
ಸಂದರ್ಶನ - ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್...
ಅಲ್ಲಿ ನನಗೆ ಕಂಡ ನಾಗಾಗಳಲ್ಲಿ "ಕೆಲ ನಾಗಾಗಳು ತಮ್ಮ ಗುಪ್ತಾಂಗಕ್ಕೆ ಕಬ್ಬಿಣದ ಚಿಮ್ಮಟಾವನ್ನ ಸುತ್ತಿ ತೊಡೆಯ ಹಿಂಭಾಗಕ್ಕೆ ಸಿಕ್ಕಿಸಿಕೊಂಡಿದ್ರು. ಇನ್ನೂ ಕೆಲ ನಾಗಾಗಳು ಗುಪ್ತಾಂಗಕ್ಕೆ ಮೂರ್ನಾಲ್ಕು ಇಟ್ಟಿಗೆ ಕಟ್ಟಿ ಕೆಳಗೆ ಜೋತು ಬಿಟ್ಟಿದ್ರು. ಗುಪ್ತಾಂಗದಿಂದ ಭಾರದ ವಸ್ತುಗಳ ಮೇಲೆ ಸಲೀಸಾಗಿ ಎತ್ತಿ ಭಕ್ತರಿಗೆ ತೋರಿಸ್ತಿದ್ರು. ಇನ್ನು ಕೆಲ ನಾನಾಗಳು ಗುಪ್ತಾಂಗವನ್ನ ಬಿರುಸಾದ ಕಟ್ಟಿಗೆಗೆ ಪ್ಲಾಸ್ಟಿಕ್ ಹಾಳೆಯಂತೆ ಸುರುಳಿ ಸುತ್ತಿ ಬಿಟ್ಟಿದ್ರು. ಹಾಗಂತಾ ಇದು ನಗ್ನತೆಯ ಪ್ರದರ್ಶನ ಅಲ್ಲ, ನಾಗಾಗಳು ಏನು ಬೇಕಾದ್ರೂ ಮಾಡಬಲ್ಲರು ಎನ್ನುವುದಕ್ಕೆ ಇದೊಂದು ಸಾಕ್ಷಿ ಅಷ್ಟೆ. ಇದಿಷ್ಟೇ ಅಲ್ಲ, ಕೆಲ ನಾಗಾ ಬಾಬಾಗಳ ಗಣಘೋರ ಹಠಯೋಗ ನೋಡಿದರೆ ನೀವು ಬೆಚ್ಚಿ ಬೀಳ್ತಿರಿ. ಈ ಪೈಕಿ ನನಗೆ ಸೆಕ್ಟರ್ ನಂಬರ್ 20ರಲ್ಲಿ ಇಂಟರೆಸ್ಟಿಂಗ್ ಎನಿಸಿದ್ದು ಕೂಲಿಂಗ್ ಗ್ಲಾಸ್ ಬಾಬಾ..!"
ಪ್ರಯಾಗ್‌ರಾಜ್:
ಕತ್ತಲೆ ಆವರಿಸಿ ಸಮಯ ಅದಾಗಲೆ ರಾತ್ರಿಯ 10 ಗಂಟೆ 55 ನಿಮಿಷ. ಮಹಾ ಪೂರ್ಣಕುಂಭಮೇಳದ ನಾಗಾ ಅಖಾಡದ ಹಿರಿಯ ನಾಗಾಸಾಧು ಜೊತೆಗೆ ನನ್ನ ಮಾತು ಮುಂದುರೆದಿತ್ತು. ಸಂಜೆ 7.30 ರ ಸಮಾರಿಗೆ ನಾಗಾಸಾಧು ಭೇಟಿಯಾಗಿ ಅವರನ್ನ ಮಾತಿಗೆಳೆದಿದ್ದೆ. ಇವರ ಬಳಿ ಬರ್ತಿದ್ದ ಅಖಾಡದಲ್ಲಿದ್ದ ನಾಗಾಗಳ ಪೈಕಿ ಬಹುತೇಕರು ಇವರಿಗೆ ಗೌರವ ಕೊಟ್ಟು ಮಾತನಾಡಿಸ್ತಿದ್ರು. ಅಖಾಡದ ಮುಂದಿನ ಕಾರ್ಯಗಳ ಬಗ್ಗೆ ಸಲಹೆ ಪಡೆಯುತ್ತಿದ್ದರು. ವಿಶೇಷ ಎನಿಸುವ ಬೆತ್ತಲೆಯಾಗಿ ನಿಂತಿದ್ದ ಕೆಲ ಬಾಬಾಗಳು, ಜಟೆ ಬಿಟ್ಟಿದ್ದ ಇನ್ನೂ ಹಲವು ಬಾಬಾಗಳು ಇವರ ಇವರ ಬಳಿ ಗೌರವ ಸೂಚಿಸುತ್ತಿದ್ದರು. ಆಗ ನನಗೆ ಗೊತ್ತಾಗಿದ್ದು, ಇವರು ಅಖಾಡದಲ್ಲಿ ಸಿನಿಯರ್ ಅನ್ನೋದು. ಹಿರಿಯ ನಾಗಾ ಬಾಬಾ ಜೊತೆಗೆ ಮಾತಿಗಿಳಿದಿದ್ದ ನನಗೆ ಒಳಗೊಳಗೆ ಅದೇನೋ ಅಚ್ಚರಿ, ಖುಷಿ, ಅಮಾಧಾನ.
