ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಖಾಪ್ರಿ ದೇವರಿಗೆ ಬೀಡಿ, ಸಿಗರೇಟು ಹಾಗೂ ಹೆಂಡವೇ ಅರ್ಪಣೆ. ಆಫ್ರಿಕಾ ಮೂಲದ ವ್ಯಕ್ತಿಯೋರ್ವ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನು ಇಲ್ಲಿ ತಂದು ಪೂಜಿಸತೊಡಗಿದ ಎಂಬ ಐತಿಹ್ಯವಿದೆ.
ಉತ್ತರ ಕನ್ನಡ (ಮಾ.12): ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಹೂವು, ಹಣ್ಣು ಕಾಯಿ ಅರ್ಪಿಸೋದು ಸಾಮಾನ್ಯ. ಆದರೆ, ಕಾರವಾರದಲ್ಲಿರುವ ಈ ದೇವಾಲಯದಲ್ಲಿ ಬೀಡಿ, ಸಿಗರೇಟು ಹಾಗೂ ಹೆಂಡವೇ ದೇವರಿಗೆ ಅರ್ಪಣೆ. ಹಿಂದೂಗಳು ಮಾತ್ರವಲ್ಲದೇ, ಮುಸ್ಲಿಂ, ಕ್ರಿಶ್ಚಿಯನ್ನರು ಕೂಡಾ ಈ ದೇವಳಕ್ಕೆ ಭೇಟಿ ನೀಡಿ ಬೆಲ್ಲ, ಸಕ್ಕರೆ ಹಾಗೂ ಕ್ಯಾಂಡಲ್‌ಗಳನ್ನು ಹಚ್ಚಿ ಪ್ರಾರ್ಥನೆ ಮಾಡಿ ತೆರಳುತ್ತಾರೆ. ಅಲ್ಲದೇ, ದೇವರಲ್ಲಿ ಹರಕೆ ಹೊತ್ತುಕೊಂಡು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. ಅಷ್ಟಕ್ಕೂ ಈ ದೇವಸ್ಥಾನ ಯಾವುದು ಅಂತೀರಾ. ಒಂದೆಡೆ ಚೆಂಡೆ, ಜಾಗಟೆ ಹಾಗೂ ದೇವರ ಮೂರ್ತಿಯೊಂದಿಗೆ ಮೆರವಣಿಗೆ ಸಾಗುತ್ತಿರುವ ಜನಸಮೂಹ. ಮತ್ತೊಂದೆಡೆ ಸರತಿ ಸಾಲಿನಲ್ಲಿ ನಿಂತು ಕೋಳಿ, ಹೆಂಡ, ಬೀಡಿ, ಹೂವು ಹಣ್ಣುಗಳನ್ನು ಅರ್ಪಿಸಲು ಭಕ್ತಿಯಿಂದ ನಿಂತಿರುವ ಜನರು. ಇನ್ನೊಂದೆಡೆ ಧಗಧಗ ಉರಿಯುವ ಬೆಂಕಿಯ ಕುಂಡಕ್ಕೆ ತೆಂಗಿನ ಕಾಯಿ, ಬೀಡಿ ಹಾಗೂ ಕುಂಡದ ಸುತ್ತಾ ಅಗರಬತ್ತಿ, ಕ್ಯಾಂಡಲ್ ಹಚ್ಚಿ ದೇವರ ದರ್ಶನ ಪಡೆಯುತ್ತಾ ತಮ್ಮ ಕಷ್ಟ ಕಾರ್ಪಣ್ಯಗಳನ್ನು ತೋಡಿಕೊಳ್ಳುತ್ತಿರುವ ಭಕ್ತರು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಕಾರವಾರ ನಗರದ ಕಾಳಿ ನದಿ ಸಂಗಮದಲ್ಲಿರುವ ಖಾಪ್ರಿ ದೇವರ ಜಾತ್ರಾ ಮಹೋತ್ಸವದಲ್ಲಿ.
