
ಬೆಂಗಳೂರು(ಮಾ.09): ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿರುವ ಗುರುಪಾದುಕಾವನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಮಹಾಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸಿದ್ದರು. ಇಡೀ ರಾತ್ರಿ ಮಂತ್ರ ಪಠಣಗಳು, ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಾಗತಿಕ ಆಧ್ಯಾತ್ಮಿಕ ಗುರುಗಳಾದ ರವಿಶಂಕರ್ ಗುರೂಜಿ ಅವರ ಸಾನ್ನಿಧ್ಯದಲ್ಲಿ ಭಕ್ತರು ಧ್ಯಾನಸ್ಥರಾದರು. ಸಂಜೆ, ಮಂತ್ರ ಪಠಣ ಮತ್ತು ಸುಮಧುರ ಭಜನೆಗಳು ನಡೆದವು. ಸಮಾರಂಭವು ಭಕ್ತರಿಗೆ ಸಂತೋಷ, ಸಮೃದ್ಧಿ ಮತ್ತು ಬಯಕೆಗಳ ಈಡೇರಿಕೆಯನ್ನು ದಯಪಾಲಿಸಲು ಸಹಕಾರಿ ಆಗಲಿ ಎಂದು ಗುರೂಜಿ ಹಾರೈಸಿದರು.
ಬೆಂಗಳೂರು: ಉದ್ಯಾನ ನಗರಿಯಲ್ಲಿ ಶಿವನಾಮ ಸ್ಮರಣೆ..!
‘ಶಿವರಾತ್ರಿಯೆಂದರೆ ಶಿವನಲ್ಲಿ ಆಶ್ರಯ ಪಡೆಯುವುದು. ಶಿವನೆಂದರೆ ಶಾಂತಿ, ಅನಂತತೆ, ಸೌಂದರ್ಯ ಮತ್ತು ಅದ್ವೈತನಾದವನು. ನಿಮ್ಮ ನೈಜ ಸ್ವಭಾವವೇ ಶಿವನಾದುದರಿಂದ ನೀವು ಶಿವನನ್ನು ಆಶ್ರಯಿಸಿರಿ, ಏಕೆಂದರೆ ಅವನು ಇಡೀ ಬ್ರಹ್ಮಾಂಡದ ಧ್ಯಾನಸ್ಥ ಅಂಶವಾಗಿರುವನು’ ಎಂದು ಗುರೂಜಿ ಹೇಳಿದರು.
ಮಧ್ಯರಾತ್ರಿಯಲ್ಲಿ, ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಗುರುದೇವರೊಂದಿಗೆ ಶಿವರಾತ್ರಿಯ ವಿಶೇಷ ಧ್ಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಶಿವ ತತ್ವದ ಆನಂದದಲ್ಲಿ ಮುಳುಗಿದರು.