ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ನೂತನ ರಥ ಸಿದ್ಧ

By Suvarna NewsFirst Published Jan 30, 2023, 5:04 PM IST
Highlights

400 ವರ್ಷ ಹಳೆಯದಾದ ರಥ ಹಾಳಾದ ಹಿನ್ನೆಲೆ
ಯಥಾವತ್ತಾದ ನೂತನ ರಥ ನಿರ್ಮಾಣ
ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ ರಥ ವಿನ್ಯಾಸ

ಶಶಿಧರ್ ಮಾಸ್ತಿಬೈಲು, ಉಡುಪಿ
ಕೊಲ್ಲೂರು ಶ್ರೀ ಮೂಕಾಂಬಿಕಾ ಸನ್ನಿಧಿ ಯಾರಿಗೆ ಗೊತ್ತಿಲ್ಲ ಹೇಳಿ? ರಾಜ್ಯ ಹೊರರಾಜ್ಯದ ಭಕ್ತರು ಇಲ್ಲಿ ಆಗಮಿಸಿ ಶ್ರೀ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಇಲ್ಲಿನ ಶಕ್ತಿ ಪೀಠದ ಮಹಿಮೆ ಎನ್ನಬಹುದು. ಅದರಲ್ಲೂ ಸೆಲೆಬ್ರಿಟಿಗಳು, ರಾಜಕಾರಣಿಗಳು ಭೇಟಿ ನೀಡುವ ರಾಜ್ಯದ ದೇವಳದಗಳಲ್ಲಿ ಒಂದಾಗಿರುವ ಕೊಲ್ಲೂರಿಗೆ ಮಹತ್ವದ ಕೊಡುಗೆಯೊಂದು ಕೆಲವೇ ದಿನಗಳಲ್ಲಿ ಸಲ್ಲಿಕೆಯಾಗಲಿದೆ.

ಸುಮಾರು 400 ವರ್ಷಗಳ ಬಳಿಕ ಆಗುತ್ತಿರುವ ಈ ಸುಂದರ ಬದಲಾವಣೆಗೆ ಕ್ಷೇತ್ರದ ಭಕ್ತರು ಕಾಯುತ್ತಿದ್ದಾರೆ. ಹೌದು, ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಳ ರಾಜ್ಯ ಹೊರರಾಜ್ಯದಲ್ಲೂ ಪ್ರಖ್ಯಾತವಾಗಿರುವ ಕ್ಷೇತ್ರ. ಇಲ್ಲಿಗೆ ಪ್ರತಿ ವರ್ಷ ಲಕ್ಷಾಂತರ ಜನ ಭಕ್ತರು ಭೇಟಿ ಕೊಟ್ಟು ತಮ್ಮ ಇಷ್ಟಾರ್ಥಗಳು ನೆರವೇರುವಂತೆ ಕೋರಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅದರಲ್ಲೂ ರಾಜ್ಯದ ಸಿನೆಮಾ ತಾರೆಯರು, ಸೆಲೆಬ್ರಿಟಿಗಳು, ರಾಜ್ಯ ರಾಜಕಾರಣ ಪಟು ಗಳು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಪುನಸ್ಕಾರದಲ್ಲಿ ಭಾಗಿಯಾಗುತ್ತಾ ಬಂದಿದ್ದಾರೆ. 

ಸದ್ಯ ಈ ದೇವಳ ವಾರ್ಷಿಕ ಮಹೋತ್ಸವದಕ್ಕೆ ಸಿದ್ಧಗೊಳ್ಳುತ್ತಿದೆ. ಜಾತ್ರಾ ಮಹೋತ್ಸವದ ಬಳಿಕ ದೇವಳದ ಬ್ರಹ್ಮಕಲಶೋತ್ಸವವು ಕೂಡ ನಡೆಯಲಿದೆ. ಕೊಲ್ಲೂರು ಕ್ಷೇತ್ರದಲ್ಲಿ ನಡೆಯುವ ಉತ್ಸವಕ್ಕೆ ಸಾವಿರಾರು ಜನ ಬಂದು ಭಾಗಿಯಾಗುತ್ತಾರೆ . ಅದರಲ್ಲೂ ಕೇರಳ, ತಮಿಳುನಾಡು ಭಾಗದಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹೀಗೆ ಬರುವ ಭಕ್ತರಿಗೆ ಈ ಬಾರಿ ಒಂದು ಹೊಸ ಅನುಭವ ದೊರಕಲಿದೆ.

Jaya Ekadashi 2023 ದಿನಾಂಕ, ಮುಹೂರ್ತ, ಮಾಡಬಾರದ ಕೆಲಸಗಳು..

ನೂತನ ರಥ ನಿರ್ಮಾಣ
ಈ ದೇವಳದ ಅತ್ಯಂತ ಪುರಾತನ ಅಂದರೆ 400 ವರ್ಷ ಹಳೆಯದಾದ ರಥ ಸಂಪೂರ್ಣ ಹಾಳಾಗಿರುವ ಹಿನ್ನಲೆಯಲ್ಲಿ ನೂತನ ರಥ ಅರ್ಪಿಸಲಾಗುತ್ತಿದೆ. ಇದರ ನಿರ್ಮಾಣ ಕಾರ್ಯ ಪ್ರಾರಂಭವಾಗಿ 9 ತಿಂಗಳು ಕಳೆದಿದ್ದು, ಸದ್ಯ ರಥ ಸಂಪೂರ್ಣವಾಗಿ ಸಿದ್ಧವಾಗಿದೆ.