ಸಾರಾಯಿ ದೇವರು ಎಂದೇ ಖ್ಯಾತಿ ಪಡೆದಿರುವ ಈ ಖಾಪ್ರಿ ಜಾತ್ರೆಗೆ ಕಾರವಾರ ಮಾತ್ರವಲ್ಲದೇ ಹೊರ ರಾಜ್ಯಗಳಾದ ಮಹಾರಾಷ್ಟ್ರ,ಗೋವಾ ಜನರು ಕೂಡಾ ಈ ಆಗಮಿಸಿ ತಮ್ಮ ಹರಕೆ ತೀರಿಸಿಕೊಳ್ಳುತ್ತಾರೆ. ಈ ಜಾತ್ರಾ ಮಹೋತ್ಸವದ ಹಿನ್ನೆಲೆ ನೂರಾರು ಭಕ್ತರು ದೇವರಿಗೆ ಮದ್ಯ ನೈವೇದ್ಯ ಮಾಡಿ ಸಿಗರೇಟಿನ ಆರತಿ ಮಾಡುವ ಮೂಲಕವೂ ವಿಶಿಷ್ಟ ರಿತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಮಕ್ಕಳಾಗದೇ ಇದ್ದ ದಂಪತಿಗಳು ಮಕ್ಕಳಾಗುವಂತೆ ಇಲ್ಲಿ ಹರಕೆ ಕಟ್ಟಿಕೊಂಡರೆ, ಇನ್ನು ಕೆಲವರು ಅನಾರೋಗ್ಯ ಸಮಸ್ಯೆ ಪರಿಹಾರಕ್ಕಾಗಿ, ಕುಟುಂಬದ ನೆಮ್ಮದಿಗಾಗಿ ಹರಕೆ ಕಟ್ಟಿಕೊಂಡು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕಳೆದುಕೊಳ್ಳುತ್ತಾರೆ. ತಮ್ಮ ಇಷ್ಟಾರ್ಥ ಪ್ರಾಪ್ತಿಯಾದ ಬಳಿಕ ಕ್ಷೇತ್ರಕ್ಕೆ ಕೋಳಿ, ಕುರಿ, ಹೆಂಡ, ಸಿಗರೇಟ್, ಬೀಡಿಗಳು ಸೇರಿದಂತೆ ಹಣ್ಣು ಕಾಯಿ ಅರ್ಪಿಸುತ್ತಾರೆ. ಅಲ್ಲದೇ, ಮಕ್ಕಳಿಗೆ, ಮಹಿಳೆಯರಿಗೆ ತುಲಾಭಾರ ನೆರವೇರಿಸೋದು ಕೂಡಾ ನಡೆದುಕೊಂಡು ಬಂದಿದೆ.
ಅಂದಹಾಗೆ, ಖಾಪ್ರಿ ದೇವರಿಗೆ ತನ್ನದೇ ಆದ ಇತಿಹಾಸವಿದೆ. ಒಂದು ಕಥೆಯ ಪ್ರಕಾರ, ಆಫ್ರಿಕಾ ಮೂಲದ ವ್ಯಕ್ತಿಯೋರ್ವ 300 ವರ್ಷಗಳ ಹಿಂದೆ ಇಲ್ಲಿಗೆ ಬಂದು ದೇವರನ್ನು ತಂದು ಪೂಜಿಸುತ್ತಿದ್ದರಂತೆ. ಅದಾದ ನಂತರ ಅವರು ಕಣ್ಮರೆಯಾಗಿದ್ದು, ಇಲ್ಲಿನ ಪರಸಪ್ಪ ಮನೆತನದವರು ಇದೇ ಜಾಗದಲ್ಲಿ ಕೆಲಸ ಮಾಡುವಾಗ ದೇವರ ಕಲ್ಲು ಗೋಚರವಾಗಿತ್ತಂತೆ. ಬಳಿಕ ಕನಸ್ಸಿನಲ್ಲಿ ದೇವರು ಬಂದು ತನಗೆ ಕೋಳಿ, ಸಾರಾಯಿ ನೈವೇದ್ಯ ಮಾಡು ಅಂತಾ ಕೇಳಿಕೊಂಡಿದ್ದರಿಂದ ದೇವಸ್ಥಾನವನ್ನು ಕಟ್ಟಿ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ.
