Mercury retrograde 2022: ವರ್ಷಾರಂಭದಲ್ಲೇ ಬುಧ ವಕ್ರಿಯಿಂದ ಈ ರಾಶಿಗಳಿಗೆ ಸಂಕಷ್ಟ

By Suvarna NewsFirst Published Nov 25, 2022, 11:14 AM IST
Highlights

ಹೊಸ ವರ್ಷದ ಆರಂಭದಲ್ಲೇ ಬುಧ ಗ್ರಹ ವಕ್ರಿಯಾಗಿ 3 ರಾಶಿಗಳಿಗೆ ನವ ವರ್ಷಾರಂಭವನ್ನು ಕಷ್ಟದಾಯಕಗೊಳಿಸಬಹುದು. ಈ 3 ರಾಶಿಯವರು ಬುಧ ವಕ್ರಿಯಿಂದ ಸಮಸ್ಯೆ ಎದುರಿಸಬೇಕಾಗಬಹುದು. ಹಾಗೆಯೇ 2 ರಾಶಿಗಳಿಗೆ ಬುಧಾನುಗ್ರಹ ಸಿಗಲಿದೆ.

ಹೊಸ ವರ್ಷದ ಆರಂಭದಿಂದಲೇ ಸಾಕಷ್ಟು ಹೊಸ ಬದುಕನ್ನು ಕಟ್ಟಿಕೊಳ್ಳುವ ಕನಸನ್ನು ಎಲ್ಲರೂ ಕಟ್ಟುತ್ತೇವೆ. ಆದರೆ, ಗ್ರಹಗಳ ಲೆಕ್ಕಾಚಾರವೇ ಬೇರೆ ಇರುತ್ತದೆ. ಡಿಸೆಂಬರ್ 31ರಂದು ಗ್ರಹಗಳ ರಾಜಕುಮಾರ ಬುಧ ಗ್ರಹವು ಹಿಮ್ಮುಖ ಚಲನೆಯಲ್ಲಿ ಧನು ರಾಶಿಯನ್ನು ಪ್ರವೇಶಿಸಲಿದೆ.

ಬುಧ ಗ್ರಹ(Planet Mercury)ವು ಸರಕು ಮತ್ತು ವ್ಯಾಪಾರದ ಅಂಶ
ಬುಧ ಗ್ರಹವನ್ನು ಮಾತು, ಬರಹ, ಕಾನೂನು, ಚರ್ಮ ಮತ್ತು ಸರಕು, ವ್ಯವಹಾರ ಮತ್ತು ವ್ಯಾಪಾರ(trade)ದ ಅಂಶವೆಂದು ಪರಿಗಣಿಸಲಾಗುತ್ತದೆ. ವ್ಯಾಪಾರಕ್ಕೆ ಸಂಬಂಧಿಸಿದವರಿಗೆ ಜಾತಕದಲ್ಲಿ ಬುಧ ಗ್ರಹದ ಸ್ಥಾನವು ಚೆನ್ನಾಗಿದ್ದರೆ, ತುಂಬಾ ಮಂಗಳಕರವಾಗಿರುತ್ತದೆ. ಬುಧವು ವ್ಯಾಪಾರಿಗಳ ರಕ್ಷಕ ಎಂದೂ ಹೇಳಲಾಗುತ್ತದೆ. ಬುಧನು ಬುದ್ಧಿವಂತಿಕೆ, ತಾರ್ಕಿಕ ಅಂಶಗಳ ನೇತಾರ. ಆದರೆ, ವಕ್ರಿಯಾದಾಗ ಯಾವುದೇ ಗ್ರಹವಾಗಲಿ, ಶುಭ ಫಲ ಕೊಡುವುದು ಕಡಿಮೆ. 

ಈ ಬುಧ ವಕ್ರಿಯು ವರ್ಷಾರಂಭದಲ್ಲಿ ಕೆಲವೊಂದು ರಾಶಿಗಳಿಗೆ ಪ್ರತಿಕೂಲ ಸಮಯ ಸೃಷ್ಟಿಸಲಿದೆ. ಯಾವೆಲ್ಲ ರಾಶಿಚಕ್ರಗಳು ಬುಧ ವಕ್ರಿಯಿಂದ ಸಮಸ್ಯೆಗಳನ್ನು ಎದುರಿಸುತ್ತಾರೆ ನೋಡೋಣ..

ಮೇಷ ರಾಶಿ (Aries)
ಹಿಮ್ಮುಖ ಬುಧದ ಧನು ಸಂಕ್ರಮಣದಿಂದಾಗಿ, ಈ ರಾಶಿಚಕ್ರ ಚಿಹ್ನೆಗಳ ಜನರು ವ್ಯವಹಾರದಲ್ಲಿ ಕಠಿಣ ಸವಾಲುಗಳನ್ನು ಎದುರಿಸಬೇಕಾಗಬಹುದು. ಲಾಭದಿಂದ ನಷ್ಟದತ್ತ ವ್ಯವಹಾರ ಮುಖ ಮಾಡಬಹುದು. ಮಾತಿನ ಎಡವಟ್ಟಿನಿಂದಾಗಿ ನಿಮ್ಮ ಜೀವನ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಏರಿಳಿತಗಳಿರಬಹುದು. ಹಣಕಾಸಿನ ಸಮಸ್ಯೆಗಳನ್ನೂ ಎದುರಿಸಬೇಕಾಗಬಹುದು. ನಿದ್ರಾಹೀನತೆ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳನ್ನು ಸಹ ಎದುರಿಸಬಹುದು.

