ಮಹಾದೇವನ ತಲೆಯ ಮೇಲೆ ಗಂಗೆ ಹಾಗೂ ಅರ್ಧ ಚಂದ್ರ ಸದಾ ಇರುತ್ತಾರೆ. ಇದಕ್ಕೆ ಬಹಳ ಆಸಕ್ತಿಕರವಾದ ಕತೆಯ ಹಿನ್ನೆಲೆ ಇದೆ. ಇದೊಂದು ಸಂದೇಶವನ್ನೂ ನೀಡುತ್ತಿದೆ.
ಇದೀಗ ಚಾತುರ್ಮಾಸ ಆರಂಭವಾಗಿದ್ದು, ಈ ಸಮಯದಲ್ಲಿ ಶಿವನ ಆರಾಧನೆಗೆ ವಿಶೇಷ ಮಹತ್ವವಿದೆ. ಅವನ ಅನುಗ್ರಹವಿದ್ದರೆ ವ್ಯಕ್ತಿಯು ಜೀವನದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸುವುದಿಲ್ಲ. ಶಿವನನ್ನು ಚಂದ್ರಶೇಖರ ಎನ್ನಲಾಗುತ್ತದೆ. ಆತ ದೇವರ ದೇವ, ಮಹಾದೇವ, ತಲೆಯ ಮೇಲೆ ಗಂಗೆಯನ್ನೂ ಚಂದ್ರನನ್ನೂ ಹೊತ್ತವನು. ಚಂದ್ರನು ಶಿವನ ತಲೆಯ ಮೇಲೆ ಏಕೆ ಕುಳಿತಿದ್ದಾನೆ ಎಂಬ ಬಗ್ಗೆ ಪುರಾಣಗಳಲ್ಲಿ ಆಸಕ್ತಿದಾಯಕ ಕಥೆಗಳು ಕಂಡುಬರುತ್ತವೆ.
ತಂಪಿಗೆ ಚಂದ್ರ
ಶಿವಪುರಾಣದ ಪ್ರಕಾರ, ಶಿವನು ಸಾಗರ ಮಂಥನದ ಸಮಯದಲ್ಲಿ ಹಾಲಾಹಲದ ವಿಷವನ್ನು ಕುಡಿದನು. ಈ ವಿಷವನ್ನು ತನ್ನ ಕಂಠದಲ್ಲಿ ಹಿಡಿದಿದ್ದರಿಂದ ಶಿವನನ್ನು ನೀಲಕಂಠ ಎಂದು ಕರೆಯಲಾಯಿತು. ಪುರಾಣಗಳ ಕಥೆಯ ಪ್ರಕಾರ, ವಿಷವನ್ನು ಸೇವಿಸಿದ ನಂತರ, ಮಹಾದೇವನ ದೇಹವು ಬಿಸಿಯಾಗಲು ಪ್ರಾರಂಭಿಸಿತು ಮತ್ತು ಅವನ ಮೆದುಳು ಹೆಚ್ಚು ಬಿಸಿಯಾಯಿತು. ಮಹಾದೇವನ ಈ ಸ್ಥಿತಿಯನ್ನು ಕಂಡು ದೇವಾನುದೇವತೆಗಳೆಲ್ಲ ಚಿಂತಾಕ್ರಾಂತರಾದರು. ಆಗ ದೇವತೆಗಳೆಲ್ಲರೂ ಆತನ ದೇಹವನ್ನು ತಂಪಾಗಿರಿಸಲು, ನೆತ್ತಿ ತಂಪಾಗಿಸಲು ಚಂದ್ರನನ್ನು ತಲೆಯ ಮೇಲೆ ಧರಿಸಬೇಕೆಂದು ಪ್ರಾರ್ಥಿಸಿದರು. ಬಿಳಿ ಚಂದ್ರನು ತುಂಬಾ ತಂಪಾಗಿರುತ್ತಾನೆ. ಇದು ಇಡೀ ಸೃಷ್ಟಿಗೆ ತಂಪು ನೀಡುತ್ತದೆ. ದೇವತೆಗಳ ಕೋರಿಕೆಯ ಮೇರೆಗೆ, ಶಿವನು ತನ್ನ ತಲೆಯ ಮೇಲೆ ಚಂದ್ರನನ್ನು ಹಿಡಿದುಕೊಂಡನು.
Budh Gochar 2023: ಮಿಥುನದಲ್ಲಿ ಬುಧನಿಂದ ಮೇಷ ಸೇರಿ 4 ರಾಶಿಗಳಿಗೆ ಯಶಸ್ಸು
ಶಿವನ ಈ ಸ್ಥಿತಿಯು ಪ್ರತಿಕೂಲ ಸಮಯದಲ್ಲಿಯೂ ಸಹ, ನಾವು ನಮ್ಮ ಶಾಂತತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಸೂಚಿಸುತ್ತದೆ.