ಸಾರ್ವಜನಿಕರು, ಹೊರಗಿನ ಮಂದಿ ಜೊತೆಗೆ ನಾಗಾಸಾಧುಗಳ ಮಾತು ಕಮ್ಮಿ. ತಾಸುಗಟ್ಟಲೆ ಮಾತು ಬೆಳಿಸೋದು ತೀರಾ ಅಪರೂಪ. ಜನರು ನಮಸ್ಕಾರ ಮಾಡಲು ಹೋದ್ರೆ, ಆಶೀರ್ವಾದ ಮಾಡಿ ತಮ್ಮ ಬಳಿ ಇರೋ ಭಸ್ಮವನ್ನ ಹಣೆಗೆ ಹಚ್ಚಿ ಕಳುಹಿಸಿ ಬಿಡ್ತಾರೆ. ಇಚ್ಛೆ ಆದಲ್ಲಿ ಅವರಾಗಿಯೇ ತಲೆ ಮೇಲೆ ಕೈ ಇಟ್ಟು ಧ್ವನಿ ಕೇಳಿಸದಂತೆ ಬಾಯಿಯ ತುಟಿ ಅಂಚಿನಲ್ಲಿ ಮಂತ್ರಗಳನ್ನ ಪಠಿಸಿ, ತೆರಾ ಬಲಾ ಹೋ ಎಂದು ಕಳುಹಿಸ್ತಾರೆ. ಇನ್ನೂ ಕೆಲ ನಾಗಾಸಾಧುಗಳು ಮೂಡಿಯವರು. ಮೂಡು ಚೆನ್ನಾಗಿದ್ರೆ ಆಶೀರ್ವಾದ, ಇಲ್ಲವೆ ಬೈಗುಳ, ಕಪಾಳಕ್ಕೆ ಒಂದೆಟು ಪಿಕ್ಸ್. ಅಕಸ್ಮಾತ್ ಪರ್ಮಿಶನ್ ಇಲ್ಲದೆ ವಿಡಿಯೋ ಶೂಟ್ ಅಥವಾ ಪೋಟೋ ಕ್ಲಿಕ್ ಮಾಡಿದ್ರೋ ಮುಗಿದೆ ಹೋಯ್ತು, ಒಂದು ಬೈಗುಳ ಇಲ್ಲವೆ ಅವರ ಬಳಿ ಇರೋ ಕಬ್ಬಿಣದ ಚಿಮಟಾ ದಿಂದ ಗಾಯದ ಜೊತೆಗೆ ನೋವು ಹುಟ್ಟಿಸುವ ಒಂದೆಟಂತು ಪಕ್ಕಾ. ನಾಗಾಗಳ ಮೂಡು ಇನ್ನೂ ಕರಾಬ್ ಆಗಿದ್ದ ವೇಳೆ ವಿಡಿಯೋ, ಪೋಟೋಗೆ ಟ್ರೈ ಮಾಡಿದ್ರೋ ಕೈಗೆ ಸಿಕ್ಕಿದ್ದನ್ನ ತಗೊಂಡು ಬೆನ್ನು ಬಿದ್ದು ಬಿಡ್ತಾರೆ. ಆಗ ಕೈಯಲ್ಲಿ ತ್ರಿಶೂಲ ಇದ್ರಂತು ಕೇಳಬೇಕಾ, ಆಶೀರ್ವಾದ ಬೇಕಂತ ಹೋದವ ಮತ್ತೊಮ್ಮೆ ನಾಗಾ ಸಾಧುಗಳ ಸಹವಾಸಕ್ಕೆ ಹೋಗಲ್ಲ..
