ನೀರುಮಾರ್ಗ ದೇವಸ್ಥಾನದಲ್ಲಿ ಭಕ್ತರಿಗೆ ‘ಮಯೂರ’ ದರ್ಶನ!

By Suvarna NewsFirst Published Jun 20, 2022, 10:28 AM IST
Highlights

ಮಂಗಳೂರಿನ ದೇವಸ್ಥಾನದ ಪ್ರಾಂಗಣದಲ್ಲಿ ನವಿಲೊಂದು ರೆಕ್ಕೆಬಿಚ್ಚಿ ಕುಣಿಯುತ್ತಿರುವ ವಿಡಿಯೋ ತುಣುಕು ಇಲ್ಲಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇಲ್ಲಿನ ಸುಬ್ರಹ್ಮಣ್ಯ ದೇವಾಲಯದ ಪೂಜೆಗೆ ಪ್ರತಿ ದಿನ ಹಾಜರಾಗುತ್ತದೆ ಈ ನವಿಲು!

ಮಂಗಳೂರು(Mangaluru) ಹೊರವಲಯದ ನೀರುಮಾರ್ಗ(Neermarga) ಮಾಣೂರು ಶ್ರೀಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಗರಿಬಿಚ್ಚಿ ಕುಣಿಯುತ್ತಿರುವ ನವಿಲಿನ ವಿಡಿಯೋ ಇದಾಗಿದೆ.
ಅಲ್ಲಿನ ಅರ್ಚಕರು ವಿವಿಧ ಹಾವಭಾವ ಪ್ರದರ್ಶಿಸುತ್ತಾ ನಾಟ್ಯವಾಡುವಂತೆ ನವಿಲ(Peacock)ನ್ನು ಪುಸಲಾಯಿಸುತ್ತಿರುವ ದೃಶ್ಯ ವಿಡಿಯೋ ತುಣುಕಿನಲ್ಲಿದೆ. ಸ್ವಲ್ಪ ಹೊತ್ತಿನಲ್ಲಿ ಪುಟಾಣಿಯೊಂದು ನವಿಲಿನ ಬಳಿ ತೆರಳಿ ಅದನ್ನು ಸವರಲು ಯತ್ನಿಸುತ್ತದೆ. ಕೊನೆಗೊಮ್ಮೆ ನಿಂತಲ್ಲೇ ಸುತ್ತುತ್ತಾ ನವಿಲು ನಾಟ್ಯವಾಡಲು ಮುಂದಾಗುತ್ತದೆ. ಯಾವುದೇ ಭಯವಿಲ್ಲದೆ ಎಲ್ಲರೊಂದಿಗೆ ಬೆರೆಯುವಂತೆ ಕಾಣುವ ನವಿಲಿನ ಈ ವರ್ತನೆ ನೋಡಿಗರಿಗೆ ಸೋಜಿಗ ಉಂಟು ಮಾಡುತ್ತಿದೆ. ಈ ನವಿಲನ್ನು ಕುಣಿಯುವಂತೆ ಪ್ರೇರಿಪಿಸಿರುವುದು ಸ್ಥಳೀಯ ದೇವಸ್ಥಾನ ಅರ್ಚಕ ರಾಜೇಶ್‌ ಭಟ್‌. ಅವರ ಮನೆ ಹಾಗೂ ದೇವಸ್ಥಾನದ ಸುತ್ತಮುತ್ತ ಪ್ರದೇಶವೇ ನವಿಲಿನ ಮಾಮೂಲಿ ಅಡ್ಡಾಡುವ ಜಾಗ.

ಮಯೂರ ದರ್ಶನ: ಈ ನವಿಲು ಇತ್ತೀಚೆಗೆ ಕಾಡಿನಿಂದ ನಾಡಿಗೆ ಬಂದದ್ದಲ್ಲ. ಸುಮಾರು 6-7 ವರ್ಷದಿಂದ ಈ ದೇವಸ್ಥಾನ ಪರಿಸರದಲ್ಲಿ ಸುತ್ತಾಡುತ್ತಿದೆ. ಸ್ಥಳೀಯ ನಿವಾಸಿಯೊಬ್ಬರಿಗೆ ಕೋಳಿ ಮೊಟ್ಟೆಯ ಜತೆಗೆ ನವಿಲಿನ ತತ್ತಿಯೂ ಸಿಕ್ಕಿತ್ತು. ಕೋಳಿ ಮರಿ ಮೊಟ್ಟೆಯಿಂದ ಹೊರಬಂದ ವೇಳೆ ನವಿಲಿನ ಮರಿಯೂ ಮೊಟ್ಟೆಯೊಡೆದಿತ್ತು. ಆ ಬಳಿಕ ಮರಿಯನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದರು. ಅದು ಈಗ ದೊಡ್ಡದಾಗಿ ದೇವಸ್ಥಾನದ ಪರಿಸರದಲ್ಲಿ ಸುತ್ತಾಡುತ್ತಿರುತ್ತದೆ. ಅದುವೇ ಈಗ ದೊಡ್ಡದಾಗಿ ಆಗೊಮ್ಮೆ ಈಗೊಮ್ಮೆ ಜಾಲತಾಣದಲ್ಲಿ ವಿಡಿಯೋ ಮೂಲಕ ವೈರವ್‌ ಆಗುತ್ತಿದೆ ಎನ್ನುತ್ತಾರೆ ಸ್ಥಳೀಯರು.

