
ಎಂ.ಅಫ್ರೋಜ್ ಖಾನ್
ರಾಮನಗರ: ಮಾರಮ್ಮ, ಚಿಕ್ಕಮ್ಮ, ಆದಿಶಕ್ತಿ, ಮಹದೇಶ್ವರ, ಬಸವೇಶ್ವರ, ಆಂಜನೇಯ ... ಹೀಗೆ ಹತ್ತಲ್ಲ, ನೂರಲ್ಲ 450ಕ್ಕೂ ಹೆಚ್ಚು ಗ್ರಾಮ ದೇವ - ದೇವತೆಗಳನ್ನು ರಾಮನೂರಿಗೆ ತರಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆಗಳು ನಡೆದಿವೆ.
ರಾಮನಗರ ಕ್ಷೇತ್ರ ವ್ಯಾಪ್ತಿಯ ಕಸಬಾ, ಕೈಲಾಂಚ, ನಗರ ಹಾಗೂ ಹಾರೋಹಳ್ಳಿ ಮತ್ತು ಮರಳವಾಡಿ ಹೋಬಳಿಯ ನಾನಾ ಭಾಗಗಳಲ್ಲಿರುವ ಗ್ರಾಮ ದೇವ - ದೇವತೆಗಳ ಉತ್ಸವ ಮೂರ್ತಿಗಳನ್ನು ಇದೇ ಮೊದಲ ಬಾರಿಗೆ ರಾಮನಗರದಲ್ಲಿ ಒಟ್ಟು ಗೂಡಿಸಲಾಗುತ್ತಿದ್ದು, ಆ ಮೂಲಕ ಇಡೀ ನಗರ ಭಕ್ತಿ ಸಾಗರದಲ್ಲಿ ಮಿಂದೇಳಲಿದೆ.
ಜನವರಿ 16ರಂದು ಬೆಳಗ್ಗೆ 8 ರಿಂದ 9 ಗಂಟೆ ವೇಳೆಗೆ ರಾಮದೇವರ ಬೆಟ್ಟದಲ್ಲಿರುವ ಪಟ್ಟಾಭಿರಾಮ ದೇಗುಲ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಸಾಮೂಹಿಕ ಪೂಜೆ ನೆರವೇರಲಿದೆ.
ಸಂಜೆ ವೇಳೆಗೆ ರಾಮನಗರದಲ್ಲಿ ಮಡಿಕೇರಿಯ ಆಕರ್ಷಕ ಸ್ತಬ್ಧಚಿತ್ರಗಳ ಜೊತೆಗೆ ಗ್ರಾಮ ದೇವ - ದೇವತೆಗಳ ಸಾಲು ಸಾಲು ಮೆರವಣಿಗೆ ಸಾಗಲಿದೆ. ಈ ಮೂಲಕ ವಿವಿಧ ಸಂಸ್ಕೃತಿಗಳ ಸಂಗಮ ರಾಮೋತ್ಸವ ಹಬ್ಬದ ವೈಭವವನ್ನು ಮತ್ತಷ್ಟು ಹೆಚ್ಚಿಸಲಿದೆ.
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಐದು ಹೋಬಳಿಗಳ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನೆಲೆಸಿರುವ ಗ್ರಾಮ ದೇವರುಗಳ ಉತ್ಸವ ಮೂರ್ತಿಗಳನ್ನು ಮೆರವಣಿಗೆ ಸ್ಥಳಕ್ಕೆ ತರುವ ಜವಾಬ್ದಾರಿಯನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಚಿಸಿರುವ ಸಮಿತಿಗಳಿಗೆ ವಹಿಸಲಾಗಿದೆ. ಇದರ ಜೊತೆಗೆ ದೇವಾಲಯಗಳ ಮುಖ್ಯಸ್ಥರು, ಗ್ರಾಮದ ಯಜಮಾನರು ಹಾಗೂ ಮುಖಂಡರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ.
