Koppal News: ಭಕ್ತಸಾಗರದ ಮಧ್ಯೆ ಶ್ರೀ ಗುದ್ನೇಶ್ವರ ಪಂಚಕಳಸ ರಥೋತ್ಸವ

By Kannadaprabha News  |  First Published Dec 9, 2022, 9:53 AM IST

ಪಟ್ಟಣದ ಆರಾಧ್ಯ ದೈವ ಶ್ರೀ ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವವು ‘ಶ್ರೀ ಗುದ್ನೇಶ್ವರ ಮಹಾರಾಜಕೀ ಜೈ’ ಎಂಬ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ಗುರುವಾರ ಸಂಜೆ ಸಂಭ್ರಮ, ಸಡಗರದಿಂದ ನೆರವೇರಿತು.


ಕುಕನೂರು (ಡಿ.9) : ಪಟ್ಟಣದ ಆರಾಧ್ಯ ದೈವ ಶ್ರೀ ಗುದ್ನೇಶ್ವರ ಪಂಚಕಳಸ ಮಹಾರಥೋತ್ಸವವು ‘ಶ್ರೀ ಗುದ್ನೇಶ್ವರ ಮಹಾರಾಜಕೀ ಜೈ’ ಎಂಬ ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ಗುರುವಾರ ಸಂಜೆ ಸಂಭ್ರಮ, ಸಡಗರದಿಂದ ನೆರವೇರಿತು.

ಕಳೆದ ಎರಡು ವರ್ಷದಿಂದ ಕೋವಿಡ್‌ ಹಿನ್ನೆಲೆ ಜಾತ್ರೆ ಸರಳವಾಗಿ ಜರುಗಿತ್ತು. ಪ್ರಸಕ್ತ ವರ್ಷ ಯಾವುದೇ ಭಯ, ಭೀತಿಯಿಲ್ಲದೆ ಮಹಾರಥೋತ್ಸವ ಸುಮಾರು 2 ಲಕ್ಷ ಭಕ್ತರ ಜಯಘೋಷದ ನಡುವೆ ಅದ್ಧೂರಿಯಾಗಿ ಜರುಗಿತು. ಮಹಾರಥೋತ್ಸವಕ್ಕೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತರು ಭಕ್ತಿ ಮೆರೆದರು.

Tap to resize

Latest Videos

undefined

ಬೆಂಗಳೂರು: ಧರ್ಮ ದಂಗಲ್‌ ನಡುವೆ ಸುಬ್ರಹ್ಮಣ್ಯ ರಥೋತ್ಸವ ಸಂಪನ್ನ

ಎರಡು ಗಂಟೆ ರಥೋತ್ಸವ:

ಶ್ರೀ ಗುದ್ನೇಶ್ವರ ರಥೋತ್ಸವ ಬರೋಬ್ಬರಿ ಎರಡು ಗಂಟೆ ಜರುಗಿತು. ಎರಡು ತಾಸು ಸಹ ಭಕ್ತ ವೃಂದ ರಥೋತ್ಸವವನ್ನು ಕಣ್ತುಂಬಿಕೊಂಡರು. ಶ್ರೀ ಗುದ್ನೇಶ್ವರ ರಥವು ಪಾದಗಟ್ಟೆಯವರೆಗೆ ಸುಮಾರು 1 ಕಿಮೀ ದೂರವಿದೆ. ಪಾದಗಟ್ಟೆಗೆ ರಥೋತ್ಸವ ತೆರಳಿ ಮೂಲ ಸ್ಥಾನಕ್ಕೆ ಮರಳುವುದು. ಹೀಗಾಗಿ ಗುದ್ನೇಶ್ವರ ರಥೋತ್ಸವ 2 ಕಿಮೀ ದೂರವನ್ನು ಕ್ರಮಿಸಿ ಸಂಪನ್ನವಾಯಿತು. ಸಂಜೆ 4.40ಕ್ಕೆ ಆರಂಭವಾದ ರಥೋತ್ಸವ ಸಂಜೆ 6.40ಕ್ಕೆ ಮೂಲ ಸ್ಥಾನ ತಲುಪಿತು.

