ಹೂವಿನಹಡಗಲಿ: ಮೈಲಾರ ಜಾತ್ರೆಗೆ ಭರದ ಸಿದ್ಧತೆ

By Kannadaprabha News  |  First Published Feb 4, 2023, 3:15 AM IST

ಫೆ.7ರಂದು ಡೆಂಕಣ ಮರಡಿಯಲ್ಲಿ ಕಾರ್ಣಿಕಕ್ಕೆ ರಾಜ್ಯ, ಅಂತಾರಾಜ್ಯ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಬರುವ ಭಕ್ತರಿಗಾಗಿ ಮೂಲಭೂತ ಸೌಲಭ್ಯಗಳನ್ನು ನೀಡಲು ನಾನಾ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. 


ಚಂದ್ರು ಕೊಂಚಿಗೇರಿ

ಹೂವಿನಹಡಗಲಿ(ಫೆ.04):  ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ ಹಾಗೂ ಜಾತ್ರೆಗೆ ಬರುವ ಭಕ್ತರಿಗೆ ಕುಡಿಯುವ ನೀರು, ವಿದ್ಯುತ್‌, ರಸ್ತೆ, ಸ್ವಚ್ಛತೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳ ಸಿದ್ಧತೆ ಭರದಿಂದ ಸಾಗಿದೆ.
ಜ. 28 ರಿಂದ ಫೆ.8 ವರೆಗೂ ಮೈಲಾರಲಿಂಗೇಶ್ವರ ಜಾತ್ರೆ ನಡೆಯಲಿದೆ. ಫೆ.7ರಂದು ಡೆಂಕಣ ಮರಡಿಯಲ್ಲಿ ಕಾರ್ಣಿಕಕ್ಕೆ ರಾಜ್ಯ, ಅಂತಾರಾಜ್ಯ ಕಡೆಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತಾಲೂಕಾಡಳಿತ ಬರುವ ಭಕ್ತರಿಗಾಗಿ ಮೂಲಭೂತ ಸೌಲಭ್ಯಗಳನ್ನು ನೀಡಲು ನಾನಾ ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ.

Latest Videos

undefined

ಜಾತ್ರೆ ಪರಿಷೆ ಸೇರುವ ಜಾಗ ಸೇರಿದಂತೆ ಹೊಳಲು ರಸ್ತೆ, ಕುರುವತ್ತಿ ರಸ್ತೆ ಡೆಂಕಣ ಮರಡಿ ಪ್ರದೇಶ, ಬಸ್‌ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ 12 ಕುಡಿಯುವ ನೀರಿನ ಸ್ಟ್ಯಾಂಡ್‌ ಪೋಸ್ಟ್‌ ನಳಗಳ ವ್ಯವಸ್ಥೆ, 23 ಕುಡಿಯುವ ನೀರಿನ ಸಿಸ್ಟನ್‌, 10 ಕೊಳವೆ ಬಾವಿ ಮೋಟಾರ್‌ಗಳ ವ್ಯವಸ್ಥೆ, ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ 3ಲಕ್ಷ ಲೀ ಸಾಮರ್ಥ್ಯದ ಟ್ಯಾಂಕ್‌ನಿಂದ ನೀರು ಪೂರೈಕೆ, 20 ಟ್ಯಾಂಕರ್‌ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ 6 ಕಡೆಗಳಲ್ಲಿ ನೀರಿನ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ. ಮೈಲಾರ ಸಕ್ಕರೆ ಕಾರ್ಖಾನೆಯಿಂದ ಶಾಶ್ವತ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುತ್ತಿದೆ. ಗುತ್ತಲ ಕ್ರಾಸ್‌ನಿಂದ ಮೈಲಾರಕ್ಕೆ ಬೈಪಾಸ್‌ ನಿರ್ಮಾಣ, ಡೆಂಕಣ ಮರಡಿಗೆ ಹೋಗಲು ಮೂರು ಕಡೆ ತಾತ್ಕಾಲಿಕ ರಸ್ತೆ ಅಭಿವೃದ್ಧಿ, ರಾಜ್ಯ ಹೆದ್ದಾರಿಯ ಜಂಗಲ್‌ ಕಟಿಂಗ್‌ ಮಾಡಲಾಗಿದೆ.

ಹಂಪಿ ಉತ್ಸವದಲ್ಲಿ ತಾಯಿ ಭುವನೇಶ್ವರಿ ದೇವಿ ಭವ್ಯ ಮೆರವಣಿಗೆ: ತೆಪ್ಪ ಸ್ಪರ್ಧೆಯಲ್ಲಿ ಪಾಲ್ಗೊಂಡ ಮೀನುಗಾರರು

400 ತಾತ್ಕಾಲಿಕ ಶೌಚಾಲಯಗಳ ವ್ಯವಸ್ಥೆ, ಉಳಿದ ಕಡೆಗಳಲ್ಲಿ ನದಿ ತೀರ ಹೊರತು ಪಡಿಸಿ ಬಿದಿರಿನ ಶೌಚಾಲಯ ಕಾಮಗಾರಿ ಮಾಡಲಾಗುತ್ತಿದೆ. ಗ್ರಾಮದಲ್ಲಿ ಸ್ವಚ್ಛತೆ ಮಾಡಲಾಗಿದ್ದು, ದೇವಸ್ಥಾನ ಸೇರಿದಂತೆ ಇತರೆ ಕಡೆಗಳಲ್ಲಿ ನಿರಂತರ ಸ್ವಚ್ಛತೆ ಕಾಪಾಡಲು 150 ಕಾರ್ಮಿಕರ ನಿಯೋಜನೆ ಮಾಡಲಾಗಿದೆ.

