ಬೆಂಗಳೂರಿನಲ್ಲಿ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಭರ್ಜರಿ ಮಾರಾಟ, ಕ್ರಿಮಿನಲ್‌ ಕೇಸ್ ಎಚ್ಚರಿಕೆ ಲೆಕ್ಕಕ್ಕೇ ಇಲ್ಲ!

Published : Sep 02, 2024, 12:12 PM IST
ಬೆಂಗಳೂರಿನಲ್ಲಿ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಭರ್ಜರಿ  ಮಾರಾಟ, ಕ್ರಿಮಿನಲ್‌ ಕೇಸ್ ಎಚ್ಚರಿಕೆ ಲೆಕ್ಕಕ್ಕೇ ಇಲ್ಲ!

ಸಾರಾಂಶ

ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದಂತೆ, ಬೆಂಗಳೂರಿನಲ್ಲಿ ನಿಷೇಧಿತ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಓಪಿ) ಗಣೇಶ ಮೂರ್ತಿಗಳು ಮಾರಾಟವಾಗುತ್ತಿವೆ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳ ಜೊತೆಗೆ ಪಿಓಪಿ ಮೂರ್ತಿಗಳು ಸಹ ಮಾರಾಟವಾಗುತ್ತಿದ್ದು, ಅಧಿಕಾರಿಗಳ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಗುತ್ತಿದೆ.

ರಾಜು ಕಾಂಬಳೆ

ಬೆಂಗಳೂರು (ಸೆ.2): ಗೌರಿ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದಂತೆ, ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವೆಡೆ ನಿಷೇಧಿತ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಓಪಿ) ಗಣೇಶ ಮೂರ್ತಿಗಳು ಭರ್ಜರಿ ಮಾರಾಟವಾಗುತ್ತಿದೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಗಣೇಶ ಮೂರ್ತಿಗಳ ತಯಾರಿಕೆ ಹಾಗೂ ಮಾರಾಟದ ಅಬ್ಬರ ಜೋರಾಗಿದ್ದು, ಅಂಗೈ ಅಳತೆಯಿಂದ ಆಳಡಿ ಎತ್ತರದ ಸಾರ್ವಜನಿಕ ಗಣೇಶ ಮೂರ್ತಿಗಳು ಮಾರಾಟಕ್ಕೆ ಬಂದಿವೆ. ಬಿಬಿಎಂಪಿ ಕಮಿಷನರ್‌ ಕ್ರಿಮಿನಲ್‌ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದರೂ ಗಣೇಶ ತಯಾರಕರಾಗಲಿ, ಕೊಂಡುಕೊಳ್ಳುವವರಾಗಲಿ ಕ್ಯಾರೇ ಎನ್ನುತ್ತಿಲ್ಲ.

ಈಗಾಗಲೇ ಗಣೇಶ ವಿಗ್ರಹದ ಮಾರಾಟಕ್ಕೆ ಪ್ರಸಿದ್ಧವಾಗಿರುವ ವಿ.ವಿ.ಪುರ, ಮೈಸೂರು ರಸ್ತೆಯ ಕುಂಬಳಗೂಡು, ರಾಜಾಜಿನಗರ, ಮಲ್ಲೇಶ್ವರ, ಶೇಷಾದ್ರಿಪುರ, ಜಯನಗರ, ಯಶವಂತಪುರ, ಚಾಮರಾಜಪೇಟೆ, ಸರ್ಜಾಪುರ, ಮಾರಸಂದ್ರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಜತೆಗೆ ನಿಷೇಧಿತ ಪಿಓಪಿ ಗಣೇಶ ಮೂರ್ತಿಗಳೂ ಯಾವುದೇ ಅಡೆತಡೆಗಳಿಲ್ಲದೇ ರಾರಾಜಿಸುತ್ತಿವೆ.

ಪಿಒಪಿ ಗಣೇಶ ತಯಾರಿಸುವವರ ವಿರುದ್ಧ ಬಿಬಿಎಂಪಿ ಕ್ರಿಮಿನಲ್ ಕೇಸ್!