ಫೆಬ್ರವರಿ 25 ರಿಂದ ಈ 5 ರಾಶಿಗೆ ಅದೃಷ್ಟ, ಬುಧ ಶನಿಯ ಸಂಯೋಗದಿಂದ ಪ್ರತಿಷ್ಠೆ ಮತ್ತು ಸಂಪತ್ತು
ನಾನು ಕುಂಭ ಮೇಳದ ನಾಗಾ ಅಖಾಡಗಳ ಪೈಕಿ ಸೆಕ್ಟರ್ 20ರಲ್ಲಿ ಅಡ್ಡಾಡೋವಾಗ ಕಂಡಿದ್ದೆ ಈ ಕೂಲಿಂಗ್ ಗ್ಲಾಸ್ ನಾನಾಬಾಬಾ.. ನಿಜವಾದ ನಾಗಾಸಾಧುಗಳನ್ನ ನೀವು ನೋಡಬೇಕು ಅಂದ್ರೆ ಕುಂಭಮೇಳದ ಸೆಕ್ಟರ್ ನಂಬರ್ 20-21ಗೆ ಬರಬೇಕು. ಗಂಗಾ-ಯಮುನಾ-ಸರಸ್ವತಿ ಸಂಗಮಿಸುವ ತ್ರಿವೇಣಿ ಸಂಗದ ಈಚೆಯ ರೈಲ್ವೇ ಓವರ್ ಬ್ರಿಡ್ಜ್ ಕೆಳಗೆ ಟೆಂಟ್ ಹಾಕಿ ಕೂತಿರ್ತಾರೆ. ಅವರದ್ದೆ ಆದ ಅಖಾಡಗಳಿವೆ. ಇಲ್ಲಿ ಕೆಲ ನಾಗಾಗಳು ಮೈ ಎಲ್ಲಾ ಬೂದಿ ಬಳಿದುಕೊಂಡು ಬೆತ್ತಲಾಗಿ ನಿಂತಿರ್ತಾರೆ. ಕಯ್ಯಲ್ಲಿ ಕಬ್ಬಿಣದ ಚಿಮಟ ಹಿಡಿದು ದಾರಿ ಹಿಡಿದು ಹೋಗ್ತಿರೋರ ಪೈಕಿ ತಮ್ಮ ಮನಸ್ಸಿಗೆ ಹುಂ ಎನಿಸುವವರನ್ನ ಕೈ ಮಾಡಿ ಕರೆದು ಆಶೀರ್ವದಿಸುತ್ತಾರೆ. ಇನ್ನೂ ಕೆಲ ನಾಗಾಗಳು ಆಶೀರ್ವದಿಸೋ ರೀತಿಯೆ ಭಯಾನಕ. ಬಾಗಿ ಆಶೀರ್ವಾದ ಪಡೆಯೋ ವೇಳೆಯೆ ಬೆನ್ನಿನ ಮೇಲೆ ಅನಿರೀಕ್ಷಿತವಾಗಿ ಒಂದೆಟು ಬಾರಿಸಿ ಆಶೀರ್ವಾದ ನೀಡ್ತಾರೆ. ಇದನ್ನ ನಾವು ಸ್ಟ್ರಾಂಗ್ ಆಗಿಯೇ ಆಶೀರ್ವಾದ ಸಿಕ್ತು ಅಂತ ತಿಳಿದುಕೊಳ್ಳಬೇಕಷ್ಟೆ. ಒಬ್ಬೊಬ್ಬರದ್ದು ಒಂದೊಂದು ರೀತಿಯ ಆಶೀರ್ವಾದ. ಕಾಣಿಸೋ ರೀತಿಯೂ ಕೂಡ ಡಿಪ್ರೆಂಟ್. ಕೆಲ ಬಾಬಾಗಳು ಬೆತ್ತಲಾಗಿ ನಿಂತು ಆಶೀರ್ವದಿಸಿದ್ರೆ ಕೆಲ ನಾಗಾಗಳು ತಮ್ಮ ಗುಪ್ತಾಂಗಕ್ಕೆ ಕಬ್ಬಿಣದ ಚಿಮ್ಮಟಾವನ್ನ ಸುತ್ತಿ ತೊಡೆಯ ಹಿಂಭಾಗಕ್ಕೆ ಸಿಕ್ಕಿಸಿಕೊಂಡಿರ್ತಾರೆ. ಇನ್ನೂ ಕೆಲ ನಾಗಾಗಳು ಗುಪ್ತಾಂಗಕ್ಕೆ ಮೂರ್ನಾಲ್ಕು ಇಟ್ಟಿಗೆ ಕಟ್ಟಿ ಕೆಳಗೆ ಜೋತು ಬಿಟ್ಟಿರ್ತಾರೆ. ಗುಪ್ತಾಂಗದಿಂದ ಭಾರದ ವಸ್ತುಗಳ ಮೇಲೆ ಸಲೀಸಾಗಿ ಎತ್ತಿ ಭಕ್ತರಿಗೆ ತೋರಿಸ್ತಾರೆ. ಇನ್ನು ಕೆಲ ನಾನಾಗಳು ಗುಪ್ತಾಂಗವನ್ನ ಬಿರುಸಾದ ಕಟ್ಟಿಗೆಗೆ ಪ್ಲಾಸ್ಟಿಕ್ ಹಾಳೆಯಂತೆ ಸುರುಳಿ ಸುತ್ತಿ ಬಿಟ್ಟಿರ್ತಾರೆ. ಹಾಗಂತಾ ಇದು ನಗ್ನತೆಯ ಪ್ರದರ್ಶನ ಅಲ್ಲ, ನಾಗಾಗಳು ಏನು ಬೇಕಾದ್ರೂ ಮಾಡಬಲ್ಲರು ಎನ್ನುವುದಕ್ಕೆ ಇದೊಂದು ಸಾಕ್ಷಿ ಅಷ್ಟೆ. ಇದಿಷ್ಟೇ ಅಲ್ಲ, ಕೆಲ ನಾಗಾ ಬಾಬಾಗಳ ಗಣಘೋರ ಹಠಯೋಗ ನೋಡಿದರೆ ನೀವು ಬೆಚ್ಚಿ ಬೀಳ್ತಿರಿ. ಇಲ್ಲಿ ಕೆಲ ನಾಗಾಗಳು ದಶಕಗಳ ಹಿಂದೆ ಮೇಲೆತ್ತಿದ್ದ ಕೈ ಕೆಳಗೆ ಇಳಿಸಿಲ್ಲ, ಆ ಕೈ ರಕ್ತಸಂಚಾರವಿಲ್ಲದೆ ಮರಗಟ್ಟಿ, ಮಾಂಸಖಂಡಗಳು ಕರಗಿ ಕಬ್ಬಿಣದ ಸಲಾಕೆಯಂತಾಗಿವೆ. ಕೈ ಉಗುರುಗಳು ಒಂದು ಹಂತಕ್ಕೆ ಬೆಳೆದು ಕಪ್ಪಾಗಿ ಮುಂದಿನ ಬೆಳವಣಿಗೆ ನಿಂತು ಹೋಗಿದೆ. ಇನ್ನು ಕೆಲ ನಾಗಾಗಳು ತಮ್ಮ ಒಂದು ಕಾಲನ್ನೆ ನೆಲಕ್ಕೆ ತಾಗಿಸದೆ ಹಠಯೋಗದಲ್ಲಿ ತೊಡಗಿದ್ದಾರೆ. ನಾವೆಲ್ಲ ಬಸಲ್ಲಿ ಸಂಚರಿಸೋವಾಗ ಒಂದರ್ಧ ಗಂಟೆ ಕೈ ಮೇಲೆ ಮಾಡಿ ಬೆಲ್ಟ್ ಹಿಡಿದು ನಿಂತು ಕೈ ನೋವಾದ್ರೆ, ಆ ವಿಷಯವನ್ನ ನೂರು ದಿನ ಊರೆಲ್ಲ ಹೇಳಿಕೊಂಡು ತಿರುಗುತ್ತೇವೆ. ಅಂತದ್ರಲ್ಲಿ
ದಶಕಗಳ ವರೆಗೆ ಈ ಕಠಿಣ ಹಠಯೋಗ ಮಾಡುವಾಗ ಅದೇಷ್ಟೋ ನೋವಾಗಿದೆಯೋ, ಅದೇಷ್ಟು ಭಯಾನಕ ನೋವು ಸಹಿಸಿಕೊಂಡಿದ್ದಾರೋ ಬೋಲೆನಾಥ, ದತ್ತಾತ್ರೇಯ ಸ್ವಾಮೀಯೆ ಬಲ್ಲ.. ಇಂಥ ನಾಗಾಗಳಿಗೆ ತಮ್ಮ ಸಾಧನೆಯನ್ನ ಕುಂಭಮೇಳದಂತ ಸಮಯದಲ್ಲಿ ತಮ್ಮ ಅಖಾಡಗಳಲ್ಲಿ ಪ್ರದರ್ಶಿಸೋದು ನನಗೇನು ಸೋಜಿಗ ಎನಿಸಲಿಲ್ಲ. ತಾವು ಮಾಡಿರೋ ಸಾಧನೆ ಸಾಮಾನ್ಯದ್ದಲ್ಲ, ಕಠಿಣ ಹಠಯೋಗ ನಾಗಾಗಳಿಂದ ಮಾತ್ರ ಸಾಧ್ಯ ಎನ್ನುವುದನ್ನ ತೋರಿಸುವ ರೀತಿ ಅಷ್ಟೆ.
