ಅಕ್ಷಯ ತೃತೀಯದಂದು ಆಭರಣ ಖರೀದಿ ಜಾಸ್ತಿ ಯಾಕೆ?

By Web Desk  |  First Published May 7, 2019, 12:16 PM IST

ಭಾರತೀಯ ಹಬ್ಬಗಳಲ್ಲಿ ಅಕ್ಷಯ ತೃತೀಯಕ್ಕೆ ಪ್ರತ್ಯೇಕ ಸ್ಥಾನವಿದೆ. ಅಂದು ಶುಭಗ್ರಹಗಳೆಲ್ಲದರ ಅನುಗ್ರಹವೂ ಒದಗಿ ಬರುವ ದಿನವೆಂದು ನಂಬಿಕೆ. ಯುಗಾದಿ ಪರ್ವದಂತೆಯೇ ಅಕ್ಷಯ ತೃತೀಯವೂ ಶುಭಮಂಗಲ ಕಾರ್ಯಗಳ ಆರಂಭಕ್ಕೆ, ಅಕ್ಷರಾಭ್ಯಾಸಕ್ಕೆ, ಉಪನಯನ-ವಾಹಾದಿಗಳಿಗೆ, ಚಿನ್ನ ಖರೀದಿಗೆ, ಹಣ ಹೂಡಿಕೆ, ವ್ಯಾಪಾರ ವ್ಯವಹಾರಗಳ ಶುಭಾರಂಭ ಇತ್ಯಾದಿಗಳಿಗೆ ಶುಭ ದಿನವೆಂದು ಪ್ರತೀತಿ.


ಸೌಭಾಗ್ಯವತಿಯರ ಹಣೆಯ ಬೈತಲೆಯ ಮುಂಭಾಗದಲ್ಲಿ ‘ಲಕ್ಷ್ಮೀರ್ವಸತು’ ದೇವಿ ವಾಸವಾಗಿದ್ದಾಳೆ ಎಂಬ ನಂಬಿಕೆ ಇದೆ. ವೈಶಾಖ ಶುಕ್ಲಪಕ್ಷದ ತೃತೀಯೆಯ ದಿನವನ್ನು ಅಕ್ಷಯ ತೃತೀಯವಾಗಿ ಆಚರಿಸುವ ಸಂಪ್ರದಾಯವಿದೆ. ಮುಖ್ಯವಾಗಿ ನಮ್ಮ ಜೀವನ ವಿಧಾನದಲ್ಲಿ ಪರಸ್ಪರ ಒಲುಮೆ, ಪ್ರೀತಿ ವಿಶ್ವಾಸಗಳೆಂಬ ಮಾನವೀಯ ಮೌಲ್ಯಗಳು ಹಾಸುಹೊಕ್ಕಾಗಿರಬೇಕು.

ಧನ ಪ್ರಾಪ್ತಿಗೆ ಅಕ್ಷಯ ತೃತೀಯದಂದು ಹೀಗ್ ಮಾಡಿ...

Tap to resize

Latest Videos

undefined

ಈ ಕಲಿಯುಗವು ಸಕಲ ಪಾಪಗಳ ಭಂಡಾರವೇ ಆಗಿದ್ದರೂ ಭಕ್ತಿಭಾವ, ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ಎಲ್ಲದರಲ್ಲಿಯೂ ಎಲ್ಲೆಲ್ಲೂ ಶ್ರೀದೇವರನ್ನು ಕಂಡರೆ ಅಹಂಕಾರ, ಮಮಕಾರ, ಅಹಂಭಾವಗಳು ನೀಗುತ್ತವೆ. ಶ್ರೀದೇವರ ನಾಮಸ್ಮರಣೆ ಮಾಡುವುದಕ್ಕೆ ಅಡ್ಡಿ ಆತಂಕಗಳು ಇರುವುದಿಲ್ಲ. ಮಡಿ ಮೈಲಿಗೆಗಳು ಇರುವುದಿಲ್ಲ. ನಿಷ್ಕಲ್ಮಷ ಭಾವ ಮನಸ್ಸು, ಸ್ಮರಣೆಗೆ ಆಚಾರ ವಿಚಾರಗಳು, ಸೂತಕಗಳು ಇರುವುದಿಲ್ಲ. ನಾಮಸ್ಮರಣೆಯಿಂದ ಅನೇಕ ಜನ್ಮದ ಪಾಪಗಳು ನಾಶವಾಗುತ್ತವೆ.

