Onam Pookalam: ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಹಾಕುವುದು ಯಾಕೆ ?

Published : Sep 04, 2022, 12:34 PM ISTUpdated : Sep 04, 2022, 12:35 PM IST
Onam Pookalam: ಓಣಂ ಹಬ್ಬಕ್ಕೆ ಹೂವಿನ ರಂಗೋಲಿ ಹಾಕುವುದು ಯಾಕೆ ?

ಸಾರಾಂಶ

ಮಲಯಾಳಿಗಳ ನೆಚ್ಚಿನ ಹಬ್ಬ ಓಣಂ. ಅನಾದಿ ಕಾಲದಿಂದಲೂ ರಾಜ ಮಾವೇಲಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ. ಈ ಹಬ್ಬದ ಆಕರ್ಷಣೆಯೆಂದರೆ ಹೂವಿನಿಂದ ರಚಿಸುವ ರಂಗೋಲಿ ಪೂಕಳಂ. ಇದನ್ನು ರಚಿಸುವುದು ಯಾಕೆ ? ಇದರ ಅರ್ಥವೇನು ?

ಓಣಂ ಕೇರಳ ರಾಜ್ಯದ ಹಬ್ಬ. ಮಲಯಾಳಿಗಳು ಅತ್ಯಂತ ಖುಷಿಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಇದು ಆಧುನಿಕ ಕಾಲಮಾನದಲ್ಲಿಯೂ ಉಳಿಸಿ, ಆಚರಿಸಿಕೊಂಡು ಬರಲಾಗುತ್ತಿರುವ ಅತ್ಯಂತ ಪುರಾತನ ಹಬ್ಬವಾಗಿದೆ. ಭತ್ತದ ಸುಗ್ಗಿಯ ಸಂಭ್ರಮ ಮತ್ತು ಮಳೆಗಾಲದ ಹೂಫಸಲು - ಇವೆರಡರ ಸಂಗಮದ ಕುರುಹಾಗಿ ಮತ್ತು ಅರಸ ಮಾವೆಲಿಯು ಪಾತಾಳಲೋಕದಿಂದ ಭೂಮಿಗೆ ವಾರ್ಷಿಕ ಭೇಟಿಯ ನೆನಪಿನಲ್ಲಿ, ಮಲಯಾಳಿ ತಿಂಗಳು ಚಿಂಗಂನಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅನಾದಿ ಕಾಲದಿಂದಲೂ ಮಾವೇಲಿಯನ್ನು ಕೇರಳದ ಜನತೆ ಆರಾಧಿಸುತ್ತ ಬಂದಿರುವುದರಿಂದ ಓಣಂ ಹಬ್ಬಕ್ಕೆ ಅದರದ್ದೇ ಆದ ವಿಶಿಷ್ಟತೆ ಇದೆ. ಹತ್ತು ದಿನಗಳವರೆಗೆ ಸಡಗರದಿಂದ ಜರುಗುವ ಈ ಹಬ್ಬವು ಕೇರಳದ ಹಲವಾರು ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕತೆಯನ್ನು ಬಿಂಬಿಸುತ್ತದೆ. 

ಮಹಾಬಲಿಯ ಸ್ವಾಗತವನ್ನು ಕೊಂಡಾಡಲು ಕೇರಳಿಗರು ಈ ಹಬ್ಬವನ್ನು (Festival) ಆಚರಿಸುತ್ತಾರೆ. ಜನರ ಉನ್ನತಿಗಾಗಿ ಮತ್ತು ಕೊಟ್ಟ ಭಾಷೆಯನ್ನು ಉಳಿಸಿಕೊಳ್ಳುವ ಸಲುವಾಗಿ ಮಹಾಬಲಿಯು ಪ್ರಜೆಗಳಿಗಾಗಿ ತನ್ನನ್ನು ತ್ಯಾಗ (Sacrifice) ಮಾಡಿಕೊಂಡಿದ್ದಾನೆ ಎಂಬ ಉಲ್ಲೇಖವನ್ನು ಪುರಾಣದಲ್ಲಿ ಮಾಡಲಾಗಿದೆ. ಆದ್ದರಿಂದಲೇ ಕೇರಳಿಗರು ಬಲಿ ಚಕ್ರವರ್ತಿಯ ತ್ಯಾಗವನ್ನು ಈ ದಿನಗಳಂದು ನೆನಪಿಸಿಕೊಳ್ಳುತ್ತಾರೆ. 

Onam Festival: ದೇವರನಾಡಿನಲ್ಲಿ ಆಚರಿಸುವ ಓಣಂ ಹಬ್ಬದ ವಿಶೇಷತೆಯೇನು?

ಓಣಂ ಪೂಕಳಂ ಎಂದರೇನು ?
ಕೇರಳದ ಪ್ರಮುಖ ಹಬ್ಬವಾಗಿರುವ ಓಣಂನ ಪ್ರಮುಖ ಆಕರ್ಷಣೆಯೆಂದರೆ ಪೂಕಳಂ ಅಂದ್ರೆ ಹೂವಿನಿಂದ ಹಾಕುವ ರಂಗೋಲಿ. 10 ದಿನ ಮನೆಯ ಮುಂದುಗಡೆ ಹೂವಿನ ರಂಗೋಲಿ ಹಾಕಿ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಪೂಕಳಂಗಳು ಸಾಮಾನ್ಯವಾಗಿ ವೃತ್ತಾಕಾರದಲ್ಲಿರುತ್ತವೆ. 'ಪೂ' ಎಂದರೆ ಹೂವು ಮತ್ತು 'ಕೋಲಂ' ಎಂದರೆ ಅಲಂಕಾರಿಕ ವಿನ್ಯಾಸಗಳು ಅಥವಾ ರಂಗೋಲಿ. ತಾಜಾ ಹೂವುಗಳು (Flowers) ಮತ್ತು ದಳಗಳನ್ನು ಬಳಸಿ ಈ ರಂಗೋಲಿಯನ್ನು ತಯಾರಿಸಲಾಗುತ್ತದೆ, ಪೂಕಳಂಗಳನ್ನು ಮನೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ರಾಜ ಮಹಾಬಲಿಗೆ ಸ್ವಾಗತ ಕೋರಲು ಹಾಕಲಾಗುತ್ತದೆ.

