ಅ. 31 ರಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ರಾಜಮುಡಿಯ ಉತ್ಸವ, ಪದ್ಧತಿಯಂತೆ ತಮಿಳುನಾಡು ಸರ್ಕಾರದ ಗೌರವ

Published : Oct 20, 2025, 07:54 PM IST
Melukote Rajamudi Utsav

ಸಾರಾಂಶ

ಮೇಲುಕೋಟೆಯ ಶ್ರೀಚೆಲುವನಾರಾಯಣಸ್ವಾಮಿ ದೇವಾಲಯದಲ್ಲಿ ದಶಕಗಳ ನಂತರ ಅಪರೂಪದ ನಕ್ಷತ್ರ ಸಂಯೋಗದಿಂದಾಗಿ, ರಾಜಮುಡಿ ಉತ್ಸವ ಮತ್ತು ಅಷ್ಟ ತೀರ್ಥೋತ್ಸವ ಅ. 31 ರಂದು ಒಂದೇ ದಿನ ನಡೆಯಲಿದೆ. ಈ ವಿಶೇಷ ದಿನದಂದು ಸ್ವಾಮಿಗೆ ಮೈಸೂರು ಅರಸರು ಸಮರ್ಪಿಸಿದ ವಜ್ರಖಚಿತ ರಾಜಮುಡಿ ಕಿರೀಟವನ್ನು ಧಾರಣೆ ಮಾಡಲಾಗುವುದು.

ಮೇಲುಕೋಟೆ: ಯದುಗಿರಿಯ ಆರಾಧ್ಯದೈವ ಶ್ರೀಚೆಲುವನಾರಾಯಣಸ್ವಾಮಿಗೆ ರಾಜಮುಡಿ ಉತ್ಸವ ಮತ್ತು ಅಷ್ಟ ತೀರ್ಥೋತ್ಸವ ಅ.31ರಂದು ಒಂದೇ ದಿನ ನಡೆಯಲಿದ್ದು, ಹಲವು ದಶಕಗಳ ನಂತರ ಅತ್ಯಂತ ಅಪರೂಪವಾಗಿ ನಕ್ಷತ್ರ ಸಂಯೋಗದ ಕಾರಣ ಎರಡೂ ವಿಶೇಷ ಉತ್ಸವಗಳು ಒಂದೇ ದಿನ ನಡೆಯುತ್ತಿರುವುದು ಭಕ್ತರಪಾಲಿಗೆ ಅತ್ಯಂತ ಪವಿತ್ರವಾಗಿದೆ, ಈ ಬಾರಿ ಜಾತ್ರೆ ವಿಶೇಷವಾಗಿದೆ. ಅ.31ರಂದು ಬೆಳಗ್ಗೆ ನಡೆಯುವ ಅಷ್ಟ ತೀರ್ಥೋತ್ಸವ ಹಾಗೂ ರಾತ್ರಿ ನಡೆಯುವ ರಾಜಮುಡಿ ಉತ್ಸವದ ಎರಡೂ ವೇಳೆಯೂ ಚೆಲುವನಾರಾಯಣಸ್ವಾಮಿಯನ್ನು ಮೈಸೂರು ಮಹಾರಾಜರು ಭಕ್ತಿಪೂರ್ವಕವಾಗಿ ಸಮರ್ಪಿಸಿದ ಸಿಂಹಲಾಂಚನವಿರುವ ಅಪರೂಪದ ವಜ್ರಗಳಿಂದ ಕೂಡಿದ ರಾಜಮುಡಿ ಕಿರೀಟ, ರಾಜಲಾಂಛನ ಗಂಡುಬೇರುಂಡ ಪದಕ, ಹನ್ನೆರಡು ಆಳ್ವಾರುಗಳನ್ನು ಒಳಗೊಂಡ ಪದ್ಮಪೀಠ, ಶಂಕ, ಚಕ್ರ, ಗದೆ, ಶಿರಶ್ಚಕ್ರ, ಅಭಯಹಸ್ತ, ಪಾದಜೋಡಿ ಕರ್ಣಕುಂಡಲ ಸೇರಿದಂತೆ ವಜ್ರ, ಪಚ್ಚೆ,ರತ್ನ ಮುತ್ತುಗಳಿಂದ ಕೂಡಿದ 16 ಬಗೆಯ ಐತಿಹಾಸಿಕ ಆಭರಣಗಳನ್ನುತೊಡಿಸಲಾಗುತ್ತದೆ ಎಂದು ದೇವಾಲಯದ ಪಾರುಪತ್ತೇಗಾರರು ತಿಳಿಸಿದ್ದಾರೆ.