ಪಾಪಕರ್ಮಗಳಲ್ಲಿ ಕಾಯಿಕ, ವಾಚಕ, ಮಾನಸಿಕ ಎಂದು ಮೂರು ಬಗೆಗಳು. ಈ ನರಜನ್ಮದಲ್ಲಿ ಪಾಪ ಪುಣ್ಯಗಳ ಪರಿಕಲ್ಪನೆ ವಿಶೇಷವಾಗಿದೆ. ಬೇಕು, ಮತ್ತಷ್ಟುಬೇಕು ಎಂಬ ಆಶಾಪಾಶದಲ್ಲಿ ಸಿಕ್ಕಿ ತೊಳಲುವುದೇ ಪಾಪ. ಈ ಆಶಾಪಾಶವನ್ನು ಹರಿದು, ಪರಮಾತ್ಮನಲ್ಲಿ ಒಂದಾಗುವುದೇ ವ್ರತಗಳ ಮುಖ್ಯ ಉದ್ದೇಶ. ಇದು ಆಡಂಬರಕ್ಕೆ, ಡಂಭಾಚಾರಕ್ಕೆ ಕಾರಣವಾಗದಂತೆ ಗಮನ ಇರಿಸಬೇಕು.

ಅಕ್ಷಯ ತೃತೀಯಾ : ಚಿನ್ನಕ್ಕೆ ಭರ್ಜರಿ ರಿಯಾಯಿತಿ

ಅಕ್ಷಯ ತೃತೀಯ ಶುಭ ದಿನ

ಉಳಿತಾಯ ಹಾಗೂ ಸಂಪತ್ತಿನ ಸದುಪಯೋಗದ ಪೂರ್ಣ ಫಲ ದೊರೆಯಬೇಕೆಂಬ ಸದ್ಭಾವನೆಯಿಂದಲೇ ಚಿನ್ನ ಹರಳುಗಳಂಥ ನಾನಾ ಬಗೆಯ, ನಾನಾ ರೂಪದ ಖರೀದಿ, ಹೂಡಿಕೆಗಳು ಅಕ್ಷಯ ತೃತೀಯದ ಈ ಶುಭ ಅವಸರದಲ್ಲೇ ನಡೆಯುತ್ತವೆ. ಜೊತೆಗೆ ಮದುವೆ, ಮುಂಜಿ, ಗೃಹಪ್ರವೇಶ ಇತ್ಯಾದಿ ಶುಭ ಕಾರ್ಯಗಳನ್ನು ಪಂಚಾಂಗ ಶುದ್ಧಿ ಇತ್ಯಾದಿಗಳನ್ನು ನೋಡುವ ಅಗತ್ಯವಿಲ್ಲದೆಯೇ ನೆರವೇರಿಸಬಹುದಾಗಿದೆ.

ಮುತ್ತೈದೆಯರಿಗೆ ಅರಿಶಿಣ, ಕುಂಕುಮ, ಹಿರಿಯರಿಗೆ ತಾಂಬೂಲ ಸಮರ್ಪಿಸಿ, ಆಶೀರ್ವಾದ ಪಡೆದಲ್ಲಿ ರಾಜಯೋಗ, ಹೊಸ ವಸ್ತ್ರಗಳ ದಾನದಿಂದ ಆರೋಗ್ಯವರ್ಧನೆ, ನವಧಾನ್ಯಗಳನ್ನು ದಾನ ಮಾಡುವುದರಿಂದ ನವಗ್ರಹಗಳ ಪೀಡನೆ, ವಿವಿಧ ರೀತಿಯ ಭಯಗಳು, ದುರಂತ ಸಾಧ್ಯತೆಗಳು ದೂರವಾಗುತ್ತವೆ. ಮೊಸರನ್ನು ದಾನ ಮಾಡಿದರೆ ಆಯಸ್ಸು ವರ್ಧಿಸುತ್ತದೆ.