ಮಣ್ಣಿನ ಮೂರ್ತಿ ಪ್ರದರ್ಶಿಸಿ ಪಿಓಪಿ ಮಾರಾಟ: ಗಣೇಶ ಮೂರ್ತಿ ಮಾರಾಟದ ಸ್ಥಳದಲ್ಲಿ ಬಹುತೇಕ ಕಡೆ ವ್ಯಾಪಾರಿಗಳು ಮಣ್ಣಿನ ಮೂರ್ತಿಯನ್ನು ಮಾತ್ರ ಪ್ರದರ್ಶನಕ್ಕೆ ಇಟ್ಟಿರುತ್ತಾರೆ. ಅಪ್ಪಿತಪ್ಪಿಯೂ ಪಿಓಪಿ ಮೂರ್ತಿಗಳನ್ನು ಪ್ರದರ್ಶನ ಮಾಡುವುದಿಲ್ಲ. ಪಿಓಪಿ ಗಣೇಶ ಮೂರ್ತಿಗಳ ಗೋದಾಮಿನಿಂದ ನೇರವಾಗಿ ಪ್ರತಿಷ್ಠಾಪಿಸುವ ಸ್ಥಳಕ್ಕೆ ಪೂರೈಕೆ ಮಾಡುತ್ತಿದ್ದಾರೆ. ಹೀಗಾಗಿ, ಅಧಿಕಾರಿಗಳು ಪಿಓಪಿ ಮೂರ್ತಿಗಳ ಸಂಗ್ರಹಿಸಿರುವ ಸ್ಥಳ ಪತ್ತೆ ಮಾಡುವುದೇ ಸವಾಲಿನ ಸಂಗತಿಯಾಗಿದೆ.

ಕಡಿಮೆ ದರ ಕಾರಣ ಪಿಒಪಿಗೆ ಬೇಡಿಕೆ: ಮೂರ್ತಿಗಳ ರಚನೆಗೆ ಬೇಕಾದ ಮಣ್ಣು ಅಗತ್ಯ ಪ್ರಮಾಣದಲ್ಲಿ ಲಭ್ಯವಿಲ್ಲ. ಅಲ್ಲದೇ ಮಣ್ಣಿನ ಮೂರ್ತಿಗಳ ಬೆಲೆ ಪಿಓಪಿ ಮೂರ್ತಿಗಳಿಗೆ ಹೊಲಿಸಿದರೆ ದರ ಹೆಚ್ಚೇ ಆಗಿರುತ್ತದೆ. ಹೀಗಾಗಿ ಪಿಓಪಿ ಮೂರ್ತಿಗಳಿಂದ ಪರಿಸರಕ್ಕೆ ಹಾನಿ ಎಂದೂ ಗೊತ್ತಿದ್ದರೂ ಸಹ ಜನರು ಕಡಿಮೆ ಬೆಲೆಗೆ ಸಿಗುವ ಪಿಓಪಿ ಮೂರ್ತಿಗಳನ್ನು ಕೇಳುತ್ತಾರೆ. ಇದೂ ಕೂಡಾ ಪಿಓಪಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಬೆಂಗಳೂರಿನಲ್ಲಿ 'ಗಲ್ಲಿ ಗಣೇಶ ಕೂರಿಸಲು 63 ಸಿಂಗಲ್ ವಿಂಡೋ ವ್ಯವಸ್ಥೆ' ಮಾಡಿದ ಬಿಬಿಎಂಪಿ!

ಪ್ರಯೋಜನವಾಗದ ಜಾಗೃತಿ: ಪಿಓಪಿ ಗಣೇಶ ಮೂರ್ತಿಗಳ ಬಳಕೆಯಿಂದ ಪರಿಸರ ಹಾಗೂ ಜಲಚರಗಳ ಜೀವಕ್ಕೆ ಕುತ್ತು ಉಂಟಾಗುವುದರಿಂದ ಅವುಗಳ ಬಳಕೆಗೆ ಬೇಡ ಎಂದು ಹಲವು ವರ್ಷಳಿಂದ ಜಾಗೃತಿ ಮೂಡಿಸುತ್ತಿದ್ದರೂ ಅವುಗಳ ತಯಾರಿಕೆ ಮತ್ತು ಬಳಕೆ ಮಾತ್ರ ನಿಂತಿಲ್ಲ. ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಪಿಓಪಿ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.

ಅಧಿಕಾರಿಗಳಿಗೆ ಇಚ್ಚಾಸಕ್ತಿ ಕೊರತೆ: ಪಿಓಪಿ ಗಣೇಶ ಮೂರ್ತಿಗಳನ್ನು ತಡೆಗಟ್ಟುವುದು ಮತ್ತು ನಿಯಂತ್ರಣದ ವಿಚಾರದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹಾಗೂ ಬಿಬಿಎಂಪಿ ಅಧಿಕಾರಿಗಳ ಇಚ್ಚಾಸಕ್ತಿ ಕೊರತೆ ಎದ್ದು ಕಾಣಿಸುತ್ತಿದೆ. ನಾಮಕೇವಾಸ್ತೆಗೆ ಜಪ್ತಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ವಹಿಸದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಪಿಓಪಿ ಮೂರ್ತಿ ತಯಾರಕರು ರಾಜಾರೋಷವಾಗಿ ಪಿಓಪಿ ಗಣೇಶ ಮೂರ್ತಿಗಳ ತಯಾರಿಸಿ ಮಾರುಕಟ್ಟೆಗೆ ಸರಬರಾಜು ಮಾಡುತ್ತಿದ್ದಾರೆ ಎಂಬ ದೂರುಗಳು ಪರಿಸರವಾದಿಗಳಿಂದ ಕೇಳಿ ಬರುತ್ತಿವೆ.