ಆಧುನಿಕ ತಂತ್ರಜ್ಞಾನ ಬಳಸಿರುವ ರಥಶಿಲ್ಪಿಗಳು ತ್ರಿಡಿ ಸ್ಕ್ಯಾನಿಂಗ್ ತಂತ್ರಜ್ಞಾನ ಬಳಸಿ  ಹಳೆಯ ರಥದ ಪಡಿಯಚ್ಚು ತೆಗೆದು ಯಥಾವತ್ತಾಗಿ ಹೊಸ ರಥ ನಿರ್ಮಿಸಿದ್ದಾರೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದ ನೂತನ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಸಿದ್ಧವಾಗಿದೆ. ಮುರ್ಡೇಶ್ವರದ ಖ್ಯಾತ ಉದ್ಯಮಿ ದಿ| ಆರ್‌.ಎನ್‌. ಶೆಟ್ಟಿ ಅವರ ಪುತ್ರ ಉದ್ಯಮಿ ಸುನಿಲ್‌ ಶೆಟ್ಟಿ ಅವರು ನೂತನ ರಥ ನಿರ್ಮಾಣದ ವೆಚ್ಚ ಭರಿಸಿದ್ದಾರೆ. ಕೋಟೇಶ್ವರದ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥ ಶಿಲ್ಪಿ ಲಕ್ಷ್ಮೀನಾರಾಯಣ ಆಚಾರ್ಯ ಹಾಗೂ ಅವರ ಪುತ್ರ ಶಿಲ್ಪಿ ರಾಜಗೋಪಾಲ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. 

ಮಹಿಳೆಯರ ಮೇಲೆ ಈ 3 ಗ್ರಹಗಳ ಪ್ರಭಾವ ಹೆಚ್ಚು! ಅವುಗಳ ಬಾಧೆಯಿಂದ ತಪ್ಪಿಸಿಕೊಳ್ಳೋದು ಹೇಗೆ?

ಇದೇ ಫೆಬ್ರವರಿಯಲ್ಲಿ ನೂತನ ರಥವನ್ನು ಕೊಲ್ಲೂರಿಗೆ ಒಯ್ಯಲಾಗುತ್ತಿದ್ದು, ಮಾರ್ಚ್‌ನಲ್ಲಿ ನಡೆಯಲಿರುವ ದೇಗುಲದ ರಥೋತ್ಸವದಲ್ಲಿ ನೂತನ ರಥ ಬಳಸುವ ಬಗ್ಗೆ ಯೋಜನೆ ರೂಪಿಸಲಾಗಿದೆ. ದೇಗುಲದಲ್ಲಿ ಈ ವರೆಗೆ ಬಳಸುತ್ತಿದ್ದ ರಥವು ಕೆಳದಿ ಅರಸರ ಕಾಲದ್ದಾಗಿದ್ದು, 400 ವರ್ಷಗಳ ಇತಿಹಾಸವನ್ನು ಹೊಂದಿದೆ. 

ಆ ರಥದಲ್ಲಿದ್ದ ಶಿಲ್ಪಕಲೆಯಲ್ಲಿ ಯಾವುದೇ ಬದಲಾವಣೆಯಾಗದಂತೆ ನೂತನ ರಥದಲ್ಲಿ ಕೂಡ ರೂಪಿಸಿರುವುದು ರಥ ಶಿಲ್ಪಿಗಳ ಕೈಚಳಕವನ್ನು ಎತ್ತಿಹಿಡಿದಿದೆ. ಸುಮಾರು 42 ಜನ ಕುಶಲಕರ್ಮಿಗಳು 9 ತಿಂಗಳುಗಳ ಕಾಲ ಶ್ರಮವಹಿಸಿ ರಥವನ್ನು ಸಿದ್ಧಪಡಿಸಿದ್ದಾರೆ. 

ಒಟ್ಟಾರೆಯಾಗಿ ಹಳೆಯ ರಥದ ಝೇರಾಕ್ಸ್ ನಂತೆ ಹೊಸ ರಥ ನಿರ್ಮಾಣವಾಗಿದೆ. ಮುಂದೆ 400 ವರ್ಷಗಳ ಇತಿಹಾಸ ಹೊಂದಿರುವ ಹಳೆ ರಥವನ್ನು ದೇಗುಲದ ಆನೆಬಾಗಿಲಿನ ಬಳಿ ಸೂಕ್ತ ಸ್ಥಳದಲ್ಲಿ ಸಂರಕ್ಷಣೆ ಮಾಡಿ ಪಾರದರ್ಶಕ ಫ್ರೇಮ್‌ ಬಳಸಿ, ಭಕ್ತರ ವೀಕ್ಷಣೆ ಇರಿಸುವ ಯೋಜನೆ ರೂಪಿಸಲಾಗಿದೆ. ಸದ್ಯ ನೂತನ ರಥವೇರಿ ಬರುವ ತಾಯಿ ಮೂಕಾಂಬಿಕೆಯ ದರ್ಶನ ಪಡೆಯಲು ಭಕ್ತರು ಕಾತರದಿಂದ ಎದುರು ನೋಡುತ್ತಿದ್ದಾರೆ.

click me!