ಗೋಪೂಜೆ ಮಾಡಿದಲ್ಲಿ ವಿವಾಹ ದೋಷಗಳು ಪರಿಹಾರವಾಗುವುದೆಂಬ ನಂಬಿಕೆ ಇದೆ. ಅಕ್ಷತೆ ಅಥವಾ ಮಂತ್ರಪೂರ್ವಕ ಅಕ್ಕಿಕಾಳು ಅಕ್ಷಯ ರೂಪದ ಸಂಕೇತ. ಇದು ಅನುಗ್ರಹ, ಆಶೀರ್ವಾದ ರೂಪದಲ್ಲಿರುತ್ತದೆ. ನಿರಂತರ ಸಮೃದ್ಧಿ, ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಇದರ ಆಶಯಾರ್ಥ.

ಕೃಷಿಗೂ ನಂಟಿದೆ

‘ಅನ್ನಾದ್ಭವಂತಿ ಭೂತಾನಿ’ ಎಂಬಂತೆ ಜೀವಿಗಳ ಹುಟ್ಟು ಅನ್ನದಿಂದ. ಅನ್ನದ ಬೆಳೆ ಸಾಧ್ಯವಾಗುವುದು ಮಳೆಯಿಂದ. ಹಾಗಾಗಿ ಪಶು ಸಂಗೋಪನೆ ಕೃಷಿಗೆ ಪೂರಕವಾದ ಉದ್ಯೋಗ. ಈ ಉದ್ಯೋಗ ಕೃಷಿ ಹಾಗೂ ಆಹಾರ ಎರಡರ ಅಂಗವಾಗಿ ವ್ಯಾವಹಾರಿಕವಾಗಿ ಬೆಳೆದು ಬಂದಿದೆ.

ದಾನಗಳಲ್ಲಿ ಸಹ ಗೋದಾನ ಹಾಗೂ ಅನ್ನದಾನಗಳೇ ಅತಿ ಶ್ರೇಷ್ಠವೆಂದು ವೇದಗಳಲ್ಲಿ ನಿರೂಪಿಸಲಾಗಿದೆ. ಅಕ್ಷತೆ ಅಥವಾ ಮಂತ್ರಪೂರ್ವಕ ಅಕ್ಕಿಕಾಳು ಅಕ್ಷಯ ರೂಪದ ಸಂಕೇತವಾಗಿ ಅನುಗ್ರಹ, ಆಶೀರ್ವಾದ ರೂಪದಲ್ಲಿ ತೋರಿಬಂದಿದೆ. ನಿರಂತರ ಸಮೃದ್ಧಿಯ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಇದರ ಆಶಯಾರ್ಥವಾಗಿದೆ.

ಅಕ್ಷಯ ತೃತೀಯ ತ್ರೇತಾಯುಗದ ಆರಂಭದ ದಿನ!