ಚಂದ್ರನನ್ನು ಶಪಿಸಿದ
ಮತ್ಸ್ಯ ಪುರಾಣದ ಪ್ರಕಾರ ರಾಜ ಪ್ರಜಾಪತಿ ದಕ್ಷನಿಗೆ ಒಟ್ಟು 62 ಹೆಣ್ಣು ಮಕ್ಕಳಿದ್ದರು ಮತ್ತು ಅವನು ತನ್ನ 27 ಹೆಣ್ಣುಮಕ್ಕಳನ್ನು ಚಂದ್ರನಿಗೆ ಮದುವೆ ಮಾಡಿಸಿದನು. ಹಿಂದೂ ಪುರಾಣದ ಪ್ರಕಾರ, ದಕ್ಷನ ಈ 27 ಹೆಣ್ಣುಮಕ್ಕಳು ವೈದಿಕ ಜ್ಯೋತಿಷ್ಯದಲ್ಲಿ 27 ನಕ್ಷತ್ರಗಳಾಗಿದ್ದಾರೆ. ಮತ್ತು ಚಂದ್ರನು ಒಂದು ನಕ್ಷತ್ರಪುಂಜದಲ್ಲಿಸರಿಸುಮಾರು ಒಂದು ದಿನ ಕಳೆಯುತ್ತಾನೆ. ಆದ್ದರಿಂದ ಚಂದ್ರನ ತಿಂಗಳು ಸುಮಾರು 27 ದಿನಗಳನ್ನು ಒಳಗೊಂಡಿರುತ್ತದೆ. ಇದು ನಕ್ಷತ್ರಗಳ ಸಂಖ್ಯೆಗೆ ಸಮಾನವಾಗಿರುತ್ತದೆ.
Tilak Remedies: ರಾಶಿ ಪ್ರಕಾರ ಈ ರೀತಿ ತಿಲಕವಿಟ್ಟರೆ, ಎಲ್ಲ ಕೆಲಸದಲ್ಲಿ ಯಶಸ್ಸು
27 ಹೆಂಡತಿಯರಲ್ಲಿ ರೋಹಿಣಿ ಅವನಿಗೆ ಅತ್ಯಂತ ಹತ್ತಿರವಾಗಿದ್ದಳು. ಇದರಿಂದ ದುಃಖಿತರಾದ ಚಂದ್ರನ ಉಳಿದ ಪತ್ನಿಯರು ತಮ್ಮ ತಂದೆ ಪ್ರಜಾಪತಿ ದಕ್ಷನಿಗೆ ಚಂದ್ರನ ವಿರುದ್ಧ ದೂರು ನೀಡಿದರು. ಆಗ ದಕ್ಷನು ಚಂದ್ರನನ್ನು ಕ್ಷಯ ರೋಗದಿಂದ ಬಳಲುವಂತೆ ಶಾಪ ನೀಡಿದನು. ಈ ಕಾರಣದಿಂದಾಗಿ, ಚಂದ್ರನ ಸೌಂದರ್ಯ ಕಡಿಮೆಯಾಗುತ್ತಲೇ ಇತ್ತು. ಇದರಿಂದ ಅವಮಾನಿತನಾದ ಚಂದ್ರ ಸಮುದ್ರದಡಿ ಹೋಗಿ ಬಚ್ಚಿಟ್ಟುಕೊಂಡ. ಇದರಿಂದ ಪ್ರಾಕೃತಿಕ ಸಹಜತೆ ಕದಡತೊಡಗಿತು. ಚಂದ್ರನ ತೊಂದರೆಯನ್ನು ನೋಡಿದ ನಾರದ ಶಿವನನ್ನು ಪೂಜಿಸುವಂತೆ ಸಲಹೆ ನೀಡಿದ. ಚಂದ್ರನು ಶೀಘ್ರದಲ್ಲೇ ಸೋಮನಾಥ ದೇವಾಲಯದ ಬಳಿ ಹೋಗಿ ಶಿವನನ್ನು ತನ್ನ ಭಕ್ತಿ ಮತ್ತು ತೀವ್ರವಾದ ತಪಸ್ಸಿನಿಂದ ಸಂತೋಷ ಪಡಿಸಿದನು. ಶಿವನ ಕೃಪೆಯಿಂದ ಹುಣ್ಣಿಮೆಯಂದು ಚಂದ್ರನು ತನ್ನ ಪೂರ್ಣ ರೂಪದಲ್ಲಿ ಕಾಣಿಸಿಕೊಂಡನು, 15 ದಿನಗಳ ಕಾಲ ಸೌಂದರ್ಯ ಪಡೆವ ಹಂತವನ್ನೂ ಪಡೆದನು. ಮತ್ತು ಅವನು ತನ್ನ ಎಲ್ಲಾ ದುಃಖಗಳಿಂದ ಮುಕ್ತನಾದನು. ಆಗ ಚಂದ್ರನ ಕೋರಿಕೆಯ ಮೇರೆಗೆ ಶಿವನು ಅವನನ್ನು ತನ್ನ ತಲೆಯ ಮೇಲೆ ಸದಾ ಇರುವಂತೆ ಹಾಕಿಕೊಂಡನು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.