ಶ್ರೀರಾಘವೇಂದ್ರ ಸ್ವಾಮೀಜಿ ಆರಾಧನಾ ಮಹೋತ್ಸವ, ರಾಯರ ಮಧ್ಯಾರಾಧನೆ ವಿಶೇಷತೆಗಳೇನು?

By Suvarna News  |  First Published Aug 6, 2022, 10:49 PM IST

ಕೊರೋನಾ ಕಾರಣದಿಂದ ಎರಡು ವರ್ಷಗಳ ಬಳಿಕ  ಮಂತ್ರಾಲಯದ ಕಲಿಯುಗದ ಕಾಮಧೇನು ಶ್ರೀರಾಘವೇಂದ್ರ ಸ್ವಾಮೀಜಿಗಳ ಆರಾಧನಾ ಮಹೋತ್ಸವ ಸಕಲ ಸಿದ್ಧತೆಗಳು ನಡೆದಿವೆ.


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್
 

ರಾಯಚೂರು, (ಆಗಸ್ಟ್.06): ಕಲಿಯುಗದ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮೀಜಿಗಳು ನೆಲೆಸಿರುವ ಪುಣ್ಯ ಕ್ಷೇತ್ರ ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ.  ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಆರಾಧನಾ ಮಹೋತ್ಸವ ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ರಾಯರ 351ನೇ ಆರಾಧನಾ ಮಹೋತ್ಸವ ಅದ್ಧೂರಿ ಆಗಿ ಆಚರಿಸಲು ಮಂತ್ರಾಲಯ ಮಠದಿಂದ ಸಕಲ ಸಿದ್ಧತೆಗಳು ಮಾಡಿಕೊಳ್ಳಲಾಗುತ್ತಿದೆ.

Tap to resize

Latest Videos

ರಾಯರ 351ನೇ ಆರಾಧನಾ ಮಹೋತ್ಸವ ‌ಅಂಗವಾಗಿ ಮಂತ್ರಾಲಯ ‌ಮಠದಲ್ಲಿ ಸಪ್ತಾರಾತ್ರೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಆ. 10ರಂದು ಧ್ವಜಾರೋಹಣ, ಲಕ್ಷ್ಮಿ ಪೂಜೆ, ಅಶ್ವ ಮತ್ತು ಗೋ ಪೂಜೆ ಹಾಗೂ ವಿಶೇಷವಾಗಿ ಧಾನ್ಯ ಪೂಜೆ ನಂತರ ಧಾನ್ಯ ಉತ್ಸವ ಹಾಗೂ ಪಲ್ಲಕ್ಕಿ ಉತ್ಸವ ಮತ್ತು ರಥೋತ್ಸವ ಕಾರ್ಯಕ್ರಮಗಳು ನಡೆಯಲಿವೆ.

ರಾಯಚೂರು: ಆ.10ರಿಂದ 16ವರೆಗೆ ಮಂತ್ರಾಲಯದಲ್ಲಿ ರಾಘವೇಂದ್ರ ಆರಾಧನೆ

 ರಾಯರ ಪೂರ್ವಾರಾಧನೆ ವಿಶೇಷತೆ: 
ಆ. 12 ರಂದು ರಾಘವೇಂದ್ರ ಸ್ವಾಮೀಜಿಗಳ ಪೂರ್ವಾರಾಧನೆ ಕಾರ್ಯಕ್ರಮಗಳು ನಡೆಯಲಿವೆ. ಪೂರ್ವಾರಾಧನೆ ಬೆಳಗ್ಗೆ ನಿರ್ಮಾಲ ವಿಸರ್ಜನೆ, ಅಭಿಷೇಕ, ಮೂಲರಾಮ ದೇವರ ಪೂಜೆ,  ರಾಘವೇಂದ್ರಸ್ವಾಮಿಗಳ ಪಾದಪೂಜೆ ಬೆಳಗ್ಗೆ ‌ನಡೆಯಲಿದೆ. ಆ ನಂತರ ಸಂಜೆ ವೇಳೆ ಯೋಗಿಂದ್ರ ಸಭಾ ಮಂಟಪದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ರಾಘವೇಂದ್ರ ಸ್ವಾಮೀಜಿಗಳ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುವುದು.‌ಆ ಬಳಿಕ ವೇದಿಕೆಯಲ್ಲಿ ಹತ್ತಾರು ಸಾಂಸ್ಕೃತಿಕ ‌ಕಾರ್ಯಕ್ರಮಗಳು ನಡೆಯಲಿವೆ.

 ರಾಯರ ಮಧ್ಯಾರಾಧನೆ ವಿಶೇಷತೆಗಳೇನು?
ಆಗಸ್ಟ್ 13ರಂದು ಮಂತ್ರಾಲಯ ಮಠದಲ್ಲಿ ‌ನಡೆಯುವ ಮಧ್ಯಾರಾಧನೆ ‌ಅತ್ಯಂತ ವಿಶೇಷತೆಯಿಂದ ಕೂಡಿದೆ. ಮಧ್ಯಾರಾಧನೆ ‌ನಿಮಿತ್ಯ ಬೆಳಗ್ಗೆಯಿಂದಲ್ಲೇ ಶ್ರೀಮಠದಲ್ಲಿ ನಿರ್ಮಲ ವಿಸರ್ಜನೆ,ಅಭಿಷೇಕ, ರಾಯರ ಮೂಲ ಬೃಂದಾವನ ಪಾದಪೂಜೆ, ಪ್ರತಿ ವರ್ಷದಂತೆ ತಿರುಪತಿ ತಿಮ್ಮಪ್ಪನಿಂದ ಬರುವ ಶೇಷ ವಸ್ತ್ರವನ್ನು ಮಂತ್ರಾಲಯ ‌ಮಠದ ಮುಖ್ಯದ್ವಾರದಿಂದಲ್ಲೇ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ವಾಗತ ‌ಮಾಡಿಕೊಂಡು ವಿವಿಧ ಕಲಾ ತಂಡಗಳೊಂದಿಗೆ ಅದ್ಧೂರಿಯಾಗಿ ಸ್ವಾಗತಿಸಲಾಗುವುದು.

