Solar Eclipse ಸಮಯದಲ್ಲಿ ದೇಶದಲ್ಲಿ ಬಾಗಿಲು ತೆರೆದಿರುವುದು ಇದೊಂದೇ ದೇವಾಲಯ!

By Suvarna NewsFirst Published Oct 13, 2022, 10:09 AM IST
Highlights

ಸೂರ್ಯಗ್ರಹಣದ ಸಮಯದಲ್ಲಿ ದೇಶದ ಎಲ್ಲ ಹಿಂದೂ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಆದರೆ, ಒಂದು ದೇವಾಲಯ ಮಾತ್ರ ಬಾಗಿಲು ತೆರೆದಿರುತ್ತದೆ. ಅದ್ಯಾವುದು, ಏನದರ ವಿಶೇಷತೆ, ಅಲ್ಲೇಕೆ ಬಾಗಿಲು ಮುಚ್ಚುವುದಿಲ್ಲ ಎಂದು ತಿಳಿಯೋಣ.

ಗ್ರಹಣದ ಸಮಯದಲ್ಲಿ ಸಾಮಾನ್ಯವಾಗಿ ಭಾರತದ ಎಲ್ಲ ದೇವಾಲಯಗಳ ಬಾಗಿಲನ್ನು ಮುಚ್ಚಲಾಗುತ್ತದೆ. ಈ ವರ್ಷ ಅಕ್ಟೋಬರ್ 25ರಂದು ಸೂರ್ಯಗ್ರಹಣವಿದ್ದು, ಈ ಸಂದರ್ಭದಲ್ಲಿ ಭಾರತದ ಎಲ್ಲಾ ದೇವಾಲಯಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಆದರೆ, ಸೂರ್ಯಗ್ರಹಣದ ಹೊರತಾಗಿಯೂ ತೆರೆದಿರುವ ಏಕೈಕ ದೇವಾಲಯ ಎಂದರೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸ್ವರ್ಣಮುಖಿ ನದಿಯ ಪಕ್ಕದಲ್ಲಿರುವ ಶ್ರೀ ಕಾಳಹಸ್ತಿ ದೇವಸ್ಥಾನ.

ಹೌದು, ಗ್ರಹಣ ಸಮಯದಲ್ಲಿ ಹೊಮ್ಮುವ ನಕಾರಾತ್ಮಕ ಶಕ್ತಿ(Negative energy)ಯು ದೇವಾಲಯದ ಒಳಗಿನ ಸಕಾರಾತ್ಮಕ ಶಕ್ತಿ ತುಂಬುವ ಜ್ಯಾಮಿತಿಯ ವಿನ್ಯಾಸದ ಮೇಲೆ, ಒಳಗಿರುವ ವಿಶೇಷ ಶಕ್ತಿಯ ಸೆಳವಿನ ಮೇಲೆ ಕೊಂಚ ಪರಿಣಾಮ ಬೀರುತ್ತದೆ. ಹೀಗಾಗಿ, ಗ್ರಹಣ ಸಂದರ್ಭದಲ್ಲಿ ಎಲ್ಲ ದೇವಾಲಯಗಳ ಬಾಗಿಲನ್ನು ಹಾಕಲಾಗುತ್ತದೆ. ಆದರೆ, ಕಾಳಹಸ್ತಿ(Sri Kalahasti)ಯಲ್ಲಿ ಮಾತ್ರ ಬಾಗಿಲು ಮುಚ್ಚದಿರಲು ವಿಶೇಷ ಕಾರಣವಿದೆ. ಅದೇನೆಂಬ ವಿವರ ಇಲ್ಲಿದೆ.

Latest Videos

ಈ ಕಾರಣಕ್ಕೆ ಗ್ರಹಣದ ಸಮಯದಲ್ಲಿ ಇಲ್ಲಿ ಬಾಗಿಲು ಮುಚ್ಚುವುದಿಲ್ಲ..
ಶ್ರೀ ಕಾಳಹಸ್ತಿ ದೇವಸ್ಥಾನವು ದೇಶದ ಅತ್ಯಂತ ಹಳೆಯ ಶಿವ ದೇವಾಲಯ(Shiva temple)ಗಳಲ್ಲಿ ಒಂದಾಗಿದೆ. ಅಲ್ಲದೆ ಮೂಲಭೂತವಾಗಿ ಶ್ರೀ ಕಾಳಹಸ್ತಿ ದೇವಸ್ಥಾನವನ್ನು ರಾಹು ಕೇತು ಕ್ಷೇತ್ರ ಎಂದು ಕರೆಯಲಾಗುತ್ತದೆ. ಈ ದೇವಾಲಯದಲ್ಲಿ ಶಿವನ ವಿಗ್ರಹವು ಎಲ್ಲಾ 27 ನಕ್ಷತ್ರಗಳು ಮತ್ತು 9 ರಾಶಿಗಳನ್ನು ತನ್ನ ಕವಚದಲ್ಲಿ ಹೊಂದಿದೆ. ಇದರಿಂದಾಗಿ ಇಡೀ ಸೌರವ್ಯೂಹವನ್ನು ನಿಯಂತ್ರಿಸುವ ಶಕ್ತಿ ಈ ಶಿವನದು. ರಾಹು ಮತ್ತು ಕೇತು(Rahu Ketu)ಗಳು ಸೂರ್ಯ ಮತ್ತು ಚಂದ್ರರನ್ನು ನುಂಗಿದಾಗ ಗ್ರಹಣಗಳು ಸಂಭವಿಸುತ್ತವೆ, ಇದು ಸೂರ್ಯ ಅಥವಾ ಚಂದ್ರ ಗ್ರಹಣಗಳಿಗೆ ಕಾರಣವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ, ಶ್ರೀ ಕಾಳಹಸ್ತಿ ದೇವಸ್ಥಾನದಲ್ಲಿ ರಾಹು ಮತ್ತು ಕೇತುಗಳೆರಡನ್ನೂ ಪೂಜಿಸಲಾಗುತ್ತದೆ. ಹಾಗಾಗಿ, ದೇವಾಲಯದ ಮೇಲೆ ಗ್ರಹಣವು ಯಾವುದೇ ದುಷ್ಪರಿಣಾಮಗಳನ್ನು ಉಂಟು ಮಾಡುವುದಿಲ್ಲ.