ಇನ್ನೂ ಊಟವೇ ಮಾಡದೆ ಬರೀ ನೀರು-ಗಾಂಜಾ ಸೇದುತ್ತ ಹಠಯೋಗದಲ್ಲಿ ತೊಡಗಿದ ಬಾಬಾಗಳು ಇಲ್ಲಿದ್ದಾರೆ. ಪಾರಿವಾಳ ಬಾಬಾ, ಕೂಲಿಂಗ್ ಗ್ಲಾಸ್ ಬಾಬಾ, ಐಐಟಿ ಬಾಬಾ, ಇಂಜಿನಿಯರಿಂಗ್ ಬಾಬಾ ಹೀಗೆ ಮೈಗೆಲ್ಲ ಬೂದಿ ಬಳಿದುಕೊಂಡಿರುವ ತರಹೇವಾರಿ ಬಾಬಾಗಳ ದರ್ಶನವಾಗತ್ತೆ. ಆದ್ರೆ ಬೂದಿಬಳಿದುಕೊಂಡ ಎಲ್ಲ ಬಾಬಾಗಳು ನಾಗಾಗಳಲ್ಲ. ಜನರು ಪುಣ್ಯ ಸ್ನಾನ ಮಾಡಲು ತೆರಳುವ ತ್ರಿವೇಣಿ ಸಂಗಮ ಆಸುಪಾಸಲ್ಲಿ ಜನರ ಬಳಿ ಹಣಕ್ಕೆ ಬೇಡಿಕೆ ಇಡುವವರಂತು ನಾಗಾಗಳು ಅಲ್ಲವೇ ಅಲ್ಲಾ...!!
ಇನ್ನೂ ಸಂಜೆ ಹೊತ್ತು ಇದೆ ಸೆಕ್ಟರ್ ನಂಬರ್ 20ರ ಬಳಿ ನಾಗಾಗಳನ್ನ ಹುಡುಕುತ್ತಿದ್ದ ನನಗೆ ಸಿಕ್ಕಿದ್ದೆ ಈ ಕೂಲಿಂಗ್ ಗ್ಲಾಸ್ ಬಾಬಾ... ಸೂರ್ಯ ಆಕಾಶದಿಂದ ಜಾರಿದ ಮೇಲು ಇವರು ಕಣ್ಣಿಗೆ ಒಂದು ಕೂಲಿಂಗ್ ಹಾಕಿ ಕುಂತಿದ್ದು ಇಂಟರೆಸ್ಟಿಂಗ್ ಎನಿಸಿತು. ಆದರೆ ಅದ್ಯಾಕೋ ಗೊತ್ತಿಲ್ಲ, ಅಲ್ಲಿ ಅಡ್ಡಾಡ್ತಿದ್ದ ಜನರು ಈ ನಾಗಾ ಸಾಧು ಬಳಿಗೆ ಬರೋಕೆ ಕೊಂಚ ಹಿಂದೆಟೂ ಹಾಕ್ತಿದ್ರು. ಬಂದ್ರಾ ಆಶೀರ್ವಾದ ಪಡೆದರಾ ಜೂಟ್ ಹೇಳ್ತಿದ್ರು. ಅದ್ಯಾಕೆ ಆರಂಭದಲ್ಲಿ ಅರ್ಥವಾಗಲಿಲ್ಲ, ಇದೊಂದು ಪ್ರಶ್ನೆಯಾಗಿ ಉಳಿದಿತ್ತು. ಆದ್ರೆ ನಾನು ಬಾಬಾ ಜೊತೆಗೆ ಮಾತುಕತೆಗೆ ಇಳಿದಿದ್ದ ವೇಳೆ ಇದಕ್ಕು ಉತ್ತರ ಸಿಕ್ಕಿತ್ತು. ಬಾಬಾಗೆ ನಮಸ್ಕಾರ ಮಾಡೋಕೆ ಬರ್ತಿದ್ದವರು ನಮಸ್ಕಾರ ಮಾಡೋವಾಗ ಮೊಬೈಲ್‌ಗಳಲ್ಲಿ ವಿಡಿಯೋ, ಪೋಟೋ ತೆಗೆದುಕೊಳ್ತಿದ್ರು. ಈ ವಿಚಾರಕ್ಕೆ ಬಾಬಾ ಇಲ್ಲೇನು ನಿಮ್ಮ ಮಕ್ಕಳ ಬರ್ಥಡೇ ನಡೆಯುತ್ತಿಲ್ಲ, ನಿಮ್ಮ ಮನೆಯಲ್ಲಿ ಬರ್ಥಡೇ ವಿಡಿಯೋ ಮಾಡಿದಂಗೆ ಅಂದುಕೊಂಡ್ರಾ? ಎಂದು ರೇಗಾಡುತ್ತಿದ್ದರು.