ಉತ್ಸವಕ್ಕೆ ಬರಲಿರುವ ಗ್ರಾಮಗಳ ದೇವ - ದೇವತೆಗಳ ಉತ್ಸವ ಮೂರ್ತಿಗಳಿಗೆ ಮೊದಲೇ ಪೂಜಾ ಸಾಮಗ್ರಿ ತಲುಪಿಸಲಾಗುತ್ತದೆ. ದೇವಾಲಯಗಳಲ್ಲಿ ಸಂಪ್ರದಾಯ ಬದ್ಧವಾಗಿ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸುವರು. ಆನಂತರ ಹೂವಿನ ಅಲಂಕಾರದೊಂದಿಗೆ ಬರಲಿರುವ ಉತ್ಸವ ಮೂರ್ತಿಗಳನ್ನು ತೆರೆದ ಟ್ರ್ಯಾಕ್ಟರ್ ನಲ್ಲಿ ಇರಿಸಿ ಮೆರವಣಿಗೆ ನಡೆಸಲಾಗುತ್ತದೆ. ಒಂದೊಂದು ಟ್ರ್ಯಾಕ್ಟರ್ ನಲ್ಲಿ ಎರಡು ಅಥವಾ ಮೂರು ದೇವರ ಉತ್ಸವ ಮೂರ್ತಿಗಳನ್ನು ಕೂರಿಸಿ ಮೆರವಣಿಗೆ ನಡೆಸಲು ಚಿಂತಿಸಲಾಗುತ್ತಿದ್ದು, ದೇವರು ಸಾಗುವ ರಸ್ತೆಯ ಎರಡು ಇಕ್ಕೆಲಗಳಲ್ಲಿ ಮಹಿಳೆಯರು ಆರತಿ ಬೆಳಗಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ.
ಗ್ರಾಮಗಳಲ್ಲಿ ಉತ್ಸವ ಮೂರ್ತಿಗಳಿಗಿಂತ ಪೂಜೆಗಳ ಸಂಖ್ಯೆಯೇ ಹೆಚ್ಚು ಸೇರುವ ಸಾಧ್ಯತೆಗಳಿವೆ. ಪೂಜಾ ಕುಣಿತ ಕಲಾವಿದ ಪೂಜೆಯನ್ನು ಹೊತ್ತು ಕುಣಿಯುತ್ತಾ ಸಾಗಿದರೆ, ಇನ್ನಿಬ್ಬರು ಸಹಾಯಕರು ಅವರೊಂದಿಗೆ ಪೂಜೆಯನ್ನು ಕೈ ಬದಲಾಯಿಸುತ್ತಾರೆ.
ದೇವ ಮೂಲೆಯಾಗಿರುವ ರಾಮನಗರದ ಮಾರುತಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಾಂಗ್ರೆಸ್ ಭವನ ಬಳಿಯಿಂದ ಪ್ರಾರಂಭವಾಗಲಿರುವ ಗ್ರಾಮ ದೇವರುಗಳ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕುಬೇರನ ಮೂಲೆಯಲ್ಲಿ ಸಮಾಪ್ತಿಗೊಳ್ಳಲಿದೆ.
ಮಡಿಕೇರಿಯ ಸ್ತಬ್ಧ ಚಿತ್ರಗಳು ಹಾಗೂ ಗ್ರಾಮ ದೇವರುಗಳ ಮೆರವಣಿಗೆಗೆ ಜಾನಪದ ಕಲೆ ಮತ್ತು ಕಲಾವಿದರು ರಂಗು ತುಂಬಲಿದ್ದಾರೆ. 800ಕ್ಕೂ ಅಧಿಕ ಕಲಾವಿದರು ನಗಾರಿ ಮತ್ತು ತಮಟೆ ಬಾರಿಸುವರು. ಅಲ್ಲದೆ, ವೀರಗಾಸೆ, ಪಟ್ಟದ ಕುಣಿತ, ಡೊಳ್ಳು ಕುಣಿತ, ತೊಗಲು ಗೊಂಬೆ ಸೇರಿದಂತೆ ವಿವಿಧ ಜನಪದ ಕಲಾ ಪ್ರಕಾರಗಳು ಭಕ್ತರ ಕಣ್ಮನ ಸೆಳೆಯಲು ಅಣಿಯಾಗುತ್ತಿದ್ದಾರೆ.
ಜ.16ರಂದು ಗ್ರಾಮ ದೇವತೆಗಳ ಮೆರವಣಿಗೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ , ಮಡಿಕೇರಿಯ ಸ್ತಬ್ಧ ಚಿತ್ರಗಳ ಪ್ರದರ್ಶನಕ್ಕೆ ಮಡಿಕೇರಿ ಕ್ಷೇತ್ರ ಶಾಸಕ ಮಂಥರ್ ಗೌಡ ಹಾಗೂ ಜಾನಪದ ಕಲಾ ತಂಡಗಳ ಮೆರವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಚಾಲನೆ ನೀಡುವರು.
