
ಉತ್ತರಖಂಡ (ಜೂ.13) ಟೀಂ ಇಂಡಿಯಾ ಕ್ರಿಕೆಟಿಗ ರಿಷಬ್ ಪಂತ್ ಪವಿತ್ರ ಕ್ಷೇತ್ರವಾಗಿರುವ ಆದಿ ಕೈಲಾಸ ಹಾಗೂ ಓಂ ಪರ್ವತ್ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದಾರೆ. ವಿಶೇಷ ಅಂದರೆ ರಹಸ್ಯವಾಗಿ ಯಾರಿಗೂ ತಿಳಿಯದಂತೆ ರಿಷಬ್ ಪಂತ್ ಇಲ್ಲಿಗೆ ಭೇಟಿ ನೀಡಿದ್ದಾರೆ. ಅಧಿಕಾರಿಗಳು, ಪೊಲೀಸರು ಸೇರಿದಂತೆ ಯಾರಿಗೂ ಮಾಹಿತಿ ನೀಡಿದರೆ ಕ್ಷೇತ್ರ ದರ್ಶನ ಮಾಡಿದ್ದಾರೆ. ಮಾಹಿತಿ ಗೌಪ್ಯವಾಗಿಡುವ ನಿಟ್ಟಿನಲ್ಲಿ ಈ ರೀತಿ ಮಾಡಲಾಗಿದೆ.
ಆದಿಕೈಲಾಸಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ರಿಷಬ್ ಪಂತ್, ಬಳಿಕ ಓಂ ಪರ್ವತ ಕ್ಕೂ ಭೇಟಿ ನೀಡಿ ಅದ್ಭುತ ಧಾರ್ಮಿಕ ನಂಬಿಕೆಯನ್ನು ಕಣ್ತುಂಬಿಕೊಂಡಿದ್ದಾರೆ. ಎರಡು ಅತ್ಯಂತ ಪವಿತ್ರ ಕ್ಷೇತ್ರಗಳಾಗಿದೆ. ಇಷ್ಟೇ ಅಲ್ಲ ಹಿಂದೂ ಧಾರ್ಮಿಕತೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದ ಸ್ಥಳಗಳಾಗಿವೆ. ಶಿವ ಧ್ಯಾನಿಸಿದ ಕ್ಷೇತ್ರ, ಮಹಾಭಾರತ ಕಾಲಕ್ಕೂ ಅವಿನಾಭಾವ ಸಂಬಂಧವಿರುವ ಕ್ಷೇತ್ರಗಳು ಇದಾಗಿದೆ. ದರ್ಶನ ಬಳಿಕ ರಿಷಬ್ ಪಂತ್ ವ್ಯಾಸ ಕಣಿವೆಯ ನಬಿ ಗ್ರಾಮದಲ್ಲಿನ ಹೋಮ್‌ಸ್ಟೇಯಲ್ಲಿ ತಂಗಿದ್ದಾರೆ.
ಮರಳುವ ವೇಳೆ ರಿಷಬ್ ಪಂತ್ ಕಾರಿನ ಟೈಯರ್ ಪಂಚರ್ ಆಗಿದೆ. ಈ ವೇಳೆ ಇಂಡೋ ಟೇಬಿಟಿಯನ್ ಬಾರ್ಡರ್ ಪೊಲೀಸರು ರಿಷಬ್ ಪಂತ್‌ಗೆ ನೆರವು ನೀಡಿದ್ದಾರೆ. ಇದೇ ವೇಳೆ ಯೋಧರ ಜೊತೆ ಮಾತುಕತೆ ನಡೆಸಿದ ರಿಷಬ್ ಪಂತ್, ಅವರ ಜೊತೆ ತಿಂಡಿ ಸವಿದಿದ್ದಾರೆ.