ಅಕ್ಷಯ ತೃತೀಯವೆಂದರೆ ತ್ರೇತಾಯುಗದ ಆರಂಭದ ದಿನ ಎನ್ನುವ ನಂಬಿಕೆ ಇದೆ. ಶ್ರೀವಿಷ್ಣು ಪರಶುರಾಮನಾಗಿ ಅವತಾರ ತಾಳಿದ್ದು, ವೇದವ್ಯಾಸರು ಮಹಾಭಾರತ ಪುರಾಣವನ್ನು ಬರೆಯಲಾರಂಭಿಸಿದ್ದು ಪಾಂಡವರು ವನವಾಸದಲ್ಲಿದ್ದಾಗ ದ್ರೌಪದಿಗೆ ಅತಿಥಿ ಸತ್ಕಾರಕ್ಕಾಗಿ ಅಕ್ಷಯ ಪಾತ್ರೆಯನ್ನು ಕೊಟ್ಟಿದ್ದು ಶ್ರೀಮಾತಾ ‘ಗಂಗಾ’ದೇವಿಯು ಶಿವನ ಜಟೆಯಿಂದ ಭೂಮಿಗೆ ಅವತರಿಸಿದ್ದು, ಪರಶಿವನು ಬ್ರಹ್ಮನ ಶಾಪದಿಂದ ಮುಕ್ತನಾದುದು, ಶ್ರೀಕೃಷ್ಣನಿಗೆ ಅವಲಕ್ಕಿಯನ್ನು ಕೊಟ್ಟು ಕುಚೇಲ ‘ಕುಬೇರನಾದುದು, ಪಾಂಡವರು ತಮ್ಮ ವನವಾಸ ಅಜ್ಞಾತವಾಸದ ಅನಂತರ ಶಸ್ತ್ರಾಸ್ತ್ರವನ್ನು ಮರಳಿ ಪಡೆದುದು ಇದೇ ಅಕ್ಷಯ ತೃತೀಯದ ದಿನವೆಂದು ಪುರಾಣಗಳಲ್ಲಿ ಉಲ್ಲೇಖಿಸಲ್ಟಟ್ಟಿದೆ. ಇಂದು ಪುರುಷಾರ್ಥಗಳ ಪೈಕಿ ‘ಅರ್ಥ’ಕ್ಕೆ ಅಂದರೆ, ಸಂಪತ್ತು, ಕೀರ್ತಿ, ಯಶಸ್ಸನ್ನು ಪಡೆಯುವುದಕ್ಕೇ ಒತ್ತು ಸಿಕ್ಕಿದೆ! ಈ ದಿನ ಕುಬೇರ ಹಾಗೂ ಶ್ರೀಲಕ್ಷ್ಮಿಯ ಪೂಜೆ ಮಾಡಿದರೆ ಉತ್ತರೋತ್ತರ ಸಂಪದಭಿವೃದ್ಧಿ ಆಗಲಿದೆ ಎಂದು ಸಾರ್ವತ್ರಿಕವಾಗಿ ತಿಳಿಯಲಾಗಿದೆ.

ಆಭರಣಗಳ ಉಪಯೋಗ, ದೈಹಿಕ ಪರಿಣಾಮ

ಪುರಾಣ ಕಾಲದಿಂದಲೂ ಚಿನ್ನ ಬೆಳ್ಳಿ, ತಾಮ್ರ ಇತ್ಯಾದಿ ವಸ್ತುಗಳ ಲೋಹಗಳ ಮೋಹ ಅಲಂಕಾರಿಕವಾಗಿ ಪೂರಕವಾಯಿತು. ಆಭರಣಗಳ ಹೊರತಾಗಿ ಇಡೀ ಪ್ರಪಂಚದ ಸ್ತ್ರೀಯರ ಶೃಂಗಾರದ ಕಲ್ಪನೆಯನ್ನು ಮಾಡಲು ಬರುವಂತಿಲ್ಲ. ಪ್ರಪಂಚದ ಸ್ತ್ರೀ ಪುರುಷರು, ಅಬಾಲವೃದ್ಧರೂ ಅಲಂಕಾರಿಕ ಆ ಭೂಷಣಗಳನ್ನು ಧರಿಸುವ ಕ್ರಮವು ಅಂದಿನಿಂದ ಇಂದಿನವರೆಗೆ ಮುಂದುವರಿಯುತ್ತಾ ಬಂದಿದೆ.

ಇಂದಿನ ಆಧುನಿಕ ಕಾಲದ ನಾರಿಯರಾದಿಯಾಗಿ ಎಲ್ಲರೂ ಮೈತುಂಬಾ ಆಭರಣಗಳನ್ನು ಧರಿಸುವ ಕ್ರಮವನ್ನು ತ್ಯಜಿಸಿದ್ದರೂ ಉಂಗುರ ಹಾಗೂ ಒಂದೆಳೆಯ ಸರ ಧರಿಸುವುದನ್ನು ಬಿಟ್ಟಿಲ್ಲ. ದೂರವಾಗಿಯೂ ಇಲ್ಲ ! ಆಭರಣಗಳ ಮೋಹದಿಂದ ಪುರುಷರು ಸಹ ಕೈಗೆ ಬ್ರಾಸ್‌ಲೆಟ್‌, ನವರತ್ನಗಳ ಉಂಗುರ, ಅದೃಷ್ಟರತ್ನದ ಉಂಗುರ, ಸರಗಳ ಹೊರತಾಗಿ ಈಗ ಕೇವಲ ಒಂದೇ ಕಿವಿಯಲ್ಲಿ ಒಂಟಿ ಧರಿಸುವ ಫ್ಯಾಶನ್‌ ಸಾಂಕ್ರಾಮಿಕವಾಗಿ ಹಬ್ಬಿದೆ. ಇದು ಸೌಂದರ್ಯವರ್ಧಕಗಳಷ್ಟೇ ಅಲ್ಲ, ಆರೋಗ್ಯ ಸಂವರ್ಧನೆಗೂ ಅತ್ಯಂತ ಪ್ರಯೋಜನಕರ ಕೂಡ.

