ಗಣೇಶ ಹಬ್ಬ: ರಾಜ್ಯಕ್ಕೆ ಸೆ.18ರಂದು ರಜೆಯಿದ್ದರೆ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಬದಲಿ ದಿನ ರಜೆ ಘೋಷಣೆ

By Sathish Kumar KHFirst Published Sep 16, 2023, 4:10 PM IST
Highlights

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಸೆ.18ರ ಬದಲಾಗಿ ಸೆ.19ರ ಮಂಗಳವಾರ ಗಣೇಶ ಹಬ್ಬದ ರಜೆ ಘೋಷಣೆ ಮಾಡಲಾಗಿದೆ. 

ಬೆಂಗಳೂರು (ಸೆ.16): ದೇಶದಾದ್ಯಂತ ಸಂಭ್ರಮ ಸಡಗರಿಂದ ವಿಘ್ನ ನಿವಾರಕ ಗಣೇಶ ಹಬ್ಬ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸೆ.18ರಂದು ಸಾರ್ವತ್ರಿಕ ರಜೆಯನ್ನು ಸರ್ಕಾರ ಘೋಷಣೆಮಾಡಿದೆ. ಆದರೆ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸ್ಥಳೀಯ ಪರಿಸ್ಥಿತಿಗಳ ಅನುಸಾರ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಈ ಜಿಲ್ಲೆಗಳಲ್ಲಿ ಸೆ.18ರ ಬದಲಾಗಿ ಸೆ.19ರ ಮಂಗಳವಾರ ಗಣೇಶ ಹಬ್ಬದ ರಜೆಯನ್ನು ಘೋಷಣೆ ಮಾಡಲಾಗಿದೆ. 

ದ‌.ಕ ಜಿಲ್ಲೆಯಲ್ಲಿ ಸೆ.19ರಂದು ಗಣೇಶ ಚತುರ್ಥಿ ರಜೆ ಘೋಷಣೆ ಮಾಡಿ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ. ಸರ್ಕಾರಿ ರಜೆ ದಿನಾಂಕವನ್ನು ಬದಲಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಆದೇಶ ಹಿನ್ನೆಲೆ ಸೆ.19ರಂದು ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸೆ.18 ಸೋಮವಾರ ರಜೆಯಿದೆ. ಆದರೆ, ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಗಣೇಶ ಹಬ್ಬದ ಆಚರಣೆಯ ದಿನದ ಬಗ್ಗೆ ಗೊಂದಲ ಹಿನ್ನೆಲೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೋಮವಾರದ ಬದಲಾಗಿ ಮಂಗಳವಾರ (ಸೆ.19ರಂದು) ರಜೆ ನೀಡಲು ಆದೇಶ ಹೊರಡಿಸಲಾಗಿದೆ. 

ಗಣಪತಿ ಬಿಡುವಾಗ ಬಪ್ಪ ಮೋರಿಯಾ ಅಂತಾರಲ್ಲ, ಹಂಗಂದ್ರೇನು?

ಇನ್ನು ಕರಾವಳಿ ಜಿಲ್ಲೆಗಳಲ್ಲಿ ಗಣೇಶ ಹಬ್ಬವನ್ನು ಸೋಮವಾರದ ಬದಲಿಗೆ ಮಂಗಳವಾರ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳವಾರವೇ ಸರ್ಕಾರಿ ರಜೆ ನೀಡಬೇಕು ಎಂದು ಸ್ಥಳೀಯರಿಂದ ಕೂಗು ಕೇಳಿಬಂದಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಪತ್ರ ತಲುಪಿದ ಕೂಡಲೇ ಚರ್ಚೆ ಮಾಡಿದ ಮುಖ್ಯ ಕಾರ್ಯದರ್ಶಿ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸೆ.19ರಂದು ರಜೆ ನೀಡಲು ಸೂಚನೆ ನೀಡಿದ್ದರು. ಇದೀಗ ಸರ್ಕಾರದ ಅಧಿಕೃತ ಆದೇಶ ಬಂದಿದ್ದು, ಸೆ.19ರಂದು ರಜೆ ಘೋಷಣೆ ಮಾಡಲಾಗಿದೆ. 

click me!