
ಶ್ರೀಶೈಲ: ಆಂಧ್ರಪ್ರದೇಶದ ಶ್ರೀಶೈಲ ಕ್ಷೇತ್ರದಲ್ಲಿ ಯುಗಾದಿ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಕರ್ನಾಟಕದಿಂದ ಲಕ್ಷಾಂತರ ಭಕ್ತರು ಆಗಮಿಸುವ ನೀರಿಕ್ಷೆ ಇದೆ. ಮಾ.6 ರಿಂದ 15ರವರೆಗೆ ಸ್ಪರ್ಶ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಮಾ.16 ರಿಂದ 20ರವರೆಗೆ ಅಲಂಕಾರಿಕ ಲಘು ದರ್ಶನ ಲಭ್ಯವಿರಲಿದೆ.
ಈ ಕುರಿತು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಶ್ರೀನಿವಾಸ ರಾವ್ ಅವರು ಪತ್ರಿಕಾ ಪ್ರಕಟಣೆ ನೀಡಿದ್ದು, ಶ್ರೀಶೈಲದಲ್ಲಿ ಮಾ.16 ರಿಂದ 20ರವರೆಗೆ ವಿವಿಧ ಉತ್ಸವಗಳು ನಡೆಯಲಿವೆ. ಉತ್ಸವ ಪ್ರಾರಂಭವಾಗುವ ಮೊದಲ 10 ದಿನ 4 ಹಂತಗಳಲ್ಲಿ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯನ್ನು ಸ್ಪರ್ಶಿಸುವ ಅವಕಾಶ ಇರಲಿದೆ. ಇದಕ್ಕಾಗಿ ಆನ್‌ಲೈನ್ ಮೂಲಕ ಟಿಕೆಟ್ ಪಡೆಯಬಹುದು ಎಂದು ತಿಳಿಸಿದ್ದಾರೆ.
ಜಾತ್ರೆಗೆ ಒಟ್ಟು 8 ಲಕ್ಷ ಭಕ್ತರು ಆಗಮಿಸಲಿದ್ದು, ಕರ್ನಾಟಕದಿಂದಲೇ 2 ಲಕ್ಷಕ್ಕೂ ಅಧಿಕ ಜನರು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಬರುತ್ತಾರೆ. ವಿಶೇಷವಾಗಿ ಉತ್ತರ ಕರ್ನಾಟಕದವರು ಹೆಚ್ಚಾಗಿ ಉತ್ಸವದಲ್ಲಿ ಭಾಗಿಯಾಗುತ್ತಾರೆ. ಎಲ್ಲಾ ಭಕ್ತರಿಗೆ ಆರಾಮದಾಯಕ ದರ್ಶನ ನೀಡುವ ಸಲುವಾಗಿ ಮಾ.16 ರಿಂದ 20ರವರೆಗೆ ಮಲ್ಲಿಕಾರ್ಜುನಸ್ವಾಮಿಯ ಅಲಂಕಾರಿಕ ಲಘು ದರ್ಶನ ಮಾತ್ರ ಒದಗಿಲಾಗುವುದು. ಈ ದಿನಗಳಲ್ಲಿ ಭಗವಂತ ಸ್ಪರ್ಶ ದರ್ಶನಕ್ಕೆ ಅವಕಾಶವಿರುವುದಿಲ್ಲ.
ಭಕ್ತರ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ವಿವಿಧ ವ್ಯವಸ್ಥೆ ಮಾಡಲಾಗಿದೆ. ಮುಖ್ಯವಾಗಿ ಪಾದಾಚಾರಿ ಮಾರ್ಗ, ಭಕ್ತರಿಗೆ ವಿಶ್ರಾಂತಿ ಪಡೆಯಲು ತಂಪಾದ ಹೊರಾಂಗಣ ಚಪ್ಪರಗಳು, ಕುಡಿಯುವ ನೀರು, ಅನ್ನಸಂತರ್ಪಣೆ, ಅನುಕೂಲವಾದ ದರ್ಶನ ವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ, ಭಕ್ತರು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಉಚಿತ ಬಸ್ ಹಾಗೂ ಬ್ಯಾಟರಿ ವಾಹನಗಳ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಗುರು-ಶುಕ್ರರಿಂದ ಕೇಂದ್ರ ದೃಷ್ಟಿ ಯೋಗ: ಈ 5 ರಾಶಿಗಳಿಗೆ ತೆರೆಯಲಿದೆ ಅದೃಷ್ಟದ ಬಾಗಿಲು
ಶ್ರೀಶೈಲದಲ್ಲಿ ಸ್ಪರ್ಶ ದರ್ಶನಕ್ಕೆ ₹500 ಶುಲ್ಕ ನಿಗದಿಪಡಿಸಲಾಗಿದ್ದು, ಪ್ರತಿ ಹಂತದಲ್ಲಿ ಕರೆಂಟ್ ಬುಕಿಂಗ್ ಮೂಲಕ 1500 ಟಿಕೆಟ್ ನೀಡಲಾಗುವುದು. ಅದೇ ರೀತಿ 500 ಟಿಕೆಟ್‌ಗಳನ್ನು ಆನ್‌ಲೈನ್ ಲಭ್ಯವಾಗುವಂತೆ ಮಾಡಲಾಗಿದ್ದು, www.srisaila devasthanam.org ಅಥವಾ www.aptemples.ap.gov.in ವೆಬ್‌ಸೈಟ್ ಮೂಲಕ ಹಾಗೂ ವಾಟ್ಸ್‌ಆ್ಯಪ್ ನಂಬರ್ 8552300009 ಮೂಲಕವೂ ಟಿಕೆಟ್ ಪಡೆಯಬಹುದು. ಒಟ್ಟಾರೆ 8,000 ಮಂದಿಗೆ ಸ್ಪರ್ಶ ದರ್ಶನ ನೀಡಲಾಗುವುದು.
ಇದನ್ನೂ ಓದಿ: ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ: ಈಕೆಯೇ ಮೂರು ಹೆಸರಿನ ಧಾರವಾಡದ ಸುಂದ್ರಿ