ಪ್ರತಿವರ್ಷ ಅಷ್ಟತೀರ್ಥೋತ್ಸವಕ್ಕೂ ಮೊದಲು ರಾಜಮುಡಿ ಉತ್ಸವ ರಾತ್ರಿ ನಡೆಯುತ್ತಿತ್ತು. ನಂತರ 6ನೇ ತಿರುನಾಳ್ ದಿನದಂದು ಅಷ್ಟ ತೀರ್ಥೋತ್ಸವ ನೆರವೇರುತ್ತಿತ್ತಾದರೂ ಅತ್ಯಂತ ಅಪರೂಪವಾಗಿ ನಕ್ಷತ್ರ ಸಂಯೋಗದ ಕಾರಣ ಈ ಎರಡೂ ಉತ್ಸವಗಳು ಒಂದೇ ದಿನ ನಡೆಯುತ್ತಿವೆ.

ಕಾರ್ತಿಕ ಮಾಸದ ರಾಜಮುಡಿ ಬ್ರಹ್ಮೋತ್ಸವ ಅ.26 ರಂದು ಅಂಕುರಾರ್ಪಣೆಯೊಂದಿಗೆ ಆರಂಭವಾಗಿ ನವೆಂಬರ್ 5ರವರೆಗೆ 10 ದಿನಗಳ ಕಾಲ ನಡೆಯಲಿದೆ. ಕಾರ್ತಿಕ ಮಾಸದ ಬ್ರಹ್ಮೋತ್ಸವ ಮೈಸೂರು ಅರಸರ ಕುಲದೈವ ಚೆಲುವನಾರಾಯಣಸ್ವಾಮಿಗೆ 600 ವರ್ಷಗಳಿಂದ ರಾಜಮುಡಿ ಬ್ರಹ್ಮೋತ್ಸವವಾಗಿ ನಡೆಯುತ್ತಾ ಬಂದಿದೆ.

ತಮಿಳುನಾಡು ಸರ್ಕಾರದ ಗೌರವ ಸಮರ್ಪಣೆ:

ರಾಜಮುಡಿಯ ಐತಿಹಾಸಿಕ ಮಹತ್ವವನ್ನು ಗುರುತಿಸಿರುವ ತಮಿಳುನಾಡು ಸರ್ಕಾರ ರಾಜಮುಡಿ ಉತ್ಸವದಂದು ಚೆಲುವನಾರಾಯಣಸ್ವಾಮಿಗೆ ಮಾಲಾ ಮರ್ಯಾದೆ ಸಮರ್ಪಿಸುವ ಸೇವೆ ಮಾಡುತ್ತಾ ಬಂದಿರುವುದು ವಿಶೇಷವಾಗಿದೆ.

ರಾಮಾನುಜಾಚಾರ್ಯರಿಗೆ ಗುರುಗಳಾಗಿದ್ದ ಕಾಂಚೀಪುರಂ ಜಿಲ್ಲೆಯ ಐತಿಹಾಸಿಕ ಎಂಬಾರ್ ಮತ್ತು ವೈಕುಂಠ ಪೆರುಮಾಳ್ ದೇವಾಲಯದಿಂದ ಮಾಲೆ ಮರ್ಯಾದೆಗಳನ್ನು ರಾಜಮುಡಿಯಂದು ಚೆಲುವನಾರಾಯಣಸ್ವಾಮಿಗೆ ಸಮರ್ಪಿಸುವ ಕೈಂಕರ್ಯವನ್ನು ಹಿರಿಯ ಅಧಿಕಾರಿಗಳು ಅರ್ಚಕರು ಇದ್ದು ಮಾಡಬೇಕು ಎಂದು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿರುವ ಕಾರಣ ಪ್ರತಿವರ್ಷ ಮರ್ಯಾದೆ ಸಮರ್ಪಣೆಯಾಗುತ್ತಿದೆ.

