ಮಂತ್ರಾಲಯ: ಇಂದು ರಾಯರ 355ನೇ ಆರಾಧನಾ ಮಹೋತ್ಸವ; ಕಾರ್ಯಕ್ರಮಗಳ ವಿವರ ಇಲ್ಲಿದೆ

Published : Aug 30, 2026, 08:36 AM ISTUpdated : Aug 30, 2026, 08:49 AM IST
Mantralayam Sri Raghavendra Swamy s 355th Aradhana Mahotsava Today Full Schedule

ಸಾರಾಂಶ

ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವದ ಅಂಗವಾಗಿ ಮಂತ್ರಾಲಯದಲ್ಲಿ ಮಧ್ಯಾರಾಧನೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ವಿಶೇಷ ದಿನದಂದು, ಶ್ರೀ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ ನಡೆಯಲಿದೆ..

ರಾಯಚೂರು (ಆ.30): ಗುರು ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ವೃಂದಾವನಸ್ಥರಾಗಿ ಇಂದಿಗೆ 355 ವರ್ಷಗಳು ಸಂದಿವೆ. ಈ ಹಿನ್ನೆಲೆ ಇಂದು ತುಂಗಭದ್ರಾ ತೀರದಲ್ಲಿರುವ ಮಂತ್ರಾಲಯದ ರಾಯರ ಮಠದಲ್ಲಿ 355ನೇ ಆರಾಧನಾ ಮಹೋತ್ಸವದ ಮಧ್ಯಾರಾಧನೆ ಅಂಗವಾಗಿ ಶ್ರೀಮಠದಲ್ಲಿ ವಿಶೇಷ ಪೂಜೆ, ಅಭಿಷೇಕ, ರಥೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿರುವ ಸಾವಿರಾರು ಭಕ್ತರು ರಾಯರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಮಧ್ಯಾರಾಧನೆ ಎಂದರೇನು?

ಗುರು ರಾಘವೇಂದ್ರ ಸ್ವಾಮಿಗಳು ಸಶರೀರರಾಗಿ ಬೃಂದಾವನಸ್ಥರಾದ ದಿನವನ್ನು ಮಧ್ಯಾರಾಧನೆಯಾಗಿ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯದ ಶ್ರೀಮಠದಲ್ಲಿ ಮುಂಜಾನೆಯಿಂದಲೇ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿವೆ. ಸುಪ್ರಭಾತ ಸೇವೆಯ ಬಳಿಕ ನಿರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ರಾಯರ ಮೂಲ ಬೃಂದಾವನದ ದರ್ಶನಕ್ಕಾಗಿ ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಮೂಲ ಬೃಂದಾವನಕ್ಕೆ ಮಹಾ ಪಂಚಾಮೃತ ಅಭಿಷೇಕ

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಮಹಾ ಪಂಚಾಮೃತ ಅಭಿಷೇಕ ನಡೆಯಲಿದೆ. ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ಫಲ ಆಹಾರ ಹಾಗೂ ಪೂಜಾ ಸಾಮಗ್ರಿಗಳಿಂದ ರಾಯರ ಮೂಲ ಬೃಂದಾವನಕ್ಕೆ ಅಭಿಷೇಕ ನಡೆಯುತ್ತಿದೆ. ಬೃಂದಾವನದ ನಾಲ್ಕೂ ದಿಕ್ಕುಗಳಲ್ಲೂ ವಿಶೇಷ ಅಭಿಷೇಕ ನೆರವೇರಿದ್ದು, ಬಳಿಕ ಬೃಂದಾವನವನ್ನು ವಿಶೇಷವಾಗಿ ಅಲಂಕರಿಸಲಾಯಿತು.

ನಾಲ್ಕು ದಿಕ್ಕುಗಳಲ್ಲೂ ಒಂದೇ ಮಾದರಿಯ ಅಲಂಕಾರ

ಮಧ್ಯಾರಾಧನೆಯ ವಿಶೇಷತೆಯಾಗಿ ರಾಯರ ಬೃಂದಾವನದ ನಾಲ್ಕೂ ದಿಕ್ಕುಗಳಲ್ಲೂ ಒಂದೇ ಮಾದರಿಯ ಅಲಂಕಾರ ಮಾಡಲಾಗಿದೆ. ಹೂವುಗಳು ಹಾಗೂ ವಿವಿಧ ಅಲಂಕಾರಿಕ ಸಾಮಗ್ರಿಗಳಿಂದ ಸಿಂಗಾರಗೊಂಡ ಬೃಂದಾವನ ಭಕ್ತರ ಕಣ್ಮನ ಸೆಳೆಯುತ್ತಿದೆ.