ಪಂಜಿನ ಮೆರವಣಿಗೆ ಚೆನ್ನ:

ರಥೋತ್ಸವದುದ್ದಕ್ಕೂ ಪಂಜುಗಳನ್ನು ಹಿಡಿದು ಭಕ್ತರು ಸಾಗಿದರು. ರಥದ ಮುಂದೆ ಪಂಜುಗಳನ್ನು ಹಿಡಿದು ಸುಮಾರು ನೂರಾರು ಭಕ್ತರು ಸಾಲಾಗಿ ಸಾಗುತ್ತಿರುವುದು ರಥೋತ್ಸವಕ್ಕೆ ಮೆರುಗು ನೀಡಿತು. ಪಕ್ಕದ ಕಕ್ಕಿಹಳ್ಳಿ ಗ್ರಾಮದ ಅಳಿಯ ಚನ್ನಬಸವೇಶ್ವರ ಮೂರ್ತಿ ಹಾಗೂ ಅಡ್ಡಪಲ್ಲಕ್ಕಿ, ಗುದ್ನೇಶ್ವರ ಸ್ವಾಮಿಯ ಅಟ್ಟಪಲ್ಲಕ್ಕಿ ಹಾಗೂ ಬಿನ್ನಾಳ ಗ್ರಾಮದಿಂದ ಆಗಮಿಸಿದ ನಂದಿಕೋಲು ರಥೋತ್ಸವದ ಸೊಬಗು ಹೆಚ್ಚಿಸಿದವು. ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿ, ಕುಕನೂರಿನ ಡಾ. ಮಹಾದೇವ ದೇವರು ರಥೋತ್ಸವಕ್ಕೆ ಚಾಲನೆ ನೀಡಿದರು.

ತಹಸೀಲ್ದಾರ್‌ ಚಿದಾನಂದ ಗುರುಸ್ವಾಮಿ, ಪಿಎಸ್‌ಐ ಯು. ಡಾಕೇಶ್‌, ಪಪಂ ಮುಖ್ಯಾಧಿಕಾರಿ ಬಿ. ಚಂದ್ರಶೇಖರ, ಆರ್‌ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಸವರಾಜ ಗೌರಾ, ಉದ್ಯಮಿ ಅನಿಲ್‌ ಆಚಾರ್‌, ಪ್ರಮುಖರಾದ ರಶೀದ್‌ ಸಾಬ್‌ ಹಣಜಗಿರಿ, ಗುದ್ನೇಪ್ಪನಮಠದ ಸೇವಾ ಸಮಿತಿಯ ಕಾರ್ಯಕರ್ತರು, ಅಪಾರ ಭಕ್ತ ಸಮೂಹ ಇತ್ತು.

ಗದ್ದಲವೋ ಗದ್ದಲ:

ಜಾತ್ರೆಗೆ ನಿರೀಕ್ಷೆ ಮೀರಿ ಜನತೆ ಆಗಮಿಸಿದ್ದು, ಎಲ್ಲಿ ನೋಡಿದರೂ ಗದ್ದಲವೋ ಗದ್ದಲ. ಪಂಚಕಳಸ ರಥೋತ್ಸವ ಬಹುವಿಶಿಷ್ಟವಾಗಿದ್ದು, ಕಳೆದ ಎರಡು ವರ್ಷದಿಂದ ಕಳೆಗುಂದಿದ್ದ ಜಾತ್ರೆಗೆ ನಿರೀಕ್ಷೆ ಮೀರಿ ಆಗಮಿಸಿದ ಭಕ್ತ ಸಮೂಹ ಸಾಕ್ಷಿಯಾಯಿತು.

ಮುಖ್ಯ ರಸ್ತೆಯಲ್ಲಿರುವ ಮಠದಲ್ಲಿ ಅನ್ನಸಂತರ್ಪಣೆ ಜರುಗಿತು. ವಿಶೇಷವಾಗಿ ಕಬ್ಬು ಮಾರಾಟ ಜೋರಿತ್ತು. ಅಲ್ಲದೆ ಸಂಪ್ರದಾಯದಂತೆ ನವ ಜೋಡಿಗಳು ಪಂಚಕಳಸ ರಥೋತ್ಸವವನ್ನು ಕಣ್ತುಂಬಿಕೊಂಡರು.

ಮಳೆಯ ನಡುವೆಯೇ ಗುಬ್ಬಿಯಪ್ಪನ ಪುಷ್ಪ ರಥೋತ್ಸವ ಸಂಪನ್ನ

ಶ್ರೀ ಗುದ್ನೇಶ್ವರ ಸ್ವಾಮಿಗೆ ಹಲವಾರು ವರ್ಷದ ಪ್ರತೀತಿ ಇದೆ. ಭಕ್ತರು ಅಪಾರ ಪ್ರಮಾಣದಲ್ಲಿ ಆಗಮಿಸಿರುವುದು ಶ್ರೀ ಗುದ್ನೇಶ್ವರ ಸ್ವಾಮಿಯ ಶಕ್ತಿ ಸಂಕೇತ. ಶ್ರೀ ಗುದ್ನೇಶ್ವರ ಪಂಚಕಳಸ ರಥೋತ್ಸವ ಈ ಭಾಗದ ಹಿರಿಮೆಯ ಸಂಕೇತ.

ಪ್ರಭುಲಿಂಗ ದೇವರು, ಗುದ್ನೇಶ್ವರ ಮಠ

 

click me!