾಡುತ್ತಿದೆ.
undefined
ಮಣಿಕಾಂತ, ಮಣಿಕಂದ ಎಂದೂ ಕರೆಸಿಕೊಳ್ಳುವ ಅಯ್ಯಪ್ಪನ ದರ್ಶನಕ್ಕೆ ಸೀಸನ್ ಆರಂಭವಾಗಿದೆ. ಸಾವಿರಾರು ಭಕ್ತರು ಅಯ್ಯಪ್ಪನನ್ನು ಕಣ್ತುಂಬಿಕೊಳ್ಳಲು ಕಾತರರಾಗಿ ಹೊರಟಿದ್ದಾರೆ. ಇದೀಗ ದಿನಕ್ಕೊಬ್ಬಬ್ಬರು ಮಹಿಳಾ ಭಕ್ತರು ದೇವಾಲಯ ಪ್ರವೇಶಕ್ಕೆ ಪ್ರಯತ್ನಿಸಿ ವಾಪಸಾಗುತ್ತಿದ್ದಾರೆ. ಇವೆಲ್ಲ ಬದಿಗಿರಲಿ, ಸಣ್ಣ ಹುಡುಗ ಅಯ್ಯಪ್ಪನಿಗೆ ಇಷ್ಟೊಂದು ಭಕ್ತಗಣವಿರಲು ಕಾರಣವೇನು? ಆತನ ಹುಟ್ಟಿನ ಕತೆಯೇನು?
ಅಯ್ಯಪ್ಪನ ಜನನ ಉದ್ದೇಶ
ರಾಕ್ಷಸ ಮಹಿಷಾಸುರನನ್ನು ಕೊಲ್ಲಲು ದೇವತೆಗಳೆಲ್ಲ ತಮ್ಮ ಶಕ್ತಿಯನ್ನು ಧಾರೆಯೆರೆದು ದುರ್ಗೆಯನ್ನು ಸೃಷ್ಟಿಸಿದ್ದು ಗೊತ್ತೇ ಇದೆ. ಹೀಗೆ ಮಹಿಷಾಸುರನ ಕೊನೆಯಾದಾಗ, ಆತನ ಸಹೋದರಿ ಮಹಿಷಿ ಕುದ್ದುಬಿಡುತ್ತಾಳೆ. ಬ್ರಹ್ಮಾಂಡದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸತೊಡಗುತ್ತಾಳೆ. ಒಮ್ಮೆ ಆಕೆ ಬ್ರಹ್ಮನನ್ನು ಮೆಚ್ಚಿಸಿ, ಶಿವ ಹಾಗೂ ವಿಷ್ಣುವಿಗೆ ಜನಿಸಿದ ಮಗು ಮಾತ್ರ ತನ್ನನ್ನು ಕೊಲ್ಲಲಿ ಎಂದು ವರ ಪಡೆದುಕೊಂಡಿರುತ್ತಾಳೆ. ಹಾಗಾಗಿ, ಮಹಿಷಿ ತನ್ನ ವರವನ್ನು ದುರ್ಬಳಕೆ ಮಾಡಿಕೊಳ್ಳತೊಡಗುತ್ತಾಳೆ. ತನ್ನನ್ನು ಸಂಹರಿಸುವವರು ಯಾರೂ ಜನಿಸಲು ಸಾಧ್ಯವಿಲ್ಲ ಎಂದು ಅಹಂಕಾರದಿಂದ ಬೀಗತೊಡಗುತ್ತಾಳೆ. ಆದರೆ, ದೇವರಿಗೆ ಆಗದ್ದು ಏನಿದೆ? ಇವಳ ಸಂಹಾರಕ್ಕಾಗಿಯೇ ವಿಷ್ಣುವು ಮೋಹಿನಿ ರೂಪವನ್ನು ತಾಳಿ ಶಿವನೊಂದಿಗೆ ಐಕ್ಯವಾಗಿ ಮಗುವನ್ನು ಹುಟ್ಟಿಸುತ್ತಾರೆ. ಈ ಮಗುವನ್ನು ಹರಿಹರಪುತ್ರ ಎಂದೇ ಎಲ್ಲರೂ ಕರೆಯುತ್ತಾರೆ. ಇದೇ ಮಗು ಅಯ್ಯಪ್ಪ. ಹಾಗಾಗಿ, ಅಯ್ಯಪ್ಪನ ಜನನ ಉದ್ದೇಶವೇ ಮಹಿಷಿಯ ಸಂಹಾರ. ಆಕೆಗೆ ಮೋಕ್ಷ ನೀಡುವುದು. ಹೀಗಾಗಿ ದುಷ್ಟಸಂಹಾರಕ್ಕಾಗಿ, ಶಿಷ್ಟರ ರಕ್ಷಣೆಗಾಗಿ ಅಯ್ಯಪ್ಪ ಜನಿಸಿದ್ದಾನೆ. ಹರಿಹರರನ್ನೇ ತಂದೆತಾಯಿಯಾಗಿ ಪಡೆದ ಆತ ಎಂಥ ಬಲಶಾಲಿಯಾಗಿರಬೇಕು?
ಅಯ್ಯಪ್ಪನನ್ನು ಯಾರು ಬೆಳೆಸಿದರು?