ಪಿಓಪಿ ನಿಷೇಧ ಏಕೆ?: ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ (ಪಿಓಪಿ) ವಿಗ್ರಹಗಳಿಗೆ ಉಪಯೋಗಿಸುವ ರಾಸಾಯನಿಕ ಮರ್ಕ್ಯುರಿ, ಆರ್ಸೆನಿಕ, ಸೀಸ, ಕ್ರೋಮಿಯಂ, ತಾಮ್ರ, ಕ್ಯಾಡ್ಮಿಯಂ, ಕೋಬಾಲ್ಟ್‌, ಸತುಗಳಂತಹ ಭಾರಲೋಹಗಳಿಂದ ಕೂಡಿದೆ. ಈ ಹಾನಿಕಾರಕ ರಾಸಾಯನಿಕ ನೀರಿನಲ್ಲಿ ಸೇರಿ ಜಲಮೂಲ ಕಲುಷಿತಗೊಂಡು ಮೀನು ಹಾಗೂ ವಿವಿಧ ಜಲಚರಗಳು ಸಾವನಪ್ಪುತ್ತವೆ. ಕಲುಷಿತ ನೀರು ಬಳಸುವ ಜನ, ಜಾನುವಾರುಗಳಿಗೆ ಕ್ಯಾನ್ಸರ್‌ನಂತಹ ಮಾರಕ ರೋಗಗಳು ಹರಡುತ್ತವೆ. ಹೀಗಾಗಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಆದೇಶದಂತೆ 2016ರಲ್ಲಿ ರಾಜ್ಯದಲ್ಲಿ ಇವುಗಳ ತಯಾರಿಕೆ ಹಾಗೂ ಮಾರಾಟಕ್ಕೆ ನಿಷೇಧ ಹೇರಲಾಗಿದೆ.

ಪಿಓಪಿಗೆ ಪರ್ಯಾಯ ಏನು?: ಪಿಓಪಿ ಗಣೇಶ ಮೂರ್ತಿಗಳಿಗೆ ಪರ್ಯಾಯವಾಗಿ ಹಲವಾರು ರೀತಿಯಲ್ಲಿ ಪರಿಸರ ಗಣಪತಿಗಳನ್ನು ಮಾಡಬಹುದು. ಸಂಪೂರ್ಣವಾಗಿ ಮಣ್ಣಿನಿಂದಲೇ ಸುಮಾರು 5 ಅಡಿಯಿಂದ 6 ಅಡಿಯವರೆಗೆ ಮೂರ್ತಿಗಳನ್ನು ತಯಾರಿಸಬಹುದು. ಅಲ್ಲದೇ, ತೆಂಗಿನಕಾಯಿ, ಹಣ್ಣು - ತರಕಾರಿಗಳಿಂದ, ಧಾನ್ಯಗಳಿಂದಲೂ ವಿಶಿಷ್ಟವಾಗಿ ಗಣೇಶ ಮೂರ್ತಿಗಳನ್ನು ತಯಾರಿಸಬಹುದು. ಇಂತಹ ಪರಿಸರ ಸ್ನೇಹಿ ಮೂರ್ತಿಗಳನ್ನು ನದಿ, ಕೆರೆ, ಹಳ್ಳಕೊಳ್ಳಗಳಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳಿಗೆ ಸಮಸ್ಯೆಯಿಲ್ಲ. ಪರಿಸರಕ್ಕೂ ಯಾವುದೇ ಹಾನಿಯಿಲ್ಲ.

PREV
Read more Articles on
click me!

Recommended Stories

ಏಪ್ರಿಲ್ 2026ರಲ್ಲಿ ನಡೆಯಲಿದೆ ದೊಡ್ಡ ಗ್ರಹಗಳ ಸಂಚಾರ, ಈ ರಾಶಿಗೆ ಅದೃಷ್ಟ, ಈ ರಾಶಿಗೆ ಸಂಕಷ್ಟ
ಹೊಸ ಚಂದ್ರನ ಪವರ್, ಈ ರಾಶಿಯವರಿಗೆ ಅದೃಷ್ಟದ ಬಾಗಿಲು ಓಪನ್