ರಾಜಕುಮಾರ ರಾಜನನ್ನು ಭೇಟಿಯಾಗುತ್ತಾನೆ, ಈ 5 ರಾಶಿಗೆ ಜೀವನದಲ್ಲಿ ಸಂತೋಷ, ಅದೃಷ್ಟ
ಜನ ಹೋದ ಮೇಲೆ ನನ್ನ ಕಡೆಗೆ ದೃಷ್ಟಿ ಹಾಯಿಸಿ ಈಗೀನ ಜನರಿಗೆ ಸಾಧುಸಂತರ ಬಗ್ಗೆ ಗೌರವ ಇಲ್ಲ, ರಿಲ್ಸ್ ಮಾಡೋದೆ ಚಟವಾಗಿ ಬಿಟ್ಟಿದೆ ಎಂದು ಹಿಂದಿಯಲ್ಲಿ ಕೆಲ ಕೆಟ್ಟ ಪದಗಳನ್ನ ಬಳಸಿ ಬೈತಿದ್ರು...!! ಅದ್ರಲ್ಲು ಈ ನಾಗಾಬಾಬಾ ಕೂಲಿಂಗ್ ತೆಗೆದ ಮೇಲಂತು ಅವ್ರ ಕಣ್ಣುಗಳನ್ನ ನೋಡಿ ಹೆದರಿ ಕಾಲ್ಕಿತ್ತವರೆ ಹೆಚ್ಚು..
ಇಂಥದ್ರಲ್ಲಿ ಈ ಬಾಬಾರನ್ನ ಸಂದರ್ಶನ ಮಾಡಬೇಕು ಅಂತ ನಾ ಅವರ ಟೆಂಟ್ ಸೇರಿದ್ದೆ. ಆರಂಭದಲ್ಲಿ ನಾಗಾಸಾಧು ಮೂಡು ಕಂಡಿದ್ದ ನಾನು ಅಷ್ಟು ಜಾಸ್ತಿ ಮಾತನಾಡದೆ ಸುಮ್ಮನೆ ಕುಳಿತಿದ್ದೆ. ಇನ್ನೂ ಇವ್ರ ಬಳಿ ಆಗದ ಕೆಲಸ, ಬೇರೆ ನಾಗಾಸಾಧುರನ್ನ ಭೇಟಿ ಮಾಡಿದ್ರೆ ಆಯ್ತು ಅಂತ ಟೆಂಟಿಂದ ಹೊರ ಬೀಳೋಕೆ ಬಾಬಾ ಚಲ್ತಾ ಹುಂ ಎಂದಿದ್ದೆ.. ಎಲ್ಲರನ್ನ ಆಶೀರ್ವಾದಿಸಿ ಪಟಾಪಟ್ ಅಂತ ಹೊರ ಕಳಿಸುತ್ತಿದ್ದ ಈ ನಾಗಾಸಾಧುಗೆ ಅದೇನು ಎನ್ನಿಸಿತೋ ಗೊತ್ತಿಲ್ಲ. ಮುಖಭೇಟಿ ಬಳಿಕ ಟೆಂಟ್‌ನಲ್ಲೆ ಕೂರುವಂತೆ ಒತ್ತಾಯಿಸಿದ್ರು. ಅತ್ತ ಅದರಕ್ ಹಾಕಿ ಬಿಸಿ ಬಿಸಿ ಚಹಾ ಮಾಡುವಂತೆ ಜೊತೆಗಿದ್ದ ತಮ್ಮ ಚೇಲಾಗೆ ಕಣ್ಸನ್ನೆ ಮೂಲಕ ಸೂಚಿಸಿದ್ರು..
ಆರಂಭದಲ್ಲಿ ನನಗೆ ನಾಗಾಬಾಬಾ ಪೋಟೋ, ವಿಡಿಯೋ ಮಾಡಿಕೊಳ್ಬೇಕು ಎನ್ನುವ ಉಮೇದಿ ಇತ್ತು. ಆನ್ ರೆಕಾರ್ಡ್ ಸಂದರ್ಶನ ಬೇಕು ಅಂತಲೆ ಚಿಕ್ಕ ಬ್ಯಾಗೊಂದರಲ್ಲಿ ಮೈಕ್ ಸಮೇತವೇ ಹೋಗಿದ್ದೆ. ನಾಗಾಗಳ ಪ್ರಪಂಚ ಹೇಗಿರುತ್ತೆ? ಕಯ್ಯಲ್ಲಿ ಕಪಾಲ (ಮನುಷ್ಯನ ತಲೆ ಬುರುಡೆ) ಹಿಡಿದು ಸಾಧನೆ ಮಾಡುವ ಅಘೋರಿಗಳನ್ನ ಭಯಾನಕ ಬದುಕು ಹೇಗಿರುತ್ತೆ? ಎನ್ನುವ ಇಂಟರೆಸ್ಟಿಂಗ್ ಪ್ರಶ್ನೆಗಳನ್ನ ಮನಸ್ಸಲ್ಲಿಟ್ಟುಕೊಂಡು ಹೋಗಿದ್ದೆ, ಆಗ ಸಿಕ್ಕಿದ್ದೆ ಈ ಕೂಲಿಂಗ್ ಗ್ಲಾಸ್ ಹಾಕಿದ್ದ ನಾಗಾಬಾಬಾ..!!