ಕೇರಳದ ಪಂಡಾಲಮ್‌ನ ರಾಜ ರಾಜಶೇಖರ ಹಾಗೂ ಆತನ ಪತ್ನಿಗೆ ಮಕ್ಕಳಿರಲಿಲ್ಲ. ಒಂದು ದಿನ ರಾಜ ಕಾಡಿಗೆ ಹೋದಾಗ ಅಲ್ಲಿ ಗಂಡುಮಗುವೊಂದು ಬಿದ್ದು ಅಳುತ್ತಿತ್ತು. ರಾಜನು ಆ ಮಗುವನ್ನು ಸನ್ಯಾಸಿಯೊಬ್ಬರ ಬಳಿ ತೆಗೆದುಕೊಂಡು ಹೋದಾಗ ಅವರು ರಾಜನಿಗೆ ಆ ಮಗುವನ್ನು ದತ್ತು ತೆಗೆದುಕೊಂಡು ಸಾಕುವಂತೆ ಸಲಹೆ ನೀಡುತ್ತಾರೆ. ಹಾಗಾಗಿ, ಅಯ್ಯಪ್ಪ ರಾಜಕುಮಾರನಾಗಿ ಬೆಳೆಯುತ್ತಾನೆ.
ಅಯ್ಯಪ್ಪನನ್ನು ಮತ್ತೆ ಕಾಡಿಗೆ ಕಳಿಸುತ್ತಾರಾ?
ಅಯ್ಯಪ್ಪನನ್ನು ದತ್ತು ಪಡೆದು ಸಾಕಲಾರಂಭಿಸಿದ ಮೇಲೆ ಆತನ ಸಾಕುತಾಯಿ ರಾಣಿಗೆ ಮಗುವಾಗುತ್ತದೆ. ನಂತರ ರಾಣಿಯು ಅಯ್ಯಪ್ಪನನ್ನು ಕಡೆಗಣಿಸಲಾರಂಭಿಸುತ್ತಾಳೆ. ಅಯ್ಯಪ್ಪನನ್ನು ತನ್ನ ಬಳಿಕ ರಾಜನಾಗಿಸುವ ಮಹಾರಾಜನ ಆಸೆಗೆ ಕೂಡಾ ಅವಳ ವಿರೋಧ ವ್ಯಕ್ತವಾಗುತ್ತದೆ. ಇದರಿಂದ ತಾನು ಹೆತ್ತ ಮಗನಿಗೆ ವಂಚನೆಯಾಗುತ್ತದೆ ಎಂದು ಭಾವಿಸಿ ಆಕೆ ಅಯ್ಯಪ್ಪನನ್ನು ದೂರ ಮಾಡಲು ಸಂಚು ರೂಪಿಸುತ್ತಾಳೆ. ತನಗೊಂದು ಅಪರೂಪದ ಕಾಯಿಲೆಯಿದ್ದು, ಅದು ಗುಣವಾಗಬೇಕಾದರೆ ಹುಲಿಯ ಹಾಲು ಬೇಕಾಗುತ್ತದೆ. ಹೀಗಾಗಿ ಅದನ್ನು ತಂದುಕೊಡುವಂತೆ ಅವಳು ಅಯ್ಯಪ್ಪನಿಗೆ ಹೇಳುತ್ತಾಳೆ. ತಾಯಿ ಹೇಳಿದಂತೆ ಅಯ್ಯಪ್ಪ ಹುಲಿಯ ಹಾಲನ್ನು ತರಲು ಕಾಡಿಗೆ ಹೋಗುವ ದಾರಿಯಲ್ಲಿ, ರಕ್ಕಸಿ ಮಹಿಷಿ ಎದುರಾಗುತ್ತಾಳೆ. ಆಗ ಅವಳನ್ನು ಸಂಹರಿಸುತ್ತಾನೆ ಅಯ್ಯಪ್ಪ. ಅಲ್ಲಿಗೆ ಅವನ ಹುಟ್ಟಿನ ಉದ್ದೇಶ ಈಡೇರುತ್ತದೆ.
ಅಯ್ಯಪ್ಪ ದರ್ಶನ ಪಡೆದ ಕನಕ ಮನೆಯಿಂದ ಔಟ್
ಅಯ್ಯಪ್ಪ ಏಕೆ ಅರಮನೆ ಬಿಡುತ್ತಾನೆ?
ರಾಣಿ ಹುಲಿಯು ಅಯ್ಯಪ್ಪನನ್ನು ಕೊಂದು ಹಾಕಲಿ ಎಂದೇ ಕಾಡಿಗೆ ಕಳುಹಿಸಿರುತ್ತಾಳೆ. ಆದರೆ ಅಯ್ಯಪ್ಪ ಹುಲಿಯ ಮೇಲೆಯೇ ಕುಳಿತು ಅರಮನೆಗೆ ಬರುತ್ತಾನೆ. ಹಿಂದೆ ಹಲವು ಹುಲಿಗಳು ಹಿಂಬಾಲಿಸಿ ಬರುತ್ತವೆ. ಇಂಥ ಕ್ರೂರ ಪ್ರಾಣಿಗಳೊಂದಿಗೆ ಬಂದ ಮಣಿಕಾಂತನನ್ನು ನೋಡಿದ ರಾಜರಾಣಿಗೆ ಆತ ಸಾಮಾನ್ಯ ಮನುಷ್ಯನಲ್ಲ ಎಂಬುದು ಅರ್ಥವಾಗುತ್ತದೆ. ಆತನಿಗೆ ಅರಮನೆಯಲ್ಲಿಯೇ ಉಳಿಯಲು ಹೇಳುತ್ತಾರೆ. ಆದರೆ, ಆತ ರಾಜನಾಗುವ ಹಂಬಲ ತೊರೆದು ಬಾಣವನ್ನು ಶಬರಿಮಲೆಯತ್ತ ಹೂಡಿ, ಅದು ಬಿದ್ದ ಜಾಗದಲ್ಲಿ ನೆಲೆ ಕಂಡುಕೊಳ್ಳುತ್ತಾನೆ.