ಈ ವರ್ಷ ರಾಜಮುಡಿಯಂದು ತಮಿಳುನಾಡಿನ ಧಾರ್ಮಿಕದತ್ತಿ ಮತ್ತು ಪ್ರವಾಸೋದ್ಯಮ ಇಲಾಖೆ ಕಾಂಚಿಪುರಂ ವಿಭಾಗದ ಜಂಟಿ ಆಯುಕ್ತರು ಶ್ರೀಪೆರೆಂಬೂದೂರು ರಾಮಾನುಜರ ದೇಗುಲದ ಅಧಿಕಾರಿಗಳು, ಅರ್ಚಕರು ಹಾಗೂ ಇತರ ಗಣ್ಯರು ವಿದ್ವಾಂಸ ಚಕ್ರಪಾಣಿಯೊಂದಿಗೆ ಆಗಮಿಸಿ ತಮಿಳುನಾಡು ಸರ್ಕಾರದ ಗೌರವ ಸಮರ್ಪಣೆ ಮಾಡಲಿದ್ದಾರೆ.

31 ರಂದು ತೊಟ್ಟಿಲ ಮಡು ಜಾತ್ರೆ:

ಮಕ್ಕಳಭಾಗ್ಯ ಕರುಣಿಸುವ ತೊಟ್ಟಿಲಮಡು ಜಾತ್ರೆಯಂದೇ ಪ್ರಖ್ಯಾತವಾದ ಅಷ್ಟ ತೀರ್ಥೋತ್ಸವ ಅ.31ರಂದು ನಡೆಯಲಿದೆ. ಕಣಿವೆ ಬಳಿಯಿರುವ ತೊಟ್ಟಿಲಮಡು ಬಳಿ ಸಂಜೆ 4 ರಿಂದ ನಡೆಯುವ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಭಾಗವಹಿಸುವರು. ಮಕ್ಕಳಭಾಗ್ಯ ಕರುಣಿಸುವ ಚೆಲುವನಾರಾಯಣನ ಉತ್ಸವ ಎಂದೇ ಪ್ರಖ್ಯಾತವಾಗಿರುವ ಅಷ್ಟ ತೀರ್ಥೋತ್ಸವದಲ್ಲಿ ಬಹುಕಾಲ ಮಕ್ಕಳಿಲ್ಲದ ದಂಪತಿಗಳು, ಮುದ್ದಾದ ಮಗು ಅಪೇಕ್ಷಿಸುವ ನವದಂಪತಿಗಳು ವಿವಾಹಾಪೇಕ್ಷಿತರು ಭಾಗಿಯಾಗಿ ಹರಕೆ ಸಲ್ಲಿಸುವುದು ವಾಡಿಕೆಯಾಗಿದೆ.

ವರ್ಷದಿಂದ ವರ್ಷಕ್ಕೆ ಭಾಗವಹಿಸುವವರ ಸಂಖ್ಯೆ ಹೆಚ್ಚುತ್ತಿದೆ. ಅಷ್ಟತೀರ್ಥೋತ್ಸವ ಬೆಳಗ್ಗೆ 8 ಗಂಟೆಗೆ ಕಲ್ಯಾಣಿಯಲ್ಲಿ ಮೊದಲ ಅಭಿಷೇಕದೊಂದಿಗೆ ಆರಂಭವಾಗಿ ಸಂಜೆ 4 ಗಂಟೆಗೆ ವೈಕುಂಠಗಂಗೆ ತೊಟ್ಟಿಲ ಮಡುವಿನಲ್ಲಿ ಕೊನೆ ಅಭಿಷೇಕದೊಂದಿಗೆ ಮುಕ್ತಾಯವಾಗುತ್ತದೆ. ನಂತರ ಯೋಗಾನರಸಿಂಹಸ್ವಾಮಿ ಬೆಟ್ಟದ ಗಿರಿಪ್ರದಕ್ಷಿಣೆ ನಡೆದು ಮಹೋತ್ಸವ ರಾತ್ರಿ 8 ಗಂಟೆ ವೇಳೆಗೆ ಮುಕ್ತಾಯವಾಗಲಿದೆ. ಗ್ರಾಪಂ ವತಿಯಿಂದ ದೀಪಾಲಂಕಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಧ ಸಮುದಾಯದವರು ಸಂಜೆ ರುಚಿಕರವಾದ ಕದಂಬ ಪ್ರಸಾದ ದದಿಯೋದನ ತಯಾರಿಸಿ ವನಭೋಜನ ಏರ್ಪಡಿಸಿ ಜಾತ್ರೆಗೆ ಸಹಸ್ರಾರು ಭಕ್ತರಿಗೆ ವಿತರಣೆ ಮಾಡುತ್ತಾರೆ.

PREV
Read more Articles on
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