ಇನ್ನೊಂದು ಕಥೆಯ ಪ್ರಕಾರ, ಈಸ್ಟ್ ಇಂಡಿಯಾ ಕಂಪೆನಿ ಆಳ್ವಿಕೆ ಸಮಯದಲ್ಲಿ ಖಾಪ್ರಿ ಎಂಬ ವಿದೇಶಿ ವ್ಯಕ್ತಿ ಗುಲಾಮನಾಗಿ ಭಾರತಕ್ಕೆ ಬಂದಿದ್ದನಂತೆ. ಆತ ಬ್ರಿಟಿಷರಿಂದ ಎಲ್ಲಾ ರೀತಿಯ ಕಷ್ಟ, ತೊಂದರೆಗಳನ್ನು ಸಹಿಸಿ ಅವುಗಳನ್ನು ನಿವಾರಿಸಿ ಗೆದ್ದು ಜೀವಿಸಿದನು. ಕಾರವಾರ ಭಾಗದಲ್ಲಿ ಬಡವರಿಗೆ ಸಹಾಯ ಮಾಡುತ್ತಾ ಅವರ ಸಂಕಷ್ಟ ನಿವಾರಿಸುತ್ತಿದ್ದನಂತೆ. ಈತನಿಗೆ ಬೀಡಿ, ಸಿಗರೇಟು, ಕೋಳಿ, ಕುರಿ ಮಾಂಸ ಬಲು ಪ್ರೀತಿ. ಹೀಗಾಗಿ ಈತನ ಬಳಿ ಸಂಕಷ್ಟ ತೋಡಿಕೊಂಡು ಬರುವವರು ಈತನಿಗೆ ಕಾಣಿಕೆಯಾಗಿ ಇವುಗಳನ್ನು ನೀಡುತಿದ್ದರು.
ಹುಲ್ಲು ಗರಿಕೆಯನ್ನು ಗಣೇಶನಿಗೆ ಅರ್ಪಿಸಿ ಜೀವನದ ಸಮಸ್ಯೆಗಳನ್ನ ನಿವಾರಿಸಿ
ಆತ ಕ್ರೈಸ್ತ ಧರ್ಮದವನಾದರೂ ಕೂಡ ಎಲ್ಲಾ ಧರ್ಮವನ್ನು ಅನುಸರಿಸುತ್ತಿದ್ದನಂತೆ. ಅವನಲ್ಲಿ ದೈವೀ ಶಕ್ತಿಯಿತ್ತು ಎನ್ನುವ ನಂಬಿಕೆಯಿತ್ತು. ಹಾಗಾಗಿ ಸುತ್ತಮುತ್ತಲಿನ ಜನರು ದೇವರಂತೆ ಆತನನ್ನು ಕಾಣುತ್ತಿದ್ದರು. ಆತ ತನ್ನ ಭಕ್ತರಿಗೆ ದೇವಸ್ಥಾನವನ್ನು ಕಟ್ಟಿಸುವಂತೆ ಕೇಳಿಕೊಂಡರಂತೆ. ಅದರಂತೆ ದೇವಸ್ಥಾನ ಕಟ್ಟಿಸಲಾಯಿತು ಎನ್ನಲಾಗುತ್ತದೆ. ಮತ್ತೊಂದು ಕಥೆಯಂತೆ, ಸಂತನೋರ್ವ ಈ ಕ್ಷೇತ್ರಕ್ಕೆ ಬಂದು ದೇವರನ್ನು ಪ್ರತಿಷ್ಠಾಪಿಸಿದ್ದ. ಅದು ಕಾಲಾನಂತರ ಪರಸಪ್ಪ ಮನೆತನದವರಿಂದ ಮರು ಪ್ರತಿಷ್ಠಾಪಿಸಲ್ಪಟ್ಟಿದೆ.
RAMADAN 2023: ದಿನಾಂಕ, ಹಿನ್ನೆಲೆ, ಆಚರಣೆಗಳು ಮತ್ತು ಮಹತ್ವ
ಒಟ್ಟಿನಲ್ಲಿ ಕಾರವಾರದಲ್ಲಿರುವ ಈ ವಿಶೇಷ ದೇವಸ್ಥಾನ ರಾಜ್ಯದಲ್ಲಿ ಮಾತ್ರವಲ್ಲದೇ, ಹೊರ ರಾಜ್ಯದಲ್ಲೂ ಭಾರೀ ಖ್ಯಾತಿ ಪಡೆದಿದೆ. ಹೆಂಡ, ಸಾರಾಯಿ, ಬೀಡಿ, ಸಿಗರೇಟನ್ನೇ ಭಕ್ತರಿಂದ ಪ್ರೀತಿಯ ರೂಪದಲ್ಲಿ ಪಡೆಯುವ ಈ ದೇವರು ಜನರ ಕಷ್ಟ ಕಾರ್ಪಣ್ಯಗಳನ್ನು ಕಳೆದು ಇಷ್ಟಾರ್ಥ ನೆರವೇರಿಸುತ್ತಾನೆ. ಇದರಿಂದ ಖಾಪ್ರಿ ದೇವರು ಎಲ್ಲರಿಗೂ ಬಹುಪ್ರಿಯ.