ಶುದ್ಧ ಚಿನ್ನ, ಬೆಳ್ಳಿ, ತಾಮ್ರಗಳಲ್ಲದೇ ರತ್ನಖಚಿತ ಆಭರಣಗಳ ಧರಿಸುವಿಕೆ ನಮ್ಮ ಆರೋಗ್ಯಭಾಗ್ಯಕ್ಕೆ ನಿಜಕ್ಕೂ ಪೂರಕ. ಇದರಿಂದ ಅಂತಃಕರಣ ಶುದ್ಧಿಯೊಂದಿಗೆ ಮಾನಸಿಕ ಶಾಂತಿಯೂ ಲಭಿಸುವುದು. ನತ್ತು (ಮೂಗುತಿ) ಧರಿಸುವುದರಿಂದ ಮೂಗಿನ ಯಾವುದೇ ರೋಗಗಳು ಉಪಶಮನಗೊಂಡು ವಾಸನಾ ಗ್ರಹಣ ಶಕ್ತಿ ಉಂಟಾಗುತ್ತದೆ. ಗಂಟಲಿನ ಕೆರೆತ ಹಾಗೂ ಕೆಮ್ಮು ಉಪಶಮನವಾಗುತ್ತದೆ. ಮೂಗಿನಲ್ಲಿ ಧರಿಸುವ ಆಭರಣಗಳಿಂದ ನಮ್ಮ ಎದೆಯಲ್ಲಿ ಶುದ್ಧ ಗಾಳಿ ಸಂಚಾರವಾಗಿ ದೇಹದ ರಕ್ತಚಲನಾ ಕ್ರಿಯೆಯು ಸರಾಗವಾಗಿ ನಡೆಯುತ್ತದೆ. ಜುಮುಕಿ, ಬೆಂಡೋಲೆ ಆಭರಣಗಳಿಂದ ತ್ವಚೆ ಸಂಬಂಧದ ಎಲ್ಲಾ ರೋಗಗಳೂ ನಿವಾರಣೆಯಾಗುತ್ತವೆ.

ನಾಲಗೆ, ಕಣ್ಣುಗಳ ತೊಂದರೆಗಳು ಹಾಗೂ ಉದರಸಂಬಂಧಿ ರೋಗಗಳು ಹುಟ್ಟಿಕೊಳ್ಳುವುದಿಲ್ಲ, ಕಂಠ ಸೂತ್ರಗಳೆಂದು ಕರೆಸಿಕೊಳ್ಳುವ ಮಂಗಲಸೂತ್ರ, ಹಾರ, ಸರಪಳಿ, ನೆಕ್ಲೇಸ್‌, ಮುಂತಾದ ಆಭರಣಗಳಿಂದ ಕುತ್ತಿಗೆ ಹಿಂಭಾಗವು ಸಶಕ್ತವಾಗುತ್ತದೆ. ಅದರ ಕೆಳಗಿರುವ ಬೆನ್ನೆಲುಬಿನಲ್ಲಿ ಯಾವುದೇ ರೀತಿಯ ತೊಂದರೆಗಳುಂಟಾಗುವುದಿಲ್ಲ, ಇದು ಔಷಧಿಪ್ರಾಯವಾಗಿ ಕೆಲಸ ಮಾಡುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ. ಕಾಲ್ಗೆಜ್ಜೆ, ಕಾಲುಂಗುರ, ಕಡಗಗಳ ಧರಿಸುವಿಕೆಯಿಂದ ಹಿಮ್ಮಡಿಯ ನೋವು ಕಾಣಿಸಿಕೊಳ್ಳದು. ಮೊಣಕಾಲಿನ ಸಮಸ್ಯೆ ಉಪಶಮನವಾಗುತ್ತದೆ.