ಹಿಂದಿನ ಕಾಲದಲ್ಲೆಲ್ಲಾ ಮನೆಯ ಸುತ್ತಮುತ್ತಲೂ ಸಿಗುವ ಹೂಗಳನ್ನು ಮಾತ್ರ ಬಳಸಿ ಸಣ್ಣದಾಗಿ ಪೂಕಳಂ ರಚಿಸಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಾರುಕಟ್ಟೆಯಿಂದ ಭಿನ್ನ-ವಿಭಿನ್ನ ಹೂಗಳನ್ನು ತಂದು ದೊಡ್ಡ ದೊಡ್ಡ ಹೂವಿನ ರಂಗೋಲಿಗಳನ್ನು ರಚಿಸುತ್ತಾರೆ.

ಕೇರಳದ ಓಣಂ ಸ್ಪೆಷಲ್ ಡಿಶ್ ಅವಿಯಲ್ ಮಾಡೋದು ಹೇಗೆ ?

ಓಣಂ ಹಬ್ಬಕ್ಕೆ ಸ್ಪೆಷಲ್ ದಿರಿಸು
ತುಂಬಾ ಕ್ಲಿಷ್ಟ ವಿನ್ಯಾಸದ ಪುಷ್ಪ ಚಿತ್ತಾರಗಳು, ಬಗೆ ಬಗೆಯ ಭಕ್ಷ್ಯಗಳು, ಹಾವು ದೋಣಿಯಾಟದ ಸ್ಪರ್ಧೆಗಳು, ಕೈಕೊತ್ತಿಕಲಿ ನೃತ್ಯ  ಇವೆಲ್ಲ ಓಣಂ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ. ಈ ಹಬ್ಬಕ್ಕಾಗಿ ಇಲ್ಲಿನ ಜನರು ಹೊಸಬಟ್ಟೆಗಳನ್ನು (Dress) ತೊಡುವುದು ವಾಡಿಕೆ. ಪುರುಷರು ಅಂಗಿ ಮತ್ತು ಮುಂಡು ಎಂದು ಕರೆಯಲಾಗುವ ಸ್ಕರ್ಟ್ ತರದ ಉಡುಪನ್ನು(ಪಂಚೆ)ಧರಿಸಿದರೆ, ಮಹಿಳೆಯರು (Woman) ಅದೇ ತರಹದ ಮುಂಡುವಿನ ಮೇಲೊಂದು ಚಿನ್ನದ ಬಣ‍್ಣದ ನರಿಯತ್ತು ಎಂದು ಕರೆಯಲಾಗುವ ಮೇಲಂಗಿಯನ್ನು ತೊಟ್ಟು ಸಂಭ್ರಮಿಸುತ್ತಾರೆ. ಬಾಲಕಿಯರು ಪಾವಡವೆಂಬ ಲಂಗ, ಮೇಲೊಂದು ರವಿಕೆಯನ್ನು ತೊಟ್ಟು ಸಡಗರದಿಂದ ಓಡಾಡುತ್ತಿರುತ್ತಾರೆ. 

ಓಣಂ ಹಬ್ಬವು ಚಿಂಗಂ ತಿಂಗಳಲ್ಲಿ ಆಚರಿಸಲಾಗುವ ಸುಗ್ಗಿಯ ಹಬ್ಬವಾಗಿದೆ ಮತ್ತು ಇದು 10 ದಿನಗಳವರೆಗೆ ಇರುತ್ತದೆ. ಈ ಹಬ್ಬವು ಈ 10 ದಿನಗಳಲ್ಲಿ ವಲ್ಲಂ ಕಾಳಿ (ದೋಣಿ ಸ್ಪರ್ಧೆಗಳು), ಪುಲಿಕಲಿ (ಹುಲಿ ನೃತ್ಯಗಳು), ಓಣತಪ್ಪನ್ (ಪೂಜೆ) ನಂತಹ ಹಲವಾರು ವಿನೋದ ಚಟುವಟಿಕೆಗಳನ್ನು ಒಳಗೊಂಡಿದೆ. 26 ಬಗೆಯ ಭಕ್ಷ್ಯಗಳನ್ನು ಒಳಗೊಂಡಿರುವ ಓಣಂ ಸದ್ಯ ಹಬ್ಬದ ಸ್ಪೆಷಲ್ ಆಕರ್ಷಣೆಯಾಗಿದೆ.

PREV
Read more Articles on
click me!

Recommended Stories

ನಾಳೆ ಡಿಸೆಂಬರ್ 8 ರವಿ ಪುಷ್ಯ ಯೋಗ, 5 ರಾಶಿಗೆ ಅದೃಷ್ಟ ಮತ್ತು ಪ್ರಗತಿ
ಈ ಸಂಖ್ಯೆ ಹೊಂದಿರುವ ವ್ಯಕ್ತಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾನೆ ಮತ್ತು ಹಣದ ಸುರಿಮಳೆಯೇ ಆಗುತ್ತದೆ!