ನಾಗಾಬಾಬಾ ಜೊತೆಗೆ ಕೂತು ಆಗಲೇ ಅರ್ಧ ಗಂಟೆ ಕಳೆದಿತ್ತು. ಮೊಬೈಲ್ ಕ್ಯಾಮರಾ, ಕ್ಯಾಮರಾ ಕಂಡ್ರೆ ಗರಂ ಆಗ್ತಿದ್ದ ನಾಗಾಬಾಬಾ ಬಳಿ ಇಂಟರ್ವ್ಯೂ ಕೇಳಬೇಕು ಎಂದುಕೊಂಡಿದ್ದೆ ಆದ್ರೂ ಜನರು ವಿಡಿಯೋ ಮಾಡುವಾಗಲೆಲ್ಲ ಅವರು ಸಿಟ್ಟಾಗಿ ಬೈತಿದ್ದದ್ದು, ಏಕ್‌ದಮ್ ರಾಂಗ್ ಆಗ್ತಿದ್ದ ದೃಶ್ಯಗಳನ್ನ ಕಣ್ಣಾರೆ ಕಂಡಿದ್ದ ನಾನು ಆರಂಭದಲ್ಲಿ ನನ್ನ ಪರಿಚಯವನ್ನೆ ಮಾಡಿಕೊಳ್ಳಲಿಲ್ಲ. ಅವರು ಏನ್ ಕೆಲಸ ಮಾಡ್ತೀರಿ ಅಂತಾ ನನ್ನ ಕೇಳಿಯೂ ಇರಲಿಲ್ಲ. ಅಲ್ಲಿಯವರೆಗೂ ದರ್ಶನಕ್ಕೆ ಬರ್ತಿದ್ದ ಜನರು, ಸಧ್ಯದ ಜನರು ಶೋಕಿಗಾಗಿ, ರೀಲ್ಸ್‌ಗಳಿಗಾಗಿ ಭಕ್ತಿ ಮಾಡ್ತಿರುವ ಬಗ್ಗೆ ಪ್ರತಿ ಮಾತಿನಲ್ಲು ನಾಗಾಬಾಬಾ ಹೇಳ್ತಿದ್ದನ್ನ ಗಮನಿಸ್ತಿದ್ದೆ. ಅಗಾಗ್ಗ ಅಲ್ಲಿ ಬಂದೂ ಪೋಟೋ ಕ್ಲಿಕ್ಕಿಸೋ ಜನರಿಗೆ ನನ್ನ ಜಟೆಯ ಉದ್ದ ನೋಡಿದ್ರೆ ಗೊತ್ತಾಗಲ್ವಾ? ಎಷ್ಟು ವರ್ಷದಿಂದ ಸಾಧನೆಯಲ್ಲಿದ್ದೀನಿ ಅಂತಾ ರೇಗುತ್ತಿದ್ದರು. ಇದೆಲ್ಲವನ್ನ ಗಮನಿಸಿದ್ದ ನಾ ಬಹಳ ಹೊತ್ತಿನ ಮಾತಿನ ಬಳಿಕ ನಾನೊಬ್ಬ ಜರ್ನಲಿಸ್ಟ್, ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್‌ನಲ್ಲೆ ಕೆಲಸ ಮಾಡ್ತಿದ್ದೇನೆ ಎಂದು ಹೇಳಿಕೊಂಡೆ. ಇಷ್ಟು ಹೇಳ್ತಿದ್ದಂತೆ ನಾಗಾಬಾಬಾ ಕೋಪಗೊಳ್ತಾರೆ ಎಂದುಕೊಂಡಿದ್ದೆ, ಆದ್ರೆ ಅವರು ನಕ್ಕರು ಮೊದಲೆ ತಮಗೆ ಗೊತ್ತಿತ್ತೇನೋ ಎನ್ನುವಂತೆ. ವಿಚಿತ್ರ ಎಂದರೆ ಈ ವಿಚಾರ ಹೇಳಿದ ಬಳಿಕವೇ ರೋಚಕವಾದ ಅಸಲಿ ಮಾತುಕತೆ ಶುರುವಾಗಿದ್ದು. ನಾಗಾಸಾಧು ಹೇಗೆ ಆಗ್ತಾರೆ? ನಾಗಾಸಾಧು