ಕರ್ನಾಟಕದಾದ್ಯಂತ ಭಕ್ತಿ, ಸಂಭ್ರಮದ ಶಿವರಾತ್ರಿ

By Kannadaprabha NewsFirst Published Feb 19, 2023, 12:30 AM IST
Highlights

ಶಿವ ದೇವಾಲಯಗಳಲ್ಲಿ ಜನರಿಂದ ವಿಶೇಷ ಪೂಜೆ, ರುದ್ರಾಭಿಷೇಕ, ಶಿವಭಕ್ತರಿಂದ ಜಾಗರಣೆ, ನದಿಗಳಲ್ಲಿ ಪುಣ್ಯಸ್ನಾನ. 

ಬೆಂಗಳೂರು(ಫೆ.19): ರಾಜ್ಯಾದ್ಯಂತ ಶನಿವಾರ ಶಿವರಾತ್ರಿಯನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ಮನೆ, ಮನೆಗಳಲ್ಲಿ ಶಿವ ನಾಮಸ್ಮರಣೆ, ದೇವಾಲಯಗಳಲ್ಲಿ ನಸುಕಿನಿಂದಲೇ ಶಿವನಿಗೆ ರುದ್ರಾಭಿಷೇಕ, ವಿಶೇಷ ಪೂಜೆ ನೆರವೇರಿಸಲಾಯಿತು. ಆಚರಣೆ ಅಂಗವಾಗಿ ಶಿವ ದೇವಾಲಯಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಮುಂಜಾನೆ 4 ಗಂಟೆಯಿಂದಲೇ ಭಕ್ತರು ದೇವಾಲಯಕ್ಕೆ ಆಗಮಿಸಲು ಆರಂಭಿಸಿದ್ದು, ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ಮತ್ತಿತರ ಹೂಗಳಿಂದ ಪೂಜೆ ಸಲ್ಲಿಸಿದರು. ಎಳನೀರು, ತುಪ್ಪ, ಹಾಲಿನ ಅಭಿಷೇಕ ಮಾಡಿ ಪ್ರಾರ್ಥಿಸಿದರು. ಶಿವರಾತ್ರಿ ಸಂದರ್ಭದಲ್ಲಿ ಇಡೀ ದಿನ ಉಪವಾಸ, ಜಾಗರಣೆ, ಉಪಾಸನೆಯಲ್ಲಿ ಭಕ್ತರು ತೊಡಗಿದ್ದರು. ಅಲ್ಲದೆ, ಕೃಷ್ಣಾ, ಭೀಮಾ, ತುಂಗಾ, ಕಾವೇರಿ, ನೇತ್ರಾವತಿ, ತುಂಗಭದ್ರಾ, ತ್ರಿವೇಣಿ ಸಂಗಮಗಳಲ್ಲಿ ಸಹಸ್ರಾರು ಭಕ್ತರು ಪುಣ್ಯ ಸ್ನಾನ ಮಾಡಿದರು.

ಹಬ್ಬದ ಅಂಗವಾಗಿ ಶಿವದೇವಾಲಯಗಳಿಗೆ ಭಕ್ತರ ದಂಡೇ ಹರಿದು ಬಂತು. ಹುಬ್ಬಳ್ಳಿಯ ಸಿದ್ದಾರೂಢ ಮಠಕ್ಕೆ ಸುಮಾರು 4 ಲಕ್ಷ, ಗೋಕರ್ಣಕ್ಕೆ 1 ಲಕ್ಷ, ಮುರುಡೇಶ್ವರಕ್ಕೆ 50 ಸಾವಿರ, ಹಂಪಿ ವಿರೂಪಾಕ್ಷನ ದರ್ಶನಕ್ಕೆ 10 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು.

Latest Videos

Shivaratri 2023: ಮೈಸೂರು ಅರಮನೆ ತ್ರಿಣೇಶ್ವರ ದೇವಸ್ಥಾನದ ಶಿವಲಿಂಗಕ್ಕೆ 11 ಕೆ.ಜಿ ಚಿನ್ನದ ಕೊಳಗ

