Uttara Kannada: ಬೆಲೆ ಏರಿಕೆ: ಹಬ್ಬದ ಸಂಭ್ರಮಕ್ಕಿಲ್ಲ ಕೊರತೆ

By Kannadaprabha NewsFirst Published Oct 24, 2022, 12:30 PM IST
Highlights
  • ಬೆಲೆ ಏರಿಕೆ: ಹಬ್ಬದ ಸಂಭ್ರಮಕ್ಕಿಲ್ಲ ಕೊರತೆ
  • ಭಟ್ಕಳದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಖರೀದಿ ಬಲು ಜೋರು
  • ಮೂರು ದಿನದಿಂದ ಪೇಟೆಯಲ್ಲಿ ಜನಜಂಗುಳಿ

ಭಟ್ಕಳ (ಅ.24) : ದೀಪಾವಳಿ ಹಬ್ಬದ ಪ್ರಯುಕ್ತ ವ್ಯಾಪಾರ ವಹಿವಾಟು ಜೋರಾಗಿದ್ದು, ಭಾನುವಾರ ಪೇಟೆಯತ್ತ ಹೆಚ್ಚು ಜನರು ಧಾವಿಸಿ ಹಬ್ಬಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ಖರೀದಿ ಮಾಡುತ್ತಿರುವುದು ಕಂಡು ಬಂತು. ಹಬ್ಬದ ಪ್ರಯುಕ್ತ ಕಳೆದ ಮೂರು ದಿನಗಳಿಂದ ಪೇಟೆಯಲ್ಲಿ ಜನಜಂಗುಳಿ ಹೆಚ್ಚಾಗಿದೆ. ಬಟ್ಟೆಅಂಗಡಿ,ದಿನಸಿ, ಹೂವು, ಹಣ್ಣು, ತರಕಾರಿ, ಸಿಹಿ ತಿನಿಸು, ಇಲೆಕ್ಟ್ರಾನಿಕ್‌ ಮುಂತಾದ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿದೆ.

ದೀಪಾವಳಿ ಹಬ್ಬ ಹಿನ್ನೆಲೆ; ಗಗನಕ್ಕೆ ಏರಿದ ಹೂವು, ಹಣ್ಣಿನ ಬೆಲೆ

ಪಟ್ಟಣದಲ್ಲಿ ಸ್ಥಳೀಯರಲ್ಲದೇ ಹೊರಗಿನಿಂದಲೂ ವ್ಯಾಪಾರಿಗಳು ಆಗಮಿಸಿ ಹೂವುಗಳನ್ನು ಬೀದಿಬದಿ ಇಟ್ಟುಕೊಂಡು ಬರ್ಜರಿ ವ್ಯಾಪಾರ ನಡೆಸುತ್ತಿದ್ದಾರೆ. ವಿವಿಧ ರೀತಿಯ ಹಣತೆ, ಮಡಿಕೆ ಸೇರಿದಂತೆ ಮಣ್ಣಿನಿಂದ ತಯಾರಿಸಲಾದ ಸಾಮಗ್ರಿಗಳ ವ್ಯಾಪಾರವೂ ಜೋರಾಗಿದೆ.

ದೀಪಾವಳಿ ಹಬ್ಬಕ್ಕೆ ಪ್ರಮುಖವಾಗಿ ಬೇಕಾಗಿರುವ ಮೊಗೇಕಾಯಿ, ಸೌತೆಕಾಯಿ ಸ್ಥಳೀಯವಾಗಿ ಅಲ್ಲದೇ ಬೇರೆ ಬೇರೆ ಕಡೆಯಿಂದಲೂ ಹೆಚ್ಚು ಬಂದಿದ್ದು, ಉತ್ತಮ ವ್ಯಾಪಾರವಾಗಿದೆ. ಭಾನುವಾರ ನಡೆದ ವಾರದ ಸಂತೆಗೂ ಜನರು ಹೆಚ್ಚು ಆಗಮಿಸಿ ತರಕಾರಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಿದರು.

ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದ್ದರೂ ವರ್ಷಂಪ್ರತಿಯಂತೆ ಈ ಸಲವೂ ದೀಪಾವಳಿ ಹಬ್ಬ ಮನೆಮನೆಗಳಲ್ಲಿಯೂ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೀಪಾವಳಿ ಬೆಳಕಿನ ಹಬ್ಬ ಆಗಿರುವುದರಿಂದ ಮನೆ ಮನೆಯಲ್ಲೂ ಹಣತೆಯ ದೀಪ, ವಿದ್ಯುತ್‌ ದೀಪ, ತರ ತರಹದ ಆಕಾಶ ಗೂಡುಗಳನ್ನು ಕಾಣಬಹುದು.

ದೀಪಾವಳಿಗೆ ಗೃಹಿಣಿಯರಿಗೆ ಶಾಕ್; ಅಡುಗೆ ಎಣ್ಣೆ ಬೆಲೆ ಹೆಚ್ಚಳ ಸಾಧ್ಯತೆ!

ಈ ಸಲ ಸೂರ್ಯಗ್ರಹಣ ಬಂದಿರುವುದರಿಂದ ದೀಪಾವಳಿಯ ಸ್ನಾನ, ಬಲೀಂದ್ರ ಸ್ಥಾಪನೆ, ಧನಲಕ್ಷ್ಮೀ ಪೂಜೆ ಎಲ್ಲವೂ ಒಂದೇ ಸೋಮವಾರವೇ ನಡೆಯಲಿದೆ. ಮಂಗಳವಾರ ಗ್ರಹಣ ಇರುವುದರಿಂದ ಕೆಲವರು ಬುಧವಾರ ಧನಲಕ್ಷ್ಮೀ ಪೂಜೆ ಮಾಡುವವರೂ ಇದ್ದಾರೆ. ಒಟ್ಟಾರೆ ತಾಲೂಕಿನಲ್ಲಿ ವರ್ಷಂಪ್ರತಿಯಂತೆ ಈ ಸಲವೂ ದೀಪವಾಳಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ.

click me!