ದಿನವೂ ದೇವರ ಪೂಜೆ ವೇಳೆ ಹಾಜರ್‌!
ಈ ದೇವಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ಹಾಗೂ ಮಧ್ಯಾಹ್ನ ದೇವರ ಪೂಜೆ ವೇಳೆ ಈ ನವಿಲು ನಮಸ್ಕಾರ ಮಂಟಪ ಎದುರು ಹಾಜರ್‌ ಇರುತ್ತದೆ. ಇದಕ್ಕೆ ದೇವಸ್ಥಾನದ ಅರ್ಚಕರು ‘ಮಯೂರ’ ಎಂದು ಹೆಸರಿಟ್ಟಿದ್ದಾರೆ. ದೇವಸ್ಥಾನದ ಪ್ರಾಂಗಣದಲ್ಲೇ ರಾತ್ರಿ ಕಳೆಯುವ ಈ ನವಿಲು, ಬೆಳಗ್ಗೆ 6 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆ ಮೊದಲು ಪ್ರವೇಶಿಸುತ್ತದೆ. ಬೆಳಗ್ಗಿನ ಪೂಜೆ ಬಳಿಕ ಮಧ್ಯಾಹ್ನ ವರೆಗೂ ಅಲ್ಲೇ ಸುತ್ತಾಡುತ್ತಿರುತ್ತದೆ. ಭಕ್ತರು ಬಂದರೆ ಸಾಕು, ಸೆಲ್ಫಿ ತೆಗೆಯಲು ತನ್ನೆಲ್ಲ ಗರಿಗಳನ್ನು ಬಿಚ್ಚಿ ಸಿದ್ಧಗೊಳ್ಳುತ್ತದೆ. ಬುಧವಾರ ಸಂಕ್ರಮಣವಾದ್ದರಿಂದ ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಬೆಳಗ್ಗಿನಿಂದ ಮಧ್ಯಾಹ್ನ ವರೆಗೂ ಈ ನವಿಲು ಭಕ್ತರ ಸೆಲ್ಫಿಗೆ ಫೋಸು ಕೊಡುತ್ತಿತ್ತು ಎನ್ನುತ್ತಾರೆ ಅರ್ಚಕ ರಾಜೇಶ್‌ ಭಟ್‌.

ಈ ಐದು ರಾಶಿಗಳೊಂದಿಗೆ ವಾದಿಸಿ, ಜಗಳ ಮಾಡಿ ಗೆಲ್ಲೋದು ಸುಲಭವಲ್ಲ!

ಈ ನವಿಲು ಈಗ ಮನೆಯ ಸದಸ್ಯನಂತೆ ಆಗಿದೆ. ದೇವಸ್ಥಾನ ಪರಿಸರದಲ್ಲಿ ಅಡ್ಡಾಡುತ್ತಿರುವುದರಿಂದ ಯಾರೂ ಅದರ ತಂಟೆಗೆ ಹೋಗುವುದಿಲ್ಲ. ಅಕ್ಕಿ, ತೊಂಡೆಕಾಯಿ ಮಾತ್ರ ಸೇವಿಸುತ್ತದೆ. ಅದು ಬಿಟ್ಟರೆ ಹುಳಹುಪ್ಪಟೆ ಇದರ ಆಹಾರ.

ಈ ದೇವಸ್ಥಾನ ಮಂಗಳೂರು-ನಂತೂರು-ಮೂಡುಬಿದಿರೆ ಮಾರ್ಗದಲ್ಲಿ ನೀರುಮಾರ್ಗ ಸಮೀಪ ಇದೆ. ನೀರುಮಾರ್ಗದಿಂದ ಎರಡೂವರೆ ಕಿ.ಮೀ, ಮಂಗಳೂರಿನಿಂದ 10 ಕಿ.ಮೀ. ದೂರ ಇದೆ.

click me!