ರಾಜ್ಯದಲ್ಲಿಯೇ ಅತಿ ದೊಡ್ಡದಾದ ಕೋಲಾರ ಜಿಲ್ಲೆಯ ಕಾಮಸಂದ್ರದ ಕೋಟಿಲಿಂಗೇಶ್ವರ ದೇವಾಲಯದಲ್ಲಿ 101 ಅರ್ಚಕರಿಂದ ಶಿವಲಿಂಗಗಳಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ರಾಜ್ಯದ ಎರಡನೇ ಅತಿ ದೊಡ್ಡದಾದ 85 ಅಡಿ ಎತ್ತರದ ವಿಜಯಪುರದ ಶಿವಗಿರಿಯಲ್ಲಿ ಅದ್ದೂರಿಯ ರಥೋತ್ಸವ ಜರುಗಿತು. ಅತ್ತೆ-ಸೊಸೆಯಂದಿರು ಸೇರಿ ಬರೀ ಮಹಿಳೆಯರೇ ರಥ ಎಳೆಯುವುದು ಈ ರಥೋತ್ಸವದ ವಿಶೇಷ.

ಇದೇ ವೇಳೆ, ಚಿಕ್ಕಬಳ್ಳಾಪುರ ತಾಲೂಕು ಆವಲಗುರ್ಕಿ ಬಳಿ ಇರುವ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನೋಡಲು ಭಕ್ತರ ದಂಡು ಹರಿದು ಬಂತು. ಮೈಸೂರಿನ ಅರಮನೆ ಆವರಣದ ತ್ರಿನೇಶ್ವರಸ್ವಾಮಿ ದೇವಾಲಯದ ಶಿವಲಿಂಗಕ್ಕೆ 11 ಕೆ.ಜಿ.ತೂಕದ ಚಿನ್ನದ ಕೊಳಗ ಹಾಕಲಾಗಿತ್ತು. ರಾಜವಂಶಸ್ಥ ಯದುವೀರ್‌ ಒಡೆಯರ್‌ ಅವರು ಪತ್ನಿ ತ್ರಿಷಿಕ ಹಾಗೂ ಪುತ್ರ ಆದ್ಯವೀರ್‌ ಜೊತೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿದರು.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಇದೇ ವೇಳೆ, ಬೆಟ್ಟದಲ್ಲಿ ನಾಲ್ಕು ದಿನಗಳ ಜಾತ್ರೆಗೆ ಚಾಲನೆ ನೀಡಲಾಯಿತು. ಭಕ್ತರಿಗೆ ಪ್ರಸಾದವಾಗಿ 6 ಲಕ್ಷಕ್ಕೂ ಹೆಚ್ಚು ಲಾಡುಗಳನ್ನು ಪ್ರಸಾದವಾಗಿ ವಿತರಿಸಲಾಯಿತು. ತುಮಕೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಸಹಸ್ರ ಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

Chikkamagaluru: ಉರಿ ಬಿಸಿಲಿನಲ್ಲಿ ಕಾಲ್ನಡಿಗೆಯಲ್ಲಿ ಬರುವ ಧರ್ಮಸ್ಥಳ ಭಕ್ತರಿಗೆ ಕಾಫಿನಾಡು ಯುವಕರ ತಂಡದಿಂದ ಆತಿಥ್ಯ

ಹುಬ್ಬಳ್ಳಿಯ ಜಿಮ್‌ಖಾನ ಮೈದಾನದಲ್ಲಿ ಶಿವರಾತ್ರಿ ಅಂಗವಾಗಿ ಕೇದಾರನಾಥ ದಿವ್ಯದರ್ಶನ ಆಯೋಜಿಸಲಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರ ಕ್ಷಮತಾ ಸಂಸ್ಥೆಯ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಕ್ತರಿಗೆ ಪಂಚಮುಖಿ ರುದ್ರಾಕ್ಷಿ ವಿತರಿಸಲಾಯಿತು.

ಮಂತ್ರಾಲಯದಲ್ಲಿ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ನೆರವೇರಿಸಿದರು. ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ, ಬೆಂಗಳೂರಿನ ಬಸವನಗುಡಿಯ ಗವಿ ಗಂಗಾಧರೇಶ್ವರ, ಮಲ್ಲೇಶ್ವರದ ಕಾಡುಮಲ್ಲೇಶ್ವರ, ಧರ್ಮಸ್ಥಳದ ಮಂಜುನಾಥೇಶ್ವರ, ನಂಜನಗೂಡಿನ ಶ್ರೀಕಂಠೇಶ್ವರ ಸೇರಿದಂತೆ ರಾಜ್ಯದ ಇತರೆಡೆಯೂ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆಗಳು ನಡೆದವು.

click me!