ಉತ್ತಂಗಿಯ ಮಹಿಳಾ ಸ್ವ ಸಂಘದವರು ತಯಾರಿಸಿದ 2 ಸಾವಿರ ಲೀ. ಸಂಜೀವಿನಿ ಫಿನಾಯಿಲ್‌ ಖರೀದಿಯಾಗಿದೆ. ಮೈಲಾರ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಹರಿಹರ ಫಾಲಿಫೈಬರ್‌ ಕಂಪನಿಯಿಂದ ಎರಡೂವರೆ ಸಾವಿರ ಕೆ.ಜಿ. ಬ್ಲೀಚಿಂಗ್‌, 2 ಸಾವಿರ ಲೀ. ಫಿನಾಯಿಲ್‌ ಜತೆಗೆ .5ಲಕ್ಷ ದೇಣಿಗೆ ನೀಡಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಕೇವಲ 200 ಕೆ.ಜಿ ಬ್ಲೀಚಿಂಗ್‌ ಪೌಂಡರ್‌, 200 ಲೀ, ಫಿನಾಯಿಲ್‌ ಮಾತ್ರ ನೀಡಿದೆ.

ಜಾತ್ರೆಯ ಪರಿಷೆ ಜಾಗ, ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ವಿದ್ಯುತ್‌ ವ್ಯವಸ್ಥೆ, ಮೈಲಾರಲಿಂಗೇಶ್ವರ ಮತ್ತು ಗಂಗಿಮಾಳಮ್ಮ ದೇವಸ್ಥಾನ ಸೇರಿದಂತೆ ಇತರೆ ಕಡೆಗಳಲ್ಲಿ, ಬಣ್ಣದ ವಿದ್ಯುತ್‌ ದೀಪಗಳನ್ನು ಅಳವಡಿಸುವ ಕಾರ್ಯ ಕೆಲಸ ಪ್ರಗತಿಯಲ್ಲಿದೆ.

ಉಜ್ಜಯಿನಿ- ತರಳಬಾಳು ಮಠಗಳ ವೈಷಮ್ಯ ಸ್ಫೋಟ: ಕೆಲ ಗ್ರಾಮಗಳಲ್ಲಿ ಕಲ್ಲು ತೂರಾಟ ಮನೆಗಳು ಜಖಂ

ಡೆಂಕಣ ಮರಡಿ ಸೇರಿದಂತೆ 4 ಕಡೆಗಳಲ್ಲಿ ಪೊಲೀಸ್‌ ವಾಚಿಂಗ್‌ ಟವರ್‌ ನಿರ್ಮಾಣ ಪೂರ್ಣಗೊಂಡಿದ್ದು, ಕಾರ್ಣಿಕ ಸ್ಥಳದಲ್ಲಿನ ಬ್ಯಾರಿಕೇಡ್‌ ಕಾಮಗಾರಿ ಪೂರ್ಣಗೊಂಡಿದೆ. ಡೆಂಕಣ ಮರಡಿಯಲ್ಲಿ ಮರಡಿ ಕಾಯುತ್ತಿರುವ ಭಕ್ತರಿಗೆ ಕುಡಿಯುವ ನೀರು ಹಾಗೂ ಸ್ನಾನದ ನೀರಿನ ವ್ಯವಸ್ಥೆ ಕೂಡಾ ಮಾಡಲಾಗಿದೆ. ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರಸ್ಥರಿಗೆ ಯಾವುದೇ ಪರವಾನಗಿ ನೀಡಿಲ್ಲ, ಪರಿಷೆ ಜಾಗದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ. ಸಂಚಾರಕ್ಕೆ ತೊಂದರೆ ಉಂಟಾಗದಂತೆ ಕೆಲ ಅಂಗಡಿಗಳನ್ನು ಈಗಾಗಲೇ ತೆರವು ಮಾಡಿದ್ದಾರೆ.

ಕೃಷಿ ಹಾಗೂ ತೋಟಗಾರಿಕೆ ಮತ್ತು 19 ಸ್ವ ಸಹಾಯ ಸಂಘದವರು ತಯಾರಿಸುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಗ್ರಾಪಂನಿಂದ ಜತೆಗೆ ತಾತ್ಕಾಲಿಕ 4 ಕಡೆಗೆ ಆಸ್ಪತ್ರೆ, ಪಶು ಆಸ್ಪತ್ರೆ, ಅಗ್ನಿ ಶಾಮಕ ವಾಹನ ನಿಲುಗಡೆ, ವ್ಯಾಪಾರಸ್ಥರಿಗೆ ಅಂಗಡಿ ಹಾಕಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಅಂತ ಹೂವಿನಹಡಗಲಿ ತಾಪಂ ನರೇಗಾ ಎಡಿ ಯು.ಎಚ್‌.ಸೋಮಶೇಖರ ತಿಳಿಸಿದ್ದಾರೆ. 

click me!