ಕಾಲುಂಗುರಗಳಿಂದ ಬೆರಳುಗಳಲ್ಲಿನ ರಕ್ತ ಸಂಚಾರವು ಸರಾಗವಾಗಿ ನಡೆಯುತ್ತದೆ. ಸೊಂಟಪಟ್ಟಿಡಾಬುಗಳನ್ನು ಧರಿಸುವುದರಿಂದ ಮಹಿಳೆಯರ ಮಾಸಿಕ ಧರ್ಮದ ಅನಿಯಮಿತ ಸಮಸ್ಯೆ ದೂರವಾಗುತ್ತದೆ ಹಾಗೂ ಪಚನ ಕ್ರಿಯೆಯು ನಿರಾತಂಕವಾಗಿರುತ್ತದೆ. ಹಾಗೆಯೇ ಹೊಕ್ಕುಳ ಕೆಳಭಾಗದಲ್ಲಿ ಯಾವುದೇ ರೋಗ ಉಂಟಾಗದು ; ಹೊಟ್ಟೆಯ ಬೊಜ್ಜು ಕೂಡ ಕರಗಿ ಹೋಗುತ್ತದೆ. ಈ ಆಭರಣಗಳನ್ನು ಇಂದು ಕೇವಲ ಮದುವೆ, ಮುಂಜಿ ಮುಂತಾದ ಶುಭಮಂಗಲ ಕಾಯಗಳಲ್ಲಿ ಧರಿಸುವುದನ್ನು ಕಾಣಬಹುದು.

ಬಾಜುಬಂದ್‌ (ತೋಳಬಂದಿ) ಆಭರಣವನ್ನು ಧರಿಸುವುದರಿಂದ ರಕ್ತಸಂಚಾರವು ಸರಾಗವಾಗಿ ನಡೆದು ಮಸ್ತಿಷ್ಕ ಉತ್ತಮಗೊಂಡು ಋುಣಾತ್ಮಕ ಚಿಂತನೆಗಳು ನಿವಾರಣೆಯಾಗುತ್ತವೆ. ಹೃದಯ ಬಡಿತವು ಉತ್ತಮವಾಗಿ ಹೆಗಲು ನೋವು ಕೂಡ ಉಪಶಮನವಾಗುತ್ತದೆ.

ಮಣಿ ಗಂಟು ಯಾ ಮುಂಗೈಗಳಲ್ಲಿ ಬಳೆ, ಬಿಲ್ವಾರಾ, ಪಾಟ್ಲಿ, ಸರಪಳಿ ಮುಂತಾದ ವಿಶೇಷ ವಿನ್ಯಾಸದ ಆಭರಣಗಳು ಮಂಗಲಸೂಚಕ ಎಂದು ಕರೆಸಿಕೊಂಡಿವೆ. ಇವು ರಕ್ತದೊತ್ತಡವನ್ನು ಹತೋಟಿಯಲ್ಲಿರಿಸುತ್ತವೆ. ಕಿವುಡು, ಹಲ್ಲುನೋವು ನಿವಾರಣೆ ಮಾಡಿ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ, ವಾಕ್‌ಶಕ್ತಿ ದೋಡವನ್ನೂ ನೀಗಿಸುತ್ತವೆ.

ಚಿನ್ನ ಬೆಳ್ಳಿ, ತಾಮ್ರ ಪಂಚಲೋಹಗಳಲ್ಲಿ ದೈವೀಶಕ್ತಿಯಿರುವುದರಿಂದ ಇವುಗಳಿಂದ ನಿರ್ಮಿತವಾದ ಕಡಗ, ಬಳೆ, ಬ್ರಾಸ್ಲೆಟ್‌ಗಳನ್ನು ಧರಿಸುವವರಿಗೆ ಭೂತ, ಪ್ರೇತ ಬಾಧೆ, ಮಾಟ, ಮದ್ದು ಪ್ರಯೋಗಗಳಿಂದ ರಕ್ಷಣೆ ಲಭಿಸುವುದು, ಅಲ್ಲದೆ ವಿಪತ್ತು, ಕಷ್ಟನಷ್ಟಗಳ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಇವುಗಳಲ್ಲಿ ದೈವೀಶಕ್ತಿಯಿದೆ, ಎಂಬ ಹಿನ್ನೆಲೆಯಲ್ಲಿ ಇವುಗಳನ್ನು ಧರಿಸುವ ಪದ್ಧತಿ ಬಂತು.