ಆಗಬೇಕಾದ್ರೆ ಕಠಿಣ ನಿಯಮಗಳೇನು? ಅವರ ಬಳಿ ಇರೋ ಅಗೋಚರ ಶಕ್ತಿಗಳೇನು? ನಾಗಾಗಳಿಗೂ ಅಘೋರಿಗಳ ನಡುವಿನ ವ್ಯತ್ಯಾಸಗಳೇನು? ಪ್ರಾಣಕ್ಕೆ ಸಂಚಕಾರ ಎನ್ನಬಹುದಾದ ಹಠಯೋಗ ಯಾಕೆ? ಅಘೋರಿಗಳ ಸಾಧನಾ ಕ್ರಮಗಳೇನು? ಶಾಬರಿ ಮಂತ್ರಗಳ ಪ್ರಯೋಗ, ಮಂತ್ರಗಳ ಮಹತ್ವದ ಬಗ್ಗೆ ಇನ್ ಡಿಲೇಟ್ ಆಗಿ ಮಾತನಾಡಿಸಿದೆ.. "ಆಫ್ ದಿ ರೆಕಾರ್ಡ್" ಅವರು ಹಂಚಿಕೊಂಡ ಕೆಲ ಮಾಹಿತಿಗಳಂತು ಎಂಥವರು ಬೆಚ್ಚಿ ಬೀಳುವಂತಿತ್ತು. ಸಾಮಾನ್ಯ ಮನುಷ್ಯರ ಕಲ್ಪನೆಗು ನಿಲುಕದ್ದು, ಸಂಜೆ ಶುರುವಾದ ಇಬ್ಬರ ನಡುವಿನ ಮಾತುಕತೆ ಮಧ್ಯರಾತ್ರಿಯವರೆಗೂ ಮುಂದುವರೆದಿತ್ತು..!! ಅಷ್ಟೂ ಸಮಯ ಸೇರಿ ಒಟ್ಟು ಎಂಟತ್ತು ಸಾರಿ ಚಹಾ ಮಾಡಿಸಿ ಕುಡಿಸಿದ್ರು ನಾಗಾಬಾಬಾ, ಅದು ಸಹ ಅದರಕ್ ಹಾಕಿಯೇ....
ಅಂದಹಾಗೇ ಇವ್ರ ಹೆಸ್ರು ಮಹಾಂತ ಮುಕೇಶ ಗಿರಿಜೀ ಬಾಬಾ ಅಂತ. ನರ್ಮದಾ ನದಿ ಹುಟ್ಟಿರೋ ಸ್ಥಳ ಇವ್ರ ಸಾಧನೆಯ ಮೂಲ ಸ್ಥಳ. ಅಲ್ಲಿಗೊಮ್ಮೆ ಬಂದು ಬಿಡಿ ಇಂಟರ್ವ್ಯೂ ಕೊಡ್ತೀನಿ, ಸಧ್ಯ ಆಫ್ ದಿ ರೆಕಾರ್ಡ್ ಪ್ರಶ್ನೆ ಕೇಳಿ ಉತ್ತರಿಸ್ತೀನಿ ಎಂದರು.. ಥಟ್ ಅಂತ ನನ್ನ ಬಾಯಲ್ಲಿ ಬಂದ ಮೊದಲ ಪ್ರಶ್ನೆಯೆ ನಾಗಾಗಳಿಗೂ ಅಘೋರಿಗಳಿಗೂ ಏನ್ ವ್ಯತ್ಯಾಸ ಎನ್ನುವುದು..?? ಈ ಪ್ರಶ್ನೆ ಕೇಳಿದ ಬಳಿಕ ಗೊತ್ತಾಗಿದ್ದು, ನಾನಾಸಾಧುಗಳಿಗೆ ಅಘೋರಿಗಳ ಬಗ್ಗೆ ಮಾತನಾಡೋಕೆ ಅಷ್ಟೊಂದು ಇಷ್ಟವಿಲ್ಲ ಅನ್ನೋದು. ಆದ್ರೂ ನನ್ನ ಮೊದಲ ಪ್ರಶ್ನೆಗೆ ನಕಾರ ಎನ್ನಬಾರದೆಂದು ಮಹಾಂತ ಮುಕೇಶ್ ಗಿರಿ ಬಾಬಾ ಉತ್ತರಿಸ ತೊಡಗಿದ್ರು..
ಮುಂದುವರೆಯುತ್ತದೆ.....