ಗಜ, ರಜತ, ಸ್ವರ್ಣ ರಥೋತ್ಸವ

ಮಧ್ಯಾರಾಧನೆ ದಿನದ ಮತ್ತೊಂದು ಪ್ರಮುಖ ಆಕರ್ಷಣೆ ರಥೋತ್ಸವ. ಮಠದ ಪ್ರಾಂಗಣದಲ್ಲಿ ಗಜರಥ, ರಜತರಥ ಹಾಗೂ ಸ್ವರ್ಣರಥೋತ್ಸವ ನಡೆಯಲಿದ್ದು, ಬಳಿಕ ಮಹಾ ಮಂಗಳಾರತಿ ನೆರವೇರಲಿದೆ. ಇದರೊಂದಿಗೆ ಶ್ರೀಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಮೂಲ ರಾಮದೇವರ ವಿಶೇಷ ಪೂಜೆ ಕೂಡ ನಡೆಯಲಿದೆ.

ಸಂಜೆ ತೆಪ್ಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮ

ಸಂಜೆಯ ವೇಳೆಗೆ ಪರಿಮಳ ತೀರ್ಥದಲ್ಲಿ ಶ್ರೀಗಳ ತೆಪ್ಪೋತ್ಸವ ನಡೆಯಲಿದೆ. ಬಳಿಕ ಯೋಗೀಂದ್ರ ಸಭಾ ಮಂಟಪದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಸಾಧಕರನ್ನು ಈ ಸಂದರ್ಭದಲ್ಲಿ ಶ್ರೀಮಠದ ವತಿಯಿಂದ ಸನ್ಮಾನಿಸಲಾಗುತ್ತದೆ. ಶ್ರೀ ರಾಘವೇಂದ್ರಸ್ವಾಮಿಗಳ ಅನುಗ್ರಹ ಪ್ರಶಸ್ತಿ ನೀಡಿ ಸಾಧಕರನ್ನು ಗೌರವಿಸಲಾಗುತ್ತದೆ.

ವಿಶೇಷಚೇತನರಿಗೆ, ವೃದ್ಧರಿಗೆ ಪ್ರತ್ಯೇಕ ಸರತಿ ಸಾಲು

ಇಂದು ಮಂತ್ರಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ರಾಯರ ದರ್ಶನ ಪಡೆಯುತ್ತಿದ್ದಾರೆ. ಶ್ರೀಮಠದ ಪ್ರಾಂಗಣದಲ್ಲಿ ಉರುಳು ಸೇವೆ, ಹೆಜ್ಜೆ ಸೇವೆ ಸಲ್ಲಿಸುತ್ತಿರುವ ಭಕ್ತರು. ರಾಯರ ಮೂಲ ಬೃಂದಾವನಕ್ಕೆ ದರ್ಶನಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಅದರಲ್ಲೂ ರಾಯರ ದರ್ಶನಕ್ಕೆ ಆಗಮಿಸುವ ವಿಶೇಷಚೇತನರಿಗೆ ವೃದ್ಧರಿಗೆ ಮತ್ತು ಸಾಮಾನ್ಯ ಭಕ್ತರ ದರ್ಶನಕ್ಕೆ ಪ್ರತ್ಯೇಕ ಸರತಿ ಸಾಲಿನ ವ್ಯವಸ್ಥೆ ಮಾಡಲಾಗಿದೆ. ಭಕ್ತರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ಶ್ರೀಮಠದ ‌ಮೂಲೆ ಮೂಲೆಗಳಲ್ಲಿ ಸ್ವಯಂ ಸೇವಕರು ಸಿದ್ಧರಾಗಿದ್ದಾರೆ.

ಒಟ್ಟಾರೆ ಇಂದು ರಾಯರ ಆರಾಧನಾ ಮಹೋತ್ಸಕ್ಕಾಗಿ ಶ್ರೀಮಠಕ್ಕೆ ಬಣ್ಣ ಬಣ್ಣದ ಹೂಗಳಿಂದ ಆಲಂಕಾರ ಮಾಡಲಾಗಿದೆ. ದೀಪಾಲಂಕಾರ ರಾಯರ ಭಕ್ತರ ಮನಸೆಳೆಯುತ್ತಿದೆ.

PREV
Read more Articles on
click me!

Recommended Stories

12 ವರ್ಷಗಳ ಬಳಿಕ ಗುರು ಸಂಚಾರದಿಂದ ಕೋಟ್ಯಾಧಿಪತಿ ಯೋಗ: 3 ರಾಶಿಗಳಿಗೆ ಲಕ್ಷ್ಮೀ ಕೃಪೆ
ದಸರಾ ಪರೇಡ್‌ಗೆ ಸೇನೆ, ಚಲನಚಿತ್ರ ನಟರ ಹೆಜ್ಜೆ! ವಿಭಿನ್ನ ದಸರಾ, ಮೆರವಣಿಗೆಯ ರೂಪ ಬದಲು: ಡಿಕೆಶಿ - ಕಂಬಳ ನಡೆಯುತ್ತಾ?