ಸುನಫಾ ಯೋಗ ಜಾತಕದಲ್ಲಿದ್ದರೆ ವ್ಯಕ್ತಿಯ ಬೆಳವಣಿಗೆ ತಡೆಯೋರಿಲ್ಲ!

ವೃಷಭ ರಾಶಿ (Taurus)
ಈ ರಾಶಿಚಕ್ರದ ಜನರು ವೃತ್ತಿಪರ ಜೀವನ ಮತ್ತು ವ್ಯವಹಾರ ಎರಡರಲ್ಲೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಪರಸ್ಪರ ತಿಳುವಳಿಕೆಯ ಕೊರತೆಯಿಂದಾಗಿ ನಿಮ್ಮ ಸಂಬಂಧಗಳು ಹಾಳಾಗಬಹುದು. ಕೆಲಸದ ಸ್ಥಳದಲ್ಲಿ ಪ್ರತಿಕೂಲ ಪರಿಸ್ಥಿತಿಗಳನ್ನು ಸಹ ಎದುರಿಸಬಹುದು. ಈ ಸಮಯದಲ್ಲಿ ನಿಮ್ಮ ಆರೋಗ್ಯವೂ ಹದಗೆಡಬಹುದು.

ಸಿಂಹ ರಾಶಿ (Leo)
ಸಿಂಹ ರಾಶಿಯ ಜನರು ಹಿಮ್ಮುಖ ಬುಧ ಸಂಕ್ರಮಣದಿಂದಾಗಿ ವೈಯಕ್ತಿಕ ಜೀವನದಲ್ಲಿ ಮತ್ತು ಕುಟುಂಬದಲ್ಲಿ ಅನೇಕ ತೊಂದರೆಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ನೀವು ಕುಟುಂಬ ಸದಸ್ಯರ ಬೆಂಬಲವನ್ನು ಪಡೆಯದಿರಬಹುದು. ವೃತ್ತಿಯಲ್ಲಿ ಬದಲಾವಣೆಗಳು ನಿಮ್ಮನ್ನು ಕೊಂಚ ಕಂಗೆಡಿಸುತ್ತವೆ. ಪ್ರಯಾಣ ಹೆಚ್ಚುತ್ತದೆ. ಕಂಫರ್ಟ್ ಝೋನ್‌ನಿಂದ ಹೊರ ಬರಬೇಕಾಗುತ್ತದೆ. ನೀವು ಇನ್ನೂ ಅನೇಕ ಸಮಸ್ಯೆಗಳಿಂದ ಬಳಲುವಿರಿ.

ಬುಧ ವಕ್ರಿಯಿಂದ ಈ ರಾಶಿಗಳಿಗೆ ಲಾಭ

ತುಲಾ ರಾಶಿ (Libra)
ಹಿಮ್ಮುಖ ಬುಧ ಸಂಕ್ರಮಣದಿಂದಾಗಿ ಈ ರಾಶಿಯ ಜನರ ಸಮಯ ಉತ್ತಮವಾಗಿರುತ್ತದೆ. ಸಮಯವು ವೈಯಕ್ತಿಕ ಜೀವನಕ್ಕೂ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿಯೊಂದಿಗೆ ಸಹ ನೀವು ಉತ್ತಮ ಸಮಯವನ್ನು ಕಳೆಯಬಹುದು. ನೀವು ವ್ಯವಹಾರದಲ್ಲಿ ಲಾಭವನ್ನೂ ಪಡೆಯಬಹುದು. ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಪ್ರಶಂಸಿಸುತ್ತಾರೆ. 

Leo Men: ರಾಯಲ್ ಅಷ್ಟೇ ಅಲ್ಲ, ಲಾಯಲ್ ಕೂಡಾ ಹೌದು ಸಿಂಹ ರಾಶಿಯ ಪುರುಷ

ಕುಂಭ (Aquarius)
ಈ ರಾಶಿಚಕ್ರದ ಸ್ಥಳೀಯರಿಗೆ ಈ ಸಂಚಾರವು ಫಲಪ್ರದವಾಗಬಹುದು. ವ್ಯಾಪಾರದಲ್ಲಿ ಉತ್ತಮ ಲಾಭದ ಸಾಧ್ಯತೆ ಇದೆ. ನೀವು ವ್ಯಾಪಾರವನ್ನು ಸಹ ಹೆಚ್ಚಿಸಬಹುದು. ಈ ಅವಧಿಯಲ್ಲಿ ದಾಂಪತ್ಯದಲ್ಲಿ ಪರಸ್ಪರ ಪ್ರೀತಿ ಮತ್ತು ತಿಳುವಳಿಕೆ ಕೂಡ ಹೆಚ್ಚಾಗಬಹುದು. ಮಗುವಿನ ನಿರೀಕ್ಷೆಯಲ್ಲಿದ್ದರೆ ಆ ಶುಭ ಸುದ್ದಿ ಸಿಗಬಹುದು. ಆತ್ಮವಿಶ್ವಾಸ ಹೆಚ್ಚಾಗಲಿದೆ. ಹೊಸ ಸ್ನೇಹಿತರು ದೊರಕಲಿದ್ದಾರೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!