ಮಾನಸಸರೋವರದಲ್ಲಿರುವ ಕೈಲಾಸ ಪರ್ವತದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಇದು ಸದ್ಯ ಚೀನಾ ಹಿಡಿತದಲ್ಲಿರುವ ಟಿಬೇಟ್ ಭಾಗವಾಗಿದೆ. ಉತ್ತರಾಖಂಡದ ಪಿತೋರಗಢ್ ಜಿಲ್ಲೆಯಲ್ಲಿ, ಸಮುದ್ರ ಮಟ್ಟದಿಂದ ಸುಮಾರು 19,505 ಅಡಿ ಎತ್ತರದಲ್ಲಿ ಮೈದಳೆದು ನಿಂತಿರುವ ಆದಿ ಕೈಲಾಸ (Adi Kailash) ಮತ್ತು ಅದಕ್ಕೆ ಹತ್ತಿರದಲ್ಲೇ ಇರುವ ಓಂ ಪರ್ವತ (Om Parvat) ಇಂದಿಗೂ ವಿಜ್ಞಾನಕ್ಕೆ ಸವಾಲಾಗಿರುವ, ಭಕ್ತರ ಪಾಲಿಗೆ ಸಾಕ್ಷಾತ್ ಪರಶಿವನ ಜಾಗೃತ ತಾಣಗಳಾಗಿವೆ.
ಮಾನಸಸರೋವರದ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡುವ ಮುನ್ನ ಶಿವ ತಪಸ್ಸು ಮಾಡಿದ್ದು ಇದೇ ಆದಿ ಕೈಲಾಸದಲ್ಲಿ. ಪಾಂಡವರು ತಮ್ಮ ವನವಾಸದ ಅವಧಿಯಲ್ಲಿ ಮಾನಸಿಕ ಶಾಂತಿ ಮತ್ತು ಮುಕ್ತಿಯ ಮಾರ್ಗವನ್ನು ಹುಡುಕುತ್ತಾ ಈ ಆದಿ ಕೈಲಾಸಕ್ಕೆ ಭೇಟಿ ನೀಡಿ, ಶಿವನ ಆಶೀರ್ವಾದ ಪಡೆದಿದ್ದರು ಎಂಬ ಉಲ್ಲೇಖವಿದೆ. ಇಲ್ಲಿಗೆ ಸಮೀಪವಿರುವ 'ಕುಟಿ' (Kuti) ಎಂಬ ಗ್ರಾಮವು ಪಾಂಡವರ ಮಾತೆ ಕುಂತಿಯ ಹೆಸರಿನಿಂದಲೇ ಬಂದಿದೆ ಎನ್ನಲಾಗುತ್ತದೆ.ಕೈಲಾಸ ಮಾನಸಸರೋವರದಿಂದ ತ್ರಿಯುಗಿನಾರಾಯಣಕ್ಕೆ ವಿವಾಹವಾಗಲು ಹೊರಟ ಶಿವ ಮತ್ತು ಪಾರ್ವತಿ ದೇವಿಯರ ಮದುವೆಯ ಮೆರವಣಿಗೆಯು ಮೊದಲ ಬಾರಿಗೆ ತಂಗಿದ್ದು ಇದೇ ಪವಿತ್ರ ಭೂಮಿಯಲ್ಲಿ ಎಂಬುದು ಇಲ್ಲಿನ ಸ್ಥಳೀಯ ನಂಬಿಕೆ.
ಇಲ್ಲಿನ ಪರ್ವತಗಳನ್ನು ನೋಡಿದರೆ ಅದ್ಭುತ ಕಣ್ಣಿಗೆ ಬೀಳುತ್ತದೆ. ಕಪ್ಪು ಕಲ್ಲಿನ ಪರ್ವತಗಳು ಹಿಮದಿಂದ ಆವೃತಗೊಂಡಿರುತ್ತದೆ. ವಿಶೇಷ ಅಂದರೆ ಈ ಹಿಮವು ಕೇವಲ ಆ ಕಲ್ಲಿನ ಸಂದುಗಳಲ್ಲೇ ಶೇಖರಣೆಯಾಗಿ ಸಾಕ್ಷಾತ್ ಸನಾತನ ಧರ್ಮದ ಮೂಲ ಮಂತ್ರವಾದ ಓಂ (ॐ) ಆಕಾರದಲ್ಲಿ ಗೋಚರಿಸುತ್ತದೆ. ನೈಸರ್ಗಿಕವಾಗಿ ಇದು ಸೃಷ್ಟಿಯಾಗುತ್ತದೆ. ಸೂರ್ಯಾಸ್ತದ ಸಮಯದಲ್ಲಿ, ಈ ಪರ್ವತದ ನೆರಳು ಕೆಳಗೆ ಬೀಳುವಾಗ ಅದು ಹಿಂದೂ ಧರ್ಮದ ಅತ್ಯಂತ ಪವಿತ್ರ ಚಿಹ್ನೆಯಾದ "ಸ್ವಸ್ತಿಕ್" (Swastika) ಆಕಾರವನ್ನು ಹೋಲುತ್ತದೆ.