ನಂತರ ಶ್ರೀಮಠದ ಪ್ರಾಂಗಣದಲ್ಲಿ ಮೆರವಣಿಗೆ ‌ಮಾಡಿ ಆ ಬಳಿಕ ರಾಯರ ಮೂಲ ಬೃಂದಾವನಕ್ಕೆ ಸಮರ್ಪಿಸಿ ಮಹಾಮಂಗಳಾತಿ ಮಾಡಿದ ಬಳಿಕ ಟಿಟಿಡಿ ಸದಸ್ಯರನ್ನು ಶ್ರೀಮಠದಿಂದ ಸನ್ಮಾನಿಸಲಾಗುವುದು. ಆ ನಂತರ ರಾಯರ ಮೂಲ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ ನಡೆಯುವುದು. ಈ ವೇಳೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ‌ಮಂತ್ರಾಲಯ ಮಠಕ್ಕೆ ಬಂದು ರಾಯರ ದರ್ಶನ ಪಡೆಯುವರು. ಪಂಚಾಮೃತ ಅಭಿಷೇಕ ಮುಗಿದ ಬಳಿಕ ಸುವರ್ಣ ರಥೋತ್ಸವ ಜರುಗುವುದು. ಈ ವೇಳೆ ಪಂಚಾಮೃತ ಅಭಿಷೇಕದ ಪ್ರಸಾದ್ ವಿತರಣೆಯೂ ನಡೆಯುವುದು. ಸಂಜೆ ಮಠದ ಪ್ರಾಂಗಣದಲ್ಲಿ ರಥೋತ್ಸವ, ನವರತ್ನ ರಥೋತ್ಸವ ನಡೆಯುವುದು.

 ಶ್ರೀರಾಘವೇಂದ್ರ ಸ್ವಾಮೀಜಿಗಳ ಉತ್ತರಾಧನೆ: 
ಮಂತ್ರಾಲಯ ಮಠದಲ್ಲಿ ಆರಾಧನಾ ಮಹೋತ್ಸವಗಳಲ್ಲಿ ಉತ್ತರಾಧನೆಯೂ ಮಹತ್ವ ಪಡೆದುಕೊಂಡಿದೆ. ಉತ್ತರಾಧನೆ ದಿನವೂ ಎಂದಿನಂತೆ ರಾಯರ ನಿರ್ಮಲ ವಿಸರ್ಜನೆ, ಪಂಚಾಮೃತ ಅಭಿಷೇಕ, ಮೂಲ ಬೃಂದಾವನಗಳಿಗೆ ಪುಪ್ಪಾರ್ಚನೆ ನಡೆಯಲಿದೆ. ಆ ನಂತರ ಉತ್ಸವ ಮೂರ್ತಿ ಪ್ರಹ್ಲಾದ್ ರಾಜರು ಶ್ರೀಮಠದಿಂದ ಸಂಸ್ಕೃತ ‌ಪಾಠ ಶಾಲೆಗೆ ತೆರಳಿ ಪಾಠ ಶಾಲೆಯಲ್ಲಿ ಉತ್ಸವ ಹಾಗೂ ವಿಶೇಷ ಪೂಜೆಯನ್ನು ಸ್ವೀಕರಿಸಿ ಮತ್ತೆ ಶ್ರೀಮಠಕ್ಕೆ ಮರಳುವರು. ಆ ಬಳಿಕ ಶ್ರೀಮಠದಲ್ಲಿ ವಸಂತೋತ್ಸವ ನಡೆಯಲಿದೆ. 

ವಸಂತೋತ್ಸವ ಮುಗಿದ ಬಳಿಕ ಪ್ರಹ್ಲಾದ್ ರಾಜರ ರಥೋತ್ಸವ ಅದ್ದೂರಿಯಾಗಿ ಜರುಗಲಿದೆ. ಪ್ರತಿ ವರ್ಷದಂತೆ ಭಕ್ತರಿಂದ ರಥೋತ್ಸವದ ಮೇಲೆ ಹೆಲಿಕಾಪ್ಟರ್ ಮುಖಾಂತರ ಪುಷ್ಪಾರ್ಚನೆ ನಡೆಯಲಿದೆ. ಹೀಗೆ ಮಂತ್ರಾಲಯ ಮಠದಲ್ಲಿ ರಾಯರ 351 ಆರಾಧನಾ ಮಹೋತ್ಸವ ಅಂಗವಾಗಿ ನೂರಾರು ಕಾರ್ಯಕ್ರಮ ‌ಮಾಡಲು ಮಂತ್ರಾಲಯ ‌ಮಠವೂ ಸಿದ್ಧತೆ ನಡೆಸಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.

click me!