ಗಣಪತಿ ಬಿಡುವಾಗ ಬಪ್ಪ ಮೋರಿಯಾ ಅಂತಾರಲ್ಲ, ಹಂಗಂದ್ರೇನು?
ಗಣಪತಿ, ಗಣೇಶ, ವಿಘ್ನವಿನಾಶಕ, ಗಜಮುಖ ಹೀಗೆ ಅನೇಕ ಹೆಸರುಗಳಿಂದ ಕರೆಯುವ ಗಜಾನನ ಬಹುತೇಕ ಎಲ್ಲರ ನೆಚ್ಚಿನ ದೇವರು. ಲೋಕದಲ್ಲಿ ಮೊದಲು ಪೂಜೆ ಮಾಡಲ್ಪಡುವ ಗಣಪತಿಯ ವಿಸರ್ಜನೆ ಕೂಡ ಅದ್ಧೂರಿಯಾಗೇ ನಡೆಯುತ್ತೆ. ಆ ವೇಳೆ ಗಣಪತಿ ಬಪ್ಪ ಮೋರಿಯಾ ಎನ್ನುವ ಭಕ್ತರು ಅದರ ಹಿಂದಿನ ಅರ್ಥ, ಕಾರಣ ತಿಳಿದಿದ್ರೆ ಚೆಂದ.
ಈ ಬಾರಿ ಸೆಪ್ಟೆಂಬರ್ 19ರಂದು ಗಣೇಶ ಚತುರ್ಥಿಯ ಹಬ್ಬ ಆಚರಣೆ ಮಾಡಲಾಗ್ತಿದೆ. ಈಗಾಗಲೇ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದಕ್ಕಾಗಿ ಪ್ರತಿ ಮನೆಯಲ್ಲೂ ಭರದ ಸಿದ್ಧತೆಗಳು ನಡೆಯುತ್ತಿವೆ. ಬೀದಿ ಬೀದಿಗಳಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಲು ತಯಾರಿ ನಡೆಯುತ್ತಿದೆ. ಗಣೇಶನಿಗೆ ಇಷ್ಟವಾದ ತಿಂಡಿಗಳ ಘಮ ಇನ್ನೊಂದು ಕಡೆಯಿಂದ ಬರ್ತಿದೆ. ಇಲಿಯ ವಾಹನ ಏರಿ ಮನೆ ಮನೆಗೆ ಬರುವ ಗಣಪತಿ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ. ವಿಘ್ನಗಳನ್ನು ಪರಿಹರಿಸಿ, ನಮ್ಮನ್ನು ಬುದ್ಧಿಶಾಲಿ ಮಾಡಿ, ರಾಕ್ಷಸರಿಂದ ನಮ್ಮನ್ನು ರಕ್ಷಿಸುತ್ತಾನೆಂದು ಭಕ್ತರು ಬಲವಾಗಿ ನಂಬಿದ್ದಾರೆ.
ಗಣಪತಿಯನ್ನು ಭಕ್ತಿಯಿಂದ ಪೂಜೆ ಮಾಡುವ ಭಕ್ತರು ಗಣಪತಿ (Ganesh) ಬಪ್ಪಾ ಮೋರಿಯಾ ಎಂಬ ಘೋಷಣೆ ಕೂಗುತ್ತಾರೆ. ನಾವು ಪ್ರತಿ ಬಾರಿ ಬರುವ ಗಣೇಶ ಹಬ್ಬದಲ್ಲಿ ಗಣೇಶನ ಪೂಜೆ ನಂತ್ರ ಹಾಗೂ ವಿಸರ್ಜನೆ ವೇಳೆ ಗಣಪತಿ ಬಪ್ಪ ಮೋರಿಯಾ (Bappa Morya) ಎಂದು ಜಯಕಾರ ಹಾಕ್ತೇವೆ. ಆದ್ರೆ ಈ ಮೂರು ಪದಗಳ ಅರ್ಥ ಬಹುತೇಕರಿಗೆ ತಿಳಿದಿಲ್ಲ. ಅಷ್ಟಕ್ಕೂ ಗಣಪತಿಯನ್ನು ಮೋರಿಯಾ ಎಂದು ಏಕೆ ಕರೆಯುತ್ತಾರೆ? ಇದರ ಹಿಂದಿನ ಕಥೆ (Story) ಯೇನು ಎಂಬುದನ್ನು ನಾವಿಂದು ಹೇಳ್ತೇವೆ.
ಗಣೇಶನಿಗೆ ಏನಿಷ್ಟ? ಹಬ್ಬಕ್ಕೆ ಏನು ಸ್ವೀಟ್ಸ್ ಮಾಡಬೇಕು ಅಂದು ಕೊಂಡಿದ್ದೀರಿ?