ಗ್ರಹ ನಕ್ಷತ್ರಗಳ ಜತೆಗೂ ಇವುಗಳ ಸಂಬಂಧವಿದೆ, ಇಂಥ ಗ್ರಹದೋಷ ನಿವಾರಣೆಗೆ ಇಂಥ ಆಭರಣ, ಹರಳು ಇತ್ಯಾದಿಗಳನ್ನು ಧರಿಸಬೇಕೆಂಬ ಕ್ರಮ ರೂಢಿಗೆ ಬಂದುದು ಈ ಹಿನ್ನೆಲೆಯಲ್ಲೇ. ಮಾನವ ಶರೀರವು ಪಂಚ ಮಹಾಭೂತಗಳಿಂದ ನಿರ್ಮಾಣವಾಗಿದೆ, ಮೇಲೆ ತಿಳಿಸಿದ ಆಭರಣಗಳ ಪ್ರಭಾವವು ಶರೀರದ ಮೇಲೆ ಪರಿಣಾಮ ಬೀರಿ ಶರೀರದ ನಾನಾ ರೋಗಗಳು, ನ್ಯೂನತೆಗಳು ಉಪಶಮನವಾಗಲಿವೆ.

ಅಕ್ಷಯ ತೃತೀಯದಂದು ಆಭರಣ ಖರೀದಿಸುವುದು ಯಾಕೆ?

ಭಾರತೀಯ ಹಿಂದೂ ಪಂಚಾಂಗಗಳ ಪ್ರಕಾರ ವಿಜಯದಶಮಿ, ಬಲಿಪಾಡ್ಯ, ಯುಗಾದಿ, ಅಕ್ಷಯ ತೃತೀಯಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ಈ ದಿನ ಎಲ್ಲಾ ಶುಭ ಕಾರ್ಯಗಳನ್ನು ನಡೆಸಲಾಗುತ್ತದೆ. ಅಕ್ಷಯ ತೃತೀಯದಂದು ವಾಹನ, ಭೂಮಿ, ಚಿನ್ನಾಭರಣ, ನವರತ್ನಗಳು, ಬೆಲೆಬಾಳುವ ಉಪಕರಣಗಳು, ಜೀವನಕ್ಕೆ ಬೇಕಾದ ವಸ್ತುಗಳನ್ನು ಖರೀದಿಸಿದರೆ ನಿರಂತರ ಅದೃಷ್ಟಬಲ ಹೊಂದಬಹುದು ಎಂಬ ದೃಢ ನಂಬಿಕೆ ಜನರಲ್ಲಿದೆ.

ಈ ನಂಬಿಕೆಯ ಜತೆಗೆ, ಯಾವುದೇ ರೀತಿಯ ಶುಭ ಕಾರ್ಯಗಳನ್ನು ಆರಂಭಿಸಿದರೂ ಅದರಲ್ಲಿ ಸಂಪೂರ್ಣ ಯಶಸ್ಸು ಸಿಗುವುದೆಂಬ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಅಕ್ಷಯ ತೃತೀಯ ದಿನವನ್ನು ಸುವರ್ಣ ಯುಗದ ಆರಂಭದ ಘಟ್ಟಎಂದು ಪರಿಗಣಿಸಲಾಗಿದೆ. ಹೀಗಾಗಿ ಯಾವುದೇ ದೇವತಾಕಾರ್ಯಗಳು, ಪೂಜೆ ಪುನಸ್ಕಾರಗಳು, ವ್ರತ, ದಾನ-ಧರ್ಮಗಳು ಪುಣ್ಯಸಂಚಯಕ್ಕೆ ಕಾರಣವಾಗುತ್ತದೆ.

- ಡಾ. ಗುರುರಾಜ ಪೋಶೆಟ್ಟಿಹಳ್ಳಿ

click me!