ಈ ಮೆರವಣಿಗೆಯು ಮಾರುತಿ ನಗರದಲ್ಲಿರುವ ಕಾಂಗ್ರೆಸ್ ಭವನದಿಂದ ಪ್ರಾರಂಭಗೊಂಡು ಪೊಲೀಸ್ ಭವನ ವೃತ್ತ, ವಾಟರ್ ಟ್ಯಾಂಕ್ ವೃತ್ತದ ಮೂಲಕ ಕಾಮನ ಗುಡಿ ವೃತ್ತ ತಲುಪಲಿದೆ. ಅಲ್ಲಿಂದ ಕೆಂಗಲ್ ಹನುಮಂತಯ್ಯ ವೃತ್ತ, ಐಜೂರು ವೃತ್ತದ ಮಾರ್ಗವಾಗಿ ಕೆಂಪೇಗೌಡ ವೃತ್ತ, ರಾಯರದೊಡ್ಡಿ ವೃತ್ತಕ್ಕೆ ತೆರಳಲಿದೆ. ಅಲ್ಲಿಂದ ರೋಟರಿ ಸರ್ಕಲ್ ಮಾರ್ಗವಾಗಿ ಕಾಂಗ್ರೆಸ್ ಭವನದ ಎದುರಿಗಿರುವ ಗೌಸಿಯಾ ಕಾಲೇಜು ಬಳಿಗೆ ತಲುಪಲಿದೆ.
ಭಾರತೀಯ ಸಂಸ್ಕೃತಿಯಲ್ಲಿ ಗ್ರಾಮ ದೇವತೆಗಳಿಗೆ ಅದರದೇ ಆದ ವಿಶೇಷತೆ ಇದೆ. ಆ ಗ್ರಾಮ ದೇವತೆಗಳು ತೃಪ್ತರಾದರೆ ಎಲ್ಲವೂ ಸುಗಮವಾಗುತ್ತದೆ.
ಶ್ರೀ ರಾಮನ ಊರಾದ ರಾಮನಗರದಲ್ಲಿ ಗ್ರಾಮ ದೇವರುಗಳು ಒಂದೆಡೆ ಸೇರುತ್ತಿರುವುದು ಧಾರ್ಮಿಕ ವೈಶಿಷ್ಟ್ಯತೆಗೆ ಸಾಕ್ಷಿಯಾಗಲಿದೆ. ಕೇವಲ ಪೂಜೆಯಷ್ಟೇ ಅಲ್ಲದೆ, ನಾಡಿನ ಸಮಸ್ತ ಜನರ ಒಳಿತಿಗಾಗಿ ಮತ್ತು ರಾಜ್ಯದ ಸುಭೀಕ್ಷೆಗಾಗಿ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ಬಗೆಯ ಗ್ರಾಮ ದೇವತೆಗಳ ಉತ್ಸವ ಆಚರಣೆ ಗ್ರಾಮದಲ್ಲಿರುವವರೆಲ್ಲ ಸಾಮರಸ್ಯ ಮತ್ತು ಐಕ್ಯತೆಯಿಂದ ಜೀವನ ನಡೆಸಬೇಕೆಂಬ ಸಂದೇಶ ಸಾರುತ್ತದೆ. ಇಂತಹ ಅಪೂರ್ವ ಸಂಸ್ಕೃತಿಯು ನಶಿಸಿ ಹೋಗಲು ಆಸ್ಪದ ನೀಡಬಾರದು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದ್ದಾರೆ.
ಗ್ರಾಮ ದೇವತೆಗಳು ಕೇವಲ ಆಧ್ಯಾತ್ಮಿಕ ಶಾಂತಿಯನ್ನು ಮಾತ್ರವಲ್ಲ, ಕೃಷಿ ಸಮೃದ್ಧಿ, ಸಾಮಾಜಿಕ ಏಕತೆ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆಯನ್ನೂ ಒದಗಿಸುತ್ತವೆ ಎಂದು ನಂಬಲಾಗಿದೆ. ಹೀಗಾಗಿ ಗ್ರಾಮ ದೇವತೆಗಳ ಪೂಜಾ ಪರಂಪರೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಮೋತ್ಸವದಲ್ಲಿ ಗ್ರಾಮ ದೇವ - ದೇವತೆಗಳ ಉತ್ಸವ ಮೂರ್ತಿ ಮೆರವಣಿಗೆಗೆ ಒತ್ತು ಕೊಡಲಾಗಿದೆ. ಜನರನ್ನು ಭಕ್ತಿ ಸಾಗರದಲ್ಲಿ ಮಿಂದೆಳುವಂತೆ ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ಹೇಳಿದ್ದಾರೆ.