ಗಣಪತಿ ಬಪ್ಪ ಮೋರಿಯಾ ಹಿಂದಿದೆ ಈ ಕಥೆ : ರಾಕ್ಷಸನ ವಧೆ ಮಾಡಿದ ಕಾರಣ ಗಣೇಶನನ್ನು ಭಕ್ತರು ಈ ಘೋಷಣೆ ಮೂಲಕ ಧನ್ಯವಾದ ಹೇಳಿದ್ದರು. ಅಲ್ಲಿಂದ ಪ್ರತಿ ಬಾರಿ ಗಣೇಶ ಪೂಜೆ ವೇಳೆ ಗಣಪತಿ ಬಪ್ಪ ಮೋರಿಯಾ ಎಂದು ಘೋಷಣೆ ಕೂಗಲಾಗುತ್ತದೆ. ಗಣೇಶ ಪುರಾಣದ ಪ್ರಕಾರ, ಪ್ರಾಚೀನ ಕಾಲದಲ್ಲಿ ಸಿಂಧು ಎಂಬ ಅತ್ಯಂತ ಶಕ್ತಿಶಾಲಿ ರಾಕ್ಷಸ ಇದ್ದ. ಶಕ್ತಿಶಾಲಿ ಮಾತ್ರವಲ್ಲ ಆತ ತುಂಬಾ ಕೆಟ್ಟ ಸ್ವಭಾವ ಹೊಂದಿದ್ದ. ಜನರಿಗೆ ಸಿಂಧು ರಾಕ್ಷಸ ಸಾಕಷ್ಟು ತೊಂದರೆ ನೀಡುತ್ತಿದ್ದ. ಜನರಿಗೆ ತೊಂದರೆ ನೀಡುವ ಮೂಲಕ ತಾನು ಸಂತೋಷಪಡುತ್ತಿದ್ದ. ಅವನ ದೌರ್ಜನ್ಯಕ್ಕೆ, ಭಯೋತ್ಪಾದನೆಗೆ ಎಲ್ಲರೂ ಬೇಸತ್ತು ಹೋಗಿದ್ದರು. ಅವನ ದಬ್ಬಾಳಿಕೆ ಸ್ವಭಾವದಿಂದ ಮನುಷ್ಯರು ಮಾತ್ರವಲ್ಲದೆ ದೇವಾನು ದೇವತೆಗಳೂ ಸಹ ಬೇಸರಗೊಂಡಿದ್ದರು. ಋಷಿಮುನಿಗಳಿಗೆ ಯಾಗ ಇತ್ಯಾದಿಗಳನ್ನು ನಡೆಸುವುದು ಕಷ್ಟಕರವಾಗಿತ್ತು. ಎಲ್ಲರೂ ಅವನಿಂದ ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದರು. ಅವನಿಂದ ತಮ್ಮನ್ನು ರಕ್ಷಿಸಲು ದೇವತೆಗಳು ಗಣೇಶನನ್ನು ಆರಾಧಿಸಿದರು.
ಗಣೇಶ ಹಬ್ಬದಂದು ಚಂದ್ರನ ನೋಡಿದ್ರೆ ಅಪವಾದ ಕಟ್ಟಿಟ್ಟ ಬುತ್ತಿ, ಏನಿದು ಪೌರಾಣಿಕ ಕಥೆ?
ಮಯೂರ ವಾಹನ ಏರಿದ್ದ ಗಣಪ : ಸಿಂಧು ರಾಕ್ಷಸನ ಹಾವಳಿ ತಡೆದುಕೊಳ್ಳಲು ಸಾಧ್ಯವಾಗ್ತಿಲ್ಲ, ಅವನಿಂದ ರಕ್ಷಣೆ ಬೇಕು ಎಂದ ದೇವತೆಗಳು ಸಿಂಧು ರಾಕ್ಷಸನನ್ನು ಕೊಲ್ಲುವಂತೆ ಗಣಪತಿಯನ್ನು ಒತ್ತಾಯಿಸಿದರು. ಇತರರ ದುಃಖವನ್ನು ಹೋಗಲಾಡಿಸಲು ಹುಟ್ಟಿರುವ ಗಣಪತಿ ದೇವತೆಗಳು ಮತ್ತು ಜನರನ್ನು ರಕ್ಷಿಸಲು ಮುಂದಾದನು. ಸಿಂಧುವನ್ನು ಕೊಲ್ಲಲು ಗಣಪತಿ ನವಿಲನ್ನು ತನ್ನ ವಾಹನವಾಗಿ ಆರಿಸಿಕೊಂಡನು ಮತ್ತು ಆರು ಭುಜದ ರೂಪವನ್ನು ಪಡೆದನು. ಗಣಪತಿ ಹಾಗೂ ಸಿಂಧು ರಾಕ್ಷಸನ ಮಧ್ಯೆ ಘೋರ ಯುದ್ಧ ನಡೆಯಿತು. ಯುದ್ಧದಲ್ಲಿ ಸಿಂಧು ರಾಕ್ಷಸ ಸಾವನ್ನಪ್ಪಿದನು. ಅಂದಿನಿಂದ ಜನರು ಗಣಪತಿ ಈ ಅವತಾರವನ್ನು ಗಣಪತಿ ಬಪ್ಪಾ ಮೋರ್ಯ ಎಂಬ ಘೋಷಣೆಯೊಂದಿಗೆ ಪೂಜಿಸುತ್ತಾರೆ.
ಹೀಗೆ ಘೋಷಣೆ ಕೂಗಿದ್ರೆ ಗಣಪತಿಯ ದಬ್ಬಾಳಿಕೆ ಮಾಡುವ ಜನರನ್ನು ನಾಶ ಮಾಡಿ ತಮ್ಮನ್ನು ರಕ್ಷಣೆ ಮಾಡುತ್ತಾನೆ ಎಂಬ ನಂಬಿಕೆ ಇದೆ. ಇದೇ ಕಾರಣಕ್ಕಾಗಿಯೇ ಗಣಪತಿ ಮೂರ್ತಿಯನ್ನು ವಿಸರ್ಜನೆ ಮಾಡುವ ವೇಳೆಯೂ ಗಣಪತಿ ಬಪ್ಪಾ ಮೋರ್ಯ, ಮುಂದಿನ ವರ್ಷ ಬಾರಯ್ಯ ಎಂದು ಕರೆಯಲಾಗುತ್ತದೆ. ಗಣೇಶನ ಮಯೂರೇಶ್ವರ ರೂಪದ ಹಿಂದೆ ಗಣಪತಿ ಬಪ್ಪಾಗೆ ಸಂಬಂಧಿಸಿದ ಮೋರಿಯಾ ಪದದ ಅರ್ಥ ಅಡಗಿದೆ.