Eclipse 2022: ಗ್ರಹಣದ ಸಮಯದಲ್ಲಿ ದೇವಾಲಯಗಳ ಬಾಗಿಲು ಮುಚ್ಚುವುದೇಕೆ?

ಇಲ್ಲಿ ರಾಹು ಮತ್ತು ಕೇತುಗಳಿಬ್ಬರೂ ಸ್ವಾಮಿ (ಶಿವ) ಮತ್ತು ಅಮವಾರು (ಪಾರ್ವತಿ) ಜೊತೆಗಿದ್ದಾರೆ. ಪುರಾಣಗಳ ಪ್ರಕಾರ, ಕೇತು ಎಂಬ ಐದು ತಲೆಯ ಸರ್ಪವು ಭಗವಾನ್ ಶಿವನ ತಲೆಯನ್ನು ಅಲಂಕರಿಸುತ್ತದೆ. ಆದರೆ ರಾಹು ಎಂಬ ಏಕೈಕ ತಲೆಯ ಸರ್ಪವು ಆಭರಣದ ರೂಪದಲ್ಲಿ ಅಮ್ಮನವರ ಸೊಂಟದ ವಡ್ಯಾಣವಾಗುತ್ತದೆ. ಆದ್ದರಿಂದ ಈ ದೇವಾಲಯದಲ್ಲಿ ಗ್ರಹಣದ ದುಷ್ಪರಿಣಾಮಗಳು ತಾಕುವುದಿಲ್ಲ.

ಗ್ರಹಣದ ದಿನ ಜಾತಕ ದೋಷ(Malific horoscope) ಕಳೆದುಕೊಳ್ಳಲು ಪೂಜೆ
ಗ್ರಹಣದ ದಿನದಂದು ಶ್ರೀ ಕಾಳಹಸ್ತಿಯಲ್ಲಿರುವ ಪುರೋಹಿತರು ಶ್ರೀಕಾಳಹಸ್ತೇಶ್ವರ ಸ್ವಾಮಿಗೆ ಪವಿತ್ರ ಅಭಿಷೇಕವನ್ನು ಮಾಡುತ್ತಾರೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ತಮ್ಮ ದೋಷಗಳನ್ನು ಹೋಗಲಾಡಿಸಲು ರಾಹು ಕೇತು ಪೂಜೆಗಳನ್ನು ಸಹ ಮಾಡಲಾಗುತ್ತದೆ. ಹಿಂದೂ ನಂಬಿಕೆಯ ಪ್ರಕಾರ, ಸೂರ್ಯಗ್ರಹಣದ ದಿನದಂದು ದೇವಸ್ಥಾನದಲ್ಲಿ ಭಗವಾನ್ ಶಿವ ಮತ್ತು ಜ್ಞಾನ ಪ್ರಸೂನಾಂಬ ಅಮ್ಮನವರನ್ನು ಪೂಜಿಸಿದರೆ ವ್ಯಕ್ತಿಯು ತಮ್ಮ ಜಾತಕ ದೋಷಗಳನ್ನು ತೊಡೆದುಹಾಕಲು ಸಾಧ್ಯವಾಗುತ್ತದೆ. 

2022ರಲ್ಲಿ ಈ ಎರಡು ದಿನ ಬಾಗಿಲು ಮುಚ್ಚಿರುತ್ತೆ ತಿರುಪತಿ ದೇವಸ್ಥಾನ!

ಇದಕ್ಕಾಗಿ ತಮ್ಮ ಜಾತಕದಲ್ಲಿ ಸ್ವಲ್ಪ ದೋಷ ಇರುವವರು ಗ್ರಹಣದ ಸಮಯದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ರಾಹು ಕೇತು ಪೂಜೆ ಮಾಡಿದ ನಂತರ ಶಿವ ಮತ್ತು ಜ್ಞಾನ ಪ್ರಸೂನಾಂಬ ಅಮ್ಮನವರನ್ನು ಪೂಜಿಸುತ್ತಾರೆ. ಸೂರ್ಯಗ್ರಹಣದ ಸಂದರ್ಭದಲ್ಲಿ ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳ ಜನರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!